ವಾಯುಪಡೆಯಲ್ಲಿರಬೇಕಿದ್ದ 'ಅಬ್ಬೋನು ಹಾಜಿ' ಹಜಾಜ್ ಸಂಸ್ಥೆ ಕಟ್ಟಿದ್ದು ಹೀಗೆ…

Update: 2019-04-23 13:09 GMT

ನಿನ್ನೆ ನಿಧನರಾದ ಹಜಾಜ್ ಸಮೂಹ ಸಂಸ್ಥೆಯ ಸ್ಥಾಪಕ ಹಾಜಿ ಜಿ. ಅಬ್ದುಲ್ ಖಾದರ್ ಅವರ ಊರಾದ ಕಲ್ಲಡ್ಕ ಸಮೀಪದ ಗೋಳ್ತಮಜಲು ಇಂದು ಬಿಕೋ ಎನ್ನುತ್ತಿದೆ. ನಾಡನ್ನು ಕಟ್ಟಿ ಬೆಳೆಸಿದ ಹಿರಿಯ ಚೇತನವನ್ನು ಕಳೆದುಕೊಂಡ ಗೋಳ್ತಮಜಲಿಗೆ ತನ್ನ ಅಸ್ತಿತ್ವ ಇಲ್ಲದಂತೆ ಭಾಸವಾಗುತ್ತಿದೆ. ಗೋಳ್ತಮಜಲು ಅಂದರೆ ಹಜಾಜ್. ಹಜಾಜ್ ಅಂದರೆ ‘ಅಬ್ಬೋನು ಹಾಜಿ’ ಎಂದು ನಾಣ್ಣುಡಿಯಿದ್ದ ಊರು ಇದೀಗ ಮಂಕಾಗಿದೆ.

1970ರಲ್ಲಿ ಹಜಾಜ್ ಬೀಡಿ ಉದ್ಯಮ ಪ್ರಾರಂಭಿಸುವ ಮುನ್ನ ಹಾಜಿ ಜಿ. ಅಬ್ದುಲ್ ಖಾದರ್ ಯಾನೆ ‘ಅಬ್ಬೋನು ಹಾಜಿ’ ತನ್ನ ಜೀವನದಲ್ಲಿ ಹಲವಾರು ಏಳು-ಬೀಳುಗಳು ಕಂಡಿದ್ದಾರೆ. ಗಣೇಶ್ ಬೀಡಿ ಮತ್ತು ಪ್ರಕಾಶ್ ಬೀಡಿಯ ಕಂಟ್ರಾಕ್ಟರಾಗಿ ಕೆಲಸ ಮಾಡಿದ್ದಾರೆ. ನಂತರದ ದಿನಗಳಲ್ಲಿ ಊರಲ್ಲಿ ಉದ್ಯೋಗ ಸೃಷ್ಟಿಸಿ ನೂರಾರು ಜನರ ಸ್ವಾವಲಂಬಿ ಬದುಕಿಗೆ ಪ್ರೇರಣೆಯಾಗಿದ್ದ ‘ಹಜಾಜ್ ಹಾಜಾರ್’ ಅವರು ಕರಾವಳಿಯಲ್ಲಿ ಧಾರ್ಮಿಕ, ಸಾಮಾಜಿಕ, ಶೈಕ್ಷಣಿಕ, ಸಾಹಿತ್ಯಿಕ, ಕ್ರೀಡಾ ಕ್ಷೇತ್ರದಲ್ಲಿ ಸೃಷ್ಟಿಸಿದ ಸಂಚಲನ ಅವಿಸ್ಮರಣೀಯ. ಕವಿ ಹೃದಯಿಯಾಗಿ ಬ್ಯಾರಿ, ಕನ್ನಡ ಸಾಹಿತ್ಯಕ್ಕೂ ಅವರು ಕೊಡುಗೆ ನೀಡಿದ್ದಾರೆ.

ಗೋಳ್ತಮಜಲು ಅಬ್ದುಲ್ ಖಾದರ್ ಹಾಜಿಯವರು ಬಾಲಕನಾಗಿದ್ದಾಗಲೇ ಸೈನಿಕನಾಗಬೇಕು, ದೇಶ ಕಾಯಬೇಕೆಂಬ ದೃಢ ಸಂಕಲ್ಪ ಹೊಂದಿದ್ದರು. ದೇಶಕ್ಕಾಗಿ ಏನಾದರೂ ಮಾಡಬೇಕೆಂದು ಪಣ ತೊಟ್ಟಿದ್ದರು. ಬಂಟ್ವಾಳ ಎಸ್.ವಿ.ಎಸ್. ಪ್ರೌಢಶಾಲೆಯಲ್ಲಿ ಮೆಟ್ರಿಕ್ ಕಲಿತ (ಈಗಿನ ಎಸ್ಸೆಸ್ಸೆಲ್ಸಿ) ಹಾಜಿ ಜಿ. ಅಬ್ದುಲ್ ಖಾದರ್ ತನ್ನ 20ನೆ ವಯಸ್ಸಿನಲ್ಲಿ ಭಾರತೀಯ ವಾಯುಸೇನೆ ಸೇರಲು ಬೆಂಗಳೂರಿಗೆ ತೆರಳಿದರು. ತನ್ನ ಶಾಲಾ ದಾಖಲಾತಿಯನ್ನು ವಾಯುಸೇನೆ ಅಧಿಕಾರಿಗಳಿಗೆ ನೀಡಿದರು. ಆ ಕಡೆಯಿಂದ ಸಮ್ಮತಿಯೂ ಸಿಕ್ಕಿ ಹಾಜಿಯವರ ಸರ್ಟಿಫಿಕೇಟಿಗೆ ಏರ್ ಫೋರ್ಸ್ ನ ಸೀಲು ಬಿದ್ದಿತ್ತು. ಇನ್ನೇನು ಸೇರಬೇಕೆನ್ನುವಾಗ ಕೃಷಿಕರಾಗಿದ್ದ ತಂದೆ ಯೂಸುಫ್ ಬ್ಯಾರಿ ಇಹಲೋಕ ತ್ಯಜಿಸಿದರು.

