ಸರದಿ ಸಾಲಿನಲ್ಲಿ ನಿಂತು ಮತ ಚಲಾಯಿಸಿದ ಸ್ಯಾಂಡಲ್‌ವುಡ್ ನಟ-ನಟಿಯರು

Update: 2019-04-18 18:16 GMT

ಬೆಂಗಳೂರು, ಎ.18: ಸಿಲಿಕಾನ್‌ಸಿಟಿಯಲ್ಲಿ ಸ್ಯಾಂಡಲ್‌ವುಡ್ ನಟರಾದ ಶಿವರಾಜ್‌ಕುಮಾರ್, ರವಿಚಂದ್ರನ್, ದರ್ಶನ್, ಸುದೀಪ್, ಗಣೇಶ್, ಉಪೇಂದ್ರ, ನಟಿ ಅಮೂಲ್ಯ ಸೇರಿ ಹಲವು ನಟ-ನಟಿಯರು ಸಾರ್ವಜನಿಕರ ಮಧ್ಯೆ ಸರದಿಯಲ್ಲಿ ನಿಂತು ಮತದಾನ ಮಾಡಿದರು.

ಚಾಲೆಂಜಿಂಗ್ ಸ್ಟಾರ್ ದರ್ಶನ್ ತಮ್ಮ ಪತ್ನಿ ವಿಜಯಲಕ್ಷ್ಮೀ ಅವರ ಜೊತೆ ಬಂದು ಸಾರ್ವಜನಿಕರ ಮಧ್ಯೆ ಸುಮಾರು ಅರ್ಧಗಂಟೆಯವರೆಗೂ ಸರದಿ ಸಾಲಿನಲ್ಲಿ ನಿಂತು ರಾಜರಾಜೇಶ್ವರಿ ನಗರದ ಮೌಂಟ್ ಕಾರ್ಮೆಲ್ ಬಳಿಯ ಮತಗಟ್ಟೆಯಲ್ಲಿ ಮತದಾನ ಮಾಡಿದರು.

ಇದೆ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿರುವ ದರ್ಶನ್ ಅವರು, ಗುರುವಾರ ಮಂಡ್ಯ, ಹಾಸನ, ತುಮಕೂರು, ಚಾಮರಾಜನಗರ ಸೇರಿದಂತೆ ಒಟ್ಟು 14 ಕ್ಷೇತ್ರಗಳಲ್ಲಿ ಮೊದಲ ಹಂತದ ಚುನಾವಣೆ ಕರ್ನಾಟಕದಲ್ಲಿ ನಡೆಯುತ್ತಿದೆ. ಈಗಾಗಲೇ ಅನೇಕ ನಟ-ನಟಿಯರು, ರಾಜಕಾರಣಿಗಳು ಬಂದು ಮತದಾನ ಮಾಡಿ ಹೋಗಿದ್ದಾರೆ. ತಪ್ಪದೇ ಮತದಾನ ಮಾಡಿ ಎಂದು ಸಾರ್ವಜನಿಕರಿಗೆ ಮನವಿ ಮಾಡಿಕೊಂಡರು.

ನಟ ರವಿಚಂದ್ರನ್ ಕುಟುಂಬದ ಸದಸ್ಯರು ರಾಜಾಜಿನಗರದ ಠಾಗೋರ್ ಆಂಗ್ಲ ಮಾಧ್ಯಮ ಶಾಲೆಗೆ ಬಂದು ಮತದಾನ ಮಾಡಿದರು. ಆದರೆ, ಮತ ಹಾಕುವ ವೇಳೆ ರವಿಚಂದ್ರನ್ ದಂಪತಿ ವೋಟರ್ ಐಡಿ ತರಲು ಮರೆತಿದ್ದಾರೆ. ನಂತರ ಐಡಿ ಕಾರ್ಡ್ ತಂದು ತೋರಿಸುತ್ತೇನೆ ಎಂದು ಅಧಿಕಾರಿಗಳ ಬಳಿ ಕೇಳಿದ್ದಾರೆ. ಇಲ್ಲವಾದರೆ ನಾನು ಐಡಿ ಬರುವ ತನಕ ಕಾಯುವುದಾಗಿ ಹೇಳಿದ್ದಾರೆ. ಕೊನೆಗೆ ಸಿಬ್ಬಂದಿ ರವಿಚಂದ್ರನ್ ಅವರಿಗೆ ಮತದಾನಕ್ಕೆ ಅವಕಾಶ ಮಾಡಿಕೊಟ್ಟಿದ್ದಾರೆ.

ರವಿಚಂದ್ರನ್ ಪುತ್ರಿ, ಪುತ್ರರು ಕೂಡ ಐಡಿ ಕಾರ್ಡ್ ಮರೆತು ಬಂದಿದ್ದರು. ನಂತರ ಮತಗಟ್ಟೆ ಕೇಂದ್ರದಿಂದ ವಾಪಸ್ ಮನೆಗೆ ಹೋಗಿ ಐಡಿ ಕಾರ್ಡ್ ತಂದು ಮತ್ತೆ ಮತದಾನ ಮಾಡಿದ್ದಾರೆ. ಇದೇ ವೇಳೆ ಅಪ್ಪ ಮತ್ತು ಅಮ್ಮನ ಐಡಿ ಕಾರ್ಡ್ ತಂದು ತೋರಿಸಿದ್ದಾರೆ.

