ಯಾವ ಶಾಸ್ತ್ರವ ಓದಿದರೇನು?

Update: 2019-04-19 11:59 GMT

ಭಾರತ 1991ರಿಂದಲೇ ನವ ಉದಾರವಾದವನ್ನು ಒಪ್ಪಿ ಕೊಂಡಿದೆ. ಹಣಕಾಸು ಬಂಡವಾಳದ ನಿಯಂತ್ರಣದಲ್ಲಿರುವ ಜಾಗತೀಕರಣ ಪ್ರಕ್ರಿಯೆ ಏಕಾಏಕಿ ಪ್ರತಿಷ್ಠಾಪನೆಯಾಗುವುದಿಲ್ಲ. ಹಂತಹಂತ ವಾಗಿ ದೇಶಗಳ ಅರ್ಥವ್ಯವಸ್ಥೆಯನ್ನು ತನ್ನ ಬಾಹುಗಳಲ್ಲಿ ಬಂಧಿಸುತ್ತದೆ. ಭಾರತದಲ್ಲೂ ಇದೇ ನಡೆಯುತ್ತಿದೆ. ನರೇಂದ್ರ ಮೋದಿ ಸರಕಾರ ಈ ನವ ಉದಾರವಾದದ ನಾಲ್ಕನೆಯ ಹಂತದಲ್ಲಿ ಆಡಳಿತ ನಡೆಸುತ್ತಿದೆ. ನಾಲ್ಕನೆಯ ಔದ್ಯಮಿಕ ಕ್ರಾಂತಿಗೆ ಪೂರಕವಾದ ಆರ್ಥಿಕ ನೀತಿಗಳನ್ನು ಜಾರಿಗೊಳಿಸುತ್ತಿದೆ. ಇದರ ಅಪಾಯಗಳನ್ನು ಎಚ್‌ಎಎಲ್, ಬಿಎಸ್ಸೆನ್ನೆಲ್, ಬ್ಯಾಂಕಿಂಗ್ ಉದ್ದಿಮೆ, ವಿಮಾ ಕ್ಷೇತ್ರ, ರೈಲ್ವೆ, ವಿಮಾನ ನಿಲ್ದಾಣ ಗಳು ಇತ್ಯಾದಿ ಕ್ಷೇತ್ರಗಳಲ್ಲಿ ಕಾಣುತ್ತಿದ್ದೇವೆ. ಅಂಬಾನಿ, ಅದಾನಿ, ನೀರವ್ ಮೋದಿ, ಚೋಕ್ಸಿ, ಅಗರ್ವಾಲ್, ಟಾಟಾ, ಬಿರ್ಲಾ, ಇನ್ಫೋಸಿಸ್, ವಿಪ್ರೋ ಹೀಗೆ ಕಾರ್ಪೊರೇಟ್ ಉದ್ದಿಮೆಗಳ ಪಟ್ಟಿಯನ್ನು ನೋಡುತ್ತಾ ಹೋದರೆ ಇವರಾರೂ ಮೋದಿ ಆಡಳಿತದಲ್ಲಿ ಉಗಮಿಸಿದವರಲ್ಲ ಎನ್ನುವುದು ಸ್ಪಷ್ಟವಾಗಿ ತಿಳಿಯುತ್ತದೆ. ಆದರೆ ಈ ಕಾರ್ಪೊರೇಟ್ ಉದ್ಯಮಿಗಳನ್ನು ಬಲಪಡಿಸುವ ನಿಟ್ಟಿನಲ್ಲಿ ಮೋದಿ ಸರಕಾರ ಹಿಂದಿನ ಎಲ್ಲ ಸರಕಾರಗಳಿಗಿಂತಲೂ ಹೆಚ್ಚು ಬದ್ಧತೆ ತೋರುತ್ತಿದೆ ಎನ್ನುವುದು ಸ್ಪಷ್ಟ. ದೇವೇಗೌಡರು ಪ್ರಧಾನಿಯಾಗಿದ್ದ ಅಲ್ಪಾವಧಿಯಲ್ಲೇ ರಿಲಯನ್ಸ್ ಪ್ರಬಲವಾಗಿ ಬೆಳೆದಿದ್ದನ್ನು ಒಮ್ಮೆ ಪುಟ ತಿರುಗಿಹಾಕಿದರೆ ತಿಳಿಯುತ್ತದೆ.

