ನನ್ನ ಓದಿನ ಮನೆ ಸೇರಿದ 5 ಕೃತಿಗಳು

Update: 2019-04-20 18:04 GMT

ಇವು ಸಾಮಾನ್ಯ ಪುಸ್ತಕಗಳಲ್ಲ. ನನ್ನ ಸಣ್ಣ ವಯಸ್ಸಿನಲ್ಲೇ ನನ್ನಲ್ಲಿ ಸಮತಾವಾದದ ಕುರಿತು ಆಸಕ್ತಿ, ಪ್ರೇರಣೆ ಮತ್ತು ಮಾರ್ಗದರ್ಶನ ನೀಡಿದ ನನ್ನ ನೆಚ್ಚಿನ ಹೋರಾಟದ ಗುರುಕೆ.ವಿ.ರಾವ್ (ಯಳಚಿತ್ತಾಯ) ಅವರ ಬರೆದ ಪುಸ್ತಕಗಳು. ಅನೇಕ ಕ್ರಾಂತಿಕಾರಿಗಳು, ಬಡ ಜನರ, ಶೋಷಿತರ ಪರ ಹೋರಾಟಕ್ಕಿಳಿದು ತಮ್ಮ ಬದುಕನ್ನೇ ತ್ಯಾಗ ಮಾಡಿದ ಅನೇಕಜನರು ನಮಗೆ ಗೊತ್ತು. ಬೇರೆಯವರು ಹೇಳಿ, ಅವರ ಕುರಿತು ದಾಖಲಾಗಿರುವ ಸಾಹಿತ್ಯವನ್ನು ಓದಿ ನಾವು ಪುಳಕಿತರಾ ಗುತ್ತೇವೆ. ಆದರೆ ಯಳಚಿತ್ತಾಯರು ನಾನು ಹತ್ತಿರದಿಂದ ನೋಡಿದ, ಅವರ ಜೊತೆ ರೈತರ ಪರವಾದ ಹೋರಾಟದಲ್ಲಿ ಜೊತೆಗೂಡಿದ, ಅವರ ಮಾತುಗಳು, ಮನಸ್ಥಿತಿ ಮತ್ತು ನಡವಳಿಕೆಯನ್ನು ನೋಡಿ, ಅನುಭವಿಸಿ ವಿಸ್ಮಯಗೊಂಡವನು ನಾನು. 70-80ರ ದಶಕದಲ್ಲಿ ಕರಾವಳಿಯಲ್ಲಿ ಜಮೀಬ್ದಾರಿ ಪಾಳೇ ಗಾರಿಕೆಯ ದಬ್ಬಾಳಿಕೆಯನ್ನು ಎದುರುಹಾಕಿಕೊಂಡು ಸಡ್ಡು ಹೊಡೆದ ಧೈರ್ಯವಂತ ಯಳಚಿತ್ತಾ ಯರು. ಈಗಿನ ಪುತ್ತೂರು, ಬೆಳ್ತಂಗಡಿ ಮತ್ತು ಸುಳ್ಯ ತಾಲೂಕುಗಳ ಸಾವಿರಾರು ಬಡ ಗೇಣಿದಾರರ ಪರವಾಗಿ ನಿಂತು ಜಮೀನ್ದಾರರ ದಬ್ಬಾಳಿಕೆಯನ್ನು ಎದು ರಿಸಿದ ಯಳಚಿತ್ತಾಯರು ಆ ಕಾಲದಲ್ಲಿ ನಮ್ಮಂತಹ ಬಾಲಕರ ಪಾಲಿನ ರಾಬಿನ್ ಹುಡ್.

ನಾನು ಓದುತ್ತಿದ್ದ ಪ್ರಾಥಮಿಕ ಶಾಲೆ ಯ ಕಿಟಿಕಿಯಿಂದ ಕಾಣುತ್ತಿದ್ದ ದೊಡ್ಡ ಆಲದ ಮರದ ಕೆಳಗೆ ರೈತರನ್ನು ಸೇರಿಸಿ ಕಂಚಿನ ಕಂಠದಿಂದ ಅವೇಶ ಭರಿತರಾಗಿ ಭಾಷಣ ಮಾಡುತ್ತಿದ್ದ ಯಳಚಿತ್ತಾಯರ ಬಿದಿರು ಕೋಲಿನಂತಹ ಆರಡಿ ದೇಹ ಈಗಲೂ ನನ್ನ ಕಣ್ಣ ಮುಂದೆ ಕಾಣುತ್ತಿದೆ. ಅವರು ಬಿಗಿದ ಮುಷ್ಟಿಯನ್ನು ಮೇಲಕ್ಕೆತ್ತಿ ಮಾತನಾಡುವಾಗ ಅವರ ಬಿಳಿ ಕುರ್ತಾದ ಕೆಳಗಿನಿಂದ ಸೊಂಟದ ಪಟ್ಟಿಗೆ ನೇತಾಡುತ್ತಿದ್ದ ಒಂದಡಿ ಉದ್ದದ ಚಾಕು ಕೂಡ ನನಗೆ ನೆನಪಿದೆ.

