ರಾಷ್ಟ್ರೀಯ ದಾಖಲೆ ಮುರಿದ ದ್ಯುತಿ, ಹಿಮಾ ದಾಸ್‌ಗೆ ಗಾಯ

Update: 2019-04-21 18:35 GMT

ದೋಹಾ, ಎ.21: ಭಾರತದ ಇಬ್ಬರು ಓಟಗಾರ್ತಿಯರು ದೋಹಾದಲ್ಲಿ ನಡೆಯುತ್ತಿರುವ 23ನೇ ಆವೃತ್ತಿಯ ಏಶ್ಯನ್ ಅಥ್ಲೆಟಿಕ್ಸ್ ಚಾಂಪಿಯನ್‌ಶಿಪ್‌ನಲ್ಲಿ ಮಿಶ್ರ ಫಲ ಪಡೆದರು. ದ್ಯುತಿ ಚಂದ್ 100 ಮೀ.ಹೀಟ್ಸ್‌ನಲ್ಲಿ ತನ್ನ ರಾಷ್ಟ್ರೀಯ ದಾಖಲೆ ಮುರಿದು ಸೆಮಿಫೈನಲ್‌ಗೆ ತೇರ್ಗಡೆಯಾದರು. ಆದರೆ, ಹಿಮಾ ದಾಸ್ 400 ಮೀ.ಹೀಟ್ಸ್‌ನಲ್ಲಿ ಗಾಯಗೊಂಡರು.

ಇಲ್ಲಿನ ಖಲೀಫಾ ಅಂತರ್‌ರಾಷ್ಟ್ರೀಯ ಸ್ಟೇಡಿಯಂನಲ್ಲಿ ದ್ಯುತಿ ಅವರು ಕಳೆದ ವರ್ಷ ಗುವಾಹಟಿಯಲ್ಲಿ ನಡೆದಿದ್ದ ಅಂತರ್-ಜಿಲ್ಲಾ ಕ್ರೀಡಾಕೂಟದಲ್ಲಿ ನಿರ್ಮಿಸಿದ್ದ ತನ್ನದೇ ರಾಷ್ಟ್ರೀಯ ದಾಖಲೆ ಮುರಿದರು. ರವಿವಾರ ನಡೆದ 100 ಮೀ. ಓಟದ ಸ್ಪರ್ಧೆಯಲ್ಲಿ ದ್ಯುತಿ 11.28 ಸೆಕೆಂಡ್‌ನಲ್ಲಿ ಗುರಿ ತಲುಪಿದರು. ತನ್ನದೇ ಹಿಂದಿನ ದಾಖಲೆ(11.29)ಯನ್ನು 1 ಸೆಕೆಂಡ್‌ನಲ್ಲಿ ಉತ್ತಮಪಡಿಸಿಕೊಂಡರು.

400 ಮೀ. ಓಟದ ವಿಭಾಗದಲ್ಲಿ ಹಿಮಾ ದಾಸ್ ಗಾಯಗೊಂಡ ಕಾರಣ ಭಾರತ ನಿರಾಸೆ ಅನುಭವಿಸಿದೆ. 19ರ ಹರೆಯದ ದಾಸ್‌ಗೆ ಓಟದ ವೇಳೆಯೇ ಬೆನ್ನುನೋವು ಕಾಣಿಸಿಕೊಂಡ ಕಾರಣ ಓಟ ಪೂರ್ಣಗೊಳಿಸಲು ವಿಫಲರಾದರು. ಜೂನಿಯರ್ ವಿಶ್ವ ಚಾಂಪಿಯನ್ ಹಾಗೂ ಏಶ್ಯನ್ ಗೇಮ್ಸ್‌ನಲ್ಲಿ ಬೆಳ್ಳಿ ಪದಕ ವಿಜೇತೆ ಹಿಮಾ ಗಾಯಗೊಂಡಿರುವುದು ಭಾರತ ತಂಡಕ್ಕೆ ತೀವ್ರ ಹಿನ್ನಡೆಯಾಗಿದೆ. ಕಳೆದ ವರ್ಷ ಜಕಾರ್ತದಲ್ಲಿ ನಡೆದ ಏಶ್ಯನ್ ಗೇಮ್ಸ್‌ನಲ್ಲಿ 50.79 ಸೆಕೆಂಡ್‌ನಲ್ಲಿ ಗುರಿ ತಲುಪಿದ್ದ ಹಿಮಾ ರಾಷ್ಟ್ರೀಯ ದಾಖಲೆ ನಿರ್ಮಿಸಿದ್ದರು. ‘‘ಹಿಮಾ ದಾಸ್‌ಗೆ ಬೆನ್ನುನೋವು ಕಾಣಿಸಿಕೊಂಡಿದೆ. ಅದು ಗಂಭೀರವಾಗಿಲ್ಲ ಎಂದು ಪರೀಕ್ಷೆ ನಡೆಸಿರುವ ವೈದ್ಯರು ಮಾಹಿತಿ ನೀಡಿದ್ದಾರೆ. ಒಂದೆರಡು ದಿನಗಳಲ್ಲಿ ದಾಸ್ ಗುಣಮುಖರಾಗಲಿದ್ದಾರೆ’’ ಎಂದು ಭಾರತದ ಅಥ್ಲೆಟಿಕ್ಸ್ ಒಕ್ಕೂಟ(ಎಎಫ್‌ಐ)ಟ್ವೀಟ್ ಮೂಲಕ ತಿಳಿಸಿದೆ.

