ವರನಟ ಡಾ.ರಾಜ್‌ ಕುಮಾರ್‌ಗೆ ಅಭಿಮಾನಿಗಳ ನಮನ

Update: 2019-04-24 17:14 GMT

ಬೆಂಗಳೂರು, ಎ.24: ಕನ್ನಡ ಚಲನಚಿತ್ರದ ಹಿರಿಯ ನಟ, ವರನಟ ಡಾ.ರಾಜ್‌ಕುಮಾರ್ ಅವರ 91 ನೆ ಜನ್ಮದಿನವನ್ನಿಂದು ರಾಜ್ಯಾದ್ಯಂತ ಸಂಭ್ರಮ, ಸಡಗರದಿಂದ ಅವರ ಅಭಿಮಾನಿಗಳು ಆಚರಿಸಿದರು.

ನಗರದ ಕಂಠೀರವ ಸ್ಟುಡಿಯೋ ಆವರಣದಲ್ಲಿನ ರಾಜ್‌ಕುಮಾರ್ ಸಮಾಧಿಗೆ ಅವರ ಕುಟುಂಬದವರು ಹಾಗೂ ಅಭಿಮಾನಿಗಳು ಆಗಮಿಸಿ ನಮನ ಸಲ್ಲಿಸಿದರು. ಚಿತ್ರರಂಗದಲ್ಲಿ ತನ್ನದೇ ಆದ ವಿಶೇಷವಾದ ಸ್ಥಾನ ಪಡೆದುಕೊಂಡಿರುವ ವರನಟ ರಾಜ್‌ಕುಮಾರ್‌ರ ಹುಟ್ಟಿದ ದಿನದ ಪ್ರಯುಕ್ತ ಎಲ್ಲೆಡೆ ರಕ್ತದಾನ, ನೇತ್ರದಾನದಂತಹ ಕಾರ್ಯಕ್ರಮಗಳನ್ನು ಅವರ ಅಭಿಮಾನಿಗಳು ಹಮ್ಮಿಕೊಂಡಿದ್ದರು. ಬೆಂಗಳೂರಿನ ಶಿವಾಜಿನಗರ ಬಸ್ ನಿಲ್ದಾಣದ ಬಳಿಯಿಂದ ರಾಜ್‌ಸ್ಮಾರಕದ ವರೆಗೂ ಕರ್ನಾಟಕ ಆಟೋಗಳ ಮೆರವಣಿಗೆ ನಡೆಸಿದರು.

ರೋಟರಿ ಬೆಂಗಳೂರು ಉದ್ಯೋಗ್ ವತಿಯಿಂದ ಬೃಹತ್ ರಕ್ತದಾನ ಶಿಬಿರವನ್ನು ಆಯೋಜಿಸಲಾಗಿತ್ತು. ತನ್ನ ನೆಚ್ಚಿನ ನಟನ ಹುಟ್ಟುಹಬ್ಬದ ಅಂಗವಾಗಿ ರಾಜ್ಯದ ವಿವಿಧ ಕಡೆಗಳಿಂದ ಅಭಿಮಾನಿಗಳು ಕಂಠೀರವ ಸ್ಟುಡಿಯೋಗೆ ಆಗಮಿಸಿ ಅಭಿಯಾನದಲ್ಲಿ ಪಾಲ್ಗೊಂಡು ಅಭಿಮಾನ ಮೆರೆದರು.

ಸ್ಮಾಕರದ ಬಳಿ ತೆರಳಿ ನಮನ ಸಲ್ಲಿಸಿದ ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ನಟ ಶಿವರಾಜ್ ಕುಮಾರ್ ಸ್ಮಾರಕ ಮುಖ್ಯವಲ್ಲ. ಅಭಿಮಾನಿಗಳ ಪ್ರೀತಿಗೆ ಸರಿಸಾಟಿಯೇ ಇಲ್ಲ. ಅಭಿಮಾನಿಗಳ ಪ್ರೀತಿಗೆ ಬೆಲೆ ಕಟ್ಟಲು ಸಾಧ್ಯವಿಲ್ಲ. ಅಪ್ಪಾಜಿ ಇದ್ದಾಗ ಅಭಿಮಾನಿಗಳು ಮನೆಯ ಬಳಿ ಬಂದು ಶುಭಾಷಯ ಕೋರುತ್ತಿದ್ದರು ಎಂದು ನುಡಿದರು.

ನಮ್ಮ ತಂದೆಯವರು ಈಗ ಇಲ್ಲದಿದ್ದರೂ, ಅವರ ಮೇಲೆ ರಾಜ್ಯದ ಜನತೆಯಿಟ್ಟಿರುವ ಪ್ರೀತಿ, ಅಭಿಮಾನ ಕಡಿಮೆಯಾಗಿಲ್ಲ. ಎಂದಿನಂತೆ ಇಂದೂ ಅದೇ ಅಭಿಮಾನವನ್ನಿಟ್ಟುಕೊಂಡಿದ್ದಾರೆ. ಅಂದು ಮನೆಗೆ ಬರುತ್ತಿದ್ದ ಅವರ ಅಭಿಮಾನಿಗಳು ಇಂದು ಸ್ಮಾರಕದ ಬಳಿ ಬಂದು ಪೂಜೆ ಸಲ್ಲಿಸಿ ಶಿಬಿರಗಳನ್ನು ಏರ್ಪಡಿಸಿರುವುದು ಸಂತೋಷ ಉಂಟು ಮಾಡಿದೆ ಎಂದು ಹೇಳಿದರು.

ರಾಘವೇಂದ್ರ ರಾಜ್‌ಕುಮಾರ್ ಮಾತನಾಡಿ, ಅಭಿಮಾನಿಗಳು ವಿವಿಧ ಕಡೆಯಿಂದ ಇಲ್ಲಿಗೆ ಆಗಮಿಸಿ ಅಪ್ಪಾಜಿ ಸಮಾಧಿಗೆ ಪೂಜೆ ಸಲ್ಲಿಸಿ, ಹುಟ್ಟುಹಬ್ಬ ಆಚರಿಸಿರುವುದು ಅವರ ಅಭಿಮಾನವನ್ನು ತೋರುತ್ತದೆ. ಅಪ್ಪಾಜಿ ಅವರು ಅಭಿಮಾನಿಗಳಲ್ಲಿ ದೇವರನ್ನು ಕಾಣುತ್ತಿದ್ದರು, ಆದರೆ ಇಂದು ನಾವು ಅಭಿಮಾನಿಗಳ ಮುಖಗಳಲ್ಲಿ ಅಪ್ಪಾಜಿ ಅವರನ್ನು ಕಾಣುತ್ತಿದ್ದೇವೆಂದು ತಿಳಿಸಿದರು.

ಇದೇ ವೇಳೆ ರಾಜ್‌ಕುಮಾರ್ ಕುಟುಂಬದವರು, ಸುಮಲತಾ ಅಂಬರೀಶ್, ಅಂಬಿರೀಶ್ ಪುತ್ರ ಅಭಿಶೇಕ್, ನಿರ್ದೇಶಕ ರಾಕ್‌ಲೈನ್ ವೆಂಕಟೇಶ್, ದೊಡ್ಡಣ್ಣ ಸೇರಿದಂತೆ ಹಲವು ನಟ-ನಟಿಯರು ರಾಜ್‌ಕುಮಾರ್ ಸಮಾಧಿ ಬಳಿ ತೆರಳಿ ಅವರಿಗೆ ಶ್ರದ್ಧಾಂಜಲಿ ಸಲ್ಲಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News