ಮಹಿಳೆಯರಿಗೆ ಸಿಗದ ರಾಜಕೀಯ ಪ್ರಾತಿನಿಧ್ಯ

Update: 2019-04-22 18:57 GMT

ಪ್ರಾಚೀನ ಕಾಲದಿಂದಲೂ ಭಾರತೀಯ ಸಮಾಜವು ಮಹಿಳೆಯನ್ನು ಗಂಡ ಮತ್ತು ಮಕ್ಕಳ ಹಿತಾಸಕ್ತಿ ಕಾಪಾಡಿಕೊಳ್ಳುವ ಸಾಧನವನ್ನಾಗಿ ಮಾತ್ರ ನೋಡಿಕೊಂಡು ಬಂದಿದೆ. ಇದರಿಂದಾಗಿ ಪ್ರಾಥಮಿಕ ಶಿಕ್ಷಣ ಪಡೆಯುವಲ್ಲೂ ಅವಳು ವಂಚಿತಳಾಗಿಯೇ ಬೆಳೆದಿದ್ದಾಳೆ. ಇದನ್ನು ತನ್ನ ಹಜಸ್ಥಿತಿಯೆಂದೇ ಮಹಿಳೆ ಭಾವಿಸಿದ್ದಾಳೆ.

ಮಹಾತ್ಮ್ಮಾಗಾಂಧಿಯವರು ಸ್ವಾತಂತ್ರ ಚಳವಳಿಯ ನಾಯಕತ್ವ ವಹಿಸಿಕೊಂಡಾಗ ರಾಜಕೀಯ ಸುಧಾರಣೆಯ ಜತೆಯಲ್ಲೇ ಸಾಮಾಜಿಕ ಸುಧಾರಣೆಯನ್ನೂ ಮಾಡಲು ಶ್ರಮಿಸಿದರು. ನಮ್ಮ ಭಾರತೀಯ ಸಮಾಜದಲ್ಲಿ ಹಳೇ ಸಂಪ್ರದಾಯಗಳಿಂದ ಕುಗ್ಗಿ ಹೋಗಿ ಬಂಧಿತ ಸ್ಥಿತಿಯಲ್ಲಿದ್ದ ಸ್ತ್ರೀ ಕುಲವನ್ನೇ ಅವರು ಅವುಗಳಿಂದ ಹೊರತರಲು ಪ್ರಯತ್ನಿಸಿದರು. ಎಲ್ಲ ಸ್ತರಗಳ ಮಹಿಳೆಯರೂ ಸಾಮೂಹಿಕವಾಗಿ ಇದರಲ್ಲಿ ಅನೇಕ ಸಂಖ್ಯೆಯಲ್ಲಿ ಪಾಲ್ಗೊಂಡರು. ಈ ಸತ್ಯಾಗ್ರಹ ನೋಡಲೆಂದೇ ವಿಶೇಷವಾಗಿ ಆಗಮಿಸಿದ ಅಮೆರಿಕನ್ ಪತ್ರಕರ್ತನೊಬ್ಬ ಚಳವಳಿಯಲ್ಲಿನ ಮಹಿಳೆಯರ ಭಾಗವಹಿಸುವಿಕೆ ನೋಡಿ ಹೀಗೆ ಉದ್ಗಾರ ಮಾಡಿದ್ದಾನೆ. ‘‘ಗಾಂಧಿ ಸ್ವಾತಂತ್ರ್ಯ ಪಡೆಯುತ್ತಾರೋ ಇಲ್ಲವೋ, ಆದರೆ ಮಹಿಳೆಯರನ್ನು ಗೃಹ ಬಂಧನದಿಂದ ಬಿಡಿಸಿ ರಾಷ್ಟ್ರೀಯ ಹೋರಾಟದಲ್ಲಿ ಪರಿಣಾಮಕಾರಿ ಪಾತ್ರ ವಹಿಸುವಂತೆ ಮಾಡುವ ಅದ್ಭುತವನ್ನೇ ಸಾಧಿಸಿದ್ದಾರೆ’’ ಎಂದು. ಇದರಿಂದ ಮಹಿಳೆಯರಿಗೆ ಸಮಾಜದಲ್ಲಿ ತಮ್ಮ ಅಸ್ತಿತ್ವ ಪಡೆಯಲು ಸೂಕ್ತ ವೇದಿಕೆ ದೊರೆಯಿತು. ಇದರಿಂದ ಹಲವಾರು ಮಹಿಳಾ ಸಂಘಟನೆಗಳು ಪ್ರವರ್ಧಮಾನಕ್ಕೆ ಬಂದು ಸ್ತ್ರೀಯರು ತಮ್ಮ ಸ್ಥಿತಿಗತಿ ಬಗ್ಗೆ ಜಾಗೃತಗೊಳ್ಳಲು ಪ್ರಾರಂಭಿಸಿದರು.

