ರೈತರಿಗೆ ಆರ್ಥಿಕ ಸ್ವಾತಂತ್ರ ಎಂದು?

Update: 2019-04-23 18:31 GMT

ಕೇಂದ್ರ ಸರಕಾರ ನೈಜಕಾರಣಗಳನ್ನು ತಿಳಿಯುವ ಗೊಡವೆಗೇ ಹೋಗದೆ, ರೈತರಿಗೆ ಚುನಾವಣಾ ಪ್ರಸಾದ ಕೊಟ್ಟು ಸುಮ್ಮನಾಗಿಸಲು ನೋಡುತ್ತಿದೆ. ಕೇಂದ್ರ ಸರಕಾರ ಹೊಸದಾಗಿ ರೈತರಿಗೆ ವರ್ಷಕ್ಕೆ 6,000ರೂ.ಗಳ ಬಂಡವಾಳ ನೆರವನ್ನು ರೈತರ ಬ್ಯಾಂಕ್ ಅಕೌಂಟ್‌ಗೆ ನೇರವಾಗಿ ಮೂರು ಹಂತಗಳಲ್ಲಿ ವರ್ಗಾಯಿಸುತ್ತೇವೆ ಎಂದು ತಿಳಿಸಿತು. ಅನೇಕ ರಾಜ್ಯ ಸರಕಾರಗಳು ಇಂದು ಚುನಾವಣೆ ವೇಳೆ ಇಂತಹ ಆಶ್ವಾಸನೆಗಳನ್ನೇ ಕೊಡುತ್ತಿವೆ.
ಆದರೆ ಕೇಂದ್ರ ಸರಕಾರ ರೈತರು ಬಯಸುವ ಬೆಂಬಲ ಬೆಲೆ ಕುರಿತು ಏತಕ್ಕೆ ಮಾತಾಡುವುದಿಲ್ಲ ಎನ್ನುವುದೇ ಇಲ್ಲಿ ಅಸಲು ಪ್ರಶ್ನೆ.


ನಿಜಾಮಾಬಾದ್‌ನಲ್ಲಿ ಈ ಬಾರಿ ಲೋಕಸಭಾ ಚುನಾವಣೆಯಲ್ಲಿ ಪಾಲ್ಗೊಂಡಿದ್ದಕ್ಕೆ 185 ಮಂದಿ ಅಭ್ಯರ್ಥಿಗಳು ಸಂಖ್ಯಾ ರೀತಿಯ ದಾಖಲೆ ಬರೆದರು. ಇವರಲ್ಲಿ 178 ಮಂದಿ ರೈತರು. ಈ ರೈತರು ಸ್ಪರ್ಧೆ ಮಾಡಿದ್ದು ಗೆಲ್ಲುವುದಕ್ಕೆ ಅಲ್ಲ. ಈ ಮೂಲಕವಾದರೂ ತಮ್ಮ ಸಮಸ್ಯೆಗಳು ಸರಕಾರಗಳ ದೃಷ್ಟಿಗೆ ಬೀಳಲಿ ಎಂಬ ಕಾರಣಕ್ಕಾಗಿ ಈ ಸ್ಪರ್ಧೆ. ವಿವಿಧ ಸಂದರ್ಭಗಳಲ್ಲಿ ಅವರು ಮಾಡಿದ ಆಂದೋಲನಗಳಿಂದ ಸರಕಾರಗಳಲ್ಲಿ ಕದಲಿಕೆ ಇಲ್ಲದೇ ಹೋಗಿದ್ದರಿಂದ, ದೇಶದ ಪ್ರಜೆಗಳನ್ನು ತಮ್ಮ ಸಮಸ್ಯೆಗಳತ್ತ ನೋಡುವಂತೆ ಮಾಡುವುದೇ ತಮ್ಮ ಸ್ಪರ್ಧೆಯ ಗುರಿ ಎಂದು ಈ ರೈತರು ಸ್ಪಷ್ಟವಾಗಿ ತಿಳಿಸಿದರು. ಇವರ ಡಿಮ್ಯಾಂಡ್‌ಗಳಲ್ಲಿ ಮುಖ್ಯವಾದುದು ತಾವು ಬೆಳೆದ ಅರಿಷಿಣ, ಕೆಂಜೋಳಗಳಿಗೆ ಬೆಂಬಲ ಬೆಲೆ ಕಲ್ಪಿಸುವುದು. ನಿಜಕ್ಕೂ ನಿಜಾಮಾಬಾದ್ ರೈತರ ಪರಿಸ್ಥಿತಿಯೇ ಇಂದು ದೇಶದಲ್ಲಿನ ಅನೇಕ ಪ್ರಾಂತಗಳಲ್ಲಿ ನಮಗೆ ದರ್ಶನ ನೀಡುತ್ತದೆ. ಅವರೆಲ್ಲರೂ ಅನೇಕ ರೂಪಗಳಲ್ಲಿ ತಮ್ಮ ಪ್ರತಿಭಟನೆಯನ್ನು ಸರಕಾರಕ್ಕೆ ತಿಳಿಸುತ್ತಲೇ ಇದ್ದಾರೆ. ಆದರೂ ಅವರು ಆಶಿಸಿದ ಸ್ಪಂದನ ಸರಕಾರಗಳಿಂದ ಇಲ್ಲದೇ ಹೋಗಿದ್ದರಿಂದ ತೀವ್ರ ನಿರಾಸೆಯಲ್ಲಿದ್ದಾರೆ.

