‘ಪ್ರಜಾಪ್ರಭುತ್ವ ಉಳಿವಿಗಾಗಿ ಮತ ಚಲಾವಣೆ ಎಲ್ಲರ ಕರ್ತವ್ಯ’

Update: 2019-04-18 18:18 GMT

ಬೆಂಗಳೂರು, ಎ.18: ಸಂವಿಧಾನದತ್ತವಾಗಿ ಪ್ರತಿಯೊಬ್ಬರಿಗೂ ದೊರಕಿರುವ ಮತದಾನದ ಹಕ್ಕನ್ನು ಪ್ರಜಾಪ್ರಭುತ್ವದ ಉಳಿವಿಗಾಗಿ, ಸಮರ್ಥ ಹಾಗೂ ಸುಭದ್ರವಾದ ಸರಕಾರ ರಚನೆಗಾಗಿ ಕಡ್ಡಾಯವಾಗಿ ಮತಹಾಕಬೇಕಾಗಿದೆ ಎಂದು ಯುವ ಮತದಾರರು ಅಭಿಪ್ರಾಯಪಟ್ಟಿದ್ದಾರೆ.

ಮೊದಲನೆ ಬಾರಿಗೆ ಮತ ಚಲಾವಣೆ ಮಾಡಿದ ಯುವ ಮತದಾರರು ಪತ್ರಿಕೆಯೊಂದಿಗೆ ಮಾತನಾಡುತ್ತಾ, ಮತದಾನದಿಂದ ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ಗಟ್ಟಿಗೊಳಿಸಲು ಸಾಧ್ಯವಾಗುತ್ತದೆ. ಆದುದರಿಂದಲೇ ಲೋಕಸಭಾ ಚುನಾವಣೆಯನ್ನು ಪ್ರಜಾಪ್ರಭುತ್ವದ ಹಬ್ಬ ಎಂದು ಕರೆಯಲಾಗಿದೆ. ಇಂದು ನಾವು ಚಲಾವಣೆ ಮಾಡುವ ಒಂದೊಂದು ಮತವೂ ಮುಂದಿನ ಐದು ವರ್ಷಗಳ ಭದ್ರಬುನಾದಿಯಾಗುತ್ತದೆ ಎಂದು ತಮ್ಮ ಮನದಾಳದ ಮಾತುಗಳು ಹಂಚಿಕೊಂಡರು.

ಜಯನಗರದ ವಿವೇಕ್ ಮಾತನಾಡುತ್ತಾ, ಮೊದಲನೇ ಬಾರಿಗೆ ಮತ ಚಲಾವಣೆ ಮಾಡಿದ್ದೇನೆ. ದೇಶಕ್ಕಾಗಿ ಅಲ್ಲ, ಪ್ರಜಾಪ್ರಭುತ್ವದ ಉಳಿವಿಗಾಗಿ ನನ್ನ ಮತ ಹಾಕಿದ್ದೇನೆ. ಮತ ಎಲ್ಲರ ಹಕ್ಕು, ಅದನ್ನು ಸಮರ್ಥವಾಗಿ ಸದುಪಯೋಗಪಡಿಸಿಕೊಂಡಾಗಲೇ ನಾವು ನಿರೀಕ್ಷಿಸಿದ ಹಾಗೂ ಎಲ್ಲರಿಗೂ ಅಗತ್ಯವಿರುವ ಸರಕಾರವನ್ನು ಆಯ್ಕೆ ಮಾಡಿಕೊಳ್ಳಲು ಸಾಧ್ಯವಾಗುತ್ತದೆ ಎಂದು ಹೇಳಿದರು.