ಪೂವಮ್ಮ ಫೈನಲ್‌ಗೆ

ಮಹಿಳೆಯರ 400 ಮೀ.ಹೀಟ್ಸ್‌ನಲ್ಲಿ ಸ್ಪರ್ಧೆಯಲ್ಲಿದ್ದ ಇತರ ಅಥ್ಲೀಟ್‌ಗಳ ಪೈಕಿ ಕನ್ನಡತಿ ಎಂ.ಆರ್. ಪೂವಮ್ಮ 52.46 ಸೆಕೆಂಡ್‌ನಲ್ಲಿ ಗುರಿ ತಲುಪಿ ಫೈನಲ್‌ಗೆ ಅರ್ಹತೆ ಪಡೆದಿದ್ದಾರೆ. ಮುಹಮ್ಮದ್ ಅನಾಸ್ ಹೀಟ್ಸ್‌ನಲ್ಲಿ 46.36 ಸೆಕೆಂಡ್‌ನಲ್ಲಿ ಗುರಿ ತಲುಪಿ ಪುರುಷರ 400 ಮೀ. ಓಟದಲ್ಲಿ ಸೆಮಿ ಫೈನಲ್‌ಗೆ ಪ್ರವೇಶಿಸಿದ್ದಾರೆ.

ಪುರುಷರ 800 ಮೀ. ಓಟದ ಹೀಟ್ಸ್‌ನಲ್ಲಿ ಆತಿಥೇಯ ಖತರ್‌ನ ಜಮಾಲ್ ಹೈರಾನೆ ಅವರನ್ನು ಹಿಂದಿಕ್ಕಿದ ಜಿನ್ಸನ್ ಜಾನ್ಸನ್ 1:53.43 ಸೆಕೆಂಡ್‌ನಲ್ಲಿ ಗುರಿ ತಲುಪಿ ಸೆಮಿ ಫೈನಲ್‌ಗೆ ಪ್ರವೇಶಿಸಿದರು.

ಇದೇ ವೇಳೆ ಹೀಟ್ಸ್‌ನಲ್ಲಿ 2:04.96 ಸೆಕೆಂಡ್‌ನಲ್ಲಿ ಗುರಿ ತಲುಪಿ ಎರಡನೇ ಸ್ಥಾನ ಪಡೆದ ಗೋಮತಿ ಮಾರಿಮುತ್ತು ಮಹಿಳೆಯರ 800 ಮೀ. ವಿಭಾಗದಲ್ಲಿ ಫೈನಲ್‌ಗೆ ಅರ್ಹತೆ ಪಡೆದರು. ಅರ್ಹತಾ ಸುತ್ತಿನಲ್ಲಿ 15.66 ಮೀ.ದೂರಕ್ಕೆ ಜಿಗಿದು 9ನೇ ಸ್ಥಾನ ಪಡೆದ ಪ್ರವೀಣ್ ಚಿತ್ರವೇಲ್ ಪುರುಷರ ತ್ರಿಪಲ್ ಜಂಪ್‌ನಲ್ಲಿ ಫೈನಲ್‌ಗೆ ತೇರ್ಗಡೆಯಾದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News