ಕವಿಯನ್ನು ಅರ್ಥ ಮಾಡಿಕೊಳ್ಳುವ ಶಕ್ತಿ ಸಾಮನ್ಯರಲ್ಲಿ ಇರುವುದಿಲ್ಲ: ಕವಿ ಡಾ.ಸಿದ್ದಲಿಂಗಯ್ಯ

Update: 2019-04-20 17:40 GMT

ಬೆಂಗಳೂರು, ಎ.20: ಕವಿ ಎಂದು ಹೇಳುವುದಕ್ಕೆ ಕವಿಗೂ ಧೈರ್ಯವಿಲ್ಲ. ಕೇಳಿದವನಿಗೆ ಕವಿಯನ್ನು ಅರ್ಥ ಮಾಡಿಕೊಳ್ಳುವ ಶಕ್ತಿಯೂ ಇರುವುದಿಲ್ಲ ಎಂದು ದಲಿತ ಕವಿ ಡಾ.ಸಿದ್ದಲಿಂಗಯ್ಯ ಅಭಿಪ್ರಾಯಪಟ್ಟರು.

ಶನಿವಾರ ಬನಶಂಕರಿಯ ಸುಚಿತ್ರ ಕಲಾಕೇಂದ್ರದಲ್ಲಿ ಸುಚಿತ್ರ ಫಿಲಂ ಸೊಸೈಟಿ ಆಯೋಜಿಸಿದ್ದ ಸಿದ್ದಲಿಂಗಯ್ಯರವರ ಕವಿತಾ ವಾಚನ ಮತ್ತು ಸಂವಾದದಲ್ಲಿ ಮಾತನಾಡಿದ ಅವರು, ನಾನು ಕವಿ ಎಂದು ಹೇಳಿಕೊಂಡವರನ್ನು ಕಂಡಿಲ್ಲ. ವೃತ್ತಿಯನ್ನು ಹಾಗೂ ಪ್ರವೃತ್ತಿಯನ್ನು ಮುಚ್ಚಿಡುವ ಕೆಲವೇ ವರ್ಗಗಳಲ್ಲಿ ಕವಿಗಳ ವರ್ಗವೂ ಒಂದು. ಏಕೆ ಕವಿಗಳಿಗೆ ಈ ಗತಿ ಬಂತು ಎಂದು ಮರುಕಪಟ್ಟರು.

ನನಗೆ ಕವಿ ಆಗುವ ಉದ್ದೇಶ ಇರಲಿಲ್ಲ. ಪ್ರಾರಂಭದಲ್ಲಿ ನಾನು ಆಕಸ್ಮಿಕವಾಗಿ ಕವಿಯಾದೆ. ಇತ್ತೀಚೆಗೆ ಹಿರಿಯರ ಹಾಗೂ ಬೇರೆ ಕವಿಗಳ ಕವಿತೆಗಳನ್ನು ಓದುತ್ತಾ ಹೋದಂತೆ ಕವಿತೆಯಲ್ಲಿ ಅಗಾಧವಾದ ಶಕ್ತಿಯಿದೆ ಎಂಬುದನ್ನು ಮನವರಿಕೆ ಮಾಡಿಕೊಂಡಿದ್ದೇನೆ ಎಂದು ಹೇಳಿದರು.

ಕವಿಗಳು ಹೆಚ್ಚಿನ ಮಟ್ಟದಲ್ಲಿ ಇರಬಹುದು. ಆದರೆ, ಒಳ್ಳೆಯ ಕವಿಗಳು ತುಂಬಾ ಶಕ್ತಿಶಾಲಿ ಅನ್ನಿಸುತ್ತದೆ. ಕಾವ್ಯಕ್ಕೆ ಒಂದು ವಿಶಿಷ್ಟವಾದ ಶಕ್ತಿಯಿದೆ. ನಾನು ಕೆಲವು ಕವಿಗಳಲ್ಲಿ ಗಮನಿಸಿದ್ದೇನೆ. ಕವಿ ಎಂದು ಹೇಳಿಕೊಳ್ಳುವುದಕ್ಕೆ ಮುಜುಗರ ಪಡುತ್ತಾರೆ. ನಿನ್ನ ಕೆಲಸ ಏನು ಎಂದು ಕೇಳಿದಾಗ ನಾನು ತರಕಾರಿ ವ್ಯಾಪಾರ ಮಾಡುತ್ತೇನೆ. ಪೆಟ್ಟಿ ಅಂಗಡಿ ಇಟ್ಟಿದ್ದೇನೆ ಎಂದು ಸಾಮಾನ್ಯರು ಹೇಳುತ್ತಾರೆ. ಆದರೆ, ಕವಿ ಆದವರು ಕವಿ ಆಗಿದ್ದೇನೆ ಎಂದು ಹೇಳುವುದಿಲ್ಲ. ಒಂದು ವೇಳೆ ಕವಿ ಎಂದು ಹೇಳಿದರೆ ಇವನಿಗೆ ಏನೋ ಹೆಚ್ಚು ಕಡಿಮೆ ಆಗಿರಬೇಕು ಎಂಬ ಭಾವನೆಯಿಂದ ನೋಡುತ್ತಾರೆ ಎಂದು ವ್ಯಂಗ್ಯವಾಡಿದರು.

