ಉಮ್ರ ಡೆವಲಪರ್ಸ್ ಕಚೇರಿ ಮೇಲೆ ಸಿಸಿಬಿ ದಾಳಿ: ಮಾಲಕ ಯುಸೂಫ್ ಶರೀಫ್ ಬಂಧನ

Update: 2019-04-24 17:04 GMT

ಬೆಂಗಳೂರು, ಎ.24: ವಸತಿ ಸಮುಚ್ಚಯ ನಿರ್ಮಾಣಕ್ಕೆ ಭೂಮಿ ನೀಡುವುದಾಗಿ ಹಣ ಪಡೆದು ಮೋಸ ಮಾಡಿದ್ದ ಆರೋಪದಡಿ ಉಮ್ರಾ ಡೆವಲಪರ್ಸ್ ಮಾಲಕನ ಮನೆ ಮತ್ತು ಕಚೇರಿ ಮೇಲೆ ದಾಳಿ ನಡೆಸಿದ ಸಿಸಿಬಿ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ.

ಉಮ್ರ ಡೆವಲಪರ್ಸ್ ಮಾಲಕ ಯುಸೂಫ್ ಶರೀಫ್ ಯಾನೆ ಸ್ಕ್ರಾಪ್ ಬಾಬು ಬಂಧಿತ ಆರೋಪಿಯಾಗಿದ್ದು, ಕೋಟ್ಯಂತರ ರೂಪಾಯಿ ಬೆಲೆಬಾಳುವ ಸರಕಾರಿ ಸೊತ್ತುಗಳಿಗೆ ಸಂಬಂಧಪಟ್ಟ ದಾಖಲಾತಿಗಳನ್ನು ಜಪ್ತಿ ಮಾಡಿದ್ದಾರೆ.

2011ನೇ ಸಾಲಿನಲ್ಲಿ ಇಂದ್ರಪ್ರಸ್ಥ ಶೆಲ್ಟರ್ಸ್ ಪ್ರೈವೇಟ್ ಲಿಮಿಟೆಡ್ ಕಂಪೆನಿಗೆ 7 ಕೋಟಿ ರೂ. ಮೋಸ ಮಾಡಿದ ಆರೋಪ ಬಾಬು ಮೇಲಿತ್ತು. ಅಲ್ಲದೇ ವಸತಿ ಸಮುಚ್ಚಯ ನಿರ್ಮಾಣಕ್ಕೆ ಭೂಮಿ ನೀಡುವುದಾಗಿ ಹಣ ಪಡೆದು ಮೋಸ ಮಾಡಿ ಭೂಮಿಯನ್ನು ಬೇರೆಯವರಿಗೆ ನೀಡಿದ್ದ. ಈ ಸಂಬಂಧ ಅಶೋಕನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು ಎಂದು ತಿಳಿದುಬಂದಿದೆ.

ನಂತರ ಈ ಪ್ರಕರಣವನ್ನು ಸಿಸಿಬಿಗೆ ವರ್ಗಾವಣೆಯಾಗಿತ್ತು. ಆ ಹಿನ್ನೆಲೆಯಲ್ಲಿ ಯೂಸೂಫ್ ಶರೀಫ್ ಮನೆ ಹಾಗೂ ಕಚೇರಿ ಮೇಲೆ ದಾಳಿ ಮಾಡಿ ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಈ ವೇಳೆ ಕೋಟ್ಯಂತರ ರೂಪಾಯಿ ಬೆಲೆಯ ಸರಕಾರಿ ಭೂ ದಾಖಲೆಗಳನ್ನು ವಶಕ್ಕೆ ಪಡೆದಿದ್ದಾರೆ.

ಆರೋಪಿ ವಿರುದ್ಧ ನಗರದ ವಿವಿಧ ಠಾಣೆಗಳಲ್ಲಿ ಪ್ರಕರಣಗಳು ದಾಖಲಾಗಿವೆ. ಅಷ್ಟೆ ಅಲ್ಲದೇ ಕೆಲ ದಿನಗಳ ಹಿಂದೆ ಐಟಿ ಅಧಿಕಾರಿಗಳು ಸಹ ಬಾಬು ಮನೆ ಮೇಲೆ ದಾಳಿ ಮಾಡಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News