ಭಾರತದ ಅರ್ಥವ್ಯವಸ್ಥೆ ಕಾರ್ಪೊರೇಟ್ ವಶವಾಗುವತ್ತ ದಾಪುಗಾಲು ಹಾಕುತ್ತಿರುವ ಈ ಸಂದರ್ಭದಲ್ಲಿ ಹಣಕಾಸು, ವಿಮೆ, ನೆಲ-ಜಲ-ವಾಯು ಸಾರಿಗೆ, ರೈಲ್ವೆ, ಶಿಕ್ಷಣ, ಆರೋಗ್ಯ, ರಕ್ಷಣಾ ವಲಯ, ಸಂಪರ್ಕ ಇಷ್ಟೂ ಕ್ಷೇತ್ರಗಳನ್ನು ಕಾರ್ಪೊರೇಟ್ ಉದ್ಯಮಿಗಳಿಗೆ ಬಾಗಿನದ ರೂಪದಲ್ಲಿ ನೀಡುವ ಸಕಲ ಸಿದ್ಧತೆಗಳನ್ನು ನೋಡುತ್ತಿದ್ದೇವೆ. ಇದಕ್ಕೆ ರಫೇಲ್ ಒಂದು ನಿದರ್ಶನ. ಇದರಲ್ಲಿ ದೇಶಭಕ್ತಿಯೂ ಇಲ್ಲ, ದೇಶದ ರಕ್ಷಣೆಯೂ ಇಲ್ಲ. ಉತ್ಪಾದನೆಯ ಮೂಲ ಮತ್ತು ಉತ್ಪಾದನಾ ವಲಯಗಳ ಮೇಲೆ ಯಾರು ನಿಯಂತ್ರಣ ಸಾಧಿಸಬೇಕು ಎನ್ನುವುದಷ್ಟೇ ಪ್ರಶ್ನೆ. ಛತ್ತಿಸ್ ಘಡದಲ್ಲಿ 1 ಲಕ್ಷ 70 ಸಾವಿರ ಹೆಕ್ಟೇರ್ ಅರಣ್ಯ ಭೂಮಿಯನ್ನು ಅದಾನಿಗೆ ನೀಡಿಲ್ಲವೇ ? ಯಾವ ಭಕ್ತಿಯ ಪ್ರತೀಕ ಇದು. ಭೂಮಿ ಈ ದೇಶದ ಪ್ರಜೆಗಳ ಆಸ್ತಿಯಲ್ಲವೇ ? ಯಾವ ಕ್ಷೇತ್ರದ ಸಂಪನ್ಮೂಲಗಳ ಮೇಲೆ ಹಣಕಾಸು ಬಂಡವಾಳ ಶೀಘ್ರಗತಿಯಲ್ಲಿ ಆಧಿಪತ್ಯ ಸಾಧಿಸಲು ಸಾಧ್ಯವೋ ಅಂತಹ ಕ್ಷೇತ್ರಗಳ ಉದ್ದಿಮೆಗಳನ್ನು ಅಷ್ಟೇ ಶೀಘ್ರಗತಿಯಲ್ಲಿ ಕಾರ್ಪೊರೇಟ್ ಉದ್ದಿಮೆಗಳಿಗೆ ವಹಿಸಲಾಗುತ್ತದೆ. ಈ ನಿಟ್ಟಿನಲ್ಲಿ ನರಸಿಂಹರಾವ್, ಐ.ಕೆ. ಗುಜ್ರಾಲ್, ದೇವೇಗೌಡ, ವಾಜಪೇಯಿ, ಮನಮೋಹನ್ ಸಿಂಗ್ ಹಾಕಿದ ಹೆಜ್ಜೆಯನ್ನು ಮೋದಿ ಬಲಗೊಳಿಸುತ್ತಿರುವುದು ವಾಸ್ತವ. ಇದು ಪಕ್ಷ ಕೇಂದ್ರಿತ ವಿಚಾರವಲ್ಲ. ನೀತಿ ಕೇಂದ್ರಿತ ವಿಚಾರ. ಇದು ಪ್ರಭುತ್ವದ ನಿರ್ಧಾರ. ಸರಕಾರಗಳು ನಿಮಿತ್ತ ಮಾತ್ರ.