ತಾವು ಅಧಿಕಾರಕ್ಕೆ ಬಂದರೆ ರೈತರ ಆದಾಯ ಇಮ್ಮಡಿಗೊಳಿಸುತ್ತೇವೆ ಎಂದು, ಸ್ವಾಮಿನಾಥನ್ ಕಮಿಟಿ ಶಿಫಾರಸುಗಳಿಗೆ ಅನುಗುಣವಾಗಿ ಬೆಂಬಲ ಬೆಲೆ ಕಲ್ಪಿಸುತ್ತೇವೆ ಎಂದು ನರೇಂದ್ರ ಮೋದಿ 2014ರ ಚುನಾವಣೆಯಲ್ಲಿ ವಾಗ್ದಾನ ಮಾಡಿದ್ದರು. 5 ವರ್ಷಗಳ ಬಳಿಕ ನೋಡಿದರೆ ಆದಾಯ ಇಮ್ಮಡಿ ಆಗುವುದು ಹೋಗಲಿ ರೈತರ ಸಾಲಗಳು ಮಾತ್ರ ಎರಡು ಪಟ್ಟಿಗಿಂತ ಹೆಚ್ಚಾಗಿದೆ. ವಿವಿಧ ರಾಜ್ಯಗಳಲ್ಲೂ, ದೇಶದ ರಾಜಧಾನಿ ದಿಲ್ಲಿಯಲ್ಲೂ ಈ ಕಾಲದಲ್ಲಿ ದೊಡ್ಡ ಮಟ್ಟದಲ್ಲಿ ರೈತರ ಪ್ರದರ್ಶನಗಳನ್ನು ನಾವು ನೋಡಿದೆವು. 2018ರ ಮಾರ್ಚ್‌ನಲ್ಲಿ ಬಿಜೆಪಿ ಅಧಿಕಾರದಲ್ಲಿರುವ ಮಹಾರಾಷ್ಟ್ರದಲ್ಲಿ 50,000 ಮಂದಿ ರೈತರು, ಅವರಲ್ಲಿ ಅತ್ಯಧಿಕ ಗಿರಿಜನ ರೈತರು ನಾಸಿಕ್‌ನಿಂದ ದೇಶದ ಆರ್ಥಿಕ ರಾಜಧಾನಿ ಮುಂಬೈವರೆಗೆ 180 ಕಿ.ಮೀ.ಗಳ ಪಾದಯಾತ್ರೆ ಮಾಡಿ ಅಲ್ಲಿ ಧರಣಿ ಮಾಡಿದರು.

