ಆರೋಪಿ ಪತಿ-ಪತ್ನಿಯನ್ನು ಪಾಕಿಸ್ತಾನಕ್ಕೆ ಕಳುಹಿಸಲು ಅವಕಾಶವಿದೆಯಾ ತಿಳಿಸಿ: ಹೈಕೋರ್ಟ್ ಸೂಚನೆ

Update: 2019-04-22 15:52 GMT

ಬೆಂಗಳೂರು, ಎ.22: ಪತಿ, ಪತ್ನಿಯಾಗಿರುವ ಪಾಕಿಸ್ತಾನದ ಇಬ್ಬರು ಆರೋಪಿಗಳು ತಮ್ಮನ್ನು ಕಾರಾಗೃಹದಿಂದ ಬಿಡುಗಡೆಗೊಳಿಸಲು ಕೋರಿ ಸಲ್ಲಿಸಿದ್ದ ಅರ್ಜಿ ಸಂಬಂಧ ಹೈಕೋರ್ಟ್ ಆರೋಪಿಗಳ ಶಿಕ್ಷೆಯನ್ನು ಕಡಿತಗೊಳಿಸಿ ಪಾಕಿಸ್ತಾನಕ್ಕೆ ಕಳುಹಿಸಲು ಕಾನೂನಿನಲ್ಲಿ ಅವಕಾಶ ಇದೆಯಾ ಎಂಬುದನ್ನು ತಿಳಿಸಲು ಸರಕಾರದ ಪರ ವಕೀಲರಿಗೆ ಸೂಚಿಸಿ ವಿಚಾರಣೆಯನ್ನು ಮುಂದೂಡಿದೆ.

ತಮ್ಮನ್ನು ಶಿಕ್ಷೆಯಿಂದ ಬಿಡುಗಡೆಗೊಳಿಸಿ ಪಾಕಿಸ್ತಾನಕ್ಕೆ ಕಳುಹಿಸಲು ಕೋರಿ ಕಾಸೀಫ್ ಶಂಸುದ್ದೀನ್ ಹಾಗೂ ಕಿರಣ್ ಗುಲಾಂ ಅಲಿ ಸಲ್ಲಿಸಿದ್ದ ಅರ್ಜಿ ವಿಚಾರಣೆ ನ್ಯಾಯಮೂರ್ತಿ ಅರವಿಂದಕುಮಾರ್ ಅವರಿದ್ದ ನ್ಯಾಯಪೀಠದಲ್ಲಿ ನಡೆಯಿತು.

ಅರ್ಜಿದಾರರ ಪರ ವಾದಿಸಿದ ವಕೀಲರು, ಬೆಂಗಳೂರಿನ 44ನೆ ಎಸಿಎಂಎಂ ನ್ಯಾಯಾಲಯವು ಪತಿ, ಪತ್ನಿಯಾಗಿರುವ ಇಬ್ಬರು ಆರೋಪಿಗಳಿಗೂ ತಲಾ 21 ತಿಂಗಳು ಕಾರಾಗೃಹ ಶಿಕ್ಷೆಯನ್ನು ನೀಡಬೇಕೆಂದು ಆದೇಶ ಹೊರಡಿಸಿತ್ತು. ಅದರಂತೆ ಆರೋಪಿಗಳು ಈಗಾಗಲೇ 1 ವರ್ಷ 10 ತಿಂಗಳು ಕಾರಾಗೃಹ ಶಿಕ್ಷೆಯನ್ನು ಅನುಭವಿಸಿದ್ದು, ಇವರನ್ನು ಬಿಡುಗಡೆಗೊಳಿಸಬೇಕು. ಹಾಗೂ ತಮ್ಮ ದೇಶವಾದ ಪಾಕಿಸ್ತಾನಕ್ಕೆ ಹೋಗಲು ಇವರಿಗೆ ಅನುಮತಿ ನೀಡಬೇಕೆಂದು ಪೀಠಕ್ಕೆ ಮನವಿ ಮಾಡಿದರು.

ಸರಕಾರದ ಪರ ವಾದಿಸಿದ ವಕೀಲರು, ಪತಿ, ಪತ್ನಿಯಾಗಿರುವ ಇಬ್ಬರು ಆರೋಪಿಗಳೂ ಪಾಕಿಸ್ತಾನದಿಂದ ಬಂದು ಕರ್ನಾಟಕದ ಲೆಟರ್ ಹೆಡ್‌ನಲ್ಲಿ ಬೆಂಗಳೂರು ಎಂದು ತೋರಿಸಿ ಆಧಾರ ಕಾರ್ಡ್ ಪಡೆದುಕೊಳ್ಳಲು ನಕಲಿ ದಾಖಲೆಗಳನ್ನು ಸೃಷ್ಟಿಸಿದ್ದಾರೆ. ಹಾಗೂ ತಮ್ಮ ವಿವಾಹವನ್ನು ಬೆಂಗಳೂರಿನಲ್ಲಿ ನೋಂದಣಿ ಮಾಡಿಸಿಕೊಳ್ಳಲು ಯತ್ನಿಸಿದ್ದಾರೆ. ಹಾಗೂ ಈ ಎಲ್ಲ ಆರೋಪಗಳನ್ನು ಆರೋಪಿಗಳು ಒಪ್ಪಿಕೊಂಡಿದ್ದು ಅವರಿಗೆ ಇನ್ನುಳಿದ ಶಿಕ್ಷೆಯಾಗಲಿ ಎಂದು ಪೀಠಕ್ಕೆ ಮನವಿ ಮಾಡಿದರು.

ವಕೀಲರ ವಾದ ಆಲಿಸಿದ ನ್ಯಾಯಪೀಠವು ಆರೋಪಿಗಳಿಬ್ಬರನ್ನೂ ಭಾರತದಲ್ಲಿ ಇಟ್ಟುಕೊಳ್ಳುವ ಅವಶ್ಯಕತೆ ಏನೂ ಇಲ್ಲ. ಅವರನ್ನು ಪಾಕಿಸ್ತಾನಕ್ಕೆ ಕಳುಹಿಸಲು ಕಾನೂನಿನಲ್ಲಿ ಅವಕಾಶ ಇದೆಯಾ ಎಂಬುದನ್ನು ತಿಳಿಸಿ ಎಂದು ಸರಕಾರದ ಪರ ವಕೀಲರಿಗೆ ಸೂಚಿಸಿ ವಿಚಾರಣೆಯನ್ನು ಮುಂದೂಡಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News