ಎ.26: ಬೈಕ್ ವ್ಹೀಲಿಂಗ್ ಮಾಡುವವರ ಮನಪರಿವರ್ತನಾ ಕಾರ್ಯಾಗಾರ

Update: 2019-04-24 17:16 GMT

ಬೆಂಗಳೂರು, ಎ.24: ವೈಟ್‌ಫೀಲ್ಡ್ ವಿಭಾಗದ ಕೃಷ್ಣರಾಜಪುರ ಪೊಲೀಸ್ ಠಾಣೆಯ ವತಿಯಿಂದ ಎ.26ರಂದು ಸಂಜೆ 4 ಗಂಟೆಗೆ ಸಿಲಿಕಾನ್ ಸಿಟಿ ಕಾಲೇಜಿನಲ್ಲಿ ‘ಬೈಕ್ ವ್ಹೀಲಿಂಗ್ ಮಾಡುವವರ ಮನಪರಿವರ್ತನಾ ಕಾರ್ಯಾಗಾರ’ ಹಮ್ಮಿಕೊಳ್ಳಲಾಗಿದೆ ಎಂದು ವೈಟ್‌ಫೀಲ್ಡ್ ವಿಭಾಗದ ಡಿಸಿಪಿ ಅಬ್ದುಲ್ ಅಹದ್ ತಿಳಿಸಿದ್ದಾರೆ.

‘ವಾರ್ತಾಭಾರತಿ’ ಪತ್ರಿಕೆಯ ಪ್ರತಿನಿಧಿಯೊಂದಿಗೆ ಮಾತನಾಡಿದ ಅವರು, ಯುವ ಸಮೂಹ ಅದರಲ್ಲೂ ಅಪ್ರಾಪ್ತ ವಯಸ್ಸಿನ ಹುಡುಗರು ಇತ್ತೀಚೆಗೆ ದ್ವಿಚಕ್ರ ವಾಹನಗಳಲ್ಲಿ ವ್ಹೀಲಿಂಗ್ ಮಾಡುವ ಸಾಹಸಕ್ಕೆ ಕೈ ಹಾಕಿ ತಮ್ಮ ಮೇಲೆ ಅಪಾಯವನ್ನು ತಂದುಕೊಳ್ಳುತ್ತಿರುವುದು ಆತಂಕಕಾರಿ ಬೆಳವಣಿಗೆಯಾಗಿದೆ ಎಂದರು.

ಯುವಕರನ್ನು ಇಂತಹ ಕಾನೂನು ಬಾಹಿರ ಕ್ರಮಗಳಿಂದ ರಕ್ಷಿಸುವುದು ಪೊಲೀಸ್ ಇಲಾಖೆಯ ಕರ್ತವ್ಯವಾಗಿದೆ. ಈ ಹಿನ್ನೆಲೆಯಲ್ಲಿ ಬೈಕ್ ವ್ಹೀಲಿಂಗ್ ಮಾಡುವವರ ಮನಪರಿವರ್ತನಾ ಕಾರ್ಯಾಗಾರ ಎಂಬ ವಿನೂತನ, ವಿಶಿಷ್ಟವಾದ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ ಎಂದು ಅವರು ಹೇಳಿದರು.

ಈ ಕಾರ್ಯಾಗಾರದಲ್ಲಿ ಬೈಕ್ ವ್ಹೀಲಿಂಗ್ ಮಾಡುವವರು ಹಾಗೂ ಅವರ ಪೋಷಕರನ್ನು ಆಹ್ವಾನಿಸಲಾಗುತ್ತಿದೆ. ಯುವಕರಿಗೆ ಕೌನ್ಸಿಲಿಂಗ್ ಮಾಡಲಾಗುವುದು, ಧಾರ್ಮಿಕ ಮುಖಂಡರ ಮೂಲಕವು ಮಾರ್ಗದರ್ಶನ ಕೊಡಿಸಲಾಗುವುದು ಎಂದು ಅವರು ಹೇಳಿದರು.

ಮಕ್ಕಳ ಸಹಾಯವಾಣಿಯ ಹಿರಿಯ ಸಮಾಲೋಚಕಿ ಪ್ರೀತಿ ಬಾಳಿಗ, ವೈಟ್‌ಫೀಲ್ಡ್ ಉಪ ವಿಭಾಗದ ಸಹಾಯಕ ಪೊಲೀಸ್ ಆಯುಕ್ತ ಸಿ.ಆರ್. ರವಿಶಂಕರ್, ವೌಲಾನ ಮುಹಮ್ಮದ್ ಇಲ್ಯಾಸ್‌ಖಾದ್ರಿ ಸಾಹೇಬ್, ಯೋಗರತ್ನ ಪುರಸ್ಕೃತ ಗಂಗಾಧರಪ್ಪ ಮುಖ್ಯ ಅತಿಥಿಗಳಾಗಿ ಪಾಲ್ಗೊಳ್ಳಲಿದ್ದಾರೆ. ಅಧ್ಯಕ್ಷತೆಯನ್ನು ಸಿಲಿಕಾನ್ ಸಿಟಿ ಕಾಲೇಜಿನ ಪ್ರಾಂಶುಪಾಲ ಗಣೇಶ್ ವಹಿಸಲಿದ್ದಾರೆ ಎಂದು ಅಬ್ದುಲ್ ಅಹದ್ ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News