ಮುಂದೆ ಹಾಸನ- ಚಿಕ್ಕಮಗಳೂರು ಜಿಲ್ಲೆಗಳಲ್ಲಿ ಕಾಫಿ ತೋಟಕಾರ್ಮಿಕರ ಸಂಘಟನೆಗೆ ಇಳಿದ ನನ್ನ ಅಣ್ಣ ಪಾಲ್ ಪ್ರಭಾವ ದಿಂದ ಕಾಲೇಜು ಶಿಕ್ಷಣವನ್ನು ಅರ್ಧಕ್ಕೆ ನಿಲ್ಲಿಸಿ ರೈತ ಚಳವಳಿಗೆ ಬಂದೆ. ನರಗುಂದ ನವಲಗುಂದ ರೈತ ಚಳವಳಿಗೆ ಬೆಂಬಲವಾಗಿ ಸಮುದಾಯ ಸಂಘಟನೆ ಆರಂಭಿಸಿದ ಬೀದಿ ನಾಟಕ ಜಾಥಾದಿಂದ ಆರಂಭಗೊಂಡ ಈ ಹೋರಾಟದ ಬದುಕು ಈಗಲೂ ಮುಂದುವರಿದಿದೆ. ಜಾಥಾ ಮುಗಿದ ನಂತರ ತಾಲೂಕಿನ ಸಣ್ಣ ರೈತರು ಮತ್ತು ಕೃಷಿ ಕಾರ್ಮಿಕರ ಸಂಘಟನೆಗಾಗಿ ಕೆಲಸ ಮಾಡತೊಡಗಿದೆ. ಆಗ ಇದೇ ಯಳಚಿತ್ತಾಯರ ಮಾರ್ಗದರ್ಶನ, ಪ್ರೇರಣೆ ಸಿಕ್ಕಿತು. ಅವರ ಜೊತೆ ಹೋರಾಟಗಳಲ್ಲಿ ಭಾಗಿಯಾಗುವುದರ ಜೊತೆಗೆ ಚರ್ಚೆ ನಡೆಸುವ ಖುಷಿಯ ಅವಕಾಶವನ್ನು ಯಾವತ್ತೂ ತಪ್ಪಿಸಿಕೊಳ್ಳುತ್ತಿರಲ್ಲ. ನನ್ನ ನೆಚ್ಚಿನ ನಾಯಕ ಯಳಚಿತ್ತಾಯರು ಒಬ್ಬ ಶ್ರೇಷ್ಠ ಬರಹ ಗಾರರೂ ಆಗಿದ್ದಾರೆ ಎಂದು ನನಗೆ ನಿಧಾನಕ್ಕೆ ಅರ್ಥ ವಾಯಿತು. ಹುಟ್ಟಿನಿಂದ ಬ್ರಾಹ್ಮಣರಾಗಿದ್ದು, ಬ್ರಾಹ್ಮಣ್ಯವನ್ನು ಕಟುವಾಗಿ ವಿರೋಧಿಸುತ್ತಿದ್ದ ಯಳಚಿತ್ತಾಯರು ಉಜಿರೆ ಪೇಟೆಯಲ್ಲಿ ಚಪ್ಪಲಿ ಅಂಗಡಿ ಇಟ್ಟುಕೊಂಡಿದ್ದರು..!! ಅವರ ಈ ಚಪ್ಪಲಿ ಅಂಗಡಿಗೆ ಕರಾವಳಿಯ ಅತಿ ದೊಡ್ಡ ಜಮೀನ್ದಾರನಾಗಿದ್ದ ಖಾವಂದರ ಬಂಟರು 5 ಬಾರಿ ಬೆಂಕಿ ಹಾಕಿದ್ದರು. ಬೆಂಕಿಗೆ ಅರೆ ಸುಟ್ಟು ಹೋಗಿದ್ದ ಕುರ್ಚಿ, ಕಪಾಟುಗಳ ಅವಶೇಷಗಳನ್ನು ಅಂಗಡಿಯ ಮುಂದೆ ಪ್ರದರ್ಶನಕ್ಕೆ ಇಟ್ಟು ಬಂದವರಿಗೆಲ್ಲಾ ಇದು ಯಾರ ಕೃಪೆ ಎಂದು ವಿವರಿಸುತ್ತಿದ್ದರು ಯಳಚಿತ್ತಾಯರು.!!