ಬ್ಯಾಂಕುಗಳನ್ನೂ ಸೇರಿದಂತೆ ಸಾರ್ವಜನಿಕ ಉದ್ದಿಮೆಗಳನ್ನು ದುರ್ಬಲಗೊಳಿಸುವ ಪ್ರಕ್ರಿಯೆ ಚಾಲ್ತಿಯಾಗಿ ಬಹುತೇಕ ಮೂರು ದಶಕಗಳಾಗುತ್ತಿವೆ. ಈಗ ಕ್ಷಿಪ್ರ ಕಾರ್ಯಾಚರಣೆ ನಡೆಯುತ್ತಿದೆ. ದೇಶದ ಅರಣ್ಯ ಸಂಪತ್ತನ್ನು, ಜಲ ಸಂಪತ್ತನ್ನು ಮತ್ತು ಭೂಗರ್ಭದ ಸಂಪನ್ಮೂಲಗಳನ್ನು ಈ ಲೂಟಿಕೋರರಿಗೆ ನೀಡುವ ನಿಟ್ಟಿನಲ್ಲಿ ಒಡಿಶಾದ ನವೀನ್ ಪಟ್ನಾಯಕ್, ಬಂಗಾಲದ ಮಮತಾ ಬ್ಯಾನರ್ಜಿ, ಮಹಾರಾಷ್ಟ್ರದ ಫಡ್ನವೀಸ್, ಕರ್ನಾಟಕದ ಕುಮಾರಸ್ವಾಮಿ, ತಮಿಳುನಾಡಿನ ಪಳನಿ ಸ್ವಾಮಿ ಎಲ್ಲರೂ ಒಂದೇ ಎನ್ನುವುದನ್ನು ಮರೆಯುವಂತಿಲ್ಲ. ಆದರೆ ಬಿಜೆಪಿ ಮತ್ತು ನರೇಂದ್ರ ಮೋದಿ ಈ ನಿಟ್ಟಿನಲ್ಲಿ ಮುಂದಿದ್ದಾರೆ. ಆದಷ್ಟು ಬೇಗ ಪರಭಾರೆಯ ಪ್ರಕ್ರಿಯೆ ಮುಗಿಸಲು ಮುಗಿಬಿದ್ದಿದ್ದಾರೆ. ವಿಜಯ ಬ್ಯಾಂಕ್ ಇಲ್ಲವಾಗಿದ್ದು 2019ರಲ್ಲಿ ಆದರೆ ವಿಜಯ ಬ್ಯಾಂಕ್ ಸಮಾಧಿಯ ನಿರ್ಮಾಣ ಆರಂಭವಾಗಿದ್ದು 1999ರಲ್ಲಿ. ಬಿಇಎಂಎಲ್, ಎಚ್‌ಎಎಲ್, ಬಿಎಸ್ಸೆನ್ನೆಲ್ ಈ ಎಲ್ಲ ದೇಗುಲಗಳ ಸಮಾಧಿಯ ನಿರ್ಮಾಣ ಕಾರ್ಯಕ್ಕೆ ಶಂಕುಸ್ಥಾಪನೆಯಾದದ್ದು 1999-2004ರ ನಡುವೆ, ವಾಜಪೇಯಿ ಅಧಿಕಾರಾವಧಿಯಲ್ಲಿ.

