ಚಿನ್ನ ಬಾಚಿಕೊಂಡ ಬಜರಂಗ್ ಪೂನಿಯ

Update: 2019-04-23 18:17 GMT

ಫೆನಲ್ ಪ್ರವೇಶಿಸಿದ ಪ್ರವೀಣ್

ಕ್ಸಿಯಾನ್ (ಚೀನಾ), ಎ.23: ಏಶ್ಯನ್ ಕುಸ್ತಿ ಚಾಂಪಿಯನ್‌ಶಿಪ್ ಪುರುಷರ ಫ್ರೀಸ್ಟೈಲ್ ವಿಭಾಗದಲ್ಲ್ಲಿ ಮಂಗಳವಾರ ಭಾರತ ತನ್ನ ಅಭಿಯಾನವನ್ನು ಭರ್ಜರಿಯಾಗಿ ಆರಂಭಿಸಿದ್ದು, ಬಜರಂಗ್ ಪೂನಿಯ ಚಿನ್ನಕ್ಕೆ ಮುತ್ತಿಟ್ಟರೆ, ಪ್ರವೀಣ್ ರಾಣಾ ಫೈನಲ್ ಪ್ರವೇಶಿಸಿದ್ದಾರೆ.

ವಿಶ್ವದ ನಂ.1 ಕುಸ್ತಿಪಟು ಬಜರಂಗ್ ಅವರು 65 ಕೆಜಿ ವಿಭಾಗದ ಫೈನಲ್ ಪಂದ್ಯದಲ್ಲಿ ಕಝಕಿಸ್ತಾನದ ಸಾಯತ್ಬೆಕ್ ಒಕಾಸ್ಸೊವ್ ಅವರನ್ನು 12-7 ಅಂಕಗಳಿಂದ ಮಣಿಸಿ ಬೀಗಿದರು.

ಕಾಮನ್‌ವೆಲ್ತ್ ಗೇಮ್ಸ್ ಹಾಗೂ ಏಶ್ಯನ್ ಗೇಮ್ಸ್ ಚಾಂಪಿಯನ್ ಬಜರಂಗ್ ಆರಂಭದಲ್ಲಿ 2-7ರ ಹಿನ್ನಡೆಯಲ್ಲಿದ್ದರು. ಆ ಬಳಿಕ ಮೂರು ದಿಟ್ಟ ನಡೆಗಳ ಮೂಲಕ 8 ಅಂಕಗಳನ್ನು ಗಳಿಸಿ ಪಾರಮ್ಯ ಮೆರೆದರು. ಪಂದ್ಯದಲ್ಲಿ ಸುಸ್ತಾದಂತೆ ಕಂಡುಬಂದ ಕಝಕಿಸ್ತಾನ ಎದುರಾಳಿ ವಿರುದ್ಧ ಒತ್ತಡದ ಪರಿಸ್ಥಿತಿಯಲ್ಲಿ ತೀವ್ರ ಶಕ್ತಿ ಹಾಗೂ ಯುಕ್ತಿಗಳಿಂದ ಭಾರತದ ಸ್ಪರ್ಧಿ ಗಮನಸೆಳೆದರು. 2017ರಲ್ಲಿ ಪ್ರಶಸ್ತಿ ಗೆದ್ದಿದ್ದ ಬಜರಂಗ್‌ಗೆ ಇದು ಏಶ್ಯನ್ ಚಾಂಪಿಯನ್‌ಶಿಪ್‌ನಲ್ಲಿ ಎರಡನೇ ಬಂಗಾರದ ಪದಕ. ಒಟ್ಟಾರೆ ಟೂರ್ನಿಯಲ್ಲಿ 5ನೇ ಪದಕವಾಗಿದೆ. ಬಜರಂಗ್ ಸೆಮಿಫೈನಲ್ ಪಂದ್ಯದಲ್ಲಿ ಉಝ್ಬೇಕಿಸ್ತಾನದ ಸಿರೊಜಿದ್ದಿನ್ ಖಸನೊವ್ ಅವರನ್ನು 12-1ರ ಭಾರೀ ಅಂತರದಿಂದ ಮಣಿಸಿದರು. ಹಿಂದಿನ ಸುತ್ತುಗಳಲ್ಲಿ ಇರಾನ್‌ನ ಪೆಯ್ಮನ್ ಬಿಯಾಬಾನಿ ಹಾಗೂ ಶ್ರೀಲಂಕಾದ ಚಾರ್ಲ್ಸ್ ಫೆರ್ನ್ ಅವರನ್ನು ಬಜರಂಗ್ ಸೋಲಿಸಿದ್ದರು.

