ಇದು ಸರ್ವೋಚ್ಚ ನ್ಯಾಯಾಲಯದ ಪಾಲಿನ ತೀವ್ರ ಆತಂಕದ ಕಾಲ: ದುಷ್ಯಂತ ದವೆ

Update: 2019-04-21 11:47 GMT

ಮುಖ್ಯ ನ್ಯಾಯಾಧೀಶರ ವಿರುದ್ಧವೇ ಲೈಂಗಿಕ ಕಿರುಕುಳ ಆರೋಪ ಬಂದಾಗ ಸುಪ್ರೀಂ ಕೋರ್ಟ್ ಪ್ರತಿಕ್ರಿಯಿಸಿದ ರೀತಿ ಏಕೆ ದೇಶದ ಪಾಲಿಗೆ ಆತಂಕಕಾರಿ ಬೆಳವಣಿಗೆ ಎಂದು ವಿವರಿಸಿದ್ದಾರೆ ಹಿರಿಯ ನ್ಯಾಯವಾದಿ ದುಷ್ಯಂತ ದವೆ (ಸುಪ್ರೀಂ ಕೋರ್ಟ್ ಬಾರ್ ಅಸೋಸಿಯೇಷನ್‌ನ ಮಾಜಿ ಅಧ್ಯಕ್ಷರು)

ಗುವಾಹಟಿ ಉಚ್ಚ ನ್ಯಾಯಾಲಯದಲ್ಲಿ ೨೦೦೬ರಲ್ಲಿ ಗಣೇಶ ಇಲೆಕ್ಟ್ರಿಕ್ ವಿರುದ್ಧ ಅಸ್ಸಾಂ ಸರಕಾರ ಮತ್ತು ಇತರರು ಪ್ರಕರಣದ ವಿಚಾರಣೆ ಸಂದರ್ಭ ನ್ಯಾ.ರಂಜನ ಗೊಗೊಯಿ ಅವರು,‘‘ನಿರಂಕುಶಾಧಿಕಾರದ ಬಳಕೆಯು ಎಷ್ಟೇ ಸೂಕ್ಷ್ಮವಾಗಿರಲಿ,ಇಂತಹ ಅಧಿಕಾರದ ಶೃಂಖಲೆಗಳಿಂದ ವ್ಯಕ್ತಿಯನ್ನು ಸಂಪೂರ್ಣ ಮುಕ್ತನನ್ನಾಗಿಸಿದಾಗ ಕಾನೂನು ತನ್ನ ವೈಭವೋಪೇತ ಘಳಿಗೆಗೆ ಸಾಕ್ಷಿಯಾಗುತ್ತದೆ. ಆದರೆ ವರ್ಷಗಳಿಂದಲೂ ಎರಡು ಮೂಲ ತತ್ತ್ವಗಳನ್ನು ಸಹಜ ನ್ಯಾಯದ ಬುನಾದಿಗಳೆಂದು ಗುರುತಿಸಲಾಗಿದೆ. ‘ತನ್ನ ಸ್ವಂತ ಪ್ರಕರಣದಲ್ಲಿ ಯಾವುದೇ ವ್ಯಕ್ತಿ ನ್ಯಾಯಾಧೀಶನಾಗಬಾರದು’ ಎನ್ನುವುದು ಮೊದಲ ತತ್ತ್ವವಾಗಿದ್ದರೆ,‘ಇನ್ನೊಂದು ಪಕ್ಷದ ಅಹವಾಲನ್ನೂ ಆಲಿಸಬೇಕು’ಎನ್ನುವುದು ಎರಡನೆಯ ತತ್ತ್ವವಾಗಿದೆ ’’ಎಂದು ಹೇಳಿದ್ದರು.

