ವಿದ್ಯಾರ್ಥಿನಿ ಮಧು ನಿಗೂಢ ಸಾವು ಪ್ರಕರಣ: ತಪ್ಪಿತಸ್ಥರಿಗೆ ಕಠಿಣ ಶಿಕ್ಷೆಗೆ ಆಗ್ರಹಿಸಿ ಮಹಿಳಾ ಸಂಘಟನೆಗಳಿಂದ ಧರಣಿ

Update: 2019-04-20 14:48 GMT

ಬೆಂಗಳೂರು, ಎ.20: ರಾಯಚೂರಿನ ನವೋದಯ ಕಾಲೇಜಿನ ಎಂಜಿನಿಯರಿಂಗ್ ವಿದ್ಯಾರ್ಥಿನಿ ಮಧು ಪತ್ತಾರ ನಿಗೂಢ ಸಾವಿನ ಪ್ರಕರಣವನ್ನು ಸಮಗ್ರ ತನಿಖೆಗೆ ಒಳಪಡಿಸಿ, ತಪ್ಪಿತಸ್ಥರಿಗೆ ಕಠಿಣ ಶಿಕ್ಷೆ ವಿಧಿಸಬೇಕೆಂದು ಒತ್ತಾಯಿಸಿ ವಿವಿಧ ಮಹಿಳಾ ಸಂಘಟನೆಗಳು ನಗರದಲ್ಲಿ ಧರಣಿ ನಡೆಸಿದವು.

ಶನಿವಾರ ನಗರದಲ್ಲಿಂದು ಮೈಸೂರು ಬ್ಯಾಂಕ್ ವೃತ್ತದಲ್ಲಿ ಆಲ್ ಇಂಡಿಯಾ ಮಹಿಳಾ ಸಾಂಸ್ಕೃತಿಕ ಸಂಘಟನೆ ಹಾಗೂ ಎಐಡಿಎಸ್‌ಒ ನೇತೃತ್ವದಲ್ಲಿ ನಡೆದ ಪ್ರತಿಭಟನೆಯಲ್ಲಿ ಭಾಗವಹಿಸಿದ್ದ ವಿದ್ಯಾರ್ಥಿಗಳು, ಸರಕಾರ ಹಾಗೂ ಅಧಿಕಾರಿ ವರ್ಗಗಳ ನಿರ್ಲಕ್ಷ ಹಾಗೂ ಪಕ್ಷಪಾತ ಧೋರಣೆಯಿಂದಾಗಿ ಅತ್ಯಾಚಾರ ಪ್ರಕರಣಗಳು ಹೆಚ್ಚಾಗುತ್ತಿವೆ ಎಂದು ಆರೋಪಿಸಿದರು.

ದೇಶ ಹಾಗೂ ರಾಜ್ಯದಲ್ಲಿ ಯಾವ ಮಹಿಳೆಯು ಸುರಕ್ಷಿತವಲ್ಲ. ಎಳೆಯ ಮಗುವಿನಿಂದ ಪ್ರಾರಂಭಗೊಂಡು ವೃದ್ಧೆಯವರೆಗೂ ಅತ್ಯಾಚಾರ ಪ್ರಕರಣಗಳು ನಡೆಯುತ್ತಿವೆ. ಅತ್ಯಾಚಾರಿಗಳಿಗೆ ಶೀಘ್ರವಾಗಿ ಕಠಿಣ ಶಿಕ್ಷೆ ವಿಧಿಸದಿರುವುದೆ ಅತ್ಯಾಚಾರ ಪ್ರಕರಣ ಹೆಚ್ಚಾಗಲು ಪ್ರಮುಖ ಕಾರಣವಾಗಿದೆ ಎಂದು ಪ್ರತಿಭಟನಾಕಾರರು ಆಕ್ರೋಶ ವ್ಯಕ್ತಪಡಿಸಿದರು.

ಎಂಜಿನಿಯರಿಂಗ್ ವಿದ್ಯಾರ್ಥಿನಿ ಮಧು ಪತ್ತಾರ ಸಾವಿನ ಪ್ರಕರಣವನ್ನು ಪಾರದರ್ಶಕ ತನಿಖೆ ನಡೆಸಲು ಮುಂದಾಗಬೇಕಾದ ಪೊಲೀಸ್ ಇಲಾಖೆಯ ಅಧಿಕಾರಿಗಳು ನಾನಾ ಸಬೂಬು ಹೇಳುತ್ತಿರುವುದು ಸರಿಯಲ್ಲ. ಆರೋಪಿಗಳು ಎಷ್ಟೆ ಪ್ರಭಾವಿಗಳಾಗಿದ್ದರೂ ಶೀಘ್ರ ತನಿಖೆ ನಡೆಸಿ ಅವರನ್ನು ಪತ್ತೆ ಹಚ್ಚುವ ಮೂಲಕ ಕಠಿಣ ಶಿಕ್ಷೆಗೆ ಗುರಿಪಡಿಸಬೇಕೆಂದು ಎಐಎಂಎಸ್‌ಎಸ್‌ನ ರಾಜ್ಯ ಕಾರ್ಯದರ್ಶಿ ಶೋಭಾ ಆಗ್ರಹಿಸಿದರು.

