ಎ.22ಕ್ಕೆ ಬೆಂಗಳೂರು ವಿವಿ 54ನೇ ಘಟಿಕೋತ್ಸವ

Update: 2019-04-20 15:53 GMT

► 325 ವಿದ್ಯಾರ್ಥಿಗಳಿಗೆ ಚಿನ್ನದ ಪದಕ ►ಮೂವರಿಗೆ ಗೌರವ ಡಾಕ್ಟರೇಟ್

ಬೆಂಗಳೂರು, ಎ.20: ಬೆಂಗಳೂರು ವಿಶ್ವವಿದ್ಯಾಲಯದ 54ನೇ ಘಟಿಕೋತ್ಸವ ಎ.22ರಂದು ಹಮ್ಮಿಕೊಳ್ಳಲಾಗಿದ್ದು, ಮೂವರಿಗೆ ಗೌರವ ಡಾಕ್ಟರೇಟ್, 325 ವಿದ್ಯಾರ್ಥಿಗಳಿಗೆ ಚಿನ್ನದ ಪದಕಗಳನ್ನು ಉಪರಾಷ್ಟ್ರಪತಿ ವೆಂಕಯ್ಯ ನಾಯ್ಡು ನೀಡಲಿದ್ದಾರೆ ಎಂದು ವಿವಿ ಕುಲಪತಿ ಪ್ರೊ.ಕೆ.ಆರ್.ವೇಣುಗೋಪಾಲ್ ಹೇಳಿದ್ದಾರೆ.

ಶನಿವಾರ ನಗರದ ಸೆಂಟ್ರಲ್ ಕಾಲೇಜಿನಲ್ಲಿ ಆಯೋಜಿಸಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನಾಳೆ ಬೆಳಗ್ಗೆ 11ಗಂಟೆಗೆ ಸೆಂಟ್ರಲ್ ಕಾಲೇಜು ಆವರಣದ ಜ್ಞಾನಜ್ಯೋತಿ ಸಭಾಂಗಣದಲ್ಲಿ ಬೆಂಗಳೂರು ವಿಶ್ವವಿದ್ಯಾಲಯದ 54ನೇ ಘಟಿಕೋತ್ಸವ ನಡೆಯಲಿದೆ. ಮುಖ್ಯ ಅತಿಥಿ ಉಪರಾಷ್ಟ್ರಪತಿ ಬೆ.11 ರಿಂದ 12.30 ರವರೆಗೂ ಘಟಿಕೋತ್ಸವ ಭಾಷಣ ಮಾಡಲಿದ್ದು, ರಾಜ್ಯಪಾಲ ವಜುಭಾಯಿ ವಾಲಾ ಉಪಸ್ಥಿತರಿರಲಿದ್ದಾರೆ ಎಂದು ಮಾಹಿತಿ ನೀಡಿದರು.

ಮೂವರಿಗೆ ಗೌರವ ಡಾಕ್ಟರೇಟ್: ಜಯದೇವ ಹೃದ್ರೋಗ ಮತ್ತು ಸಂಶೋಧನಾ ಸಂಸ್ಥೆಯ ನಿರ್ದೇಶಕ ಡಾ. ಸಿ.ಎನ್.ಮಂಜುನಾಥ್, ಪದ್ಮಶ್ರೀ ಪುರಸ್ಕೃತೆ ಡಾ. ಕಾಮಿನಿ ರಾವ್, ಸಮಾಜ ಸೇವಕ ಎಸ್.ವಿ.ವಿ.ಸುಬ್ರಹ್ಮಣ್ಯ ಗುಪ್ತ ಅವರು ಬೆಂಗಳೂರು ವಿಶ್ವವಿದ್ಯಾಲಯದ ಗೌರವ ಡಾಕ್ಟರೇಟ್ ಪಡೆಯಲಿದ್ದಾರೆ. ಪ್ರೊ. ಎನ್.ಆರ್.ಶೆಟ್ಟಿ, ಪ್ರೊ. ಬೆಣ್ಣೆ, ಪಾಟೀಲ್ ಒಳಗೊಂಡ ಸಮಿತಿ 11 ಜನ ಸಾಧಕರಲ್ಲಿ ಈ ಮೂವರನ್ನು ಗೌರವ ಡಾಕ್ಟರೇಟ್‌ಗೆ ಆಯ್ಕೆ ಮಾಡಲಾಗಿದೆ ಎಂದು ಹೇಳಿದರು.

ಪ್ರಸಕ್ತ ಶೈಕ್ಷಣಿಕ ಸಾಲಿನಲ್ಲಿ ವಿವಿಯ 65,039 ವಿದ್ಯಾರ್ಥಿಗಳು ವಿವಿಧ ಪದವಿ ಸ್ವೀಕರಿಸಲು ಅರ್ಹರಾಗಿದ್ದಾರೆ. ಅದರಲ್ಲಿ 33,036 ಉನ್ನತ ಶ್ರೇಣಿ, 20,437 ಪ್ರಥಮ ಶ್ರೇಣಿ, 6,656 ದ್ವಿತೀಯ ದರ್ಜೆ ಮತ್ತು 4,851 ಉತ್ತೀರ್ಣರಾಗಿದ್ದು ಒಟ್ಟು 65,039 ವಿದ್ಯಾರ್ಥಿಗಳು ಮತ್ತು 166 ವಿದ್ಯಾರ್ಥಿಗಳು ಪಿಎಚ್‌ಡಿ ಪದವಿ ಪಡೆಯಲಿದ್ದಾರೆ. 22,970 ಪುರುಷರು ಮತ್ತು 32,201 ಮಹಿಳೆಯರು ಸೇರಿ ಒಟ್ಟು 55,171 ವಿದ್ಯಾರ್ಥಿಗಳು ಪದವಿ ಪ್ರಮಾಣ ಪತ್ರ ಪಡೆಯಲು ಅರ್ಜಿ ಸಲ್ಲಿಸಿದ್ದಾರೆ ಎಂದು ವಿವರಿಸಿದರು.