ಅನೇಕ ಬಾರಿ ಅವರ ಮೇಲೆ ಮಾರಣಾಂತಿಕ ಹಲ್ಲೆಗಳಾದವು. ಒಂದು ಬಾರಿ ನಮ್ಮ ಪಕ್ಕದೂರಾದ ಉಪ್ಪಿನಂಗಡಿ ಪೇಟೆಯಲ್ಲಿ ಹಾಡಹಗಲಿನಲ್ಲೇ ಧರ್ಮಾಧಿಕಾರಿಗಳ ಬಾಡಿಗೆ ಭಂಟನೊಬ್ಬ ಯಳಚಿತ್ತಾಯರ ಮೇಲೆ ಕತ್ತಿಯಿಂದ ಹಲ್ಲೆ ಮಾಡಿದ. ವಯಸ್ಸಾ ಗಿದ್ದರೂ ಬಹಳ ಚುರುಕಾಗಿದ್ದ ಯಳಚಿತ್ತಾಯರು ಹಾರಿ ತಪ್ಪಿಸಿಕೊಂಡಾಗ ಕುತ್ತಿಗೆ ಮುರಿಯಬೇಕಾಗಿದ್ದ ಕತ್ತಿ ಕಿವಿಯನ್ನು ಸವರಿ ಘಾಸಿ ಮಾಡಿತು. ತಕ್ಷಣ ಸೊಂಟದ ಕತ್ತಿ ಅವರ ಕೈಗೆ ಬಂದಿತ್ತು. ತಲೆ, ಕಿವಿಯಿಂದ ಹರಿಯುತ್ತಿದ್ದ ರಕ್ತ.., ಕೈಯಲ್ಲಿ ಚಾಕು ಹಿಡಿದುಕೊಂಡೇ ಅವರು ಪೊಲೀಸ್ ಠಾಣೆಗೆ ಹೋಗಿ ದ್ದರು ಎಂದು ಅವರ ಜೊತೆಗಿದ್ದ ನಮ್ಮೂರಿನ ರೈತ ಎಲ್ಯಣ್ಣ ಗೌಡರು ಈಗಲೂ ನೆನಪಿಸಿಕೊಳ್ಳುತ್ತಾರೆ. ನನ್ನ ಮೇಲೆ ಯಳಚಿತ್ತಾಯರಿಗೆ ವಿಶೇಷ ಪ್ರೀತಿ. ಉಜಿರೆಯ ಅವರ ಚಪ್ಪಲಿ ಅಂಗಡಿಗೆ ಹೋದರೆ ರಾತ್ರಿಯಾದರೂ ಕಳುಹಿಸಿ ಕೊಡುತ್ತಿರಲಿಲ್ಲ. ಅವರ ಚಪ್ಪಲಿ ಕಪಾಟಿನಲ್ಲಿ ಚಪ್ಪಲಿಗಳಿ ಗಿಂತಲೂಹೆಚ್ಚು ಪುಸ್ತಕಗಳ ಹಸ್ತ ಪ್ರತಿಗಳಿದ್ದವು..!! ಅವರು ಬರೆಯುತ್ತಿದ್ದ ಅಕ್ಷರಗಳನ್ನು ಮರೆಯಲು ಸಾಧ್ಯವೇ ಇಲ್ಲ. ಅಷ್ಟು ಸುಂದರ ಬರವಣಿಗೆ..!! ನಾನು ಅಂಗಡಿಗೆ ಹೋದ ಕೂಡಲೇ ಅವರ ಬೀರುವಿನಿಂದ ಒಂದು ಹಸ್ತಪ್ರತಿ ಹೊರಗೆ ಬರುತ್ತಿತ್ತು. ಅದನ್ನು ನನಗೆ ಓದಿ ಹೇಳುತ್ತಿದ್ದರು. ಕಾದಂಬರಿಗಳ ಪಾತ್ರಗಳಲ್ಲಿ ತಲ್ಲೀನರಾಗು ತ್ತಿದ್ದರು. ನಗು, ವಿಷಾದ, ಅಳು, ಖುಷಿ, ಆಕ್ರೋಶಗಳ ಜೊತೆಗೆ ಯಳಚಿತ್ತಾಯರು ಪಾತ್ರವಾ ದಾಗ ನಾನು ಅವರನ್ನು ನೋಡಿ ವಿಸ್ಮಯಗೊಳ್ಳುತ್ತಿದ್ದೆ.

ಪ್ರಕಟಗೊಂಡ ಅವರ ಮೊದಲ ಕಾದಂಬರಿ ‘ಬಾಡ’ವನ್ನು ನನಗೆ ಪೂರ್ತಿ ಯಾಗಿ ಓದಿ ಹೇಳಿದ್ದರು.!!