ಜೆಪಿ ನಗರದ ಮೂರನೆ ಬ್ಲಾಕ್‌ನಲ್ಲಿನ ಸ್ಪಂದನಾ ಮಾತನಾಡುತ್ತಾ, ಸೂಕ್ತ ಅಭ್ಯರ್ಥಿ ಆಯ್ಕೆ ಮಾಡುವುದರಿಂದ ಅಭಿವೃದ್ಧಿ ಮಾಡುವಂತಹ ಸರಕಾರ ರಚನೆ ಮಾಡಲು ಸಾಧ್ಯವಾಗುತ್ತದೆ. ಈ ನಿಟ್ಟಿನಲ್ಲಿ ನಾನು ನನ್ನ ಮೊದಲ ಮತವನ್ನು ಅಭಿವೃದ್ಧಿ ರಹಿತರನ್ನು ಹೊರತುಪಡಿಸಿ, ಅಭಿವೃದ್ಧಿ ಪರವಿರುವ ಅಭ್ಯರ್ಥಿಗೆ ಹಾಕಿದೆ ಎಂಬ ಸಂತಸ ನನ್ನಲ್ಲಿದೆ. ಮುಂದೆ ಅವರದ್ಧೇ ಸರಕಾರ ರಚನೆಯಾಗಿ, ಜನಪರ ಕೆಲಸಗಳು ನಡೆದರೆ ನಾನು ಹಾಕಿದ ಮತಕ್ಕೆ ಸಾರ್ಥಕವಾಯಿತು ಎನ್ನಿಸುತ್ತದೆ ಎಂದು ತಿಳಿಸಿದರು.

ರಾಜಾಜಿನಗರದ ಮತಗಟ್ಟೆಯ ಬಳಿ ಮಾತನಾಡಿದ ಪದವಿ ವಿದ್ಯಾರ್ಥಿನಿ ಸೌಮ್ಯ, ನಾನು ಮೊದಲ ಬಾರಿಗೆ ಮತ ಚಲಾವಣೆ ಮಾಡುತ್ತಿದ್ದೇನೆ. ಪ್ರಜಾಪ್ರಭುತ್ವ ದೇಶದಲ್ಲಿ ನಡೆಯುತ್ತಿರುವ ಅತಿದೊಡ್ಡ ಮತದಾನದಲ್ಲಿ ನಾನು ಭಾಗಿದಾರಿಯಾಗಿದ್ದೇನೆ ಎನ್ನುವುದು ಹೆಮ್ಮೆಯ ಸಂಗತಿಯಾಗಿದೆ. ನನ್ನ ಮತವನ್ನು ಭ್ರಷ್ಟಾಚಾರ ರಹಿತ, ದೇಶಸೇವೆಗೆ ಆದ್ಯತೆ ನೀಡುವವರಿಗೆ ಹಾಕಿದ್ದೇನೆ ಎಂದು ಅಭಿಪ್ರಾಯಪಟ್ಟರು.

ಇದೇ ಸಂದರ್ಭದಲ್ಲಿ ಹಲವಾರು ಹಿರಿಯರು ಮತದಾನದ ಕುರಿತು ಮಾತನಾಡಿದ್ದು, ನಮಗೆ ಸಿಕ್ಕಿರುವ ಹಕ್ಕನ್ನು ಬಳಸಿಕೊಂಡು ನಮ್ಮವರನ್ನು ಆಯ್ಕೆ ಮಾಡಿಕೊಳ್ಳಬೇಕಾದ ತುರ್ತು ಅಗತ್ಯವಿದೆ. ಈ ನಿಟ್ಟಿನಲ್ಲಿ ನಾವು ಎಷ್ಟೇ ಕಷ್ಟವಾದರೂ ಬಂದು ಮತ ಹಾಕಿದ್ದೇವೆ. ಹಲವಾರು ವರ್ಷಗಳಿಂದಲೂ ಮತ ಚಲಾವಣೆ ಮಾಡುತ್ತಿದ್ದೇವೆ ಎಂದು ಹೇಳಿದ್ದಾರೆ.

ಚಾಮರಾಜಪೇಟೆಯ ಮತಗಟ್ಟೆಯೊಂದರ ಬಳಿ 90 ವರ್ಷದ ಮತದಾರೊಬ್ಬರು ಪ್ರತಿಕ್ರಿಯಿಸಿ, ನಾನು ಕಳೆದ 65 ವರ್ಷಗಳಿಂದಲೂ ನಿರಂತರವಾಗಿ ಮತದಾನ ಮಾಡುತ್ತಲೇ ಬಂದಿದ್ದೇನೆ. ಈ ಬಾರಿಯೂ ಮತದಾನ ಮಾಡಿದ್ದೇನೆ. ದೇಶ ಉಳಿಯಬೇಕು ಎಂದರೆ ನಾವು ಮತ ಹಾಕಿ, ಸರಿಯಾದ ಸಂಸದರ ಆಯ್ಕೆ ಮಾಡಿದರೆ, ಉತ್ತಮ ಸರಕಾರ ರಚನೆಯಾಗುತ್ತದೆ ಎಂದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News