ಯಿಂಗ್ ಇಲ್ಲದ ಟೂರ್ನಿಯಲ್ಲಿ ಸೈನಾ, ಸಿಂಧು ಪಾರಮ್ಯ?

Update: 2019-04-19 04:23 GMT

ಪದಕದ ಬರ ನೀಗಿಸಲು ಭಾರತೀಯರಿಗೆ ಉತ್ತಮ ಅವಕಾಶ

ಹೈದರಾಬಾದ್, ಎ.18: ಮುಂದಿನ ವಾರದಿಂದ ಆರಂಭವಾಗುವ ಏಶ್ಯನ್ ಬ್ಯಾಡ್ಮಿಂಟನ್ ಚಾಂಪಿಯನ್‌ಶಿಪ್‌ನಲ್ಲಿ  ಭಾರತದ ತಾರಾ ಆಟಗಾರ್ತಿಯರಾದ ಸೈನಾ ನೆಹ್ವಾಲ್ ಹಾಗೂ ಪಿ.ವಿ.ಸಿಂಧುಗೆ ತೈವಾನ್ ಆಟಗಾರ್ತಿ ತೈ ಝು ಯಿಂಗ್ ಭೀತಿ ಇಲ್ಲವಾಗಿದೆ. ಯಿಂಗ್ ಈ ಇಬ್ಬರೂ ಆಟಗಾರ್ತಿಯರ ಪ್ರಮುಖ ಎದುರಾಳಿಯಾಗಿದ್ದಾರೆ.

ವಿಶ್ವದ ನಂ.1 ಹಾಗೂ ಟೂರ್ನಿಯ ಹಾಲಿ ಚಾಂಪಿಯನ್ ಆಗಿರುವ ಯಿಂಗ್ ಟೂರ್ನಿಯಿಂದ ಹೊರಗುಳಿಯುವ ಮೂಲಕ ಸಿಂಧು ಹಾಗೂ ಸೈನಾ ಹಾದಿಯನ್ನು ಕೊಂಚ ಸುಗಮವಾಗಿಸಿದ್ದಾರೆ. ಯಿಂಗ್ ಅನುಪಸ್ಥಿತಿಯಲ್ಲಿ, ಆಲ್ ಇಂಗ್ಲೆಂಡ್ ಚಾಂಪಿಯನ್ ಚೀನಾದ ಚೆನ್ ಯುಫೇ ಅಗ್ರ ಶ್ರೇಯಾಂಕವನ್ನು ಪಡೆದಿದ್ದು, ಮಾಜಿ ವಿಶ್ವ ಚಾಂಪಿಯನ್ ಜಪಾನ್‌ನ ನೊರೊಮಿ ಒಕುಹರಾ ಎರಡನೇ ಶ್ರೇಯಾಂಕ ಪಡೆದಿದ್ದಾರೆ.

1562ರಲ್ಲಿ ಏಶ್ಯನ್ ಚಾಂಪಿಯನ್ ಆರಂಭವಾಗಿದ್ದರೂ ಯಾವೊಬ್ಬ ಭಾರತೀಯರೂ  ಟ್ರೋಫಿ ಗೆಲ್ಲದಿರುವುದು ಅಚ್ಚರಿಯ ವಿಷಯ.

ನಾಲ್ಕನೇ ಶ್ರೇಯಾಂಕದ ಸಿಂಧು, ತಮ್ಮ ಮೊದಲ ಸುತ್ತಿನ ಪಂದ್ಯದಲ್ಲಿ ಜಪಾನ್‌ನ ಸಾಯಕಾ ತಕಹಶಿ ಅವರ ಸವಾಲಿಗೆ ಸಜ್ಜಾಗಲಿದ್ದಾರೆ. ಸಿಂಧು ಹೆಚ್ಚು ಬೆವರು ಹರಿಸದೆ ಕ್ವಾರ್ಟರ್‌ಫೈನಲ್ ತಲುಪುವ ನಿರೀಕ್ಷೆಯಿದೆ. ಅಂತಿಮ 8ರ ಘಟ್ಟದಲ್ಲಿ ಅವರು, ಕೊರಿಯದ ಜಿ ಹ್ಯುನ್ ಸಂಗ್ ಅಥವಾ ಚೀನಾದ ಯುವ ಆಟಗಾರ್ತಿ ಕಾಯ್ ಯಾನ್ಯಾನ್ ಅವರನ್ನು ಎದುರಿಸುವರು. ಈ ಹಿಂದಿನ ಪಂದ್ಯಗಳಲ್ಲಿ ಸಿಂಧು, ಹ್ಯೂನ್‌ರಿಂದ ಭಾರೀ ಪೈಪೋಟಿ ಎದುರಿಸಿದ್ದಾರೆ.

ಇನ್ನೊಂದೆಡೆ ಸೈನಾ ತಮ್ಮ ಮೊದಲ ಪಂದ್ಯವನ್ನು ಚೀನಾದ ಹಾನ್ ಯು ವಿರುದ್ಧ ಆಡಲಿದ್ದಾರೆ. ಕಳೆದ ವರ್ಷ ನಡೆದ ಸಯ್ಯದ್ ಮೋದಿ ಚಾಂಪಿಯನ್‌ಶಿಪ್‌ನಲ್ಲಿ ಹಾನ್‌ಗೆ ಸೈನಾ ಮಣಿದಿದ್ದರು. ಸೈನಾ ಮೊದಲ ಎರಡು ಸುತ್ತುಗಳಲ್ಲಿ ಜಯ ಗಳಿಸಿದರೆ ಕ್ವಾರ್ಟರ್‌ಫೈನಲ್‌ನಲ್ಲಿ ಜಪಾನ್‌ನ ಅಕಾನೆ ಯಮಗುಚಿ ಅವರನ್ನು ಎದುರಿಸುವ ಸಾಧ್ಯತೆಯಿದೆ.

ಪದಕಗಳ ಬರ ನೀಗಿಸಿಕೊಳ್ಳಲು ಭಾರತದ ಶಟ್ಲರ್‌ಗಳಿಗೆ ಏಶ್ಯನ್ ಚಾಂಪಿಯನ್‌ಶಿಪ್ ಉತ್ತಮ ಅವಕಾಶವಾಗಿದೆ.

ಪುರುಷರ ಸಿಂಗಲ್ಸ್‌ನಲ್ಲಿ ಭಾರತದ ಕಿಡಂಬಿ ಶ್ರೀಕಾಂತ್ ಕ್ವಾರ್ಟರ್‌ಫೈನಲ್ ತಲುಪುವ ನಿರೀಕ್ಷೆಯಿದ್ದು, ಕ್ವಾರ್ಟರ್‌ಫೈನಲ್ ಪಂದ್ಯದಲ್ಲಿ ಮಾಜಿ ವಿಶ್ವ ಹಾಗೂ ಒಲಿಂಪಿಕ್ಸ್ ಚಾಂಪಿಯನ್ ಚೆನ್ ಲಾಂಗ್‌ರನ್ನು ಎದುರಿಸುವ ಸಾಧ್ಯತೆಯಿದೆ.

ಸಮೀರ್ ವರ್ಮಾ ಕೂಡ ಸಿಂಗಲ್ಸ್ ಸ್ಪರ್ಧೆಯಲ್ಲಿ ದೇಶವನ್ನು ಪ್ರತಿನಿಧಿಸಲಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News