ಉಪ ಚುನಾವಣೆ ಬಗ್ಗೆ ಬಿಜೆಪಿ ಕೋರ್ ಕಮಿಟಿ ಸಭೆಯಲ್ಲಿ ಚರ್ಚೆ: ಅರವಿಂದ ಲಿಂಬಾವಳಿ

Update: 2019-04-24 17:11 GMT

ಬೆಂಗಳೂರು, ಎ.24: ಕುಂದಗೋಳ ಹಾಗೂ ಚಿಂಚೋಳಿ ವಿಧಾನಸಭಾ ಕ್ಷೇತ್ರಗಳಿಗೆ ಮೇ 19ರಂದು ನಡೆಯಲಿರುವ ಉಪ ಚುನಾವಣೆಗೆ ಅಭ್ಯರ್ಥಿಗಳನ್ನು ಆಯ್ಕೆ ಮಾಡುವ ಸಂಬಂಧ ಎ.25ರಂದು ಬಿಜೆಪಿ ಕೋರ್ ಕಮಿಟಿ ಸಭೆಯಲ್ಲಿ ಚರ್ಚೆ ನಡೆಸಲಾಗುವುದು ಎಂದು ರಾಜ್ಯ ಬಿಜೆಪಿ ಪ್ರಧಾನ ಕಾರ್ಯದರ್ಶಿ ಅರವಿಂದ ಲಿಂಬಾವಳಿ ತಿಳಿಸಿದರು.

ಬುಧವಾರ ನಗರದಲ್ಲಿರುವ ಬಿಜೆಪಿ ಮಾಧ್ಯಮ ಕೇಂದ್ರದಲ್ಲಿ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ಇದೇ ವೇಳೆ ಸಂಬಂಧಪಟ್ಟ ಜಿಲ್ಲೆಗಳ ಮುಖಂಡರ ಜೊತೆಯೂ ಚರ್ಚಿಸಲಾಗುವುದು. ಹೆಸರುಗಳನ್ನು ಅಂತಿಮ ಒಪ್ಪಿಗೆಗಾಗಿ ಕೇಂದ್ರ ಚುನಾವಣಾ ಸಮಿತಿಗೆ ಶಿಫಾರಸ್ಸು ಮಾಡಲಾಗುವುದು ಎಂದರು.

ಈ ಬಾರಿಯ ಚುನಾವಣೆಯಲ್ಲಿ ಬೆಂಗಳೂರು ಸೇರಿ ಅನೇಕ ಕಡೆ ಮತದಾರರ ಪಟ್ಟಿಯಿಂದ ಕೊನೆಗಳಿಗೆಯಲ್ಲಿ ಅನೇಕರ ಹೆಸರುಗಳನ್ನು ತೆಗೆದು ಹಾಕಲಾಗಿದೆ. ಮತದಾರರ ಪಟ್ಟಿಯಲ್ಲಿ ಹೆಸರು ಇದ್ದರೂ, ಚುನಾವಣಾಧಿಕಾರಿ ಬಳಿ ಇರುವ ಪಟ್ಟಿಯಲ್ಲಿ ಹೆಸರು ತೆಗೆದು ಹಾಕಲಾಗಿದೆ. ಇದೊಂದು ಗಂಭೀರ ವಿಷಯವಾಗಿದ್ದು, ಈ ಸಂಬಂಧ ತನಿಖೆ ನಡೆಸಲು ಕೇಂದ್ರ ಚುನಾವಣಾ ಆಯೋಗಕ್ಕೆ ದೂರು ಸಲ್ಲಿಸಲಾಗುವುದು ಎಂದು ಅವರು ಹೇಳಿದರು.