೨೦೧೮ರಲ್ಲಿ ಸರ್ವೋಚ್ಚ ನ್ಯಾಯಾಲಯದಲ್ಲಿ ಲೋಕ ಪ್ರಹರಿ ವಿರುದ್ಧ ಉತ್ತರ ಪ್ರದೇಶ ಸರಕಾರ ಮತ್ತು ಇತರರು ಪ್ರಕರಣದ ವಿಚಾರಣೆ ಸಂದರ್ಭದಲ್ಲಿ ಇದೇ ನ್ಯಾ.ಗೊಗೊಯಿ ಅವರು,ಲಾರ್ಡ್ ನೋಲಾನ್ ಅವರ ವರದಿಯಲ್ಲಿ ಸಾರ್ವಜನಿಕ ಜೀವನದ ಏಳು ನೀತಿಗಳನ್ನು ಗುರುತಿಸಿದ್ದರು. ‘ನಿಸ್ವಾರ್ಥತೆ, ಸಮಗ್ರತೆ ,ವಸ್ತುನಿಷ್ಠತೆ, ಉತ್ತರದಾಯಿತ್ವ, ಮುಕ್ತತೆ,ಪ್ರಾಮಾಣಿಕತೆ ಮತ್ತು ನಾಯಕತ್ವ ’ ಇವು ಈ ಏಳು ನೀತಿಗಳಾಗಿವೆ ಎಂದು ಅವರು ಚುಟುಕಾಗಿ ತಿಳಿಸಿದ್ದರು.

ಆತಂಕಕಾರಿ ಬೆಳವಣಿಗೆ

ಆದರೆ ಎ.೨೦ರ ಶನಿವಾರ ಬೆಳಿಗ್ಗೆ ಸರ್ವೋಚ್ಚ ನ್ಯಾಯಾಲಯದಲ್ಲಿ ನಡೆದಿರುವುದು ಇದಕ್ಕೆ ತದ್ವಿರುದ್ಧವಾಗಿದೆ. ಸರ್ವೋಚ್ಚ ನ್ಯಾಯಾಲಯದ ಮಾಜಿ ಮಹಿಳಾ ಉದ್ಯೋಗಿಯೋರ್ವರು ತನ್ನ ವಿರುದ್ಧ ಮಾಡಿದ್ದ ಲೈಂಗಿಕ ಕಿರುಕುಳ ಆರೋಪಗಳ ವಿಚಾರಣೆಗಾಗಿ ರಚಿಸಲಾಗಿದ್ದ  ಪೀಠದ ನೇತೃತ್ವವನ್ನು ಖುದ್ದು ಮು.ನ್ಯಾ.ಗೊಗೊಯಿ  ಅವರೇ ವಹಿಸಿದ್ದು, ಇದಕ್ಕಾಗಿ ಮಾಸ್ಟರ್ ಆಫ್ ದಿ ರೋಲ್ಸ್ ಆಗಿ ಪ್ರಕರಣಗಳ ವಿಚಾರಣೆಗೆ ನ್ಯಾಯಾಧೀಶರನ್ನು ನಿಯೋಜಿಸುವ ತನ್ನ ಅಧಿಕಾರವನ್ನು ಅವರು ಚಲಾಯಿಸಿದ್ದು,ತನ್ನ ವಿರುದ್ಧದ ಆರೋಪಗಳನ್ನು ‘ನ್ಯಾಯಾಂಗ ಸ್ವಾತಂತ್ರ್ಯದ ಮೇಲೆ ಪರಿಣಾಮ ಬೀರುವ ಭಾರೀ ಮಹತ್ವದ ವಿಷಯ’ ಎಂದು ಬಣ್ಣಿಸಿದ್ದು ಮತ್ತು ಸಾಲಿಸಿಟರ್ ಜನರಲ್‌ರಿಂದ ಉಲ್ಲೇಖಕ್ಕೆ ಅನುಮತಿ ನೀಡಿದ್ದು...ಹೀಗೆ ಮುಖ್ಯ ನ್ಯಾಯಮೂರ್ತಿಗಳ ಇವೆಲ್ಲ ಕ್ರಮಗಳು ‘ತನ್ನ ಸ್ವಂತ ಪ್ರಕರಣದಲ್ಲಿ ಯಾವುದೇ ವ್ಯಕ್ತಿ ನ್ಯಾಯಾಧೀಶನಾಗಬಾರದು’ಎಂಬ ತತ್ತ್ವಕ್ಕೆ ವಿರುದ್ಧವಾಗಿದ್ದವು.