ಚುನಾವಣೆ ಮುನ್ನ ಸರಕಾರ ಕೊಟ್ಟ ಸ್ವಾಮಿನಾಥನ್ ಕಮಿಟಿ ಶಿಫಾರಸುಗಳ ಜಾರಿ, ಬೆಂಬಲ ಬೆಲೆ, ಸಾಲಮನ್ನಾದಂಥ ಆಶ್ವಾಸನೆಗಳು ಜಾರಿ ಮಾಡುವ ತನಕ ಕದಲುವುದಿಲ್ಲ ಎಂದು ಪಟ್ಟು ಹಿಡಿದು ಕುಳಿತಾಗ ಸರಕಾರ ಇಳಿದು ಬರಬೇಕಾಯಿತು. ಸ್ವತಃ ಮುಖ್ಯಮಂತ್ರಿಯೇ ಲಿಖಿತ ವಾಗಿ ಆಶ್ವಾಸನೆ ಕೊಟ್ಟ ಬಳಿಕ ಮಾತ್ರವೇ ಇವರು ಶಾಂತರಾದರು. ಆದರೆ ಸರಕಾರ ಕೊಟ್ಟ ಆಶ್ವಾಸನೆಗೆ ಬೆಲೆಕೊಡದೆ ಹೋಗಿದ್ದರಿಂದ, ಕಳೆದ ಫೆಬ್ರವರಿ ತಿಂಗಳಲ್ಲಿ ಇವರು ಮತ್ತೊಂದು ಸಲ ಪಾದಯಾತ್ರೆ ಮಾಡಿದರು. ನವೆಂಬರ್ 29ರಂದು ದೇಶ ರಾಜಧಾನಿ ದಿಲ್ಲಿ ನಗರದಲ್ಲಿ ಪ್ರದರ್ಶನಕ್ಕೆ ಲಕ್ಷ ಮಂದಿಗೂ ಅಧಿಕ ರೈತರು ಸೇರಿಕೊಂಡರು. ಕೇಂದ್ರ ಸರಕಾರದ ಆದೇಶದಿಂದ ನಗರದ ಹೊರಗಡೆಯೇ ಪೊಲೀಸರು ಅವರನ್ನು ಅಡ್ಡ ಹಾಕಿದ್ದರಿಂದ ಇವರು ಅಲ್ಲೇ ಜಮಾಯಿಸಿದರು. ಕೊನೆಗೆ ಬೇರೆ ದಾರಿ ಇಲ್ಲದೇ ಮೋದಿ ಸರಕಾರ ಈ ರೈತರನ್ನು ದಿಲ್ಲಿ ನಗರದ ಒಳಗೆ ಅನುಮತಿಸಬೇಕಾಯಿತು. ಈ ರೈತರ ಬೇಡಿಕೆ ಸಹಾ ಬೆಂಬಲ ಬೆಲೆ, ಸಾಲ ಮನ್ನವೇ. ಇಂತಹ ಪ್ರತಿಭಟನಾ ಪ್ರದರ್ಶನಗಳು ಮಧ್ಯ ಪ್ರದೇಶ, ಉತ್ತರ ಪ್ರದೇಶ, ಪಂಜಾಬ್, ರ್ಯಾಣ, ತಮಿಳುನಾಡು, ಆಂಧ್ರಪ್ರದೇಶ, ತೆಲಂಗಾಣದಂತಹ ಅನೇಕ ರಾಜ್ಯಗಳಲ್ಲಿ ಜರುಗಿದವು.

ಹಿಂದೆ ಕೂಡಾ ಇಂತಹ ಪ್ರದರ್ಶನಗಳು ದೇಶದಲ್ಲಿ ಜರುಗಿದರೂ ಈಗ ಜರುಗುತ್ತಿರುವ ಪ್ರದರ್ಶನಗಳಿಗೆ ಒಂದು ಪ್ರತ್ಯೇಕತೆ ಇದೆ. ಈಗಿನ ಪ್ರದರ್ಶಗಳು ತುಂಬಾ ಛಲದಿಂದ ಹಾಗೂ ಹೇಗಾದರೂ ಪಡೆದುಕೊಳ್ಳಬೇಕಾದುದನ್ನು ಪಡೆದುಕೊಳ್ಳಲೇಬೇಕೆಂಬ ತಪಸ್ಸಿದೊಂದಿಗೆ ನಡೆಯುತ್ತಿದೆ. ರೈತರಲ್ಲಿ ಇಂದು ಏತಕ್ಕೆ ದಿಟ್ಟತನ ಬಂದಿದೆ ಎನ್ನುವುದು ಪರಿಶೀಲಿಸಬೇಕಾದ ಅಂಶ. ಈ ಕಾಲದಲ್ಲಿ ಬೆಳೆಗಳ ಇಳುವರಿಯಲ್ಲಿ ದೊಡ್ಡ ಬದಲಾವಣೆ ಬಂದಿದೆ. ಹಿಂದೆ ಆಹಾರ ಧಾನ್ಯಗಳು ಅಂದರೆ ಭತ್ತ, ಗೋಧಿ, ಸಿರಿಧಾನ್ಯಗಳಂತಹ ಬೆಳೆಗಳೇ ಹೆಚ್ಚಾಗಿ ಬೆಳೆಸಲಾಗುತ್ತಿತ್ತು. ಇಂದು ಅವುಗಳ ಸ್ಥಾನದಲ್ಲಿ ವಾಣಿಜ್ಯ ಬೆಳೆಗಳ ವ್ಯವಸಾಯ ತುಂಬಾ ಹೆಚ್ಚಿದೆ. ಆಹಾರ ಬೆಳೆಗಳನ್ನು ತಿನ್ನುವುದಕ್ಕೆ ಬೆಳೆಸುತ್ತಾರೆ. ಅದೇ ವಾಣಿಜ್ಯ ಬೆಳೆಗಳಾದರೆ ಮಾರಾಟಕ್ಕೆ ಬೆಳೆಸುತ್ತಾರೆ. ಆಹಾರದ ಬೆಳೆಗಳು ಮಾರಾಟವಾಗದೇ ಹೋದರೆ ರೈತ ಕುಟುಂಬ ಸದಸ್ಯರೇ ತಿನ್ನಬಹುದು. ಹಸಿವಿನಿಂದ ಇರಬೇಕಾದ ಪರಿಸ್ಥಿತಿ ಬಾರದು. ಅದೇ ವಾಣಿಜ್ಯ ಬೆಳೆಗಳಾದರೆ ಮಾರದೇ ಹೋದರೆ ಉಪಯೋಗವಾಗುವುದಿಲ್ಲ.