ಈ ಕಾರ್ಪೊರೇಟೀಕರಣ ಪ್ರಕ್ರಿಯೆಯನ್ನು ವಿಮರ್ಶಿಸಿದ ಕೂಡಲೇ, ಟೀಕಿಸಿದ ಕೂಡಲೇ ಮೋದಿ ಅಭಿಮಾನಿಗಳು ಸಿಡಿದೇಳುತ್ತಾರೆ. ದೇವನೂರ ಮಹದೇವ ಅವರನ್ನು ‘‘ಖ್ಯಾತ ಅರ್ಥಶಾಸ್ತ್ರಜ್ಞ’’ ಎಂದು ಲೇವಡಿ ಮಾಡುವವರೂ ಇದ್ದಾರೆ. ನಾಗೇಶ್ ಹೆಗ್ಡೆಯವರನ್ನಂತೂ ರುಬ್ಬಲು ಸಿದ್ಧರಾಗಿದ್ದಾರೆ. ಇರಲಿ. ಅವರವರ ಭಾವಕ್ಕೆ, ಅವರವರ (ದೇಶ) ಭಕುತಿಗೆ. ಅಂಬಾನಿ, ಅದಾನಿ ಕಾಂಗ್ರೆಸ್ ಯುಪಿಎ ಅವಧಿಯಲ್ಲಿರಲಿಲ್ಲವೇ ಎಂಬ ಪ್ರಶ್ನೆಗೆ ಉತ್ತರ, ಹೌದಪ್ಪಾಇದ್ದರು, ಬೆಳೆದಿದ್ದರು, ಬೇರೂರಿದ್ದರು ಆದರೆ ಆಕ್ರಮಿಸಿರಲಿಲ್ಲ. ಈಗ ಆಕ್ರಮಿಸುತ್ತಿದ್ದಾರೆ ಎಂದಷ್ಟೇ ಹೇಳಲು ಸಾಧ್ಯ. ಇಲ್ಲಿ ಒಂದು ಸೂಕ್ಷ್ಮ ಇದೆ. ದೇಶದ ಸಾರ್ವಜನಿಕ ಉದ್ದಿಮೆಗಳನ್ನು ಮತ್ತು ನೆಲ, ಜಲ, ವಾಯು ಸಂಪನ್ಮೂಲಗಳನ್ನು ಕಾರ್ಪೊರೇಟ್ ದೊರೆಗಳಿಗೆ ಒಪ್ಪಿಸಿ ಕಾರ್ಮಿಕ ವರ್ಗವನ್ನು ಬೀದಿಪಾಲು ಮಾಡಿ, ನೈಸರ್ಗಿಕ ಸಂಪನ್ಮೂಲಗಳನ್ನು ನಿರಂತರ ಲೂಟಿ ಮಾಡಲು ಅವಕಾಶ ಮಾಡಿಕೊಡುವ ಒಂದು ಆಡಳಿತ ನೀತಿಗೆ ತಳಪಾಯ ಹಾಕಿದ್ದು, ಈ ದೇಶ ಕಂಡ ಅತ್ಯಂತ ದಕ್ಷ ಪ್ರಧಾನಿ ಎಂದು ಹೇಳಲಾಗುವ ವಾಜಪೇಯಿ ಅಧಿಕಾರಾವಧಿಯಲ್ಲಿ. ಅವರ ಸಂಪುಟದಲ್ಲಿ ಕೃಷಿ ಸಚಿವರೇ ಇರಲಿಲ್ಲ. ಆದರೆ ಬಂಡವಾಳ ಹಿಂದೆಗೆತಕ್ಕಾಗಿ ಒಬ್ಬ ಸಚಿವರಿದ್ದರು (ಅರುಣ್ ಶೌರಿ). ಇವರಿಗೆ ಈಗ ಜ್ಞಾನೋದಯವಾಗಿದೆ ಬೇರೆಲ್ಲಾ ಮಾತನಾಡುತ್ತಾರೆ ಆದರೆ ಆರ್ಥಿಕ ನೀತಿಯ ಬಗ್ಗೆ ಮಾತನಾಡುವುದಿಲ್ಲ. ಏಕೆಂದರೆ ಇವರು ನವ ಉದಾರವಾದದ ಸಮರ್ಥಕರು.