ನ್ಯಾಯಾಲಯದ,ಹಾಗೆನ್ನುವುದಕ್ಕಿಂತ ಪೀಠದ ಕಲಾಪಗಳು ಇನ್ನಷ್ಟು ಗೊಂದಲಕಾರಿಯಾಗಿದ್ದವು. ತನ್ನ ಘನತೆಯನ್ನು ರಕ್ಷಿಸಿಕೊಳ್ಳಲು ಗ್ರಹಿತ ಕರ್ತವ್ಯವನ್ನು ಸ್ವತಃ ನ್ಯಾಯಾಲಯವೇ ಕೈಗೆತ್ತಿಕೊಳ್ಳಲು ವ್ಯಾಜ್ಯ,ವಿಷಯ,ಅರ್ಜಿ ಮತ್ತು ಕಾರಣಗಳೇ ಇರಲಿಲ್ಲ.

ಇನ್ನಷ್ಟು ಗೊಂದಲಕಾರಿ

ಪೀಠವು ಕಲಾಪದ ಬಳಿಕ ಹೊರಡಿಸಿರುವ ಆದೇಶವು ಇನ್ನಷ್ಟು ಗೊಂದಲಕಾರಿಯಾಗಿದೆ. ಪೀಠವು ಮೂವರು ನ್ಯಾಯಾಧೀಶರನ್ನು ಒಳಗೊಂಡಿದ್ದರೆ ಕೇವಲ ಇಬ್ಬರು ನ್ಯಾಯಾಧೀಶರ ಹೆಸರುಗಳಲ್ಲಿ ಆದೇಶವು ಹೊರಕ್ಕೆ ಬಿದ್ದಿದ್ದು ಹೇಗೆ? ಅದು ಮೇಲೆ ಪ್ರಸ್ತಾಪಿಸಿದ ಮಾರ್ಗದರ್ಶಕ ತತ್ತ್ವದಿಂದ ನುಣುಚಿಕೊಳ್ಳುವ ಪ್ರಯತ್ನವಾಗಿತ್ತೇ? ಖಂಡಿತ ಅದು ಹಾಗಿರಲಾರದು,ಎಷ್ಟೆಂದರೂ ಎಲ್ಲವೂ ಮುಕ್ತ ನ್ಯಾಯಾಲಯ ವಿಚಾರಣೆಯಲ್ಲೇ ನಡೆದಿತ್ತು.

ಯಾವುದೇ ಸಂದರ್ಭದಲ್ಲಿಯೂ ಸರ್ವೋಚ್ಚ ನ್ಯಾಯಾಲಯವು ತಾನು ಶನಿವಾರ ಬೆಳಿಗ್ಗೆ ಮಾಡಿದ್ದನ್ನು ಮಾಡಬಾರದಿತ್ತು. ಅದು ಕಾನೂನಿನ ಘನತೆಯನ್ನು ಎತ್ತಿ ಹಿಡಿಯಬೇಕಾದ ಸಂಸ್ಥೆಯೇ ಹೊರತು ಅದನ್ನು ಕಡೆಗಣಿಸಲಲ್ಲ. ಅದು ನ್ಯಾಯಮಂದಿರವಾಗಿದೆ,ಅದು ಅನ್ಯಾಯವನ್ನು ಮಾಡುವಂತಿಲ್ಲ. ಅದು ಪ್ರಾಥಮಿಕ ಮಾನವಿಕ ಮೌಲ್ಯಗಳು ಮತ್ತು ಮೂಲಭೂತ ಹಕ್ಕುಗಳನ್ನು ರಕ್ಷಿಸುವ ಈ ಮಹಾನ್ ದೇಶದ ಪರಮೋಚ್ಚ ನ್ಯಾಯಾಲಯವಾಗಿದೆ. ಈ ಪೈಕಿ ಅತ್ಯಂತ ಪ್ರಮುಖವಾದ ವಾಕ್ ಮತ್ತು ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ಅದು ರಕ್ಷಿಸಬೇಕಿದೆ,ಪ್ರಜಾಪ್ರಭುತ್ವದ ಪೋಷಕ ಸ್ಥಾನದಲ್ಲಿರುವ ಮಾಧ್ಯಮಗಳನ್ನು ಅದು ರಕ್ಷಿಸಬೇಕಿದೆ. ಮಾಧ್ಯಮಗಳು ತಮ್ಮ ಕರ್ತವ್ಯವನ್ನು ನಿರ್ವಹಿಸುವುದನ್ನು ತಡೆಯುವ ಅಧಿಕಾರವು ಅದಕ್ಕಿಲ್ಲ. ಮಾಧ್ಯಮಗಳಿಂದ ನಿರೀಕ್ಷಿಸಲಾಗಿರುವಂತೆ ಸಂಯಮವನ್ನು ಪ್ರದರ್ಶಿಸುವಂತೆ,ಜವಾಬ್ದಾರಿಯಿಂದ ಕಾರ್ಯ ನಿರ್ವಹಿಸುವಂತೆ ಹಾಗೂ ಅದರಂತೆ ಒರಟು ಮತ್ತು ಅಪನಿಂದೆಯ ಆರೋಪಗಳು ನ್ಯಾಯಾಂಗದ ಸ್ವಾತಂತ್ರ್ಯಕ್ಕೆ ಸರಿಪಡಿಸಲಾಗದ ಹಾನಿಯನ್ನುಂಟು ಮಾಡುವುದರಿಂದ ಅಂತಹ ಆರೋಪಗಳನ್ನು ಪ್ರಕಟಿಸಬೇಕೇ ಬೇಡವೇ ಎನ್ನುವುದನ್ನು ನಿರ್ಧರಿಸುವಂತೆ ಅವುಗಳಿಗೆ ಉಪದೇಶಿಸುವ ಅಧಿಕಾರವಂತೂ ಮೊದಲೇ ಇಲ್ಲ.

