ನಾಲ್ಕನೇ ಬಾರಿ ಪದಕ ಖಚಿತಪಡಿಸಿದ ಶಿವ ಥಾಪ

Update: 2019-04-23 18:19 GMT

ಏಶ್ಯನ್ ಬಾಕ್ಸಿಂಗ್ ಚಾಂಪಿಯನ್‌ಶಿಪ್

ಬ್ಯಾಂಕಾಕ್, ಎ.23: ಏಶ್ಯನ್ ಬಾಕ್ಸಿಂಗ್ ಚಾಂಪಿಯನ್‌ಶಿಪ್‌ನಲ್ಲಿ ಭಾರತೀಯರು ತಮ್ಮ ಅದ್ಭುತ ಓಟವನ್ನು ಮಂಗಳವಾರವೂ ಮುಂದುವರಿಸಿ ದ್ದಾರೆ. ಪುರುಷರ 60 ಕೆಜಿ ವಿಭಾಗದಲ್ಲಿ ಶಿವ ಥಾಪ ಸತತ ನಾಲ್ಕನೇ ಆವೃತ್ತಿಯಲ್ಲಿ ಪದಕವನ್ನು ಖಚಿತಪಡಿಸಿದರೆ, ಅನುಭವಿ ಆಟಗಾರ್ತಿ ಎಲ್. ಸರಿತಾ ದೇವಿ(ಮಹಿಳೆಯರ 60 ಕೆಜಿ ವಿಭಾಗ) ಸುಮಾರು ಒಂದು ದಶಕದ ಬಳಿಕ ಸೆಮಿಫೈನಲ್ ತಲುಪಿದ್ದಾರೆ. ಲೈಟ್‌ವೇಟ್ ವಿಭಾಗದಲ್ಲಿ ಏಕಪಕ್ಷೀಯವಾಗಿ ನಡೆದ ಪಂದ್ಯದಲ್ಲಿ ಥಾಪ ಥಾಯ್ಲೆಂಡ್‌ನ ರುಜಕ್ರನ್ ಜುಂಟ್‌ರಾಂಗ್ ಅವರನ್ನು 5-0 ಅಂಕಗಳಿಂದ ಮಣಿಸಿದರು. ಫೈನಲ್ ಪಂದ್ಯಕ್ಕೆ ಅವರಿಗೆ ಕಠಿಣ ಸ್ಪರ್ಧಿಯ ಸವಾಲು ಎದುರಾಗಿದ್ದು, 2015ರ ಆವೃತ್ತಿಯ ಬೆಳ್ಳಿ ಪದಕ ವಿಜೇತ ಕಝಕಿಸ್ತಾನದ ಝಾಕಿರ್ ಸಫಿವುಲ್ಲಿನ್ ಅವರ ವಿರುದ್ಧ ಥಾಪ ಸೆಣಸಲಿದ್ದಾರೆ. ಥಾಪ ಅವರು ಏಶ್ಯನ್ ಟೂರ್ನಿಯ 2013ರ ಆವೃತ್ತಿಯಲ್ಲಿ ಬಂಗಾರ, 2015ರಲ್ಲಿ ಕಂಚು ಹಾಗೂ 2017ರಲ್ಲಿ ಬೆಳ್ಳಿ ಪದಕವನ್ನು ತಮ್ಮದಾಗಿಸಿಕೊಂಡಿದ್ದಾರೆ.

ಇನ್ನು ಮಹಿಳಾ ವಿಭಾಗದ ಸ್ಪರ್ಧೆಯಲ್ಲಿ ಮಾಜಿ ವಿಶ್ವ ಚಾಂಪಿಯನ್ ಸರಿತಾ ದೇವಿ ಅವರು ಕಝಕಿಸ್ತಾನದ ರಿಮ್ಮಾ ವೊಲೊಸ್ಸೆಂಕೊ ಅವರನ್ನು ಮಣಿಸಿ ಪ್ರಶಸ್ತಿ ಸುತ್ತಿಗೆ ಕಾಲಿಟ್ಟರು. ಕಳೆದ ಆವೃತ್ತಿಯ ಬೆಳ್ಳಿ ಪದಕ ವಿಜೇತೆ ಮನೀಷಾ ಅವರು ಫಿಲಿಪ್ಪೀನ್ಸ್ ನ ಪೆಟೆಸಿಯೊ ಝ್ಜ್ ನೈಸ್ ಅವರನ್ನು ಮಣಿಸಿ ಕನಿಷ್ಠ ಕಂಚಿನ ಪದಕದ ಸುತ್ತು ಪ್ರವೇಶಿಸಿದ್ದಾರೆ.

ಥಾಪ ಅವರೊಂದಿಗೆ ಪುರುಷರ ವಿಭಾಗದ ಸೆಮಿಫೈನಲ್ ತಲುಪಿದ ಇನ್ನೋರ್ವ ಭಾರತೀಯ ಆಶಿಶ್ ಕುಮಾರ್ (75 ಕೆಜಿ). ಆಶಿಶ್ ಅವರು ಕಿರ್ಗಿಸ್ತಾನದ ಉಮರ್‌ಬೆಕ್ ಊಲು ಬೆಝಿಗಿಟ್ ಅವರನ್ನು ಏಕಪಕ್ಷೀಯವಾಗಿ ಮಣಿಸಿದರು.

ಭಾರತದ ಇನ್ನೋರ್ವ ತಾರೆ, ಕಾಮನ್‌ವೆಲ್ತ್ ಗೇಮ್ಸ್ ಕಂಚು ವಿಜೇತ ನಮನ್ ತನ್ವರ್ (91 ಕೆಜಿ) ಅವರು ಜೋರ್ಡಾನ್‌ನ ಹುಸೈನ್ ಐಶಾಯಿಶ್ ಲಾಶೈಶ್ ವಿರುದ್ಧ 0-5 ಅಂತರದಿಂದ ಸೋತು ಟೂರ್ನಿಯಿಂದ ನಿರ್ಗಮಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News