ರೈತರನ್ನು ನಿರ್ಲಕ್ಷ್ಯ ಮಾಡಿರುವ ಕೇಂದ್ರ ಸರಕಾರ: ಮುಖ್ಯಮಂತ್ರಿ

Update: 2019-04-18 16:18 GMT

ಬೆಂಗಳೂರು, ಎ.18: ದೇಶದ ರಾಜಕೀಯದಲ್ಲಿ ಬದಲಾವಣೆಯ ಅವಶ್ಯಕತೆಯಿದೆ. ಅದರಲ್ಲಿಯೂ ವಿಶೇಷವಾಗಿ ಕೃಷಿಕರು ಬದಲಾವಣೆ ಬಯಸಿದ್ದು, ರೈತರ ಅಭಿವೃದ್ಧಿಗಾಗಿ ಈ ಚುನಾವಣೆ ಅತೀ ಮುಖ್ಯವಾಗಿದೆ ಎಂದು ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ತಿಳಿಸಿದ್ದಾರೆ.

ಗುರುವಾರ ರಾಮನಗರದ ಕೇತಿಗಾನಹಳ್ಳಿ ಮತಗಟ್ಟೆ ಸಂಖ್ಯೆ 25ರಲ್ಲಿ ಕುಟುಂಬ ಸಮೇತವಾಗಿ ಮತ ಚಲಾಯಿಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನರೇಂದ್ರಮೋದಿ ನೇತೃತ್ವದ ಕೇಂದ್ರ ಸರಕಾರ ಕಳೆದ ಐದು ವರ್ಷಗಳಲ್ಲಿ ರೈತರನ್ನು ನಿರ್ಲಕ್ಷ್ಯ ಮಾಡಿದೆ ಎಂದು ದೂರಿದರು.

ದೇಶವು ಸಂಕಷ್ಟದ ಪರಿಸ್ಥಿತಿಯನ್ನು ಎದುರಿಸುತ್ತಿದೆ. ರೈತರು ಹಾಗೂ ವಿವಿಧ ವರ್ಗದ ಜನರು ಎದುರಿಸುತ್ತಿರುವ ಸಮಸ್ಯೆಗಳಿಗೆ ಈ ಚುನಾವಣೆಯಲ್ಲಿ ಪರಿಹಾರ ಕಂಡುಕೊಳ್ಳಬೇಕಿದೆ. ದೇಶದ ಸಮಸ್ಯೆಗಳಿಗೆ ನಾವು ಮೊದಲ ಪ್ರಾಮುಖ್ಯತೆ ನೀಡಬೇಕು. ಆದುದರಿಂದ, ಸಮರ್ಥ ಅಭ್ಯರ್ಥಿಗೆ ಆಶೀರ್ವಾದ ಮಾಡಬೇಕು. ಎಲ್ಲರೂ ತಪ್ಪದೇ ಮತದಾನ ಮಾಡಬೇಕು ಎಂದು ಅವರು ಮನವಿ ಮಾಡಿದರು.

ಈ ಚುನಾವಣೆಯಲ್ಲಿ ನಮಗೆ ನರೇಂದ್ರಮೋದಿಯನ್ನು ಮೀರಿದ ಪ್ರಚಾರ ಸಿಕ್ಕಿದೆ. ಪ್ರಧಾನಿಯನ್ನು ಮರೆತು ಮಾಧ್ಯಮಗಳು ನಮಗೆ ದೊಡ್ಡ ಪ್ರಚಾರ ನೀಡಿವೆ. ಮಂಡ್ಯದಲ್ಲಿ ನಿಖಿಲ್ ಮಾತ್ರವಲ್ಲ, ಮೊದಲ ಹಂತದಲ್ಲಿ ನಡೆದಿರುವ 14 ಕ್ಷೇತ್ರಗಳ ಚುನಾವಣೆಯಲ್ಲಿ ಕನಿಷ್ಠ 10 ರಿಂದ 12 ಕ್ಷೇತ್ರಗಳಲ್ಲಿ ನಮ್ಮ ಮೈತ್ರಿ ಅಭ್ಯರ್ಥಿಗಳು ಗೆಲ್ಲುತ್ತಾರೆ ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News