ಮತದಾರರನ್ನು ಆಕರ್ಷಿಸಿದ ‘ಸಖಿ’ ಮತಗಟ್ಟೆಗಳು

Update: 2019-04-18 18:20 GMT

ಬೆಂಗಳೂರು, ಎ.18: ಲೋಕಸಭಾ ಚುನಾವಣೆಯಲ್ಲಿ ಮಹಿಳಾ ಮತದಾರರನ್ನು ಉತ್ತೇಜಿಸಲು ಚುನಾವಣಾ ಆಯೋಗ ವಿಶೇಷವಾಗಿ ರೂಪಿಸಿದ್ದ ‘ಸಖಿ’ ಮತಗಟ್ಟೆಗಳು ಹೆಚ್ಚಿನ ಸಂಖ್ಯೆಯಲ್ಲಿ ಮಹಿಳಾ ಮತದಾರರನ್ನು ಆಕರ್ಷಿಸುತ್ತಿದ್ದ ದೃಶ್ಯಗಳು ಕಂಡುಬಂದವು.

ಕಳೆದ ವರ್ಷ ವಿಧಾನಸಭಾ ಚುನಾವಣೆಯ ಸಂದರ್ಭದಲ್ಲಿ ಪಿಂಕ್ ಮತಗಟ್ಟೆಗಳನ್ನು ಸ್ಥಾಪನೆ ಮಾಡುವ ಮೂಲಕ ಮಹಿಳಾ ಮತದಾರರನ್ನು ಆಕರ್ಷಿಸಿದ್ದರೆ, ಈ ಬಾರಿ ಸಖಿ ಮತಗಟ್ಟೆಗಳನ್ನು ಸ್ಥಾಪಿಸಲಾಗಿತ್ತು. ಬೆಂಗಳೂರು ದಕ್ಷಿಣ, ಉತ್ತರ ಹಾಗೂ ಬೆಂಗಳೂರು ಕೇಂದ್ರ ಲೋಕಸಭಾ ಕ್ಷೇತ್ರಗಳ ವ್ಯಾಪ್ತಿಯಲ್ಲಿ ಸುಮಾರು 100 ರಷ್ಟು ಸಖಿ ಮತಗಟ್ಟೆಗಳನ್ನು ಸ್ಥಾಪಿಸಲಾಗಿತ್ತು.

ಸಖಿ ಮತಗಟ್ಟೆಗಳಲ್ಲಿ ಮತಗಟ್ಟೆ ಅಧಿಕಾರಿ ಹಾಗೂ ಸಿಬ್ಬಂದಿ ಎಲ್ಲರೂ ಮಹಿಳೆಯರೇ ಆಗಿದ್ದು, ಎಲ್ಲರೂ ಗುಲಾಬಿ ಬಣ್ಣದ ಧಿರಿಸು ಧರಿಸಿದ್ದರಿಂದ ಆಕರ್ಷಣೀಯವಾಗಿ ಕಂಡುಬರುತ್ತಿದ್ದರು. ಈ ಮತಗಟ್ಟೆಗಳ ಕಡೆಗೆ ಅಧಿಕ ಸಂಖ್ಯೆಯಲ್ಲಿ ಪುರುಷರು ಹಾಗೂ ಮಹಿಳೆಯರು ಆಗಮಿಸಿ ಮತದಾನ ಮಾಡುತ್ತಿದ್ದರು.

ಮಹಿಳಾ ಸಶಕ್ತೀಕರಣವನ್ನೇ ಮುಖ್ಯ ಗುರಿಯಾಗಿಸಿಕೊಂಡು ಸ್ಥಾಪಿಸಿದ್ದ ಸಖಿ ಮತಗಟ್ಟೆಗಳ ದ್ವಾರಗಳನ್ನು ಬಲೂನ್‌ಗಳ ಮೂಲಕ ಸಿಂಗರಿಸಲಾಗಿತ್ತು. ಒಳಭಾಗದಲ್ಲಿಯೂ ಬಣ್ಣಗಳಿಂದ ಸಿಂಗಾರ ಮಾಡಿದ್ದು, ಆಕರ್ಷಣೀಯವಾಗಿ ಕಾಣುತ್ತಿದ್ದವು. ಸಖಿ ಮತಗಟ್ಟೆಗಳಲ್ಲಿ ಎಲ್ಲ ವಯಸ್ಸಿನವರೂ ಸಂತಸದಿಂದ ಮತದಾನ ಮಾಡಿ ಸಾಗುತ್ತಿದ್ದ ದೃಶ್ಯಗಳು ಕಂಡುಬಂದವು.