1990ರ ದಶಕದಿಂದ ಸರಳೀಕರಣ ವಿಧಾನಗಳು ನಮ್ಮ ದೇಶದಲ್ಲಿ ಜಾರಿಯಾಗುವುದು ಆರಂಭವಾದ ಬಳಿಕ, ಆಹಾರಧಾನ್ಯಗಳ ಉತ್ಪಾದನೆ ಸ್ಥಾನದಲ್ಲಿ ವಾಣಿಜ್ಯ ಬೆಳೆಗಳನ್ನು ಸರಕಾರವೇ ಪ್ರೋತ್ಸಾಹಿಸಿತು. ಉದಾಹರಣೆಗೆ ದೇಶದಲ್ಲಿ ಭತ್ತದ ಬೆಳೆ 2014ರಲ್ಲಿ 44.14 ಮಿಲಿಯನ್ ಹೆಕ್ಟೇರ್ ಬೆಳೆಯುತ್ತಿದ್ದರೆ, 2017ಕ್ಕೆಲ್ಲ್ಲ 43.19 ಮಿಲಿಯನ್ ಹೆಕ್ಟೇರ್‌ಗಳಿಗೆ ಕುಗ್ಗಿ ಹೋಯಿತು. ಒಂದೊಮ್ಮೆ ಧಾನ್ಯ ಭಂಡಾರಗಳೆಂದು ಹೆಸರಾಗಿದ್ದ ಗೋದಾವರಿ, ಕೃಷ್ಣಾ, ನೆಲ್ಲೂರು ಜಿಲ್ಲೆಗಳಲ್ಲಿ ಭತ್ತದ ಬೆಳೆಯ ಜಾಗದಲ್ಲಿ ಮೀನು ಸಾಕಣೆ ಅತ್ಯಧಿಕವಾಗಿ ಹೆಚ್ಚಿತು. ವಾಣಿಜ್ಯ ಬೆಳೆಗಳಿಂದ ಲಾಭಗಳು ಎಷ್ಟೆಲ್ಲಾ ಬರುತ್ತವೆಯೋ ಸಕಾಲದಲ್ಲಿ ಮಾರಾಟವಾಗದೆ ಹೋದರೆ ನಷ್ಟಗಳು ಸಹ ಅದಕ್ಕಿಂತ ವಿಪರೀತವಾಗಿಯೇ ಬರುತ್ತವೆ.

