ವಾರಣಾಸಿಗೆ ಬಾರದ ‘ಅಚ್ಛೇದಿನ್’ ದೇಶಕ್ಕೆ ಎಲ್ಲಿಂದ ಬರಬೇಕು: ಸಚಿವ ಡಿಕೆಶಿ

Update: 2019-04-18 15:15 GMT

ಬೆಂಗಳೂರು, ಎ.18: ಪ್ರಧಾನಿ ನರೇಂದ್ರಮೋದಿ ಕಳೆದ ಚುನಾವಣೆಯಲ್ಲಿ ದೇಶದ ಜನತೆಗೆ ಸಾಕಷ್ಟು ಆಶ್ವಾಸನೆಗಳನ್ನು ನೀಡಿದ್ದರು. ಆದರೆ, ಯಾವ ಆಶ್ವಾಸನೆಯನ್ನೂ ಅವರು ಈಡೇರಿಸಿಲ್ಲ ಎಂದು ಜಲಸಂಪನ್ಮೂಲ ಸಚಿವ ಡಿ.ಕೆ.ಶಿವಕುಮಾರ್ ಟೀಕಿಸಿದರು.

ಗುರುವಾರ ರಾಮನಗರ ಜಿಲ್ಲೆಯ ಕನಕಪುರ ತಾಲೂಕಿನ ದೊಡ್ಡ ಆಲಹಳ್ಳಿ ಗ್ರಾಮದಲ್ಲಿ ಮತದಾನ ಮಾಡಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಅಚ್ಛೇದಿನ್ ಬರುತ್ತೆ ಎಂದಿದ್ದರು. ಆದರೆ, ಯಾವ ಅಚ್ಛೇದಿನ್‌ಗಳೂ ಬಂದಿಲ್ಲ ಎಂದರು.

ಭಾರತಕ್ಕೆ ಅಚ್ಛೇ ದಿನಾನೂ ಬಂದಿಲ್ಲ, ಭಾರತ ಸ್ವಚ್ಛಾನು ಆಗಿಲ್ಲ. ನರೇಂದ್ರಮೋದಿ ಪ್ರತಿನಿಧಿಸುವ ವಾರಣಾಸಿ ಕ್ಷೇತ್ರಕ್ಕೆ ಬಾರದ ಅಚ್ಛೇದಿನ್ ದೇಶಕ್ಕೆ ಎಲ್ಲಿಂದ ಬರಬೇಕು. ಗಂಗಾನದಿಯನ್ನು ಸ್ವಚ್ಛಗೊಳಿಸುವಾಗ ಅವರ ಕ್ಷೇತ್ರದ ಜನತೆಗೆ ಭರವಸೆ ನೀಡಿದ್ದರು. ಆದರೆ, ಐದು ವರ್ಷವಾದರೂ ಗಂಗಾ ನದಿ ಶುದ್ಧವಾಗಿಲ್ಲ ಎಂದು ಶಿವಕುಮಾರ್ ಹೇಳಿದರು.

ಪ್ರತಿ ವರ್ಷ ಯುವಕರಿಗೆ 2 ಉದ್ಯೋಗ ಸೃಷ್ಟಿ ಮಾಡುವುದಾಗಿ ಭರವಸೆ ನೀಡಿದ್ದರು. ಆದರೆ, ಎಷ್ಟು ಪ್ರಮಾಣದಲ್ಲಿ ಉದ್ಯೋಗ ಸೃಷ್ಟಿಯಾಯಿತು. ಜನತೆ ಇನ್ನು ಎಷ್ಟು ದಿನಗಳ ಕಾಲ ಸುಳ್ಳು ಹೇಳುವವರನ್ನು ನಂಬುತ್ತಾರೆ ಎಂದು ಅವರು ವ್ಯಂಗ್ಯವಾಡಿದರು.

ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರದಿಂದ ಮೈತ್ರಿ ಅಭ್ಯರ್ಥಿಯಾಗಿ ಕಣಕ್ಕಿಳಿದಿರುವ ಡಿ.ಕೆ.ಸುರೇಶ್, ಮತ್ತೊಮ್ಮೆ ಗೆಲುವು ಸಾಧಿಸುವುದು ನಿಶ್ಚಿತ. ಜನರ ಆಶೀರ್ವಾದ ಅವರ ಮೇಲಿದೆ. ರಾಜ್ಯದಲ್ಲಿ 20ಕ್ಕೂ ಹೆಚ್ಚು ಕ್ಷೇತ್ರಗಳಲ್ಲಿ ನಮ್ಮ ಮೈತ್ರಿ ಅಭ್ಯರ್ಥಿಗಳು ಗೆಲ್ಲುವ ವಿಶ್ವಾಸವಿದೆ ಎಂದು ಶಿವಕುಮಾರ್ ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News