ಭಾರತ ಸವಾಲು ಮುನ್ನಡೆಸಲಿರುವ ಸಾಕ್ಷಿ ಮಲಿಕ್, ಬಜರಂಗ್ ಪೂನಿಯ

Update: 2019-04-22 18:38 GMT

ಕ್ಸಿಯಾನ್ (ಚೀನಾ), ಎ.22: ಒಲಿಂಪಿಕ್ಸ್ ಕಂಚು ವಿಜೇತೆ ಸಾಕ್ಷಿ ಮಲಿಕ್ ಹಾಗೂ ವಿಶ್ವದ ನಂ.1 ಬಜರಂಗ್ ಪೂನಿಯ ಮಂಗಳವಾರ ಇಲ್ಲಿ ಆರಂಭವಾಗಲಿರುವ ಏಶ್ಯನ್ ಕುಸ್ತಿ ಚಾಂಪಿಯನ್‌ಶಿಪ್‌ನಲ್ಲಿ ಭಾರತದ ಅಭಿಯಾನವನ್ನು ಮುನ್ನಡೆಸಲಿದ್ದಾರೆ.

ಸಾಕ್ಷಿ, ಬಜರಂಗ್‌ರನ್ನು ಹೊರತುಪಡಿಸಿ ವಿನೇಶ್ ಪೋಗಟ್ ಟೂರ್ನಿಯಲ್ಲಿ ಭಾಗವಹಿಸುತ್ತಿರುವ ಸ್ಟಾರ್ ಬಾಕ್ಸರ್. ಮಹಿಳೆಯರ 53 ಕೆಜಿ ವಿಭಾಗದಲ್ಲಿ ಸ್ಪರ್ಧಿಸಲಿರುವ ವಿನೇಶ್ ಉತ್ತಮ ಪ್ರದರ್ಶನ ತೋರುವ ವಿಶ್ವಾಸದಲ್ಲಿದ್ದಾರೆ.

ಬಲ್ಗೇರಿಯದಲ್ಲಿ ನಡೆದ ಯುಡಬ್ಲುಡಬ್ಲು ಡ್ಯಾನ್ ಕೊಲೊವ್-ನಿಕೊಲಾ ಪೆಟ್ರೊವ್ ಟೂರ್ನಿಯಲ್ಲಿ 53 ಕೆಜಿ ವಿಭಾಗದಲ್ಲಿ ಮೊದಲ ಬಾರಿಗೆ ಸ್ಪರ್ಧಿಸಿದ್ದ ವಿನೇಶ್ ಬೆಳ್ಳಿ ಪದಕ ಬಾಚಿಕೊಂಡಿದ್ದರು. ಇದೇ ಟೂರ್ನಿಯಲ್ಲಿ ಪುರುಷರ 65 ಕೆಜಿ ವಿಭಾಗದಲ್ಲಿ ಸ್ಪರ್ಧಿಸಿದ್ದ ಬಜರಂಗ್ ಸ್ವರ್ಣ ಪದಕ ಗೆದ್ದಿದ್ದರು.

ಬಲ್ಗೇರಿಯ ಟೂರ್ನಿಯಲ್ಲಿ ಸ್ಪರ್ಧಿಸಿದ್ದ ರಿಯೊ ಒಲಿಂಪಿಕ್ ಕಂಚಿನ ಪದಕ ವಿಜೇತೆ ಸಾಕ್ಷಿ ಮಹಿಳೆಯರ 65 ಕೆಜಿ ವಿಭಾಗದಲ್ಲಿ ಬೆಳ್ಳಿ ಜಯಿಸಿದ್ದರು. 59 ಕೆಜಿ ವಿಭಾಗದಲ್ಲಿ ಸ್ಪರ್ಧಿಸಿದ್ದ ಪೂಜಾ ಧಂಡಾ ಬಂಗಾರದ ಪದಕಕ್ಕೆ ಮುತ್ತಿಟ್ಟಿದ್ದರು.

ಏಶ್ಯನ್ ಚಾಂಪಿಯನ್‌ಶಿಪ್‌ನಲ್ಲಿ ಸಾಕ್ಷಿ 62 ಕೆಜಿ ವಿಭಾಗದಲ್ಲಿ ಸ್ಪರ್ಧಿಸಲಿದ್ದು, ನವಜೋತ್ ಕೌರ್ 65 ಕೆಜಿ ವಿಭಾಗದಲ್ಲಿ ಭಾರತವನ್ನು ಪ್ರತಿನಿಧಿಸಲಿದ್ದಾರೆ. ಪೂಜಾ ಧಂಡಾ 57 ಕೆಜಿ ವಿಭಾಗದಲ್ಲಿ ಪೈಪೋಟಿ ನೀಡಲಿದ್ದಾರೆ.

ಇನ್ನುಳಿದ ಭಾರತದ ಪ್ರಮುಖ ಸ್ಪರ್ಧಿಗಳೆಂದರೆ ದಿವ್ಯಾ ಕಾಕ್ರನ್ (68 ಕೆಜಿ), ಅಮಿತ್ ಧನಕರ್ (74 ಕೆಜಿ), ರಾಹುಲ್ ಅವಾರೆ (61 ಕೆಜಿ), ಪುರುಷರ ಫ್ರೀಸ್ಟೈಲ್ ವಿಭಾಗದಲ್ಲಿ ಪ್ರವೀಣ್ ರಾಣಾ (79 ಕೆಜಿ), ಸತ್ಯವ್ರತ್ ಕಡಿಯಾನ್ (97 ಕೆಜಿ).

ಎಪ್ರಿಲ್ 28ರಂದು ಟೂರ್ನಿ ಮುಕ್ತಾಯವಾಗಲಿದೆ. ಪುರುಷರ ಫ್ರೀಸ್ಟೈಲ್ ಸ್ಪರ್ಧೆಯೊಂದಿಗೆ ಟೂರ್ನಿ ಆರಂಭವಾಗಲಿದ್ದು, ಆ ಬಳಿಕ ಮಹಿಳಾ ವಿಭಾಗದ ಸ್ಪರ್ಧೆಗಳು ನಡೆಯಲಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News