ವೋಟರ್ ಐಡಿ ಪತ್ತೆ ಪ್ರಕರಣ: ದೂರುದಾರರಿಗೆ ಭದ್ರತೆ ನೀಡದ್ದಕ್ಕೆ ಪೊಲೀಸ್ ಆಯುಕ್ತರ ವಿರುದ್ಧ ಹೈಕೋರ್ಟ್ ಅಸಮಾಧಾನ

Update: 2019-04-24 17:02 GMT

ಬೆಂಗಳೂರು, ಎ.24: ಆರ್‌ಆರ್ ನಗರ ವಿಧಾನಸಭಾ ಕ್ಷೇತ್ರದಲ್ಲಿ ವೋಟರ್ ಐಡಿ ಪತ್ತೆ ಪ್ರಕರಣಕ್ಕೆ ಸಂಬಂಧಿಸಿದಂತೆ ದೂರುದಾರ ರಾಕೇಶ್‌ಗೆ ಭದ್ರತೆ ನೀಡದ ಹಿನ್ನೆಲೆಯಲ್ಲಿ ಹೈಕೋರ್ಟ್ ನಗರ ಪೊಲೀಸ್ ಆಯುಕ್ತ ಟಿ.ಸುನೀಲ್‌ ಕುಮಾರ್ ವಿರುದ್ಧ ತೀವ್ರ ಅಸಮಾಧಾನ ವ್ಯಕ್ತಪಡಿಸಿದೆ.

ದೂರುದಾರ ರಾಕೇಶ್ ಭದ್ರತೆ ಕೋರಿ ಹೈಕೋರ್ಟ್‌ಗೆ ಮಧ್ಯಂತರ ಅರ್ಜಿ ಸಲ್ಲಿಸಿದ್ದರು. ನ್ಯಾಯಮೂರ್ತಿ ಅರವಿಂದ್‌ಕುಮಾರ್ ಅವರಿದ್ದ ನ್ಯಾಯಪೀಠವು ರಾಕೇಶ್ ಹಾಗೂ ಅವರ ಕುಟುಂಬಕ್ಕೆ ಭದ್ರತೆ ನೀಡಲು ನಗರ ಪೊಲೀಸ್ ಆಯುಕ್ತರಿಗೆ ಸೂಚನೆ ನೀಡಿತ್ತು. ಆದರೆ, 15 ದಿನಗಳಾದರೂ ಭದ್ರತೆ ನೀಡದ ಹಿನ್ನೆಲೆಯಲ್ಲಿ ಅರ್ಜಿದಾರರ ಪರ ವಕೀಲರು ನ್ಯಾಯಪೀಠದ ಗಮನಕ್ಕೆ ತಂದರು. ನ್ಯಾಯಪೀಠವು ಇಂದೆ ರಾಕೇಶ್‌ಗೆ ಸಶಸ್ತ್ರ ಹೊಂದಿದ ಭದ್ರತಾ ಸಿಬ್ಬಂದಿಯಿಂದ ಭದ್ರತೆ ನೀಡಬೇಕು. ಹಾಗೂ ಭದ್ರತೆ ನೀಡಿದ ವರದಿಯನ್ನು ನ್ಯಾಯಪೀಠಕ್ಕೆ ಸಲ್ಲಿಸುವಂತೆ ಸೂಚನೆ ನೀಡಿತು. ಹಾಗೊಂದು ಬಾರಿ ಭದ್ರತೆ ನೀಡಲು ವಿಫಲವಾದರೆ ಆಯುಕ್ತರೆ ಖುದ್ದು ವಿಚಾರಣೆಗೆ ಹಾಜರಾಗಲು ಎಚ್ಚರಿಕೆ ನೀಡಿದೆ.

ಎಸಿಪಿ ಮೇಲೆ ಜೀವ ಬೆದರಿಕೆ ಆರೋಪ: ಪ್ರಕರಣ ಸಂಬಂಧ ಯಶವಂತಪುರ ಎಸಿಪಿ ರವಿಪ್ರಸಾದ್ ಮತ್ತು ರೈಟರ್ ಜೀವ ಬೆದರಿಕೆ ಹಾಕಿದ್ದಾರೆ ಎಂದು ದೂರುದಾರ ರಾಕೇಶ್ ಆರೋಪಿಸಿದ್ದಾರೆ. ಸಿಬಿಐ ತನಿಖೆಗೆ ಕೋರಿರುವ ಅರ್ಜಿ ವಾಪಸ್ಸು ಪಡೆಯುವಂತೆ ಎಸಿಪಿ ರವಿಪ್ರಸಾದ್ ಅವರೇ ಖುದ್ದು ಕರೆ ಮಾಡಿ ಜೀವ ಬೆದರಿಕೆ ಹಾಕಿದ್ದಾರೆ ಎಂದು ಆರೋಪಿಸಿದ್ದಾರೆ.

ಮಾ.19ರಂದು ಸಿಟಿ ಸಿವಿಲ್ ಕೋರ್ಟ್ ಶೌಚಾಲಯದಲ್ಲಿ ಜೀವ ಬೆದರಿಕೆ ಹಾಕಿದ್ದರಂತೆ. ನೀನೆ ಸಾಕ್ಷಿಗಳ ಕರೆತರದಿದ್ದರೆ ನಾನ್ ಬೆಲಬಲ್ ಕೇಸ್ ಬೀಳುತ್ತೆ. ಮುನಿರತ್ನ ಸಾಹೇಬರನ್ನು ಹೆದರಿಸುವ ತಾಕತ್ತು ಇದೆಯಾ ನಿಂಗೆ. ಎಂಥೆಂತಾ ಕೇಸ್‌ಗಳೆಲ್ಲಾ ಏನೇನೋ ಆಗಿ ಹೋದವು. ಅವರ ಶಕ್ತಿ ಗೊತ್ತಿದ್ದೂ ಇದೆಲ್ಲಾ ಬೇಕೇನೋ ನಿಂಗೆ. ಬಿಬಿಎಂಪಿಯ ಖಡತಗಳೆಲ್ಲಾ ಅವರ ಮನೆಯಲ್ಲಿ ಸಿಕ್ಕಿದ್ದರೂ ಏನೂ ಮಾಡೋಕೆ ಆಗಲಿಲ್ಲ. ಸದ್ಯದಲ್ಲೇ ಅವರು ಸಚಿವರಾಗುತ್ತಾರೆ. ಮುಂದೆ ಅವರು ಗೃಹ ಸಚಿವರೂ ಆಗಬಹುದು. ಅವರನ್ನ ಎದುರು ಹಾಕಿಕೊಂಡು ನೀನಗೆ ಬದುಕಲು ಆಗುತ್ತದೆಯಾ ಎಂಬ ಜೀವ ಬೆದರಿಕೆ ಹಾಕಿದ್ದಾರೆ ಎಂದು ರಾಕೇಶ್ ಆರೋಪಿಸಿದ್ದರು. ನಂತರ ಈ ಸಂಬಂಧ ನಗರ ಪೊಲೀಸ್ ಆಯುಕ್ತರಿಗೆ ದೂರು ನೀಡಿದ್ದರು. ಆದರೆ, ನಗರ ಪೊಲೀಸ್ ಆಯುಕ್ತ ಟಿ.ಸುನೀಲ್ ಕುಮಾರ್ ಯಾವುದೇ ಕ್ರಮ ತೆಗೆದುಕೊಳ್ಳದ ಹಿನ್ನೆಲೆಯಲ್ಲಿ ಭದ್ರತೆ ಕೋರಿ ಹೈಕೋರ್ಟ್ ಮೆಟ್ಟಿಲೇರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News