ಕವಿಗಳನ್ನು ನಂಬುವುದೇ ಕಷ್ಟ. ಐನೂರು ರೂಪಾಯಿ ಕೊಟ್ಟು ಚಿಲ್ಲರೆ ತೆಗೆದುಕೊಂಡು ಬರಲು ಕಳಿಸಿದಾಗ, ಆತ ಚಿಲ್ಲರೆ ಇಲ್ಲ ಎಂದು ಹಿಂತಿರುಗಿ ಬಂದರೆ ಆತ ಕವಿಯೆಂದು ಅರ್ಥ. ಯಾವುದೋ ಕಲ್ಪನೆ, ಯಾವುದೋ ಪದದ ರೂಪಕಕ್ಕೆ ತಲೆ ಕೆಡಿಸಿಕೊಂಡಿರುತ್ತಾನೆ. ತಾನು ಹೋಗಿರುವ ಕೆಲಸವನ್ನೇ ಮರೆತುಬಿಟ್ಟಿರುತ್ತಾನೆ ಎಂದು ಕವಿಯ ಮೌನವನ್ನು, ಧ್ಯಾನವನ್ನು ವಿವರಿಸಿದರು.

ಒಂದು ಸಂದರ್ಶನದಲ್ಲಿ ಪರ್ತಕರ್ತರು, ನೀವು ಇತ್ತೀಚೆಗೆ ಓದಿದ ಯಾವುದಾದರೂ ಕವಿತೆ ಬಗ್ಗೆ ಹೇಳಿ ಎಂದಾಗ, ಓದಿಲ್ಲ ಎಂದರೆ ಅಪಮಾನವಾಗುತ್ತದೆ ಎಂದು, ಸುಮತೀಂದ್ರ ನಾಡಿಗರ ಕವಿತೆ ಓದಿದೆ. ಆ ಪದ್ಯ ಹೀಗಿತ್ತು ‘ಕೋಗಿಲೆ ಕೂ ಕೂ.. ಎನ್ನುತ್ತದೆ, ಕಾಗೆ ಕಾ ಕಾ.. ಎನ್ನುತ್ತದೆ, ನಾಡಿಗ ಕೀ ಕೀ.. ಎನ್ನುತ್ತಾನೆ ಎಂದು ಹೇಳಿದೆ ಎಂದು ನಗೆ ಬೀರಿದರು.

ಕವಿಗೆ ಎರಡೇ ಸಾಲಿನಲ್ಲಿ ನಿರುದ್ಯೋಗ ಸಮಸ್ಯೆಯನ್ನು ಎತ್ತು ತೋರಿಸುವ ಶಕ್ತಿಯಿದೆ. ನೀರಸ ಬದುಕನ್ನು ಸ್ವಾರಸ್ಯಗೊಳಿಸುವ ಶಕ್ತಿ ಕವಿಗಿದೆ. ಒಬ್ಬ ಕವಿ ಇದ್ದಾನೆ ಎಂದರೆ, ನಮ್ಮ ಪರಿಸರದಲ್ಲಿ ಸ್ವಾರಸ್ಯಕರ ವ್ಯಕ್ತಿಯಿದ್ದಾನೆ ಎಂದು ಅರ್ಥ. ಹಾಗಾಗಿ, ಕವಿಗಳಲ್ಲಿ ಸಮಾಜದ ಸಾಮರಸ್ಯ. ಸಮಾಜದ ನೋವು, ದುಃಖಗಳನ್ನು ಕಡಿಮೆ ಮಾಡುವ ಶಕ್ತಿ ಇರುತ್ತದೆ ಎಂದು ನುಡಿದರು.

ಇತ್ತೀಚಿನ ಬಂಡಾಯ ಹಾಗೂ ಕ್ರಾಂತಿಕಾರಿ ಕವಿತೆಗಳನ್ನು ರಚಿಸುವ ಸಾಹಿತಿಗಳು, ನಗಬಾರದು, ಯಾವಾಗಲೂ ಉಗ್ರವಾಗಿ ಇರಬೇಕು ಎನ್ನುವ ಧೋರಣೆ ಸರಿಯಾದುದಲ್ಲ. ಕವಿ ಆದವರು ಸಾಮಾನ್ಯರಲ್ಲಿ ಸಾಮಾನ್ಯನಾಗಿರಬೇಕು.

-ಡಾ.ಸಿದ್ದಲಿಂಗಯ್ಯ, ಹಿರಿಯ ಕವಿ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News