ಏಕಭಾಷೆಯ ಹೇರಿಕೆಯಿಂದ ಹಲವು ನುಡಿಗಳ ಹತ್ಯೆ: ಲೇಖಕ ಡಾ. ಚಲಪತಿ

Update: 2019-04-20 17:37 GMT

ಬೆಂಗಳೂರು, ಎ.20: ಪ್ರಭುತ್ವವು ಒಂದು ದೇಶ, ಒಂದು ಸಂಸ್ಕೃತಿ ಹಾಗೂ ಒಂದು ಭಾಷೆಯ ಬಲವಂತದ ಹೇರಿಕೆಯಿಂದಾಗಿ ಹಲವು ನುಡಿಗಳ ಹತ್ಯೆಗೆ ಕಾರಣವಾಗುತ್ತಿದೆ ಎಂದು ಲೇಖಕ ಡಾ.ಆರ್.ಚಲಪತಿ ಅಭಿಪ್ರಾಯಿಸಿದರು.

ಶನಿವಾರ ಬಯಲು ಬಳಗ ನಗರದ ಸರಕಾರಿ ಕಲಾ ಕಾಲೇಜಿನಲ್ಲಿ ಆಯೋಜಿಸಿದ್ದ ಹಿರಿಯ ಸಂಸ್ಕೃತಿ ಚಿಂತಕ ಕೆ.ವಿ.ನಾರಾಯಣ ಅವರ ‘ನುಡಿಗಳ ಅಳಿವು’ ಕೃತಿಯ ಕುರಿತು ಮಾತನಾಡಿದ ಅವರು, ನುಡಿಗಳ ವೈವಿಧ್ಯತೆ ಪ್ರಗತಿಗೆ ಕಾರಣವಾಗಬಹುದು, ಸಂವಹನಕ್ಕೆ ಮಾರಕವಾಗಬಹುದು ಎಂಬ ನೆಪಗಳಿಂದ ಹಲವು ನುಡಿಗಳನ್ನು ಇಲ್ಲವಾಗಿಸಿ, ಏಕ ಭಾಷೆಯನ್ನು ಜಾರಿಗೆ ತರುವ ಬಲವಂತದ ವಾತಾವರಣ ನಿರ್ಮಾಣವಾಗುತ್ತಿದೆ ಎಂದು ಆತಂಕ ವ್ಯಕ್ತಪಡಿಸಿದರು.

ಯುನೆಸ್ಕೋ ಅಧ್ಯಯನದ ಪ್ರಕಾರ ಜಗತ್ತಿನಲ್ಲಿ ಸುಮಾರು 7 ಸಾವಿರಕ್ಕೂ ಹೆಚ್ಚು ಭಾಷೆಗಳಿವೆ. ಈ ಶತಮಾನ ಕಳೆಯುವಷ್ಟರಲ್ಲಿ ಇದರಲ್ಲಿ ಶೇ.50ರಷ್ಟು ಭಾಷೆಗಳು ಇಲ್ಲವಾಗಬಹುದು. ಇಲ್ಲವೆ ಬಳಕೆಯ ವಲಯಗಳು ಕುಗ್ಗಬಹುದು ಹಾಗೂ ಈ ಸಮುದಾಯಗಳ ಸಂಖ್ಯೆಯು ಕಡಿಮೆ ಆಗುತ್ತಾ ಹೋಗಬಹುದು ಎಂದು ಅವರು ಹೇಳಿದರು.

