ಅಸ್ಸಾಂಜ್ ಬಂಧನ: ಮಾಧ್ಯಮ ಸ್ವಾತಂತ್ರ್ಯ ಹಾಗೂ ರಾಷ್ಟ್ರಗಳ ಸಾರ್ವಭೌಮತೆಯ ಮೇಲಿನ ಆಕ್ರಮಣ

Update: 2019-04-25 07:03 GMT

ಅಮೆರಿಕ ಜೂಲಿಯನ್ ಅಸ್ಸಾಂಜ್‌ರಿಗೆ ಕಾನೂನು ರೀತ್ಯಾ ತನ್ನನ್ನು ತಾನು ಸಮರ್ಥಿಸಿಕೊಳ್ಳುವ ಅವಕಾಶವನ್ನು ಕೂಡ ನೀಡಲಾರದು ಎಂದೇ ಹೇಳಲಾಗುತ್ತಿದೆ. ಯಾಕೆಂದರೆ ಕಾನೂನು ರೀತ್ಯಾ ಅಮೆರಿಕ ಸರಕಾರ ಅಸ್ಸಾಂಜ್‌ರನ್ನು ಶಿಕ್ಷಿಸಲು ಹತ್ತು ಹಲವು ತಡೆಗಳಿವೆ. ಇಲ್ಲಿ ಅಮೆರಿಕದ ಜೊತೆಗೆ ಈಕ್ವೆಡಾರ್, ಬ್ರಿಟಿಷ್ ಸರಕಾರಗಳು ಜೊತೆಗೂಡಿ ಅಸ್ಸಾಂಜ್‌ರನ್ನು ಮುಗಿಸ ಹೊರಟಿವೆ. ತಮ್ಮದು ನಾಗರಿಕ ಹಾಗೂ ಪ್ರಜಾಪ್ರಭುತ್ವ ವ್ಯವಸ್ಥೆ ಎಂದೆಲ್ಲಾ ಹೇಳಿಕೊಳ್ಳುತ್ತಾ ಇರುವ ಸರಕಾರಗಳು ಇದನ್ನು ಕಂಡೂ ಕಾಣದಂತೆ ಬಾಯಿ ಮುಚ್ಚಿ ಕುಳಿತಿವೆ. ಸ್ವತಃ ಆಸ್ಟ್ರೇಲಿಯಾ ಸರಕಾರ ಕೂಡ ತನ್ನ ರಾಷ್ಟ್ರದ ಒಬ್ಬ ಪತ್ರಕರ್ತನನ್ನು ಅಮೆರಿಕ ಶಿಕ್ಷಿಸಲು ಹೊರಟಿರುವುದನ್ನು ಸುಮ್ಮನೆ ನೋಡುತ್ತಾ ಕುಳಿತಿದೆ.