ದೊಡ್ಡ ಮಗ ಅಬ್ದುಲ್ ಖಾದರ್ ಅವರೇ ಆಗಿದ್ದುದರಿಂದ ಮನೆಯ, ಕುಟುಂಬದ ಜವಾಬ್ದಾರಿ ಹೆಗಲ ಮೇಲೆ ಬಿತ್ತು. ಭಾರತೀಯ ವಾಯುಸೇನೆ ಸೇರಬೇಕೆಂಬ ತನ್ನ ಕನಸು ಕನಸಾಗಿಯೇ ಉಳಿಯಿತು.

ಬಡಕುಟುಂಬದಲ್ಲಿ ಜನಿಸಿರುವ ಕಾರಣ ಬಡವರ ನೋವು, ಕಷ್ಟ ಖಾದರ್ ಹಾಜಿಗೆ ಗೊತ್ತಿತ್ತು. ಪವಿತ್ರ ಮಕ್ಕಾಗೆ ಹಜ್ ನಿರ್ವಹಿಸಲು ತೆರಳಿ ಪುನಃ ಹಿಂತಿರುಗುವಾಗ ಅವರು ಮತ್ತು ಎಳೆಯ ಸಹೋದರ ಸೇರಿಕೊಂಡು ಬೀಡಿ ಉದ್ಯಮ ಪ್ರಾರಂಭಿಸುವ ಸಂಕಲ್ಪ ಹೊಂದಿದರು. ಅದು ಯಶಸ್ವಿಯೂ ಆಯಿತು. ಅದರ ಜೊತೆಗೆ ಸೋಪು, ಪ್ಲಾಸ್ಟಿಕ್ ಉದ್ಯಮ ಕೂಡಾ ಪ್ರಾರಂಭಿಸಿ ಊರ ಹಲವಾರು ಕೈಗಳಿಗೆ ಕೆಲಸ ಕೊಟ್ಟಿದ್ದರು.

ಊರಲ್ಲಿ ಸರಕಾರಿ ಪ್ರೌಢಶಾಲೆ ಸ್ಥಾಪಿಸಲು ಸರಕಾರ ಮುಂದಾದಾಗ ಹಿಂದೆಮುಂದೆ ನೋಡದೇ ಮುಖ್ಯರಸ್ತೆ ಬದಿಯಲ್ಲೇ ಇದ್ದ ಸ್ವಂತ ಜಾಗವನ್ನು ಉದಾರವಾಗಿ ಬಿಟ್ಟು ಕೊಟ್ಟರು. ತನ್ನ ಕುಟುಂಬದ ಟ್ರಸ್ಟ್ ಮಾಡಿ ಜೆಮ್ ಪಬ್ಲಿಕ್ ಸ್ಕೂಲ್ ಸ್ಥಾಪಿಸಿದರು. ಯುವಕರ ಕ್ರೀಡಾ ಸ್ಪೂರ್ತಿಗೆ ಆಸರೆಯಾದರು. ಒಂದು ಕಾಲದಲ್ಲಿ 'ಬ್ಯಾರಿ' ಎಂಬ ಪದವನ್ನು ಕೀಳಾಗಿ ಕಾಣುತ್ತಿದ್ದ ಸಂದರ್ಭದಲ್ಲಿ ಕೂಡಾ ಖಾದರ್ ಹಾಜಿ ಅವರು ತಮ್ಮ ಪ್ರಾಥಮಿಕಾವಸ್ಥೆಯಲ್ಲೇ ದಾಖಲೆಗಳಲ್ಲಿ 'ಅಬ್ದುಲ್ ಖಾದರ್ ಬ್ಯಾರಿ' ಎಂದು ಗುರುತಿಸಿಕೊಂಡರು. ಬ್ಯಾರಿ ಸಾಹಿತ್ಯ ಕ್ಷೇತ್ರಕ್ಕೂ ಅನನ್ಯವಾದ ಕೊಡುಗೆ ನೀಡಿದರು. ಕನ್ನಡ ಸಾಹಿತ್ಯದಲ್ಲೂ ತೊಡಗಿಸಿಕೊಂಡರು. 2001ರಲ್ಲಿ ನಾನು ಪತ್ರಿಕೋದ್ಯಮಕ್ಕೆ ಕಾಲಿಟ್ಟಾಗ ಬೆನ್ನು ತಟ್ಟಿ ಪ್ರೋತ್ಸಾಹಿಸಿದ ಪ್ರಮುಖರಲ್ಲೊಬ್ಬರು ಇದೇ ‘ಅಬ್ಬೋನು ಹಾಜಿ’ಯವರು. ಆ ಕಾಲದಲ್ಲಿ ಬಿಡುವು ಇದ್ದಾಗೆಲ್ಲಾ ಅವರ ಮನೆ ಅಥವಾ ಕಚೇರಿಗೆ ಕರೆಸಿ ಸಾಹಿತ್ಯಾತ್ಮಕ ವಿಮರ್ಶೆ ಮಾಡುತ್ತಿದ್ದರು. ಸಾಮಾಜಿಕ ಚಿಂತನೆಯನ್ನು ಬಿತ್ತುತ್ತಿದ್ದರು. ಸಾಹಿತ್ಯ ಚಟುವಟಿಕೆಗಳ ಕಾರ್ಯಕ್ರಮಕ್ಕೆ ಅವರ ಕಾರಲ್ಲೇ ಕುಳ್ಳಿರಿಸಿ ಕರೆದುಕೊಂಡು ಹೋಗುತ್ತಿದ್ದರು.