ದೇಶದ ಸಾಮಾಜಿಕ, ರಾಜಕೀಯ ಹಾಗೂ ಆರ್ಥಿಕ ಕಾರಣಗಳು ಹಲವು ನುಡಿಗಳ ಹತ್ಯೆಗೆ ಕಾರಣವಾಗಬಹುದು. ಹಾಗೂ ಬುಡಕಟ್ಟು ಸಮುದಾಯಗಳ ಭಾಷೆಗಳು ಸಂಪರ್ಕದ ಕೊರತೆಯಿಂದಾಗಿ ನಶಿಸುವ ಅಪಾಯವಿದೆ. ಆದರೆ, ಪ್ರಭುತ್ವಗಳು ಇಚ್ಛಾಶಕ್ತಿ ಪ್ರದರ್ಶಿಸಿದರೆ ನುಡಿಗಳನ್ನು ಉಳಿಸಿಕೊಳ್ಳುವಂತಹ ವಾತಾವರಣವನ್ನು ನಿರ್ಮಿಸಬಹುದಾಗಿದೆ ಎಂದು ಅವರು ಹೇಳಿದರು.

ಯುನೆಸ್ಕೋ ಪ್ರಪಂಚದಾದ್ಯಂತ ಹಲವು ನುಡಿಗಳು ನಶಿಸುತ್ತಿವೆ ಎಂದು ಹೇಳುತ್ತಿದೆಯೇ ವಿನಃ ಅದಕ್ಕೆ ಕಾರಣಗಳೇನು ಎಂದು ಸಂಶೋಧಿಸುತ್ತಿಲ್ಲ. ಕೇವಲ ಅಧಿಕಾರ ಕೇಂದ್ರಗಳ ಹಿತಾಸಕ್ತಿಗಳ ಆಧಾರದಲ್ಲಿ ಅಧ್ಯಯನಗಳು ನಡೆಯುತ್ತಿವೆಯೇ ಹೊರತು ತಳಸ್ಪರ್ಶಿಯಾದ, ಸಮುದಾಯದ ಹಿತಾಸಕ್ತಿಯನ್ನು ಒಳಗೊಂಡ ಅಧ್ಯಯನಗಳು ನಡೆಯುತ್ತಿಲ್ಲವೆಂದು ಅವರು ಬೇಸರ ವ್ಯಕ್ತಪಡಿಸಿದರು.

ಸಂವಾದದಲ್ಲಿ ನಾಟಕಕಾರ ಕೆ.ವೈ.ನಾರಾಯಣಸ್ವಾಮಿ, ಪತ್ರಕರ್ತ ಮಂಜುನಾಥ ಅದ್ದೆ, ಹಿರಿಯ ಸಂಗೀತ ನಿರ್ದೇಶಕ ಹಂಸಲೇಖ, ಬಯಲು ಬಳಗದ ಹುಲಿಕುಂಟೆ ಮೂರ್ತಿ, ಪ್ರಕಾಶ್ ಮಂಟೇದ, ಮಂಜುನಾರಾಯಣ್ ಮತ್ತಿತರರಿದ್ದರು.

ನುಡಿಗಳು ಸಮುದಾಯದೊಂದಿಗೆ ತಳಕು ಹಾಕಿಕೊಂಡಿರುತ್ತವೆ. ಹೀಗಾಗಿ ಕೇವಲ ನುಡಿಗಳನ್ನು ಮಾತ್ರ ಅಧ್ಯಯನ ಮಾಡುವುದರಿಂದ ಯಾವುದೆ ಪ್ರಯೋಜನವಿಲ್ಲ. ಆ ನುಡಿಯನ್ನು ಮಾತನಾಡುತ್ತಿರುವ ಜನಸಮುದಾಯ ಎದುರಿಸುತ್ತಿರುವ ರಾಜಕೀಯ, ಸಾಂಸ್ಕೃತಿಕ ಬಿಕ್ಕಟ್ಟುಗಳನ್ನು ಪರಿಹರಿಸುವುದರ ಮೂಲಕವೆ ಆಯಾ ಸಮುದಾಯದ ನುಡಿಗಳನ್ನು ಉಳಿಸಿಕೊಳ್ಳಲು ಸಾಧ್ಯವಿದೆ.

-ಡಾ.ಆರ್.ಚಲಪತಿ, ಲೇಖಕ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News