ಹೆಚ್ಚುಪದಕ, ಬಹುಮಾನ ಪಡೆದ ವಿದ್ಯಾರ್ಥಿಗಳು: ಬೆಂಗಳೂರು ವಿವಿಯ ಎಂಎಸ್ಸಿ ರಸಾಯನಿಕಶಾಸ ವಿಭಾಗದ ವಿನುತ ಕೆ.ವಿ (7 ಚಿನ್ನದ ಪದಕ), ಬಿ.ಎಂ.ಎಸ್ ಮಹಿಳಾ ಕಾಲೇಜಿನ ಬಿ.ಎಸ್ಸಿ ವಿದ್ಯಾರ್ಥಿ ಆರ್.ವರಲಕ್ಷ್ಮಿ (4 ಪದಕ, 4 ನಗದು ಬಹುಮಾನ), ಕೆ.ಜಿ.ಎ್ನ ಭಗವಾನ್ ಮಹಾವೀರ್ ಜೈನ್ ಕಾಲೇಜಿನ ಬಿ.ಕಾಂ ವಿದ್ಯಾರ್ಥಿ ಶಂಕರ ಭಾಷ್ಯಂ (5 ಪದಕ, 2ನಗದು), ಅನುಗ್ರ ಬಿ.ಇಡಿ ಕಾಲೇಜಿನ ಬಿ.ಇಡಿ ವಿದ್ಯಾರ್ಥಿ ಎನ್.ಸೌಮ್ಯ (3 ಪದಕ, 5 ನಗದು), ಯುವಿಸಿಇಯ ಬಿ.ಇ. ಎಲೆಕ್ಟ್ರಿಕಲ್ ಮತ್ತು ಎಲೆಕ್ಟ್ರಾನಿಕ್ಸ್‌ನ ವಿದ್ಯಾರ್ಥಿ ವಿ.ವರ್ಷಿತ (2 ಪದಕ, 4 ನಗದು) ಬಹುಮಾನ ಪಡೆದಿದ್ದಾರೆ.

ಮೂವರು ಪರಿಶಿಷ್ಟ ಜಾತಿ ಮತ್ತು ಪಂಗಡದ ವಿದ್ಯಾರ್ಥಿಗಳಾದ ಆಚಾರ್ಯ ಇನ್‌ಸ್ಟಿಟ್ಯೂಟ್ ಆ್ ಗ್ರಾಜುಯೇಟ್ ಸ್ಟಡೀಸ್‌ನ ಮಂಜುಶ್ರೀ, ಗಣಿತಶಾಸ ವಿಭಾಗದ ಜಿ.ಮನೋಹರ, ಸಂವಹನ ವಿಭಾಗದ ಎಂ.ಮುನಿರಾಜು ಅವರು ಡಾ. ಬಿ.ಆರ್.ಅಂಬೇಡ್ಕರ್ ಸ್ಮಾರಕ ಚಿನ್ನದ ಪದಕ ಪಡೆಯಲಿದ್ದಾರೆ.

ಕಲಾವಿಭಾಗದ ಎಂ.ಎ.ಉರ್ದುವಿನಲ್ಲಿ ರಝೀಯಾ ಸುಲ್ತಾನ ಮೊದಲನೆ ಶ್ರೇಣಿ ಪಡೆದ ಏಕೈಕ ವಿದ್ಯಾರ್ಥಿಯಾಗಿದ್ದಾರೆ. ಟಿಪ್ಪು ಸುಲ್ತಾನ್ ನೆನಪಿನ ಉರ್ದು ಸುವರ್ಣ ಪದಕ, ಕರ್ನಾಟಕ ಬೆಂಗಳೂರಿನ ಪ್ರಖ್ಯಾತ ಉರ್ದು ಕವಿ ದಿ.ನಫೀಸ್ ನಗದು ಬಹುಮಾನ ಪಡೆದುಕೊಂಡಿದ್ದಾರೆ.

ಹಿಂದಿನ ವರ್ಷಗಳಲ್ಲಿ ಚಿನ್ನದ ಲೇಪನವುಳ್ಳ ಪದಕ ಮಾತ್ರ ನೀಡಲಾಗುತ್ತಿತ್ತು. ಆದರೆ ಈ ಬಾರಿ ಪ್ರತಿಯೊಂದು ಚಿನ್ನದ ಪದಕಗಳಲ್ಲಿ 20ಗ್ರಾಂ ಬೆಳ್ಳಿಯ ಬೇಸ್‌ನ ಮೇಲೆ 1.3ಗ್ರಾಂ ಚಿನ್ನದ ಪದಕ ಜೋಡಿಸಲಾಗಿದೆ. ಘಟಿಕೋತ್ಸವದಲ್ಲಿ ಪಾಲ್ಗೊಳ್ಳುವವರು ಕಡ್ಡಾಯವಾಗಿ ಆಹ್ವಾನ ಪತ್ರಿಕೆ ಹಾಗೂ ಗುರುತಿನ ಚೀಟಿಯನ್ನು ತರಬೇಕು. ಕೈಚೀಲ, ಕ್ಯಾಮೆರಾ, ಶಸ್ತ್ರಾಸ್ತ್ರಗಳಿಗೆ ಅವಕಾಶವಿರುವುದಿಲ್ಲ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News