ಅವರೊಬ್ಬ ಕಮ್ಯುನಿಸ್ಟ್ (ಸಮತಾ ವಾದಿ) ಆಗಿದ್ದರು. ಬ್ರಾಹ್ಮಣರು ಅವರನ್ನು ಕುಲದಿಂದ ಬಹಿಷ್ಕರಿಸಿ ಹೊರಗಿಟ್ಟರು. ಭೂಮಾಲಕರು ಮತ್ತು ಪ್ರಭುತ್ವದ ದಬ್ಬಾಳಿಕೆಗೆ ಒಳಗಾದರು. ಅವರಿಗೆ ಗಂಡು ಮಕ್ಕಳಿರಲಿಲ್ಲ. ಜಾತಿಯಿಂದ ಬಹಿಷ್ಕಾರಕ್ಕೆ ಒಳಗಾದ ಅವರ ಕುಟುಂಬ ಎದುರಿಸಿದ ಸಂಕಷ್ಟಗಳನ್ನು ಇಲ್ಲಿ ಬರೆಯಲು ಸಾಧ್ಯವಿಲ್ಲ. ಅವರ ಪ್ರೀತಿಯ ಕೊನೆಯ ಮಗಳು ಮಾತ್ರ ಒಳ್ಳೆಯ ಶಿಕ್ಷಣ ಪಡೆದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯಲ್ಲಿ ಮೇಲ್ವಿಚಾರಕಿ ಆಗಿದ್ದಾರೆ. ಅವರು ಬರೆದ ಕಾದಂಬರಿಗಳು, ಸಣ್ಣ ಕತೆಗಳು, ಭಾಷಾಂತ ರಿಸಿದ ಕೃತಿಗಳು ನೂರಾರು..!! ಅವರು ಜೀವಂತ ಇದ್ದಾಗ ಪ್ರಕಟನೆಯ ಭಾಗ್ಯ ಸಿಗಲಿಲ್ಲ. ಅವರು ಸಾವಿನ ಸನಿಹದಲ್ಲಿದ್ದಾಗ ಬೋಳಂತಕೋಡಿ ಈಶ್ವರ ಭಟ್ಟರು ಪುತ್ತೂರಿನ ಕನ್ನಡ ಸಂಘದ ಮೂಲಕ ಬಾಡ ಕಾದಂಬರಿಯನ್ನು ಪ್ರಕಟಿಸಿದರು. ಅವರ ಬದುಕೊಂದು ಹೋರಾಟ. ನಂಬಿದ ಸಿದ್ಧಾಂತವನ್ನು ಯಾವತ್ತೂ ಅವರು ಬಿಟ್ಟುಕೊಡಲಿಲ್ಲ. ವಿರೋಧ, ಬಹಿಷ್ಕಾರ, ದೌರ್ಜನ್ಯ ಯಾವುದಕ್ಕೂ ಅವರು ಬಗ್ಗಲಿಲ್ಲ. ನಿಜವಾದ ಕಮ್ಯುನಿಸ್ಟ್ ಆಗಿ ಅವರು ಬದುಕಿದರು. ಅವರು ನಂಬಿದ ಸಿದ್ಧಾಂತವನ್ನು ಅವರು ಬಿಡಲಿಲ್ಲ. ಆದರೆ ಅವರು ನಂಬಿದ ಪಕ್ಷ ಅವರನ್ನು ಕೈ ಬಿಟ್ಟಿತು. ಅವರ ಕಷ್ಟ ಕಾಲದಲ್ಲಿ ಅವರ ಜೊತೆಗೆ ನಿಲ್ಲಲಿಲ್ಲ. ಅವರಲ್ಲೊಬ್ಬ ತೀವ್ರ ಗಾಮಿಯನ್ನು ಕಾಣುವುದರಲ್ಲಿ ಮಾತ್ರ ತೃಪ್ತಿ ಪಟ್ಟರು. ಇದೀಗ ಯಳಚಿತ್ತಾಯರ ಪ್ರೀತಿಯ ಸಣ್ಣ ಮಗಳ ಶ್ರಮದಿಂದ ಅವರ ಒಂದೊಂದೇ ಕೃತಿಗಳು ಪ್ರಕಟವಾಗುತ್ತಿವೆ. ಕಾಮ್ರೇಡ್ ಯಳಚಿತ್ತಾಯ ಎನ್ನುವ ಅಧಮ್ಯ ಚೇತನವನ್ನು ಸಾಹಿತ್ಯದ ಮೂಲಕವಾದರೂ ಜೀವಂತವಾಗಿ ಉಳಿಸುವ ಅವರ ಶ್ರಮಕ್ಕೆ ನಾನು ನಮಿಸುವೆ.

Writer - ವಿಲ್ಫ್ರೆಡ್ ಡಿಸೋಜಾ

contributor

Editor - ವಿಲ್ಫ್ರೆಡ್ ಡಿಸೋಜಾ

contributor

Similar News