ಪೇಯಿಡ್ ನ್ಯೂಸ್ ಕಳಂಕದಿಂದ ಮಾಧ್ಯಮಗಳು ಹೊರಬರಬೇಕು: ನ್ಯಾ.ಎನ್.ಸತೋಷ್ ಹೆಗ್ಡೆ

Update: 2019-04-22 18:23 GMT

ಬೆಂಗಳೂರು, ಎ.22: ಸಂವಿಧಾನದ ನಾಲ್ಕನೇ ಸ್ತಂಭ ಎಂದು ಕರೆಯುವ ಮಾಧ್ಯಮಗಳಿಗೆ ಪೇಯಿಡ್ ನ್ಯೂಸ್ ಕಳಂಕ ಅಂಟಿದ್ದು, ಈ ಕಳಂಕದಿಂದ ಹೊರಬಂದು ಕಾರ್ಯ ನಿರ್ವಹಿಸಲು ಮಾಧ್ಯಮಗಳು ಮುಂದಾಗಬೇಕು ಎಂದು ನಿವೃತ್ತ ಲೋಕಾಯುಕ್ತ ನ್ಯಾ.ಎನ್.ಸತೋಷ್ ಹೆಗ್ಡೆ ಅಭಿಪ್ರಾಯಪಟ್ಟರು.

ಸೋಮವಾರ ನಗರದ ಪ್ರೆಸ್‌ಕ್ಲಬ್‌ನಲ್ಲಿ ರಾಮನಾಥ್ ಗೋಯಂಕಾ ಚಾರಿಟೆಬಲ್ ಟ್ರಸ್ಟ್ ಹಾಗೂ ಕರ್ನಾಟಕ ಜರ್ನಲಿಸ್ಟ್ ಯೂನಿಯನ್ ಸಹಯೋಗದಲ್ಲಿ ಆಯೋಜಿಸಿದ್ದ, ‘ರಾಮನಾಥ್ ಗೋಯಂಕಾ ಜರ್ನಲಿಸಂ ಅವಾರ್ಡ್-2019’ ಪ್ರದಾನ ಸಮಾರಂಭದಲ್ಲಿ ಮಾತನಾಡಿದ ಅವರು, ಸುಳ್ಳು ಸುದ್ದಿಗಳು ಹೆಚ್ಚಾಗಿ ಪ್ರಕಟವಾಗುತ್ತಿರುವುದರಿಂದ ಮಾಧ್ಯಮ ಕ್ಷೇತ್ರಕ್ಕೆ ಕೆಟ್ಟ ಹೆಸರು ಬರುತ್ತಿದ್ದು, ಇದರಿಂದ ಪತ್ರಕರ್ತರು ಜಾಗೃತರಾಗಿ ಕೆಲಸ ನಿರ್ವಹಿಸುವ ಅವಶ್ಯಕತೆಯಿದೆ ಎಂದು ಸಲಹೆ ನೀಡಿದರು.

ಶಾಂತಿ, ಧರ್ಮ, ಮಾನವೀಯ ಮೌಲ್ಯಗಳ, ಸಮಾಜ ನಿರ್ಮಾಣವಾಗಲು ಪತ್ರಕರ್ತರ ಸಹಕಾರ ಬಹಳ ಅಗತ್ಯ. ಸೇವಾತತ್ಪರತೆ, ವೃತ್ತಿ ಧರ್ಮ, ಕರ್ತವ್ಯ ನಿಷ್ಠೆ, ಮುಂತಾದವುಗಳನ್ನು ನಿಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಬೇಕು. ಅಲ್ಲದೆ, ಪತ್ರಕರ್ತರು ವೃತ್ತಿ ಧರ್ಮವನ್ನು ಪಾಲಿಸುವುದರ ಜೊತೆಗೆ ಶಾಂತಿ ಸೌಹಾರ್ದಯುತ ಸಮಾಜ ಕಟ್ಟಲು ಮುಂದಾಗಬೇಕು ಎಂದು ತಿಳಿಸಿದರು.

ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಮಾಧ್ಯಮಗಳಿಲ್ಲದೆ ವಾಕ್ ಮತ್ತು ಅಭಿವ್ಯಕ್ತಿ ಸ್ವಾತಂತ್ರವಿಲ್ಲ. ರಾಮನಾಥ್ ಗೋಯಂಕಾ ತುರ್ತು ಪರಿಸ್ಥಿತಿಯ ಸಂದರ್ಭದಲ್ಲಿ ನಿರ್ಭೀತಿಯಿಂದ ಪತ್ರಿಕೆ ನಡೆಸಿದ್ದ ಮಹಾನ್ ವ್ಯಕ್ತಿ. ಇಂತಹ ವ್ಯಕ್ತಿಯ ಹೆಸರಿನಲ್ಲಿ ಪ್ರಶಸ್ತಿ ಪಡೆದವರ ಜವಾಬ್ದಾರಿ ಹೆಚ್ಚಿರುತ್ತದೆ ಎಂದು ಹೇಳಿದರು.
ಹಿಂದಿನ ಕಾಲದಲ್ಲಿ ಜೈಲಿಗೆ ಹೋದವರಿಗೆ ಸಮಾಜದಲ್ಲಿ ಬಹಿಷ್ಕಾರ ಹಾಕಲಾಗುತ್ತಿತ್ತು. ಆದರೆ ಈಗ ಅಂತಹ ವ್ಯಕ್ತಿಗಳಿಗೆ ಹೂವಿನ ಹಾರ ಹಾಕಿ ಸ್ವಾಗತಿಸುತ್ತಿರುವುದನ್ನು ಕಾಣುತ್ತಿದ್ದೇವೆ. ಇದರಿಂದ ಸಮಾಜಕ್ಕೆ ವ್ಯತಿರಿಕ್ತ ಪರಿಣಾಮ ಬೀರುತ್ತಿದೆ ಎಂದರು.