ಖಂಡಿತವಾಗಿಯೂ ಭಾರತದ ಸರ್ವೋಚ್ಚ ನ್ಯಾಯಾಲಯಕ್ಕೆ ರಾಷ್ಟ್ರಪತಿಗಳ ಪ್ರಸ್ತಾವನೆಯ ಕುರಿತು ಹೊರತು ಯಾವುದೇ ಸಲಹಾತ್ಮಕ ಅಧಿಕಾರವ್ಯಾಪ್ತಿಯಿಲ್ಲ.

ಪೀಠವು ಶನಿವಾರ ಹೊರಡಿಸಿರುವ ಆದೇಶವು ಸ್ವತಃ ಸರ್ವೋಚ್ಚ ನ್ಯಾಯಾಲಯದ ಘನತೆಗೆ ಹಾನಿಯನ್ನುಂಟು ಮಾಡಿದೆ. ನ್ಯಾಯಾಲಯದ ಘನತೆಯ ಬಗ್ಗೆ ಅಷ್ಟೊಂದು ಕಾಳಜಿಯಿರುವ ನ್ಯಾಯಾಧೀಶರು ಇಂತಹ ನುಣುಚಿಕೊಳ್ಳುವ ಕಸರತ್ತುಗಳನ್ನು ನಡೆಸುವುದರಿಂದ ದೂರವಿರಬೇಕು.

ಮೈ ಲಾರ್ಡ್ಸ್,ನೀವು ಗೊತ್ತಿರುವ ಪ್ರತಿಯೊಂದೂ ನ್ಯಾಯಾಂಗ ನಿಯಮ ಮತ್ತು ಪರಿಪಾಠದ ವಿರುದ್ಧ ವರ್ತಿಸಿದ್ದೀರಿ. ನೀವು ದಶಕಗಳ ಕಾಲ ಅತ್ಯುತ್ತಮವಾಗಿ ಪ್ರತಿಪಾದಿಸುತ್ತ ಬಂದಿರುವ ನಿಮ್ಮದೇ ಕಾನೂನಿಗೆ ವಿರುದ್ಧವಾಗಿ ನಡೆದುಕೊಂಡಿದ್ದೀರಿ. ನೀವು ಪ್ರತಿಪಾದಿಸಿರುವ ಕಾನೂನಿಗೆ ನೀವೂ ಬದ್ಧರಾಗಿದ್ದೀರಿ ಎನ್ನುವುದನ್ನು ದಯವಿಟ್ಟು ನೆನಪಿಡಿ.