ವಾಜಪೇಯಿ ತಮ್ಮ ಮೃದು ಧೋರಣೆಯ ಮುಖವಾಡವನ್ನು ಹೊತ್ತುಕೊಂಡೇ ಗುಜರಾತ್ ಮೂಲಕ ಕಾರ್ಪೊರೇಟ್ ಅತಿಕ್ರಮಣಕ್ಕೆ ಹಾದಿ ಸುಗಮ ಮಾಡಿದ್ದನ್ನು ತಿಳಿದವರು ಅಲ್ಲಗಳೆಯುವುದಿಲ್ಲ. ಉನ್ಮತ್ತರು ಅರಚಾಡಬಹುದು. ಆದರೆ ವಾಸ್ತವ ಬದಲಾಗುವುದಿಲ್ಲ. ‘‘ಮೋದಿ ಮತ್ತೊಮ್ಮೆ’’ ಎಂಬ ಕೂಗು ಅಥವಾ ‘‘ನಾನೂ ಚೌಕಿದಾರ’’ ಎಂಬ ಘೋಷಣೆಯನ್ನು ಈ ದೃಷ್ಟಿಯಲ್ಲಿ ನೋಡೋಣ. ಮೋದಿ ಮತ್ತೊಮ್ಮೆ ಯಾರಿಗೆ ಬೇಕು? ಚೌಕಿದಾರರು ಏನನ್ನು ಕಾಯಬೇಕು? ಈ ಪ್ರಶ್ನೆಗಳಿಗೆ ಮಹದೇವ ತಮ್ಮ ದಿನಪತ್ರಿಕೆಯೊಂದರ ಲೇಖನದಲ್ಲಿ ಉತ್ತರ ಹುಡುಕಲು ಯತ್ನಿಸಿದ್ದಾರೆ. ಅವರು ಅರ್ಥಶಾಸ್ತ್ರಜ್ಞರಲ್ಲ. ನಮ್ಮ ದೇಶದ ವಿತ್ತ ಸಚಿವರೇ ಅರ್ಥಶಾಸ್ತ್ರಜ್ಞರಲ್ಲ. ಏನ್ಮಾಡೋಕಾಗುತ್ತೆ. ಜನಸಾಮಾನ್ಯರ ನಾಡಿಮಿಡಿತ ಗ್ರಹಿಸಲು ವೈದ್ಯರೇ ಆಗಬೇಕಿಲ್ಲ. ಮಾನವೀಯ ಸಂವೇದನೆ ಮತ್ತು ತುಡಿತ ಇದ್ದರೆ ಸಾಕು. ದೇಶ ಕಾಣುತ್ತಿರುವ ದುರಂತಗಳನ್ನ ಗ್ರಹಿಸಲು ಅರ್ಥಶಾಸ್ತ್ರಜ್ಞರೇ ಆಗಬೇಕಿಲ್ಲ. ಪರಿಸ್ಥಿತಿಯನ್ನು ಅರ್ಥ ಮಾಡಿಕೊಳ್ಳುವುದು ಹೇಗೆ ಎಂದು ತಿಳಿದಿದ್ದರೆ ಸಾಕು.

ವಾಜಪೇಯಿ ನಿರ್ಮಿಸಿದ ಬುನಾದಿಯ ಮೇಲೆ ಮೋದಿ ಸರಕಾರ ಸ್ಮಾರಕ ನಿರ್ಮಿಸುತ್ತಿದೆ. ಇದು ಬಂಡವಾಳದ ಸ್ಮಾರಕ, ಬಂಡವಾಳವಿಲ್ಲದ ಬಡಪಾಯಿಗಳ ಸಮಾಧಿ. ನಾವು ಪುಷ್ಪಗುಚ್ಚ ಇರಿಸಬೇಕೋ, ಹೂಮಾಲೆ ತೊಡಿಸಬೇಕೋ ಪ್ರಜ್ಞೆಗೆ ಸಂಬಂಧಿಸಿದ ವಿಚಾರ. ಉನ್ಮಾದ ಹೆಚ್ಚಾದರೆ ಅದಲುಬದಲಾಗಬಹುದು. ಶಾಂತಚಿತ್ತರಾಗಿ ಯೋಚಿಸೋಣ. ನಮ್ಮ ಪ್ರಜ್ಞೆ ಭವಿಷ್ಯದ ಪ್ರಶ್ನೆಗಳಿಗೆ ಉತ್ತರ ಸೂಚಿಸಿದರೆ ಅದೇ ನಮ್ಮ ಬದುಕಿನ ಸಾರ್ಥಕತೆ ಅಲ್ಲವೇ ?

Writer - ನಾ. ದಿವಾಕರ

contributor

Editor - ನಾ. ದಿವಾಕರ

contributor

Similar News