ಸುಪ್ರೀಂ ಕೋರ್ಟ್ ನಿವೃತ್ತ ನ್ಯಾಯಮೂರ್ತಿ ಗೋಪಾಲಗೌಡ ಮಾತನಾಡಿ, ಪ್ರಜಾಪ್ರಭುತ್ವದ ಉಳಿವಿನಲ್ಲಿ ಮಾಧ್ಯಮಗಳ ಪಾತ್ರ ದೊಡ್ಡದಿದೆ. ಆದರೆ, ಹಿಂದಿನ ಮತ್ತು ಇಂದಿನ ಮಾಧ್ಯಮದ ನಡುವೆ ಭಾರಿ ವ್ಯತ್ಯಾಸವಿದೆ. ಜನಪರ ಕೆಲಸ ಮಾಡಬೇಕಾದ ಚಾನೆಲ್‌ಗಳು ಒಂದೊಂದು ರಾಜಕೀಯ ಪಕ್ಷಗಳ ಪರ ಕಾರ್ಯಕ್ರಮ ಪ್ರಸಾರ ಮಾಡುವುದು ಸರಿಯಲ್ಲ. ಮಾಧ್ಯಮಗಳು ಯಾವಾಗಲೂ ಪಕ್ಷಾತೀತವಾಗಿರಬೇಕು ಎಂದರು.

ಇನ್ನು ಪ್ಯಾನೆಲ್ ಚರ್ಚೆಗಳಲ್ಲಿ ಅತಿಥಿಗಳಿಗೆ ತಮ್ಮ ಅಭಿಪ್ರಾಯ ವ್ಯಕ್ತಪಡಿಸಲು ಸಮಾನ ಅವಕಾಶ ನೀಡಬೇಕು. ತನಿಖಾ ವರದಿಗಳ ಹೆಸರಿನಲ್ಲಿ ವ್ಯಕ್ತಿಗಳ ತೀರ ವೈಯಕ್ತಿಕ ವಿಚಾರಗಳನ್ನು ಕೆದಕುವುದು ಸಮಂಜಸವಲ್ಲ. ಸಮಾಜದಲ್ಲಿ ಲಿಂಗ, ಧರ್ಮ, ಜಾತಿಯ ತಾರತಮ್ಯ ಮಾಡದೆ ಸಾಮಾಜಿಕ, ಆರ್ಥಿಕ, ರಾಜಕೀಯ ನ್ಯಾಯ ಕೊಡಿಸುವ ಕೆಲಸ ಮಾಡಬೇಕು ಎಂದು ಹೇಳಿದರು.

ಪ್ರಶಸ್ತಿ ಪುರಸ್ಕಾರ
ಇದೇ ವೇಳೆ ಸ್ವಾತಂತ್ರ ಹೋರಾಟಗಾರ ಎಚ್.ಎಸ್.ದೊರೆಸ್ವಾಮಿ ಅವರಿಗೆ ‘ರಾಮನಾಥ್ ಗೋಯಂಕಾ ಜೀವಮಾನ ಸಾಧನೆ ಪ್ರಶಸ್ತಿ’, ಸಂಯುಕ್ತ ಕರ್ನಾಟಕ ಪತ್ರಿಕೆಗೆ ‘ಶ್ರೇಷ್ಠ ಪತ್ರಿಕೆ ಪ್ರಶಸ್ತಿ’, ಬಿಟಿವಿಯ ಮುಖ್ಯಸ್ಥ ಜಿ.ಎಂ.ಕುಮಾರ್‌ಗೆ ‘ತನಿಖಾ ಪತ್ರಿಕೋದ್ಯಮ ಪ್ರಶಸ್ತಿ’, ಪತ್ರಕರ್ತರಾದ ಅಬ್ದುಲ್ ಹಕೀಂ, ಹಮೀದ್ ಪಾಳ್ಯ, ಬಿ.ಪಿ.ಮಲ್ಲಪ್ಪ ಹಾಗೂ ಧೀರ್ ಹಿಂದಿ ವಾರ ಪತ್ರಿಕೆಗೆ ‘ವಿಶೇಷ ಪ್ರಶಸ್ತಿ’ ಪ್ರದಾನ ಮಾಡಲಾಯಿತು.

ರಾಮನಾಥ್ ಗೋಯಂಕಾ ಚಾರಿಟಬಲ್ ಟ್ರಸ್ಟ್‌ನ ಅಧ್ಯಕ್ಷ ಪ್ರಶಾಂತ್ ಗೋಯಂಕಾ, ಪ್ರಧಾನ ಕಾರ್ಯದರ್ಶಿ ಮೋಹನ್ ಕುಲಕರ್ಣಿ ಮತ್ತಿತರರು ಉಪಸ್ಥಿತರಿದ್ದರು.

ಪ್ರಜಾಪ್ರಭುತ್ವದ ನಾಲ್ಕನೇ ಅಂಗವಾಗಿರುವ ಮಾಧ್ಯಮಗಳು ಯಾರ ಬಾಲ ಹಿಡಿದುಕೊಂಡು ಹೋಗದೆ, ಸ್ವಧರ್ಮ ಕಾಪಾಡಿಕೊಂಡು ಕಾರ್ಯ ನಿರ್ವಹಿಸಬೇಕು
-ಎಚ್.ಎಸ್.ದೊರೆಸ್ವಾಮಿ, ಸ್ವಾತಂತ್ರ ಹೋರಾಟಗಾರ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News