ವೋಟ್ ಮಾಡಿದ ಬಳಿಕ ಮಾತನಾಡಿದ ರವಿಚಂದ್ರನ್, ನೀವು ಬದುಕಿದ್ದೇವೆ ಅಂತ ಗೊತ್ತಾಗಬೇಕಾದರೆ ವೋಟ್ ಹಾಕಬೇಕು. ನಮಗೆ ಯಾರು ಬೇಕೋ ಅವರನ್ನು ಆಯ್ಕೆ ಮಾಡಿಕೊಂಡರೆ ನಮ್ಮ ಭವಿಷ್ಯ ಚೆನ್ನಾಗಿರುತ್ತದೆ. ಇಲ್ಲವಾದಲ್ಲಿ ವೋಟು ದುರುಪಯೋಗವಾಗುತ್ತದೆ. ಮತದಾನ ಮಾಡದೆ ಹೋದರೆ ಏನು ಉಪಯೋಗವಿಲ್ಲ ಎಂದರು.

ನಾನು ಪ್ರತಿಬಾರಿ ಮತದಾನ ಮಾಡುವುದಕ್ಕೆ ಬಂದಾಗಲೆಲ್ಲ ಜನ ಇರಲ್ಲ. ಇವತ್ತು ಕೂಡ ಜನರು ಕಡಿಮೆ ಇದ್ದಾರೆ. ಎಲ್ಲರೂ ಎದ್ದೇಳಿ, ಬಂದು ಮತದಾನ ಮಾಡಿ. ನೀವು ಮತದಾನ ಮಾಡಿದರೆ ದೇಶ ಚೆನ್ನಾಗಿರುತ್ತದೆ ಅಂತ ಎಲ್ಲರಿಗೂ ಮತ್ತೆ ಮತ್ತೆ ಹೇಳುತ್ತೇನೆ ಎಂದು ರವಿಚಂದ್ರನ್ ಮನವಿ ಮಾಡಿದರು.

ಬೊಮ್ಮನಹಳ್ಳಿ ವಿಧಾನಸಭಾ ಕ್ಷೇತ್ರದ ಪುಟ್ಟೇನಹಳ್ಳಿಯಲ್ಲಿ ನಟ ಸುದೀಪ್ ಮತ ಚಲಾವಣೆ ಮಾಡಿದರು. ಮತದಾನ ಮಾಡಬೇಕೆಂಬುದು ಬುದ್ಧಿ ಹೇಳಿ ಕರೆಸಿಕೊಳ್ಳುವ ವಿಚಾರ ಅಲ್ಲ, ಅದು ಸಾಮಾನ್ಯ ಪ್ರಜ್ಞೆ ಎಂದು ಕಿಚ್ಚ ಸುದೀಪ್ ಹೇಳಿದರು.

ಗೋಲ್ಡನ್ ಸ್ಟಾರ್ ಗಣೇಶ್ ಅವರು ರಾಜರಾಜೇಶ್ವರಿ ನಗರದ ಮೌಂಟ್ ಕಾರ್ಮೆಲ್ ಶಾಲೆಯ ಮತಗಟ್ಟೆಗೆ ಆಗಮಿಸಿ ಮತ ಚಲಾಯಿಸಿದರು. ಬಳಿಕ ಮಾತನಾಡಿದ ಗಣೇಶ್, ವೋಟು ಮಾಡೋದು ನಿಮ್ಮ ಹಕ್ಕಾಗಿದೆ. ಹೀಗಾಗಿ ಎಲ್ಲರೂ ತಪ್ಪದೇ ಮತದಾನ ಮಾಡಿ. ನೀವೆಲ್ಲರೂ ನಿಮ್ಮ ಹಕ್ಕನ್ನು ಚಲಾಯಿಸಿ. ಯಾಕೆಂದರೆ ವೋಟ್ ಮಾಡದೇ ಇದ್ದರೆ ಮುಂದೆ ಸೌಲಭ್ಯ ಕೇಳೋದಕ್ಕೆ ನಿಮಗೆ ಅಧಿಕಾರ ಇರುವುದಿಲ್ಲ. ವೋಟ್ ಮಾಡಿದರೆ ಸರಕಾರದಿಂದ ಏನು ಸೌಲಭ್ಯ ಸಿಗುತ್ತದೋ ಅದನ್ನ ಕೇಳಿ ಪಡೆದುಕೊಳ್ಳುವ ಸ್ವಾತಂತ್ರ ನಿಮ್ಮದಾಗುತ್ತದೆ ಎಂದು ಸಲಹೆ ನೀಡಿದರು.

ರಾಜರಾಜೇಶ್ವರಿ ನಗರದಲ್ಲಿ ನಟ ಅವಿನಾಶ್ ಅವರು ಮತದಾನ ಮಾಡಿದರು. ನಟ ದ್ವಾರಕೀಶ್ ಹಾಗೂ ಪತ್ನಿ ಅಂಬುಜಾ ಅವರು ಎಚ್‌ಎಸ್‌ಆರ್ ಲೇಔಟ್‌ನ ಕೇಂಬ್ರಿಡ್ಜ್ ಸ್ಕೂಲ್‌ನಲ್ಲಿ ಮತದಾನ ಮಾಡಿದರು. ಹಾಗೂ ನಟರಾದ ಶಿವಕುಮಾರ್, ರವಿಶಂಕರ್, ರಕ್ಷಿತ್ ಶೆಟ್ಟಿ, ನಟಿ ಅಮೂಲ್ಯ ಸೇರಿ ಇನ್ನಿತರ ನಟ-ನಟಿಯರು ಮತಗಟ್ಟೆಗಳಿಗೆ ಆಗಮಿಸಿ ಮತ ಚಲಾವಣೆ ಮಾಡಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News