ರಾಜ್ಯದಲ್ಲಿ ನಿನ್ನೆ ಕೊನೆಗೊಂಡ ಎರಡನೆ ಹಂತದ ಲೋಕಸಭಾ ಚುನಾವಣೆಯಲ್ಲಿ ಶೇ.68.45ರಷ್ಟು ಮತದಾನವಾಗಿದೆ. ಪ್ರಜಾಪ್ರಭುತ್ವದ ಉತ್ಸವದಲ್ಲಿ ಪಾಲ್ಗೊಂಡ ಮತದಾರರಿಗೆ ಬಿಜೆಪಿ ಕೃತಜ್ಞತೆಗಳನ್ನು ಸಲ್ಲಿಸುತ್ತದೆ. ಈ ಚುನಾವಣೆಯಲ್ಲಿ ಬಿಜೆಪಿ ಕನಿಷ್ಠ 22 ಸ್ಥಾನ ಗೆಲ್ಲುವುದು ನಿಶ್ಚಿತ ಎಂದು ಅರವಿಂದ ಲಿಂಬಾವಳಿ ವಿಶ್ವಾಸ ವ್ಯಕ್ತಪಡಿಸಿದರು.

ಸಾಮಾಜಿಕ ಮಾಧ್ಯಮದಲ್ಲಿ ಮೋದಿ ಪರ ಒಲವು ತೋರಿ, ಎಂ.ಬಿ.ಪಾಟೀಲ್ ಸೋನಿಯಾಗಾಂಧಿಗೆ ಬರೆದಿರುವ ಪತ್ರದ ಬಗ್ಗೆ ಪ್ರಸ್ತಾಪಿಸಿದ್ದ ಮಹೇಶ್ ಹೆಗ್ಡೆ ಎಂಬುವವರನ್ನು ಸಿಒಡಿ ಪೊಲೀಸರು ಬಂಧಿಸಿದ್ದಾರೆ. ಮಂಡ್ಯದಲ್ಲಿ ಜೆಡಿಎಸ್ ವಿರುದ್ಧ ಕೆಲಸ ಮಾಡಿದವರಿಗೆ ಕಿರುಕುಳ ನೀಡಲಾಗುತ್ತಿದೆ ಎಂದು ಅವರು ಆರೋಪಿಸಿದರು.

ನರೇಂದ್ರಮೋದಿ, ಬಿಜೆಪಿ ಪರ ಒಲವು ತೋರಿದವರನ್ನು ಗುರಿಯಾಗಿಸಿಕೊಂಡು ಕಿರುಕುಳ ನೀಡಲಾಗುತ್ತಿದೆ. ಸಾಮಾಜಿಕ ಮಾಧ್ಯಮಗಳಲ್ಲಿ ಅಭಿಪ್ರಾಯ ವ್ಯಕ್ತಪಡಿಸುವ ಹಕ್ಕು ಬಳಕೆದಾರರಿಗೆ ಇದೆ. ಅಭಿವ್ಯಕ್ತಿ ಸ್ವಾತಂತ್ರ ಕಿತ್ತುಕೊಳ್ಳುವ ಹಕ್ಕು ಯಾರಿಗೂ ಇಲ್ಲ ಎಂದು ಅವರು ಹೇಳಿದರು.

ಮಹೇಶ್ ಹೆಗ್ಡೆಯನ್ನು ಕೂಡಲೇ ಬಿಡುಗಡೆಗೊಳಿಸಬೇಕು. ಈ ರೀತಿಯ ಕಿರುಕುಳ, ಬಂಧನಗಳು ಮುಂದುವರೆದರೆ ಬಿಜೆಪಿ ರಸ್ತೆಗಿಳಿದು ಪ್ರತಿಭಟಿಸಲಿದೆ. ವೀರಶೈವ-ಲಿಂಗಾಯತ ಸಮಾಜವನ್ನು ಒಡೆಯುವ ಕುರಿತು ಸೋನಿಯಾಗಾಂಧಿಗೆ ಪತ್ರ ಬರೆದಿದ್ದ ಎಂ.ಬಿ.ಪಾಟೀಲ್, ತಮ್ಮ ನಿಲುವು ಏನೆಂಬುದನ್ನು ಸ್ಪಷ್ಟಪಡಿಸಬೇಕು ಎಂದು ಅರವಿಂದ ಲಿಂಬಾವಳಿ ಆಗ್ರಹಿಸಿದರು.

ಪತ್ರಿಕಾಗೊಷ್ಠಿಯಲ್ಲಿ ಬಿಜೆಪಿ ಮುಖಂಡರಾದ ಎ.ಎಚ್.ಆನಂದ, ಎಸ್.ಪ್ರಕಾಶ್, ಬಾಲಾಜಿ, ಛಲವಾದಿ ನಾರಾಯಣಸ್ವಾಮಿ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News