‘ನ್ಯಾಯಾಂಗ ಅಪಾಯದಲ್ಲಿದೆ’: ಲೈಂಗಿಕ ಕಿರುಕುಳ ಆರೋಪದ ಬಗ್ಗೆ ಸಿಜೆಐ ರಂಜನ್ ಗೊಗೊಯಿ ಪ್ರತಿಕ್ರಿಯೆ

Update: 2019-04-20 07:00 GMT

ಹೊಸದಿಲ್ಲಿ, ಎ.20: ತಮ್ಮ ವಿರುದ್ಧ ಮಹಿಳೆಯೊಬ್ಬರು ಹೊರಿಸಿರುವ ಲೈಂಗಿಕ ಕಿರುಕುಳ ಆರೋಪವನ್ನು ನಿರಾಕರಿಸಿರುವ ಸುಪ್ರೀಂ ಕೋರ್ಟಿನ ಮುಖ್ಯ ನ್ಯಾಯಮೂರ್ತಿ ಜಸ್ಟಿಸ್ ರಂಜನ್ ಗೊಗೊಯಿ, ದೇಶದ `ನ್ಯಾಯಾಂಗವು ಅಪಾಯ'ದಲ್ಲಿದೆ ಹಾಗೂ ಅದನ್ನು `ಬಲಿಪಶು' ಮಾಡಲು ಸಾಧ್ಯವಿಲ್ಲ ಎಂದು ಹೇಳಿದ್ದಾರೆ.

ಮುಖ್ಯ ನ್ಯಾಯಮೂರ್ತಿ ರಂಜನ್ ಗೊಗೊಯಿ ವಿರುದ್ಧ ಆರೋಪ ಹೊರಿಸಿ ಮಹಿಳೆಯೊಬ್ಬರು ಹಲವಾರು ನ್ಯಾಯಾಧೀಶರುಗಳಿಗೆ ಅಫಿದಾವಿತ್  ಸಲ್ಲಿಸಿದ ಹಿನ್ನೆಲೆಯಲ್ಲಿ ಸುಪ್ರೀಂ ಕೋರ್ಟಿನ ವಿಶೇಷ ನ್ಯಾಯಪೀಠ ಇಂದು  ಈ ಪ್ರಕರಣ ವಿಚಾರಣೆ ನಡೆಸಿದೆ.

“ಈ ಆರೋಪಗಳಿಗೆ ಉತ್ತರಿಸುವಷ್ಟು ಕೆಳ ಮಟ್ಟಕ್ಕೆ ನಾನು ಇಳಿಯಲು ಬಯಸುವುದಿಲ್ಲ'' ಎಂದು ವಿಚಾರಣೆ ವೇಳೆ ಮುಖ್ಯ ನ್ಯಾಯಮೂರ್ತಿಗಳು ಹೇಳಿದರಲ್ಲದೆ, “20 ವರ್ಷಗಳ ಸೇವೆಯ ನಂತರ ನನಗೆ ದೊರಕಿದ ಬಹುಮಾನವಿದು'' ಎಂದರು.

ಮುಖ್ಯ ನ್ಯಾಯಮೂರ್ತಿಗಳ ವಿರುದ್ಧ ಕೇಳಿ ಬಂದಿರುವ ಲೈಂಗಿಕ ಕಿರುಕುಳ ಆರೋಪದ ಕುರಿತಂತೆ ಸುಪ್ರೀಂ ಕೋರ್ಟ್ ಅಧಿಕಾರಿಗಳ ಮುಂದೆ ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ ಉಲ್ಲೇಖಿಸಿದ ನಂತರ ವಿಶೇಷ ನ್ಯಾಯಪೀಠವನ್ನು ರಚಿಸಲಾಯಿತು.

ಈ ವಿಶೇಷ ಪೀಠದಲ್ಲಿ ಮುಖ್ಯ ನ್ಯಾಯಮೂರ್ತಿ ಗೊಗೊಯಿ ಹಾಗೂ ನ್ಯಾಯಮೂರ್ತಿಗಳಾದ ಅರುಣ್ ಮಿಶ್ರಾ ಮತ್ತು ಸಂಜೀವ್ ಖನ್ನಾ ಇದ್ದಾರೆ. ಈ ಹಂತದಲ್ಲಿ ನ್ಯಾಯಾಲಯವು ಯಾವುದೇ ಆದೇಶ ಜಾರಿಗೊಳಿಸುವುದಿಲ್ಲ ಎಂದು ಹೇಳಿದ ಜಸ್ಟಿಸ್ ಅರುಣ್ ಮಿಶ್ರಾ ಮಾಧ್ಯಮಗಳು ಸಂಯಮ ತೋರಿ ಜವಾಬ್ದಾರಿಯಿಂದ ಕಾರ್ಯ ನಿರ್ವಹಿಸುವಂತೆ ಕೇಳಿಕೊಂಡರು.

 ಎಲ್ಲಾ ಆರೋಪಗಳೂ ಆಧಾರರಹಿತ ಹಾಗೂ ಕೆಟ್ಟ ಉದ್ದೇಶವನ್ನು ಹೊಂದಿದೆ ಎಂದು ಸುಪ್ರೀಂ ಕೋರ್ಟಿನ ಮಹಾ ಕಾರ್ಯದರ್ಶಿ ಸಂಜೀವ್ ಸುಧಾಕರ್ ಕಲ್ಗಾಂವ್ಕರ್ ಈಗಾಗಲೇ ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News