ಈ ಬೆಳೆಗಳನ್ನು ಪ್ರೋತ್ಸಾಹಿಸಿದ ಸರಕಾರಗಳು ಕನಿಷ್ಠ ಬೆಂಬಲ ಬೆಲೆ ಕೊಡುವುದಕ್ಕೆ ಮಾತ್ರ ನಿರಾಕರಿಸುತ್ತವೆ. ಇದೇ ಕಾಲದಲ್ಲಿ ಸರಕಾರ ಸಾಲಸೌಲಭ್ಯವನ್ನು ಕ್ರಮೇಣ ತಗ್ಗಿಸಲು ಮೊದಲಿಟ್ಟಿತು. ಇದರಿಂದ ರೈತರು ಬಂಡವಾಳಕ್ಕಾಗಿ ಬಡ್ಡಿ ವ್ಯಾಪಾರಸ್ಥರ ಬಳಿ ಹೆಚ್ಚಿನ ಬಡ್ಡಿಗೆ ಸಾಲ ಮಾಡಬೇಕಾಯಿತು. ಹೀಗೆ ಒಂದು ಕಡೆ ಸಾಲದ ಬಾಯಿಗೆ ಬೀಳುವುದು ಮತ್ತೊಂದು ಕಡೆ ಬೆಳೆದ ಬೆಳೆಗಳಿಗೆ ಗಿಟ್ಟುವ ದರ ಬಾರದೇ ಹೋಗುವುದರಿಂದ ಎತ್ತಲೂ ಹೋಗಲಾಗದ ಸ್ಥಿತಿಯಲ್ಲಿ ರೈತರು ತೀವ್ರ ನಿರಾಸೆಯಲ್ಲಿದ್ದಾರೆ.

ಸಾಲಗಳ ಸಂಕಟ ತಾಳಲಾರದೇ ಎರಡು ದಶಕಗಳ ಕಾಲಘಟ್ಟದಲ್ಲಿ ದೇಶದ ಮೂರು ಲಕ್ಷಗಳಿಗಿಂತ ಹೆಚ್ಚಿನ ರೈತರು ಆತ್ಮಹತ್ಯೆ ಮಾಡಿಕೊಂಡರೆಂದು ನ್ಯಾಷನಲ್ ಕ್ರೈಂ ಬ್ಯೂರೋ ತಿಳಿಸಿದೆ. ಮೋದಿ ಸರಕಾರ ಅಧಿಕಾರ ಹಿಡಿದ ಬಳಿಕ ಆತ್ಮಹತ್ಯೆಗಳು ಶೇ. 40ರಷ್ಟು ಹೆಚ್ಚಿ ದವು. ಮಹಾರಾಷ್ಟ್ರದಲ್ಲಿ 2017 ಜನವರಿಯಿಂದ ಅಕ್ಟೋಬರ್ ಮಧ್ಯೆ 10 ತಿಂಗಳಕಾಲದಲ್ಲಿ 2,414 ಮಂದಿ ರೈತರು. ಅಂದರೆ ಪ್ರತಿದಿನ ಎಂಟು ಮಂದಿ ರೈತರು ಆತ್ಮಹತ್ಯೆ ಮಾಡಿಕೊಂಡಿದ್ದು ಸಂಕಷ್ಟದ ತೀವ್ರತೆಗೆ ಕನ್ನಡಿ ಹಿಡಿಯುತ್ತದೆ. ಆಸಕ್ತಿಕರವಾದ ವಿಷಯ ಏನೆಂದರೆ ಈ ಆತ್ಮಹತ್ಯೆಗಳಿಗೆ ಇರುವ ಕಾರಣಗಳ ಪರಿಶೀಲಿಸಿ, ಪರಿಹಾರವನ್ನು ಕಂಡುಕೊಳ್ಳಬೇಕಾದ ಕೇಂದ್ರ ಸರಕಾರ, ಕಳೆದ ಎರಡು ವರ್ಷಗಳಿಂದ ಆ ಕೆಲಸ ಮಾಡುವುದು ಹಾಗಿರಲಿ ಎರಡು ವರ್ಷಗಳಿಂದ ಆತ್ಮಹತ್ಯೆಗಳ ವಿವರಗಳನ್ನು ತಿಳಿಯುವುದಕ್ಕೇ ಹೋಗಿಲ್ಲ. ಈ ಕಾಲದಲ್ಲಿ ವ್ಯವಸಾಯದ ಖರ್ಚು ಕೂಡಾ ತುಂಬಾ ಹೆಚ್ಚಿದೆ. ಉದಾಹರಣೆಗೆ 2003ರಲ್ಲಿ ಒಂದು ಎಕರೆ ಭೂಮಿಯಲ್ಲಿ ಹತ್ತಿ ಬೆಳೆಯುವುದಕ್ಕೆ 10-12 ಸಾವಿರ ರೂ.ಗಳು ಖರ್ಚಾದರೆ ಇಂದು ಅದು 40-45 ಸಾವಿರಗಳಾಗುತ್ತವೆ. ಇದರರ್ಥ ಮೋದಿ ಆಶ್ವಾಸನೆ ಕೊಟ್ಟ ಆದಾಯ ಇಮ್ಮಡಿ ಆಗವುದು ಕನಸಿನ ಮಾತಾದರೂ, ಖರ್ಚು ಮಾತ್ರ ನಾಲ್ಕು ಪಟ್ಟು ಬೆಳೆದಿದೆ. ಈ ಕಾರಣಗಳಿಂದ ವ್ಯವಸಾಯ ಮಾಡುವ ರೈತರ ಸಂಖ್ಯೆ ತಗ್ಗುತ್ತಿದೆ. ರಾಷ್ಟ್ರೀಯ ಜನಸಂಖ್ಯಾ ವಿವರಗಳ ಪ್ರಕಾರ 1991ರ ಬಳಿಕ ಎರಡು ದಶಕಗಳಲ್ಲಿ ಒಂದೂವರೆ ಕೋಟಿ ರೈತರು ವ್ಯವಸಾಯದಿಂದ ವಿಮುಖರಾಗಿದ್ದಾರೆ. ಅವಕಾಶ ಸಿಕ್ಕರೆ ವ್ಯವಸಾಯವನ್ನು ಬಿಟ್ಟು ಇತರ ಕೆಲಸಗಳಿಗೆ ಹೋಗುತ್ತೇವೆ ಎನ್ನುತ್ತಾರೆ ಶೇ. 76 ಮಂದಿ ರೈತರು.