  ಆದರೆ ಇಂದಿನ ರಾಜಕಾರಣದಲ್ಲಿ ಮಹಿಳೆಯರ ಪಾತ್ರ ನೋಡಿದರೆ ಇನ್ನೂ ಕೂಡಾ ಅವಳನ್ನು ರಾಜಕೀಯದ ಹೊರ ಆವರಣದಲ್ಲೇ ಉಳಿಸಿದ್ದಾರೆ. ಯಾವುದೇ ರಾಜಕೀಯ ಪಕ್ಷವು ಮಹಿಳೆಯರನ್ನು ಒಂದು ರಾಜಕೀಯ ಶಕ್ತಿಯಾಗಿ ಪರಿಗಣಿಸಿಯೇ ಇಲ್ಲ. ಇನ್ನು ಮಹಿಳೆ ಸಮರ್ಥಳಾಗಿದ್ದರೂ ಪುರುಷಾಧಿಕಾರದ ಸದ್ಯದ ಪರಿಸ್ಥಿತಿಯಲ್ಲಿ ಮಹಿಳೆಯರ ರಾಜಕೀಯ ಪ್ರವೇಶಕ್ಕೆ ವಿರೋಧವಾಗಿಯೇ ಇದೆ. ಸ್ವತಂತ್ರ ಅಭ್ಯರ್ಥಿಯಾಗಿ ನಿಂತ ಮಹಿಳೆಗೆ ಜಾತಿ ಹೆಸರಿನಲ್ಲಿ ಇಲ್ಲ ಸಲ್ಲದ ತಂತ್ರಗಾರಿಕೆಯಿಂದ ಕಠಿಣ ಸ್ಪರ್ಧೆ ಎದುರಿಸುವಂತೆ ಮಾಡಲಾಗುತ್ತದೆ. ಇದರಿಂದ ಮಹಿಳೆಯರು ರಾಜಕೀಯದಲ್ಲಿ ಮುನ್ನುಗ್ಗಲು ಹಿಂಜರಿಯುತ್ತಾರೆ. ಉದಾಹರಣೆ ಹೇಳಬೇಕಾದರೆ ಮಹಿಳೆಯರಿಗೆ ಪ್ರೋತ್ಸಾಹ ಕೊಟ್ಟರೆ ರಾಜ್ಯದ ಅಭಿವೃದ್ಧಿಯಲ್ಲಿ ಹೆಚ್ಚು ಜವಾಬ್ದಾರಿಯಿಂದ ಕಾರ್ಯ ನಿರ್ವಹಿಸಲು ಸಾಧ್ಯ ಎಂದು ಬೆಂಗಳೂರು ದಕ್ಷಿಣ ಕ್ಷೇತ್ರದ ತೇಜಸ್ವಿನಿ ಅನಂತ ಕುಮಾರ ತೋರಿಸಿದ್ದಾರೆ. ಆದರೆ ಅವರಿಗೆ ಲೋಕಸಭಾ ಟಿಕೆಟ್ ನೀಡದೆ ಬೇರೆಯವರಿಗೆ ಕೊಟ್ಟದ್ದು ಎಲ್ಲಾ ಪಕ್ಷಗಳಿಗೂ ಮಹಿಳೆ ಮತದಾರಳಾಗಿ ಮಾನ್ಯವೇ ಹೊರತು ನಾಯಕಿಯಾಗಿ ಅಲ್ಲ. ನಿಜ ಅರ್ಥದಲ್ಲಿ ಮಹಿಳೆಯರನ್ನು ರಾಜಕೀಯದಲ್ಲಿ ಸಶಕ್ತರನ್ನಾಗಿ ಮಾಡುವುದು ಯಾರಿಗೂ ಬೇಕಾಗಿಲ್ಲ. ಇದು ಪುರುಷ ಪ್ರಧಾನ ಮೌಲ್ಯಗಳನ್ನಷ್ಟೇ ಬಿಂಬಿಸುತ್ತಾ ಮಹಿಳೆಯ ಪ್ರಗತಿ ಕುರಿತು ಬರೀ ಮಾತಿನಲ್ಲೇ ತೋರಣ ಕಟ್ಟುತ್ತಾರೆ. ಇದರಿಂದ ಮಹಿಳೆಯರು ರಾಜಕೀಯದಿಂದ ಹೊರಗೆ ಉಳಿದು ಬಿಡುತ್ತಾರೆ.

 ಒಟ್ಟಿನಲ್ಲಿ ಒಟ್ಟು ಜನಸಂಖ್ಯೆಯಲ್ಲಿ ಅರ್ಧದಷ್ಟು ಮಹಿಳಾ ಜನ ಸಂಖ್ಯೆಯಾಗಿರುವುದರಿಂದ ರಾಜಕಾರಣದಲ್ಲಿ ಮಹಿಳೆಯರ ಪಾಲ್ಗೊಳ್ಳುವಿಕೆಯು ಸಮಗ್ರ ಅಭಿವೃದ್ಧಿಗೆ ಅವಶ್ಯವಾಗಿದ್ದರೂ ಚುನಾವಣೆಗಳಲ್ಲಿ ಮಹಿಳಾ ಅಭ್ಯರ್ಥಿಗಳನ್ನು ನಿಲ್ಲಿಸಲು ರಾಜಕೀಯ ಪಕ್ಷಗಳಿಗೆ ಇಷ್ಟವಿಲ್ಲ. ಯಾಕೆಂದರೆ ಇನ್ನು ಕೂಡಾ ಪಕ್ಷಗಳು ಪುರುಷ ಪ್ರಧಾನ ಮೌಲ್ಯಗಳಿಗೇ ಶರಣಾಗಿದ್ದಾರೆ. ಮಹಿಳೆಯ ಪ್ರಗತಿಯ ಕುರಿತು ಕೇವಲ ಮಾತನಾಡುವಲ್ಲಿ ಮಾತ್ರ ಸೀಮಿತ. ಇದಲ್ಲದೆ ನಮ್ಮ ರಾಜಕೀಯ ಸಂಸ್ಕೃತಿ ಮಹಿಳೆಯರ ರಾಜಕೀಯ ಪ್ರವೇಶಕ್ಕೆ ಅನುಕೂಲಕರವಾಗಿಲ್ಲ. ನಮ್ಮ ಸಮಾಜವೂ ಮಹಿಳೆಯ ರಾಜಕೀಯ ಭಾವಹಿಸುವಿಕೆಗೆ ಎಂದೂ ಾಮರಸ್ಯದ ದೃಷ್ಟಿಯಿಂದ ನೋಡಿಲ್ಲ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News