ಮಧು ಪತ್ತಾರ ನಿಗೂಢ ಸಾವಿನ ಪ್ರಕರಣವು ದೆಹಲಿಯ ನಿರ್ಭಯ ಪ್ರಕರಣದಂತೆ ಇದೆ. ಆಕೆಯನ್ನು ಬಲವಂತವಾಗಿ ಕರೆದುಕೊಂಡು ಹೋಗಿ ಅತ್ಯಾಚಾರಿ ಕೊಲೆ ಮಾಡಿರುವ ಸಾಧ್ಯತೆ ಇದೆ. ಈ ಪ್ರಕರಣದಿಂದಾಗಿ ರಾಯಚೂರಿನಲ್ಲಿ ಮಹಿಳೆಯರಲ್ಲಿ ಭಯ ಉಂಟಾಗಿದೆ. ಹೀಗಾಗಿ ಪೊಲೀಸ್ ಇಲಾಖೆ ಪ್ರಕರಣದ ಗಂಭೀರತೆಯನ್ನು ಅರ್ಥ ಮಾಡಿಕೊಂಡು ಶೀಘ್ರ ಹಾಗೂ ಪಾರದರ್ಶಕ ತನಿಖೆಗೆ ಮುಂದಾಗಬೇಕೆಂದು ಅವರು ಒತ್ತಾಯಿಸಿದರು.

ಮುಂದಿನ ದಿನಗಳಲ್ಲಿ ರಾಜ್ಯದಲ್ಲಿ ಮಹಿಳೆಯರ ಮೇಲಿನ ದೌರ್ಜನ್ಯ, ಕೊಲೆ ಘಟನೆಗಳು ಮರುಕಳಿಸದಂತೆ ಕಾನೂನು ಕ್ರಮ ಕೈಗೊಳ್ಳಬೇಕು. ಸರಕಾರ ಹಾಗೂ ಗೃಹ ಇಲಾಖೆ ಮಹಿಳೆಯರ ವಿಷಯದಲ್ಲಿ ನಿರ್ಲಕ್ಷ್ಯ ಧೋರಣೆ ತಾಳಿದರೆ ಮುಂದಿನ ದಿನಗಳಲ್ಲಿ ರಾಜ್ಯದ ಮಹಿಳೆಯರು ಉಗ್ರ ಹೋರಾಟ ನಡೆಸಬೇಕಾಗುತ್ತದೆ ಎಂದು ಅವರು ಎಚ್ಚರಿಕೆ ನೀಡಿದರು.

ಪ್ರತಿಭಟನೆಯಲ್ಲಿ ಆಲ್ ಇಂಡಿಯಾ ಮಹಿಳಾ ಸಾಂಸ್ಕೃತಿಕ ಸಂಘಟನೆ ಕಾರ್ಯದರ್ಶಿ ಎ.ಶಾಂತಾ, ಎಐಡಿಎಸ್‌ಒನ ಜಿಲ್ಲಾಧ್ಯಕ್ಷೆ ಸಿತಾರಾ ಸೇರಿದಂತೆ ನೂರಾರು ವಿದ್ಯಾರ್ಥಿಗಳು ಸೇರಿದಂತೆ ಪ್ರಮುಖರು ಉಪಸ್ಥಿತರಿದ್ದರು.

ಬೇಡಿಕೆಗಳು

-ಮಧು ಪತ್ತಾರ ನಿಗೂಢ ಸಾವು ಪ್ರಕರಣವನ್ನು ಸಮಗ್ರ ತನಿಖೆಗೆ ಒಳಪಡಿಸಬೇಕು.

-ಜಸ್ಟಿಸ್ ವರ್ಮಾ ಆಯೋಗದ ವರದಿಯ ಶಿಪಾರಸ್ಸುಗಳನ್ನು ಅನುಷ್ಠಾನಗೊಳಿಸಬೇಕು.

-ಫಾಸ್ಟ್ ಟ್ರಾಕ್ ಕೋರ್ಟ್‌ಗಳನ್ನು ಸಕ್ರಿಯಗೊಳಿಸಬೇಕಾಗಿದೆ.

-ಯಾವುದೇ ತಡೆಯಿಲ್ಲದೆ ಸಮಾಜದ ಸಾಂಸ್ಕೃತಿಕ ವಾತಾವರಣವನ್ನು ಹಾಳು ಮಾಡುತ್ತಿರುವ ಅಶ್ಲೀಲ ಸಿನಿಮಾ, ವೆಬ್‌ಸೈಟ್‌ಗಳನ್ನು ಸಂಪೂರ್ಣವಾಗಿ ನಿಷೇಧಿಸಬೇಕು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News