ಹಿಂದುಳಿದವರ ಏಳ್ಗೆಗೆ ಈಶ್ವರಪ್ಪ ಮಾಡಿದ್ದೇನು?: ಸಿದ್ದರಾಮಯ್ಯ ಪ್ರಶ್ನೆ

Update: 2019-04-20 14:17 GMT

ಗೋಕಾಕ, ಎ.20: ಬಿಜೆಪಿ ಶಾಸಕ ಕೆ.ಎಸ್.ಈಶ್ವರಪ್ಪ ಎಂಬ ಉದ್ದ ನಾಲಿಗೆಯ ವ್ಯಕ್ತಿ ಆ ಪಕ್ಷದಲ್ಲಿದ್ದುಕೊಂಡು ಹಿಂದುಳಿದವರ ಏಳ್ಗೆಗಾಗಿ ಏನನ್ನು ಮಾಡಿದ್ದಾರೆ ಎಂದು ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕ, ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಇಂದಿಲ್ಲಿ ಪ್ರಶ್ನೆ ಮಾಡಿದ್ದಾರೆ.

ಬೆಳಗಾವಿ ಲೋಕಸಭಾ ಕ್ಷೇತ್ರಕ್ಕೆ ಸ್ಪರ್ಧಿಸಿರುವ ಕಾಂಗ್ರೆಸ್ ಅಭ್ಯರ್ಥಿ ಡಾ. ವಿರೂಪಾಕ್ಷ ಸಾಧುನವರ ಪರ ನಗರದಲ್ಲಿ ಪ್ರಚಾರ ಭಾಷಣ ಮಾಡಿದ ಅವರು, ಈಶ್ವರಪ್ಪ ಕೈಯಿಂದ ಒಬ್ಬನೇ ಒಬ್ಬ ಕುರುಬ, ಹಾಲುಮತಸ್ಥ ಸಮುದಾಯದವರಿಗೆ ತಮ್ಮ ಪಕ್ಷದ ಟಿಕೆಟ್ ಕೊಡಿಸಲಾಗಿಲ್ಲ. ಈ ವ್ಯಕ್ತಿಯಿಂದ ಕೇವಲ ರಾಯಣ್ಣ ಬ್ರಿಗೇಡ್ ಕಟ್ಟಲು ಹೋಗಿ ಕೈ ಸುಟ್ಟುಕೊಂಡಿರುವುದನ್ನು ಬಿಟ್ಟರೆ ಮತ್ತೇನಾಗಲು ಸಾಧ್ಯ ಎಂದರು.

ಕಾಂಗ್ರೆಸ್ ಪಕ್ಷ ರಾಜ್ಯದಲ್ಲಿ ಮೈತ್ರಿ ಧರ್ಮ ಪಾಲನೆಗೆ ಬದ್ಧವಾಗಿದ್ದುಕೊಂಡೂ ತನ್ನ ಪಾಲಿನ 20 ಲೋಕಸಭಾ ಸ್ಥಾನಗಳ ಪೈಕಿ 8 ಸ್ಥಾನಗಳನ್ನು ಹಿಂದುಳಿದ ವರ್ಗ ಮತ್ತು ಅಲ್ಪಸಂಖ್ಯಾತರಿಗೆ ನೀಡಿದೆ ಎಂದ ಅವರು, ಬಿಜೆಪಿ ಕರ್ನಾಟಕದ 27 ಕ್ಷೇತ್ರಗಳಲ್ಲಿ ತನ್ನ ಅಭ್ಯರ್ಥಿಗಳನ್ನು ಕಣಕ್ಕಿಳಿಸಿದ್ದರೆ ಅವರಲ್ಲಿ ಹಿಂದುಳಿದವರಾಗಲೀ ಅಲ್ಪಸಂಖ್ಯಾತರಾಗಲೀ ಒಬ್ಬರೂ ಇಲ್ಲ ಎಂದು ಹೇಳಿದರು.

ಸ್ವಾತಂತ್ರ್ಯಾ ನಂತರದ ಭಾರತದ ಇತಿಹಾಸವನ್ನು ಗಮನಿಸಿದರೆ ಪ್ರಧಾನಿ ನರೇಂದ್ರ ಮೋದಿ ಹೇಳಿಕೊಳ್ಳುತ್ತಿರುವ ಏರ್ ಸ್ಟ್ರೈಕ್ ಇದು ಮೊದಲನೆಯದೇನೂ ಅಲ್ಲ. ಇದಕ್ಕೂ ಮೊದಲು 14 ಬಾರಿ ಇಂಥ ಯತ್ನಗಳು ಭಾರತದಿಂದ ನಡೆದಿವೆ. ಆದರೆ, ಪ್ರಧಾನಿ ಮೋದಿ ಅವರು ಬೂಟಾಟಿಕೆ ಮಾತುಗಳನ್ನಾಡುತ್ತಾರೆ ಎಂದು ಟೀಕಿಸಿದರು.

ಈ ಸಂದರ್ಭದಲ್ಲಿ ಸಚಿವ ಸತೀಶ್ ಜಾರಕಿಹೊಳಿ, ಲಖನ್ ಜಾರಕಿಹೊಳಿ, ಸಿದ್ಲಿಂಗ ದಳವಾಯಿ, ಫಿರೋಝ್ ಸೇಠ್, ಬಿ.ಬಿ.ಬೆಳಕೂಡ, ಕರ್ನಾಟಕ ಪ್ರದೇಶ ಕುರುಬರ ಸಂಘದ ಅಧ್ಯಕ್ಷ ಡಾ.ರಾಜೇಂದ್ರ ಸಣ್ಣಕ್ಕಿ, ಅರವಿಂದ ದಳವಾಯಿ ಸೇರಿದಂತೆ ಪ್ರಮುಖರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News