ಬೆಂಗಳೂರಿನಲ್ಲಿ ಒಂದು ಲಕ್ಷ ಮತದಾರರ ಹೆಸರು ನಾಪತ್ತೆ: ಬಿಜೆಪಿ ಶಾಸಕ ರವಿಸುಬ್ರಹ್ಮಣ್ಯ ಆರೋಪ

Update: 2019-04-18 17:34 GMT

ಬೆಂಗಳೂರು, ಎ.18: ಬೆಂಗಳೂರು ದಕ್ಷಿಣ ಹಾಗೂ ಬೆಂಗಳೂರು ಉತ್ತರ ಲೋಕಸಭಾ ವ್ಯಾಪ್ತಿಯಲ್ಲಿ ಮತದಾರರ ಪಟ್ಟಿಯಿಂದ ಲಕ್ಷಾಂತರ ಮತದಾರರ ಹೆಸರನ್ನು ಕೈ ಬಿಡಲಾಗಿದೆ ಎಂದು ಬಿಜೆಪಿ ಶಾಸಕ ರವಿಸುಬ್ರಹ್ಮಣ್ಯ ಗಂಭೀರ ಆರೋಪ ಮಾಡಿದ್ದಾರೆ.

ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಶಾಂತಿನಗರದ ವ್ಯಾಪ್ತಿಯ 119 ಬೂತ್‌ನಲ್ಲಿ 1000ಕ್ಕೂ ಹೆಚ್ಚು ಮತದಾರರ ಹೆಸರು ಪಟ್ಟಿಯಿಂದ ನಾಪತ್ತೆಯಾಗಿವೆ. ಇಂದು ಮತಗಟ್ಟೆಗೆ ಆಗಮಿಸಿದ ಮತದಾರರಿಗೆ ನಿಜಕ್ಕೂ ಆಘಾತ ತಂದಿದೆ. ಕಳೆದ 20 ವರ್ಷಗಳಿಂದಲೂ ಮತದಾನ ಮಾಡುತ್ತಿದ್ದರೂ ದಿಢೀರ್ ಹೆಸರು ಕೈಬಿಟ್ಟಿರುವುದು ಸಂಶಯಕ್ಕೆ ಕಾರಣವಾಗಿದೆ. ಮೃತ ಸರಕಾರಿ ನೌಕರರ ಹೆಸರುಗಳು ಸೇರ್ಪಡೆಯಾಗಿದೆ. ಆದರೆ, ಬದುಕಿರುವವರ ಹೆಸರುಗಳು ನಾಪತ್ತೆಯಾಗಿರುವುದಕ್ಕೆ ಚುನಾವಣಾ ಆಯೋಗದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

ಪದ್ಮನಾಭನಗರದ ಮತಕೇಂದ್ರ 172 ರಲ್ಲಿ ಮತದಾರರ ಪಟ್ಟಿಯಿಂದ ಹೆಸರು ತೆಗೆದು ಹಾಕಲಾಗಿದ್ದು, ಅದರಿಂದ 15ಕ್ಕೂ ಹೆಚ್ಚು ಮಂದಿ ಮತದಾನದಿಂದ ವಂಚಿತರಾಗಿದ್ದಾರೆ. ಕುಟುಂಬ ಸಮೇತರಾಗಿ ಮತ ಚಲಾಯಿಸಲು ಮತಗಟ್ಟೆಗೆ ಬಂದಿದ್ದ ಮತದಾರರು, ಮತದಾರರ ಪಟ್ಟಿಯಲ್ಲಿ ಹೆಸರು ಇಲ್ಲದ್ದನ್ನು ಕಂಡು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಮತದಾರರ ಪಟ್ಟಿಯಿಂದ ಹೆಸರು ಹೇಗೆ ಇಲ್ಲದಾಯಿತು ಎಂದು ಅವರು ಪ್ರಶ್ನಿಸಿದರು. ಹಲವು ಕಡೆಗಳಲ್ಲಿ ಕುಟುಂಬದ ಮಕ್ಕಳಿಗೆ ಮತದಾನದ ಅವಕಾಶ ಸಿಕ್ಕಿದೆ. ಆದರೆ ತಂದೆ-ತಾಯಿಗೆ ಅವಕಾಶ ಇರಲಿಲ್ಲ. ಅವರ ಹೆಸರುಗಳನ್ನು ಇಲ್ಲವಾಗಿಸಿದೆ. ಕುಟುಂಬದವರೆಲ್ಲ ಒಂದೇ ಮನೆಯಲ್ಲಿದ್ದರೂ ಒಬ್ಬರಿಗೆ ಮತ ಇರುತ್ತದೆ, ಮತ್ತೊಬ್ಬರಿಗೆ ಇಲ್ಲವೆಂದರೆ ಏನರ್ಥವೆಂದು ಅವರು ಆಕ್ರೋಶ ವ್ಯಕ್ತಪಡಿಸಿದರು.

ಕಾಂಗ್ರೆಸ್ ಸೋಲಿನ ಭೀತಿಯಿಂದಾಗಿ ಮತದಾರರ ಪಟ್ಟಿಯಿಂದ ಹೆಸರು ರದ್ದುಪಡಿಸಲಾಗಿದೆ. ಬೆಂಗಳೂರಿನಲ್ಲಿ 1 ಲಕ್ಷ ಹಾಗೂ ಬೆಂಗಳೂರು ದಕ್ಷಿಣ ಕ್ಷೇತ್ರ ಒಂದರಲ್ಲೇ 60 ಸಾವಿರ ಮತದಾರರ ಹೆಸರು ರದ್ದಾಗಿವೆ. ಇದರಲ್ಲಿ ಶೇ.80 ರಷ್ಟು ಮತಗಳು ಬಿಜೆಪಿಯ ಮತಗಳಾಗಿದೆ. ಹೀಗೆ ಹೆಸರು ರದ್ದು ಮಾಡಿದಕ್ಕೆ ಚುನಾವಣಾ ಆಯೋಗ ಸ್ಪಷ್ಟನೆ ನೀಡಬೇಕು, ಅವರಿಗೆ ಮತದಾನದ ಹಕ್ಕನ್ನು ನೀಡಬೇಕೆಂದು ಚುನಾವಣಾ ಆಯೋಗವನ್ನು ಆಗ್ರಹಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News