ಊರಲ್ಲಿ ಸೌಹಾರ್ದದ ಸಾಮರಸ್ಯದ ಬಾಳು ನಡೆಸುತ್ತಿದ್ದ ಅಬ್ದುಲ್ ಖಾದರ್ ಹಾಜಿ ನಿಧನರಾದಾಗ ಸಮಾರೋಪಾದಿಯಲ್ಲಿ ಬಂದ ಜನರಿಗೆ ಲೆಕ್ಕವಿಲ್ಲ. ಜಿಲ್ಲೆಯ ಪ್ರಮುಖರಲ್ಲದೇ ಆರೆಸ್ಸೆಸ್ ಮುಖಂಡ ಕಲ್ಲಡ್ಕ ಪ್ರಭಾಕರ ಭಟ್ ಕೂಡಾ ಮೃತದೇಹ ಸಂದರ್ಶಿಸಿ ಮರುಗಿದ್ದು ಗಮನಾರ್ಹ. ಅಸೌಖ್ಯದಿಂದ ಮನೆಯಲ್ಲಿರುವ ತುಂಬೆ ಅಹ್ಮದ್ ಹಾಜಿ ಮುಹಿಯುದ್ದೀನ್ ಅವರು ಗಾಲಿಕುರ್ಚಿಯಲ್ಲಿ ಆಗಮಿಸಿ ಖಾದರ್ ಹಾಜಿಯವರ ಮಯ್ಯತ್ ಸಂದರ್ಶಿಸಿದ್ದು ವಿಶೇಷ. ಅಂತಹ ಸೆಳೆತ ಹಜಾಜ್ ಹಾಜಾರಲ್ಲಿದೆ. ಜಾತಿ ಧರ್ಮ ಬೇಧವಿಲ್ಲದೇ ಸಹಸ್ರಾರು ಜನ ಅವರ ಅಂತ್ಯಸಂಸ್ಕಾರದಲ್ಲಿ ಪಾಲ್ಗೊಂಡು ಕಣ್ಣೀರಾದರು.

ಅಬ್ದುಲ್ ಖಾದರ್ ಹಾಜಿಯವರು ನಮ್ಮಿಂದ ಕಣ್ಮರೆಯಾದರೂ ಅವರು ಹಾಕಿಕೊಟ್ಟ ಆದರ್ಶ ನಮ್ಮ ಮುಂದಿದೆ. ಅವರ ಮಕ್ಕಳನ್ನು ಕೂಡಾ ಅವರದೇ ಆದರ್ಶದಲ್ಲಿ ಬೆಳೆಸಿರುವ ಕಾರಣ ಅವರ ಆರೂ ಮಂದಿ ಗಂಡು ಮಕ್ಕಳು ಜಿಲ್ಲೆಯ ವಿವಿಧ ಕ್ಷೇತ್ರಗಳಲ್ಲಿ ಗುರುತಿಸಿಕೊಂಡಿದ್ದಾರೆ. ಸಮಾಜಕ್ಕೆ ತಮ್ಮದೇ ಆದ ಕೊಡುಗೆ ನೀಡುತ್ತಿರುವುದು ಸಂತಸ ತಂದಿದೆ. ಅಬ್ದುಲ್ ಖಾದರ್ ಹಾಜಿಯವರ ಪಾರತ್ರಿಕ ಜೀವನದಲ್ಲಿ ಶಾಂತಿ ಕರುಣಿಸಲೆಂದು ನಾವೆಲ್ಲಾ ದೇವರಲ್ಲಿ ಪ್ರಾರ್ಥಿಸೋಣ.

Writer - ರಶೀದ್ ವಿಟ್ಲ

contributor

Editor - ರಶೀದ್ ವಿಟ್ಲ

contributor

Similar News