ಮತ್ತೊಂದು ಸೆಮಿಫೈನಲ್ ಪಂದ್ಯದಲ್ಲಿ 79 ಕೆಜಿ ವಿಭಾಗದಲ್ಲಿ ಪ್ರವೀಣ್ ರಾಣಾ ಕಝಕಿಸ್ತಾನದ ಗಲಿಮ್ಝಾನ್ ಉಸ್ಸರ್ಬೆಯೆವ್ ಅವರನ್ನು 3-2ರಿಂದ ಮಣಿಸಿ ಚಿನ್ನದ ಪ್ರಶಸ್ತಿ ಸುತ್ತಿಗೆ ಪ್ರವೇಶ ಪಡೆದರು. ಫೈನಲ್ ಪಂದ್ಯದಲ್ಲಿ ಅವರು ಇರಾನ್‌ನ ಬಹಮನ್ ಮುಹಮ್ಮದ್ ತೈಮೂರಿ ಅವರನ್ನು ಎದುರಿಸಲಿದ್ದಾರೆ. ಆರಂಭದ ಸುತ್ತುಗಳಲ್ಲಿ ರಾಣಾ ಅವರು ಜಪಾನ್‌ನ ಯುತಾ ಅಬೆ ಹಾಗೂ ಮಂಗೋಲಿಯದ ತಗ್ಸ್ ಎರ್ಡೆನ್ ಡೆಂಜೆನ್ಶರವ್ ಅವರನ್ನು ಮಣಿಸಿದ್ದರು.

ಕಂಚಿನ ಪದಕದ ಸುತ್ತಿಗೆ ರವಿ, ಸತ್ಯವ್ರತ್

 57 ಕೆಜಿ ತೂಕ ವಿಭಾಗದಲ್ಲಿ ತೈಪೇಯ ಚಿಯಾ ತ್ಸೊ ಲಿವ್ ಅವರನ್ನು 4-0ಯಿಂದ ಮಣಿಸಿದ ಭಾರತದ ರವಿ ಕುಮಾರ್ ಕಂಚಿನ ಪದಕಕ್ಕೆ ನಡೆಯುವ ಪ್ಲೇ ಆಫ್ ಸುತ್ತಿಗೆ ಪ್ರವೇಶಿಸಿದರು. ಮುಂದಿನ ಪಂದ್ಯದಲ್ಲಿ ರವಿ ಅವರು ಜಪಾನ್‌ನ ಯುಕಿ ತಕಾಹಶಿಯನ್ನು ಎದುರಿಸುವರು. 97 ಕೆಜಿ ವಿಭಾಗದ ಕ್ವಾರ್ಟರ್‌ಫೈನಲ್ ಪಂದ್ಯದಲ್ಲಿ ಮಂಗೋಲಿಯದ ಬಟ್ಝುಲ್ ಉಲ್ಝಿಸೈಕಾನ್ ವಿರುದ್ಧ ಭಾರತದ ಸತ್ಯವ್ರತ್ ಕಡಿಯಾನ್ ಸೋತರು. ಆದರೆ ಅವರ ಮಂಗೋಲಿಯ ಎದುರಾಳಿ ಫೈನಲ್ ತಲುಪಿದ ಕಾರಣ ಕಡಿಯಾನ್ ಕಂಚಿನ ಪದಕ ಸುತ್ತಿಗೆ ಅರ್ಹತೆ ಪಡೆದರು. ಅದಾಗ್ಯೂ 70 ಕೆಜಿ ವಿಭಾಗದಲ್ಲಿ ಭಾರತದ ರಜನೀಶ್ ಸೋಲು ಅನುಭವಿಸಿ ಟೂರ್ನಿಯಿಂದ ಹೊರಬಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News