ಕೇಂದ್ರ ಸರಕಾರ ನೈಜಕಾರಣಗಳನ್ನು ತಿಳಿಯುವ ಗೊಡವೆಗೇ ಹೋಗದೆ, ರೈತರಿಗೆ ಚುನಾವಣಾ ಪ್ರಸಾದ ಕೊಟ್ಟು ಸುಮ್ಮನಾಗಿಸಲು ನೋಡುತ್ತಿದೆ. ಕೇಂದ್ರ ಸರಕಾರ ಹೊಸದಾಗಿ ರೈತರಿಗೆ ವರ್ಷಕ್ಕೆ 6,000ರೂ.ಗಳ ಬಂಡವಾಳ ನೆರವನ್ನು ರೈತರ ಬ್ಯಾಂಕ್ ಅಕೌಂಟ್‌ಗೆ ನೇರವಾಗಿ ಮೂರು ಹಂತಗಳಲ್ಲಿ ವರ್ಗಾಯಿಸುತ್ತೇವೆ ಎಂದು ತಿಳಿಸಿತು. ಅನೇಕ ರಾಜ್ಯ ಸರಕಾರಗಳು ಇಂದು ಚುನಾವಣೆ ವೇಳೆ ಇಂತಹ ಆಶ್ವಾಸನೆಗಳನ್ನೇ ಕೊಡುತ್ತಿವೆ.
ಆದರೆ ಕೇಂದ್ರ ಸರಕಾರ ರೈತರು ಬಯಸುವ ಬೆಂಬಲ ಬೆಲೆ ಕುರಿತು ಏತಕ್ಕೆ ಮಾತಾಡುವುದಿಲ್ಲ ಎನ್ನುವುದೇ ಇಲ್ಲಿ ಅಸಲು ಪ್ರಶ್ನೆ.

ರೈತರ ಆದಾಯಗಳು ಹೆಚ್ಚುವ ಈ ಕ್ರಮಕ್ಕೆ ಸರಕಾರ ನಿರಾಕರಿಸುತ್ತಾ, ಕಣ್ಣೊರೆಸುವ ಕ್ರಮದಡಿ ಚುನಾವಣಾ ಪ್ರಸಾದ ಹಂಚಿದರೆ ರೈತರ ಕಷ್ಟಗಳು ತೀರವು ಎನ್ನುವುದು ಕನಿಷ್ಠ ಪರಿಜ್ಞಾನ ಇರುವ ಯಾರಿಗಾದರೂ ಅರ್ಥವಾಗುತ್ತದೆ. ಆದರೆ ನಮ್ಮ ಪ್ರಭುಗಳ ತಲೆಯೊಳಗೆ ಮಾತ್ರ ಈ ವಿಷಯ ಹೋಗುತ್ತಿಲ್ಲ. ಕನಿಷ್ಠ ಬೆಂಬಲ ಬೆಲೆ ಇಲ್ಲದೆ ಹೋದುದರಿಂದ ರೈತರು ಖಾಸಗಿ ವ್ಯಾಪಾರಸ್ಥರು ಹೇಳಿದ ಬೆಲೆಗೆ ತಮ್ಮ ಬೆಳೆಗಳನ್ನು ಮಾರಿ ಕೈ ತೊಳೆದುಕೊಳ್ಳುವ ದುಃಸ್ಥಿತಿ ನೆಲೆಗೊಂಡಿದೆ. ದೇಶದಲ್ಲಿ ತನ್ನ ಉತ್ಪತ್ತಿ ದರಗಳನ್ನು ತಾನು ನಿರ್ಣಯಿಸಲಾಗದ ಏಕೈಕ ವ್ಯಕ್ತಿ ರೈತನೊಬ್ಬನೇ. ಕೇಂದ್ರ ಸರಕಾರದ ಈ ವಿಧಾನ ವ್ಯಾಪಾರಸ್ಥರಿಗೆ ರೈತರನ್ನು ಬಲಿಪಶುಗಳಾಗಿಸುತ್ತಿದೆ.