ಸರಕಾರದ ಕೈವಾಡ

ಇಡೀ ಘಟನಾವಳಿಗಳು ಸ್ವತಂತ್ರ ಮಾಧ್ಯಮಗಳ ಮೇಲೆ ಪಾಬಲ್ಯ ಸಾಧಿಸಲು ಮತ್ತು ಪ್ರಜಾಪ್ರಭುತ್ವದ ಉಳಿವಿನಲ್ಲಿ ಪ್ರಮುಖ ಪಾತ್ರವನ್ನು ಹೊಂದಿದೆ ಎಂದು ನಾನು ಪರಿಗಣಿಸಿರುವ ವಿಷಯವನ್ನು ವರದಿ ಮಾಡುವುದನ್ನು ನಿರುತ್ತೇಜಿಸಲು ಬಯಸಿವೆ. ಸರಕಾರವು ನ್ಯಾಯಾಲಯದಲ್ಲಿ ಅಗ್ರ ಕಕ್ಷಿಯಾಗಿರುವಾಗ(ರಫೇಲ್,ಸಿಬಿಐ ನಿರ್ದೇಶಕರ  ವಿಷಯ,ಜೊತೆಗೆ ಎಲ್ಲ ಪ್ರತಿಪಕ್ಷ ನಾಯಕರನ್ನೊಳಗೊಂಡಿರುವ ಕೆಲವು ಪ್ರಕರಣಗಳು ಸೇರಿದಂತೆ) ಅದು ತನ್ನ ಕಾನೂನು ಅಧಿಕಾರಿಗಳ  ಮೂಲಕ ಪ್ರಕ್ರಿಯೆಯನ್ನು ಆರಂಭಿಸಿದ್ದು ಖಂಡಿತವಾಗಿಯೂ ಆಕ್ಷೇಪಾರ್ಹವಾಗಿದೆ ಮತ್ತು ಅದು ಸ್ವತಃ ನ್ಯಾಯಾಲಯದ ಸ್ವಾತಂತ್ರ್ಯದ ಮೇಲೆ ನಕಾರಾತ್ಮಕ ಪರಿಣಾಮಕ್ಕೆ ಕಾರಣವಾಗುತ್ತದೆ.

ಇಂದಿನ ದಿನಗಳಲ್ಲಿ ಸರಕಾರ ಮತ್ತು ಅಧಿಕಾರದಲ್ಲಿರುವ ಪಕ್ಷ ಮಾಧ್ಯಮಗಳಿಗೆ ಉಳಿದಿರುವ ಅಲ್ಪ ಸ್ವಾತಂತ್ರ್ಯವನ್ನೂ ಕಿತ್ತುಕೊಳ್ಳಲು ಬಯಸುತ್ತಿವೆ. ಹೀಗಿರುವಾಗ ಕಾನೂನು ಅಧಿಕಾರಿಯ ಸೂಚನೆಯ ಮೇರೆಗೆ ತನ್ನನ್ನೇ ತಾನು ರಕ್ಷಿಸಿಕೊಳ್ಳಲು ನ್ಯಾಯಾಲಯವು ಮುಂದಾಗಿರುವುದು ಸರಿಯೇ? ನಾನಂತೂ ಹಾಗೆ ಭಾವಿಸುತ್ತಿಲ್ಲ.

೨೦೧೮,ಜ.೧೨ರಂದು ನ್ಯಾ.ಗೊಗೊಯಿ ಸೇರಿದಂತೆ ಸರ್ವೋಚ್ಚ ನ್ಯಾಯಾಲಯದ ನಾಲ್ವರು ನ್ಯಾಯಾಧೀಶರು ಸುದ್ದಿಗೋಷ್ಠಿಯಲ್ಲಿ ಯಾವುದನ್ನು ಆಕ್ಷೇಪಿಸಿದ್ದರೋ ಅದನ್ನೇ ಮುಖ್ಯ ನ್ಯಾಯಮೂರ್ತಿಗಳು ಮಾಡಿರುವುದು,ಅಂದರೆ ತನ್ನ ಆಯ್ಕೆಯಂತೆ ಪೀಠವನ್ನು ರಚಿಸಿದ್ದು,ಅದೂ ರಜಾದಿನವಾದ ಶನಿವಾರ ಬೆಳಿಗ್ಗೆ ವಿಚಾರಣೆಯನ್ನು ನಡೆಸಿದ್ದು ಇನ್ನಷ್ಟು ದುಃಖದ ವಿಷಯವಾಗಿದೆ.