ಚುನಾವಣಾ ಆಯೋಗದ ನಿರ್ದೇಶನದಂತೆ ಸಖಿ ಮತಗಟ್ಟೆಯನ್ನು ಆಕರ್ಷಣೀಯವಾಗಿ ರೂಪಿಸಲಾಗಿದೆ. ಇಲ್ಲಿಗೆ ಬಂದು ಮತ ಚಲಾಯಿಸುವವರು ಸಂತಸದಿಂದ ಹಿಂದಿರುಗಿ ಹೋಗುತ್ತಿದ್ದಾರೆ. ಇದೇ ರೀತಿ ಎಲ್ಲ ಕಡೆಗಳಲ್ಲಿಯೂ ಸಿಂಗರಿಸಿದರೆ ಇನ್ನೂ ಹೆಚ್ಚಿನ ಸಂಖ್ಯೆಯಲ್ಲಿ ಮತದಾರರು ಮತ ಚಲಾವಣೆಗೆ ಬರಬಹುದು ಎಂದು ವಿಜಯನಗರದ ಸಖಿ ಮತಗಟ್ಟೆ ಅಧಿಕಾರಿ ಕುಮಾರ್ ಅಭಿಪ್ರಾಯಪಟ್ಟರು.

ನಾನು ಮೊದಲ ಬಾರಿಗೆ ಇಂತಹ ಮತಗಟ್ಟೆಯಲ್ಲಿ ಮತ ಹಾಕುತ್ತಿದ್ದೇನೆ. ಇದರ ಒಳಗೆ ಪ್ರವೇಶ ಮಾಡುತ್ತಿದ್ದಂತೆಯೇ ಎಲ್ಲ ಕಡೆ ಬಣ್ಣ ಬಣ್ಣದ ಬಲೂನ್‌ಗಳಿಂದ ಸಿಂಗಾರ ಮಾಡಲಾಗಿದೆ. ನಾವು ಮತ ಹಾಕಲು ಬಂದಿದ್ದೇವಾ ಅಥವಾ ಯಾವುದಾದರೂ ಸಂಭ್ರಮದ ಸಮಾರಂಭದಲ್ಲಿ ಪಾಲ್ಗೊಂಡಿದ್ದೇವಾ ಎಂಬ ಭಾವ ಕ್ಷಣದಲ್ಲಿ ಬಂದು ಹೋಗುತ್ತದೆ. ಇಂದು ಅತ್ಯಂತ ಸಂತಸದಿಂದ ನನ್ನ ಹಕ್ಕನ್ನು ಅರ್ಹ ಅಭ್ಯರ್ಥಿಗೆ ಚಲಾಯಿಸಿದೆ ಎಂದು ಹಂಪಿನಗರದ ಮಹಿಳಾ ಮತದಾರರೊಬ್ಬರು ಸಂತಸ ಹಂಚಿಕೊಂಡರು.

ವಿಶೇಷಚೇತನರು ನಿರ್ವಹಿಸಿದ ಮತಗಟ್ಟೆಗಳು: ಲೋಕಸಭಾ ಚುನಾವಣೆಯಲ್ಲಿ ಮೊದಲ ಬಾರಿಗೆ ಬೆಂಗಳೂರು ನಗರದ ಮೂರು ಕ್ಷೇತ್ರಗಳ ವ್ಯಾಪ್ತಿಯಲ್ಲಿನ ಐದು ಮತಗಟ್ಟೆಗಳನ್ನು ವಿಶೇಷಚೇತನರು ನಿರ್ವಹಿಸಿದರು. ಮತಗಟ್ಟೆ ಅಧಿಕಾರಿ ಸೇರಿದಂತೆ ಎಲ್ಲರೂ ವಿಶೇಷಚೇತನರಿದ್ದರು. ಅಂಗವೈಕಲ್ಯವುಳ್ಳವರು ಏನೂ ಮಾಡಲಾಗದು ಎಂಬ ಆರೋಪವನ್ನು ದೂರವಿಟ್ಟು, ನಮ್ಮಿಂದಲೂ ಸಾಧಿಸಲು ಸಾಧ್ಯ ಎಂಬುದನ್ನು ತೋರಿಸಿಕೊಟ್ಟಿದ್ದಾರೆ.

ಲೋಕಸಭಾ ಚುನಾವಣೆಯಲ್ಲಿ ಮೊದಲ ಬಾರಿಗೆ ಮತದಾನ ಮಾಡುತ್ತಿರುವ ಯುವ ಮತದಾರರಿಗೆ ವಿಶ್ವ ಒಕ್ಕಲಿಗರ ವೇದಿಕೆ ಸಸಿಗಳನ್ನು ನೀಡಿ ಅಭಿನಂದನೆ ಸಲ್ಲಿಸಲಾಯಿತು. ಶೇಷಾದ್ರಿಪುರಂ ಕಾಲೇಜು ಮತಗಟ್ಟೆಯ ಬಳಿ ಜರ್ನಲಿಸ್ಟ್ ಅಸೋಸಿಯೇಷನ್ ಆಫ್ ಕರ್ನಾಟಕ, ವಿಶ್ವ ಒಕ್ಕಲಿಗರ ವೇದಿಕೆ ಯಶವಂತಪುರ ಸಹಯೋಗದಲ್ಲಿ ಮತ ಚಲಾಯಿಸಿದವರಿಗೆ ಸಸಿಗಳು ನೀಡಲಾಯಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News