ಪ್ರಮುಖ ವ್ಯವಸಾಯ ಶಾಸ್ತ್ರಜ್ಞ ಎಂ.ಎಸ್. ಸ್ವಾಮಿನಾಥನ್ ತಮ್ಮ ವರದಿಯನ್ನು ಪಾರ್ಲಿಮೆಂಟಿಗೆ ಸಮರ್ಪಿಸಿ 13 ವರ್ಷಗಳಾದವು. ವ್ಯವಸಾಯ ಉತ್ಪತ್ತಿಗೆ ಆಗುವ ಖರ್ಚಿಗೆ ಶೇ. 50 ಸೇರಿಸಿ ಕನಿಷ್ಠ ಬೆಂಬಲ ಬೆಲೆ ನಿರ್ಣಯಿಸ ಬೇಕೆನ್ನುವುದು ಅವರ ಶಿಫಾರಸು. ಸಾಮಾನ್ಯ ಬಡ್ಡಿ ಶೇ. 4ಕ್ಕೆ ಸರಕಾರದ ಸಹಾಯದಿಂದ ಸಾಲ ಕೊಡುವುದು, ಕ್ಷಾಮ, ಪ್ರಕೃತಿ ವೈಪರೀತ್ಯಗಳಂಥ ಸಂದರ್ಭಗಳಲ್ಲಿ ಸಾಲಗಳ ವಸೂಲಿ ಮೇಲೆ ನಿಷೇಧ ವಿಧಿಸುವುದು, ಬಂಜರು ಭೂಮಿಗಳನ್ನು ರೈತರಿಗೆ ಹಂಚುವುದು, ವ್ಯವಸಾಯ ಭೂಮಿಯನ್ನು ವ್ಯವಸಾಯೇತರ ಅಗತ್ಯಗಳಿಗೆ ಬಳಸಕೂಡದು ಎಂದು, ಸಾಗುವಳಿಗಾಗಿ ನೀರಿನ ಸೌಕರ್ಯಗಳನ್ನು ಕಲ್ಪಿಸುವಂತೆ ನೀರಿನ ಪ್ರಾಜೆಕ್ಟ್‌ಗಳ ನಿರ್ಮಾಣಕ್ಕೆ ಸರಕಾರದ ಖರ್ಚುನ್ನು ಹೆಚ್ಚಿಸುವುದರಂತಹ ಶಿಫಾರಸು ಇತ್ಯಾದಿ ಯಾವುದನ್ನೂ ಸರಕಾರ ಇದುವರೆಗೂ ಜಾರಿ ಮಾಡದೇ ವಿಫಲವಾಗಿರುವುದೇ- ಇಂದಿನ ವ್ಯವಸಾಯ ಸಂಕ್ಷೋಭೆೆಗೆ ಕಾರಣ.