ಈ ವಿಷಯದಲ್ಲಿ ಭಾರತದ ಹಿಂದಿನ ನ್ಯಾಯಮೂರ್ತಿಗಳೆಲ್ಲ ಪದೇ ಪದೇ ತಪ್ಪು ಹೆಜ್ಜೆಗಳನ್ನಿಟ್ಟಿದ್ದಾರೆ,ಅದೂ ತಮ್ಮ ಸ್ವಂತ ವ್ಯಾಜ್ಯಗಳಲ್ಲಿ. ನಿಮಗೆ ರುಚಿಸಲಿ ಅಥವಾ ರುಚಿಸದಿರಲಿ ಮೈ ಲಾರ್ಡ್ಸ್,ಇಂತಹ ಕೃತ್ಯಗಳ ಮೂಲಕ ನೀವು ಒಳಗಿನಿಂದಲೇ ನ್ಯಾಯಾಂಗದ ಸ್ವಾತಂತ್ರ್ಯಕ್ಕೆ ಹಾನಿಯನ್ನು ಮಾಡುತ್ತಲೇ ಬಂದಿದ್ದೀರಿ. ಅದಕ್ಕಾಗಿ ಹೊರಗಿನವರ ಅಗತ್ಯವಿಲ್ಲ ಎಂಬಂತೆ ಕಂಡು ಬರುತ್ತಿದೆ.

ಒಂದು ವಿಷಯವನ್ನು ಸ್ಪಷ್ಟಪಡಿಸಲು ನಾನು ಬಯಸುತ್ತೇನೆ. ದುರ್ಬಲರ ರಕ್ಷಣೆಗಾಗಿ ಧಾವಿಸುವ ವಕೀಲರು ಸೇರಿದಂತೆ ಈ ದೇಶದ ಪ್ರಜೆಗಳು ಸರ್ವೋಚ್ಚ ನ್ಯಾಯಾಲಯಕ್ಕೆ ಅತ್ಯಂತ ಹೆಚ್ಚಿನ ಗೌರವವನ್ನು ನೀಡುತ್ತಾರೆ. ಅದರ ಘನತೆಗೆ ಹಾನಿಯಾಗುವ ಯಾವುದೇ ಕೆಲಸವನ್ನು ಅವರು ಮಾಡುವುದಿಲ್ಲ. ವಾಸ್ತವದಲ್ಲಿ ತಮ್ಮ ಸ್ವಂತ ಧೈರ್ಯದಿಂದ ಅದನ್ನು  ರೂಪಿಸುವಲ್ಲಿ ಅವರು ನೆರವಾಗುತ್ತಾರೆ ಮತ್ತು ಇದು ನ್ಯಾಯಾಲಯಗಳಿಂದ ದಿಟ್ಟ ತೀರ್ಪುಗಳು ಹೊರಬೀಳಲು ಕಾರಣವಾಗಿದೆ.

ನ್ಯಾಯಾಂಗವು ಪ್ರತಿಭಾನ್ವಿತ ಮತ್ತು ಅಸಾಧಾರಣ ವ್ಯಕ್ತಿತ್ವದ ನ್ಯಾಯಾಧೀಶರನ್ನು ಒಳಗೊಂಡಿದೆ ಮತ್ತು ಆಗಾಗ್ಗೆ ಅನುಚಿತ ನ್ಯಾಯಾಂಗ ನಡವಳಿಕೆಯ ಹೊರತಾಗಿಯೂ ಅದರ ಘನತೆಗೆ ಚ್ಯುತಿಯುಂಟಾಗಿಲ್ಲ. ಅದನ್ನು  ಹೆಚ್ಚಿಸಲು  ಸ್ವಾರ್ಥಸಾಧನೆಯ ವ್ಯಕ್ತಿಗಳು ಅಥವಾ ಸರಕಾರದ ಅಗತ್ಯವಿಲ್ಲ. ಅದರೆ ಈ ಸಂಸ್ಥೆಯು ಎಲ್ಲರಿಗೂ ಸೇರಿದ್ದು ಮತ್ತು ನ್ಯಾಯಾಧೀಶರು ಮತ್ತು ವಕೀಲರು ಸೇರಿದಂತೆ ಅದರೊಳಗಿರುವ ಪ್ರತಿಯೊಬ್ಬರೂ ಒಳಗಿನಿಂದ ನಡೆಯುವ ದಾಳಿಗಳಿಂದ ಅದನ್ನು ರಕ್ಷಿಸುವ ಕಾರ್ಯವನ್ನು ಮಾಡಬೇಕು ಎನ್ನುವುದು ಎಲ್ಲ ಒಳ್ಳೆಯ ನ್ಯಾಯಾಧೀಶರಿಗೆ ಗೊತ್ತಿರಬೇಕು. ಇದರಲ್ಲಿ ಅವರು ವಿಫಲರಾದರೆ ಸಂಸ್ಥೆಯು ಪತನಗೊಳ್ಳುತ್ತದೆ ಮತ್ತು ಪತನಗೊಳ್ಳುತ್ತಿರುವಂತೆ ಕಂಡು ಬರುತಿದೆ.

