ವಿಶ್ವಕಪ್‌ ಪೂರ್ವತಯಾರಿ ಶಿಬಿರಕ್ಕೆ ತೆರಳದೇ ಐಪಿಎಲ್‌ನಲ್ಲಿ ಉಳಿದ ಶಾಕಿಬ್

Update: 2019-04-23 18:21 GMT

 ಹೊಸದಿಲ್ಲಿ, ಎ.23: ಬಾಂಗ್ಲಾದೇಶದ ಆಲ್‌ರೌಂಡರ್ ಶಾಕಿಬ್ ಅಲ್ ಹಸನ್ ಐಸಿಸಿ ಕ್ರಿಕೆಟ್ ವಿಶ್ವಕಪ್‌ಗೆ ಮೊದಲು ತನ್ನ ರಾಷ್ಟ್ರೀಯ ಕ್ರಿಕೆಟ್ ತಂಡದ ಪೂರ್ವ ತಯಾರಿ ಶಿಬಿರದಲ್ಲಿ ಭಾಗವಹಿಸದೇ ಈಗ ನಡೆಯುತ್ತಿರುವ ಐಪಿಎಲ್‌ನಲ್ಲಿ ಸನ್‌ರೈಸರ್ಸ್ ಹೈದರಾಬಾದ್ ತಂಡದಲ್ಲೇ ಉಳಿಯಲು ನಿರ್ಧರಿಸಿದ್ದಾರೆ.

ಹೈದರಾಬಾದ್ ತಂಡದಲ್ಲಿ ಹೆಚ್ಚು ಅವಕಾಶವನ್ನು ಪಡೆಯದ ಸ್ಟಾರ್ ಆಟಗಾರ ಶಾಕಿಬ್‌ರನ್ನು ಐರ್ಲೆಂಡ್ ವಿರುದ್ಧದ ತ್ರಿರಾಷ್ಟ್ರ ಸರಣಿಗೆ ಮೊದಲು ಆಯೋಜಿಸಲಾಗಿರುವ ಶಿಬಿರವನ್ನು ಸೇರಿಸಿಕೊಳ್ಳಲು ಬಾಂಗ್ಲಾದೇಶ ಕ್ರಿಕೆಟ್ ಮಂಡಳಿ ನಿರ್ಧರಿಸಿತ್ತು.

‘‘ಶಾಕಿಬ್ ಮಂಗಳವಾರವೇ ಬಾಂಗ್ಲಾಕ್ಕೆ ಬರಬೇಕಾಗಿತ್ತು. ಆದರೆ ಅವರು ಇಲ್ಲಿಗೆ ಬರುತ್ತಿಲ್ಲ. ಹೈದರಾಬಾದ್ ತಂಡದಲ್ಲಿ ಯಾರಾದರೊಬ್ಬ ಆಟಗಾರ ತನ್ನ ದೇಶಕ್ಕೆ ವಾಪಸಾದರೆ ತನಗೆ ಆಡಲು ಅವಕಾಶ ಸಿಗಬಹುದು ಎಂದು ಹೇಳಿದ್ದಾರೆ. ಭಾರತದಲ್ಲಿ ಉಳಿದುಕೊಳ್ಳಲು ನಾವು ಅನುಮತಿ ನೀಡಿದ್ದೇವೆ. ಅವರು ಐಪಿಎಲ್‌ನಲ್ಲಿ ಆಡಿದರೆ ಐರ್ಲೆಂಡ್ ವಿರುದ್ಧ ಸರಣಿಯ ವೇಳೆ ನಮಗೆ ಲಾಭವಾಗಲಿದೆ’’ ಎಂದು ಬಿಸಿಬಿ ಅಧ್ಯಕ್ಷ ಅಕ್ರಂ ಖಾನ್ ಹೇಳಿದ್ದಾರೆ.

ಜನವರಿಯಲ್ಲಿ ಬಾಂಗ್ಲಾದೇಶ ಪ್ರೀಮಿಯರ್ ಲೀಗ್ ವೇಳೆ ಗಾಯಗೊಂಡಿದ್ದ ಶಾಕಿಬ್ ಈ ವರ್ಷದ ಐಪಿಎಲ್‌ನಲ್ಲಿ ಭಾಗವಹಿಸಿದ್ದರು. ಈ ಋತುವಿನಲ್ಲಿ ಕೇವಲ ಒಂದು ಪಂದ್ಯ ಆಡುವ ಅವಕಾಶ ಪಡೆದಿರುವ ಅವರು 3.4 ಓವರ್‌ಗಳಲ್ಲಿ 42 ರನ್ ನೀಡಿ ದುಬಾರಿಯಾಗಿದ್ದರು.

ಹೈದರಾಬಾದ್ ತಂಡದಲ್ಲಿ ಸ್ಟಾರ್ ಆಟಗಾರರಾದ ಆಸ್ಟ್ರೇಲಿಯದ ಡೇವಿಡ್ ವಾರ್ನರ್,ಇಂಗ್ಲೆಂಡ್‌ನ ಜಾನಿ ಬೈರ್‌ಸ್ಟೋವ್, ನ್ಯೂಝಿಲೆಂಡ್‌ನ ಕೇನ್ ವಿಲಿಯಮ್ಸನ್ ಹಾಗೂ ಅಫ್ಘಾನಿಸ್ತಾನದ ಅವಳಿ ಆಟಗಾರರಾದ ರಶೀದ್ ಖಾನ್ ಹಾಗೂ ಮುಹಮ್ಮದ್ ನಬಿ ಅವರಿದ್ದಾರೆ. ಹೀಗಾಗಿ ಶಾಕಿಬ್‌ಗೆ ಈ ಬಾರಿ ಹೆಚ್ಚು ಅವಕಾಶ ಲಭಿಸಿಲ್ಲ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News