ಸರಳೀಕರಣ ವಿಧಾನಗಳ ಜಾರಿಯಿಂದ ಸಂಕ್ಷೇಮದ ಜಾಗದಲ್ಲಿ ಮಾರ್ಕೆಟ್ ಶಕ್ತಿಗಳು ಪ್ರವೇಶಿಸಿವೆ. ಪರಿಣಾಮವಾಗಿ ವ್ಯವಸಾಯರಂಗ ತೀವ್ರ ಸಂಕ್ಷೋಭೆಯೊಳಗೆ ತಳ್ಳಲ್ಪಟ್ಟಿದೆ. ದೇಶದ ಸ್ಥೂಲ ರಾಷ್ಟ್ರೀಯ ಉತ್ಪತ್ತಿಯಲ್ಲಿ ವ್ಯವಸಾಯರಂಗದ ಪಾಲು 1991ರಲ್ಲಿ ಶೇ. 33 ಇದ್ದು, ಅದು 2017ಕ್ಕೆ ಶೇ.18ಕ್ಕೆ ಬಿದ್ದುಹೋಯಿತು. ಆತ್ಮ ಹತ್ಯೆಗಳು, ಹಸಿವಿನ ಸಾವುಗಳು, ತೀವ್ರ ಬಡತನ, ಪೌಷ್ಟಿಕಾಹಾರ ಲೋಪ, ಅನಕ್ಷರತೆಯಂಥ ಅನೇಕ ಸಾಮಾಜಿಕ ರೋಗಗಳಿಗೆ ಇದೇ ಕಾರಣ. ‘ಜೈ ಜವಾನ್, ಜೈ ಕಿಸಾನ್’ ಎಂದು ದಿ. ಪ್ರಧಾನಿ ಲಾಲ್ ಬಹದ್ದೂರ್ ಶಾಸ್ತ್ರಿ ಘೋಷಿಸಿದರು. ಒಬ್ಬರು ಬಂದೂಕು ಹಿಡಿದು ದೇಶವನ್ನು ರಕ್ಷಿಸುತ್ತಿದ್ದರೆ, ಮತ್ತೊಬ್ಬರು ನೇಗಿಲು ಹಿಡಿದು ದೇಶದ ಪ್ರಜೆಗಳಿಗೆ ಆಹಾರ ಒದಗಿಸುತ್ತಿದ್ದಾರೆ. ಗಡಿಯಲ್ಲಿ ನಮ್ಮ ಸೈನಿಕನನ್ನು ಕೊಂದವರನ್ನು ಶತ್ರುಗಳೆಂದು ನೋಡುತ್ತಿರುವ ನಾವು ಇಷ್ಟು ಮಂದಿ ರೈತರ ಆತ್ಮಹತ್ಯೆಗಳಿಗೆ ಕಾರಣವಾಗುತ್ತಿರುವ ಮೋದಿ ಸರಕಾರವನ್ನು ಏನೆನ್ನಬೇಕು?

 ದೇಶದ ಆರ್ಥಿಕ ವ್ಯವಸ್ಥೆಗೆ ಬೆನ್ನಲುಬಾಗಿ ನಿಲ್ಲುವ ವ್ಯವಸಾಯರಂಗ, ರೈತರ ಪರಿಸ್ಥಿತಿಗಳ ಮೇಲೆ ಭಾರತದ ಪಾರ್ಲಿಮೆಂಟ್ ಕನಿಷ್ಠ ಮೂರು ವಾರಗಳು ವಿವಿಧ ಅಂಶಗಳ ಮೇಲೆ ಚರ್ಚಿಸ ಬೇಕೆಂಬುದು ರೈತರ ಹಕ್ಕೊತ್ತಾಯ. ಪ್ರಜಾಪ್ರಭುತ್ವ ದೇಶ ಎಂದು ಹೇಳಿಕೊಳ್ಳುವ ನಮ್ಮ ಆಳುವವರಿಗೆ ಪ್ರಜೆಗಳಿಗೆ ಅನ್ನ ಇಡುವ ರೈತರ ಕುರಿತು ಚರ್ಚಿಸಲು ಬಿಡುವು ಇಲ್ಲದೆ ಹೋಗುವುದು ದುರಂತ. ಬರುವ ಚುನಾವಣೆಗಳಲ್ಲಿ ಹೇಗಾದರೂ ಗೆಲ್ಲುವುದೇ ಗುರಿ ಹೊರತು, ದೇಶದ ಹಿತಾಸಕ್ತಿಗಳು ನಮಗೆ ಅಗತ್ಯ ಇಲ್ಲವೆಂಬ ಪ್ರಜಾಪ್ರತಿನಿಧಿಗಳ ವಿಧಾನಗಳಲ್ಲಿ ಬದಲಾವಣೆ ಬಂದರೆ ಮಾತ್ರ ದೇಶಕ್ಕೆ ಉಜ್ವಲ ಭವಿಷ್ಯ ಇರುವುದು ಸಾಧ್ಯ.


ಕೃಪೆ: ಆಂಧ್ರಜ್ಯೋತಿ

Writer - ಎ. ಅಜ ಶರ್ಮ, ಅನು: ಕಸ್ತೂರಿ

contributor

Editor - ಎ. ಅಜ ಶರ್ಮ, ಅನು: ಕಸ್ತೂರಿ

contributor

Similar News