ಸಾರ್ವಜನಿಕ ವಿಶ್ವಾಸ

‘‘ನ್ಯಾಯಾಂಗದ ಬಳಿ ಬೊಕ್ಕಸದ ಅಥವಾ ಖಡ್ಗದ ಅಧಿಕಾರವಿಲ್ಲ. ಅದು ಸಾರ್ವಜನಿಕರ ವಿಶ್ವಾಸದಿಂದ ಮಾತ್ರ ಬದುಕುತ್ತದೆ ಮತ್ತು ಸಾರ್ವಜನಿಕರ ವಿಶ್ವಾಸಕ್ಕೆ ಯಾವುದೇ ಭಂಗವುಂಟಾಗದಿರುವುದು ಸಮಾಜದ ಸ್ಥಿರತೆಗೆ ಬಹು ಮುಖ್ಯವಾಗಿದೆ’’ ಎಂದು ಕೆ.ವೀರಾಸ್ವಾಮಿ ಪ್ರಕರಣದಲ್ಲಿ ಹೇಳಲ್ಪಟ್ಟಿದ್ದು ನೆನಪಿರಲಿ. ಅತ್ಯಂತ ವಿಶೇಷ ರೀತಿಯಲ್ಲಿ ಇಂತಹ ವಿಶೇಷ ವಿಚಾರಣೆಯನ್ನು ನ್ಯಾಯಾಲಯವು ನಡೆಸಲು ಕಾರಣವೇನಿತ್ತು? ಸಂವಿಧಾನ ನಿರ್ಮಾತೃರು ಸರ್ವೋಚ್ಚ ನ್ಯಾಯಾಲಯವು ತನ್ನವರನ್ನೇ ರಕ್ಷಿಸಿಕೊಳ್ಳಲೆಂದು ಅದನ್ನು ಖಂಡಿತವಾಗಿಯೂ ರೂಪಿಸಿರಲಿಲ್ಲ. ಭಾರತದ ಮುಖ್ಯ ನ್ಯಾಯಾಧೀಶರ ವಿರುದ್ಧ ಕೇಳಿಬಂದಿರುವ ಆರೋಪಗಳ ಬಗ್ಗೆ ಮಾತನಾಡುವುದು ನನ್ನ ಉದ್ದೇಶವಲ್ಲ. ಈ ಆರೋಪಗಳು ಸುಳ್ಳಾಗಿರಲಿ ಎಂದು ನಾನು ಪ್ರಾಮಾಣಿಕವಾಗಿ ಆಶಿಸುತ್ತೇನೆ. ಆದರೆ ಈ ಆರೋಪಗಳು ಖಂಡಿತವಾಗಿಯೂ ನ್ಯಾಯಾಂಗದ ಮೆಲೆ ಪರಿಣಾಮ ಬೀರುವ ವಿಷಯಗಳಲ್ಲ,ಅದರ ಸ್ವಾತಂತ್ರ್ಯ ಮತ್ತು ಘನತೆಗೆ ಹಾನಿಯನ್ನುಂಟು ಮಾಡುವ ವಿಸಯಗಳಂತೂ ಅಲ್ಲವೇ ಅಲ್ಲ. ಶನಿವಾರದ ಕಲಾಪ ಸಾರ್ವಜನಿಕ ವಿಶ್ವಾಸವನ್ನು ತೀವ್ರವಾಗಿ ಅಲುಗಾಡಿಸಿದೆ ಎನ್ನುವುದರಲ್ಲಿ ಯಾವುದೇ ಶಂಕೆಯಿಲ್ಲ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News