ಸ್ಟಟ್‌ಗಾರ್ಟ್ ಟೂರ್ನಿಯಿಂದ ಸಿಮೊನಾ ಹಾಲೆಪ್ ಹೊರಕ್ಕೆ

Update: 2019-04-23 18:23 GMT

ಬರ್ಲಿನ್, ಎ.23: ಗಾಯದ ಕಾರಣ ವಿಶ್ವದ ನಂ.2 ಆಟಗಾರ್ತಿ ರೋಮಾನಿಯದ ಸಿಮೊನಾ ಹಾಲೆಪ್ ಈ ವಾರ ಸ್ಟಟ್‌ಗಾರ್ಟ್‌ನಲ್ಲಿ ಆರಂಭವಾಗುವ ಡಬ್ಲುಟಿಎ ಟೂರ್ನಿಯಿಂದ ಹೊರಗುಳಿದಿದ್ದಾರೆ.

ಈ ಟೂರ್ನಿಯಲ್ಲಿ ಬುಧವಾರ ಸಿಮೊನಾ ತಮ್ಮ ಪ್ರಥಮ ಪಂದ್ಯವನ್ನು ಆಡಬೇಕಿತ್ತು. ವಿಶ್ವದ ನಂ.1 ಜಪಾನ್‌ನ ನವೊಮಿ ಒಸಾಕಾ ಹಾಗೂ ಹಾಲಿ ವಿಂಬಲ್ಡನ್ ಚಾಂಪಿಯನ್ ಅಂಜೆಲಿಕ್ ಕೆರ್ಬರ್‌ರಂತಹ ಮಹಾನ್ ಆಟಗಾರ್ತಿಯರು ಈ ಟೂರ್ನಿಯಲ್ಲಿ ಭಾಗವಹಿಸುತ್ತಿದ್ದಾರೆ.

ಬೆನ್ನು ನೋವಿನ ಕಾರಣ ಸಿಮೊನಾ ಕಳೆದ ವರ್ಷದ ಕೊನೆಯಲ್ಲಿ ಯಾವುದೇ ಪಂದ್ಯಗಳನ್ನು ಆಡಿರಲಿಲ್ಲ. ಕಳೆದ ವಾರ ಫೆಡ್‌ಕಪ್ ಟೂರ್ನಿಯಲ್ಲಿ ಫ್ರಾನ್ಸ್‌ನ ಕರೋಲಿನ್ ಗಾರ್ಸಿಯಾ ವಿರುದ್ಧದ ಪಂದ್ಯದಲ್ಲಿ ಹಿಪ್ ಇಂಜುರಿಗೆ ಒಳಗಾಗಿದ್ದ ಅವರು, ಮಂಗಳವಾರ ಸ್ಟಟ್‌ಗಾರ್ಟ್ ಟೂರ್ನಿಯಲ್ಲಿ ಆಡುವುದಿಲ್ಲ ಎಂದು ಘೋಷಿಸಿದ್ದಾರೆ.

27 ವರ್ಷದ ರೋಮಾನಿಯ ಆಟಗಾರ್ತಿ ಈ ಋತುವಿನಲ್ಲಿ ಫೆಡ್‌ಕಪ್ ಟೂರ್ನಿಯಲ್ಲಿ ಮಾತ್ರ ಕಾಣಿಸಿಕೊಂಡಿದ್ದರು. ಫ್ರೆಂಚ್ ಓಪನ್ ಪ್ರಶಸ್ತಿಯನ್ನು ಉಳಿಸಿಕೊಳ್ಳಲು ಸಿದ್ಧವಾಗುವ ಹಿನ್ನೆಲೆಯಲ್ಲಿ ಮುಂದಿನ ತಿಂಗಳು ಆರಂಭವಾಗುವ ರೋಮ್ ಹಾಗೂ ಮ್ಯಾಡ್ರಿಡ್ ಓಪನ್‌ನಲ್ಲಿ ಭಾಗವಹಿಸುವ ಗುರಿಯಿಟ್ಟುಕೊಂಡಿದ್ದಾರೆ.

ಕಳೆದ ವರ್ಷ ಪ್ಯಾರಿಸ್‌ನಲ್ಲಿ ಟ್ರೋಫಿ ಜಯಿಸುವ ಮೂಲಕ ಹಾಲೆಪ್, ತಮ್ಮ ಚೊಚ್ಚಲ ಗ್ರಾನ್‌ಸ್ಲಾಮ್ ಕನಸನ್ನು ನನಸಾಗಿಸಿಕೊಂಡಿದ್ದರು. ಮೇ 26ರಂದು ಆರಂಭವಾಗುವ ಈ ವರ್ಷದ ಫ್ರೆಂಚ್ ಓಪನ್‌ನಲ್ಲಿ ಮತ್ತೆ ಮೋಡಿ ಮಾಡಲು ಎದುರು ನೋಡುತ್ತಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News