ಅಮೆರಿಕ ಕೊನೆಗೂ ವಿಕಿಲೀಕ್ಸ್ ಸಂಪಾದಕ ಆಸ್ಟ್ರೇಲಿಯಾ ಮೂಲದ ಜೂಲಿಯನ್ ಅಸ್ಸಾಂಜ್‌ರನ್ನು ಲಂಡನ್‌ನಲ್ಲಿರುವ ಈಕ್ವೆಡಾರ್ ರಾಯಭಾರ ಕಚೆೇರಿಯಿಂದ ಹೊರಗೆಳೆದು ಬಂಧಿಸುವಲ್ಲಿ ಯಶಸ್ಸು ಸಾಧಿಸಿದೆ. ಬಂಧಿಸಿದ್ದು ಯುನೈಟೆಡ್ ಕಿಂಗ್‌ಡಂನ ಪೊಲೀಸರು. ಅವರನ್ನು ದಕ್ಷಿಣ ಲಂಡನ್ನಿನ ಗರಿಷ್ಠ ಭದ್ರತೆಯಿರುವ ಬೆಲ್ ಮಾರ್ಷ್ ಕಾರಾಗೃಹದಲ್ಲಿ ಇರಿಸಲಾಗಿದೆ. ಅವರ ಬಂಧನ ನಡೆದಿದ್ದು ಇದೇ ಎಪ್ರಿಲ್ 11ರಂದು. ಈಗಾಗಲೇ ಬಂಧನದಲ್ಲಿರುವ ಮತ್ತೊಬ್ಬ ಮಾಹಿತಿ ಕಾರ್ಯಕರ್ತೆ ಅಮೆರಿಕದ ಸೇನೆಯಲ್ಲಿ ಕಾರ್ಯ ನಿರ್ವಹಿಸಿದ್ದ ಚೆಲೆಸಿಯಾ ಮಾನಿಂಗ್‌ರನ್ನು ಅಸ್ಸಾಂಜ್‌ರೊಂದಿಗೆ ಅಮೆರಿಕ ಶಿಕ್ಷಿಸಹೊರಟಿದೆ. ಮಾನಿಂಗ್ ಅಸ್ಸಾಂಜ್‌ರ ವಿರುದ್ಧ ಹೇಳಿಕೆ ನೀಡದಿರುವುದಕ್ಕೆ ಅಮೆರಿಕ ಸರಕಾರ ಅವರನ್ನು ಇದೇ ಮಾರ್ಚ್‌ನಿಂದ ಬಂಧನದಲ್ಲಿಟ್ಟಿದೆ. ಅಮೆರಿಕದ ಪ್ರಕಾರ ವಿಕಿಲೀಕ್ಸ್‌ಗೆ ಸುಮಾರು 75,000ದಷ್ಟು ದಾಖಲೆಗಳನ್ನು ಮಾನಿಂಗ್ ಒದಗಿಸಿದ್ದಾರೆ. ವಿಕಿಲೀಕ್ಸ್ ತೆರೆದಿಟ್ಟ ಮಾಹಿತಿಗಳು ಜಾಗತಿಕ ಬಂಡವಾಳಶಾಹಿ ರಾಷ್ಟ್ರಗಳು ಮಾಡಿದ ಮಿಲಿಯಾಂತರ ದುಷ್ಟ ಹಾಗೂ ಕ್ರೂರ ಸಂಚುಗಳನ್ನು ಅಧಿಕೃತವಾಗಿ ಜಗತ್ತಿನ ಜನರ ಮುಂದೆ ತೆರೆದಿಟ್ಟಿವೆ. ಅದರಲ್ಲಿ ಇರಾಕ್, ಲಿಬಿಯಾ, ಫೆಲೆಸ್ತ್ತೀನ್, ಅಫ್ಘಾನಿಸ್ತಾನ ಮೊದಲಾದ ರಾಷ್ಟ್ರಗಳ ಮೇಲೆ ಮಾಡಿದ ಅಕ್ರಮ ದಾಳಿಗಳು, ಒಳಸಂಚುಗಳ ಕುರಿತಾದ ಬೆಚ್ಚಿಬೀಳಿಸುವ ಮಾಹಿತಿಗಳೂ ಕೂಡ ಇದ್ದವು. ಅಫ್ಘಾನ್ ವಾರ್ ಡೈರಿ, ಇರಾಕ್ ವಾರ್ ಲಾಗ್ಸ್, ಅಮೆರಿಕದ ರಾಜತಾಂತ್ರಿಕ ಕೇಬಲ್‌ಗಳು, ಅಮೆರಿಕದ ಕ್ರೂರ ಗುಪ್ತಚರ ಸಂಸ್ಥೆ ಸಿಐಎ ಹಲವು ರಾಷ್ಟ್ರಗಳಲ್ಲಿ ಮಾಡಿದ ಕುತಂತ್ರಗಳು, ನಡೆಸಿದ ಪಿತೂರಿಗಳು, ಎಸಗಿದ ಬುಡಮೇಲು ಕೃತ್ಯಗಳ ಕುರಿತಾದ ದಾಖಲೆಗಳು, ಕುಖ್ಯಾತ ಗ್ವಾಂಟಾನಮೋ ಬೇ ಜೈಲಿನಲ್ಲಿ ಬಂದಿಗಳ ಮೇಲೆ ಅಮೆರಿಕ ನಡೆಸಿದ ಕ್ರೂರ ಕೃತ್ಯಗಳು, ಮಾನವ ಹಕ್ಕು ಹರಣಗಳು, ಜಗತ್ತಿನ ಹಲವು ಸರಕಾರಗಳು ಮತ್ತವುಗಳ ಮುಖ್ಯಸ್ಥರ ವಿರುದ್ಧ ಮಾಡಿದ ಷಡ್ಯಂತ್ರಗಳು ಹಾಗೂ ಗೂಢಚಾರಿಕೆಗಳು, ಸಿಐಎ ಕದ್ದ ಮೊಬೈಲ್ ಕರೆಗಳು ಹಾಗೂ ಮಿಂಚಂಚೆಗಳ ಮಾಹಿತಿಗಳು ಮೊದಲಾದ ಅನೇಕ ವಾಸ್ತವ ಮಾಹಿತಿಗಳನ್ನು ಜನರ ಮುಂದೆ ಇಟ್ಟಿತ್ತು ವಿಕಿಲೀಕ್ಸ್. ಆ ಎಲ್ಲಾ ಮಾಹಿತಿಗಳು ಜಾಗತಿಕವಾಗಿ ಜನಸಾಮಾನ್ಯರನ್ನು ಬೆಚ್ಚಿ ಬೀಳಿಸಿದ್ದವು. ಹಲವು ರಾಷ್ಟ್ರಗಳ ಸರಕಾರಗಳು ಮತ್ತವುಗಳ ಮುಖ್ಯಸ್ಥರುಗಳ ಭ್ರಷ್ಟಾಚಾರಗಳ ಕರ್ಮಕಾಂಡಗಳನ್ನು ವಿಕಿಲೀಕ್ಸ್ ಬಯಲಿಗೆ ಎಳೆದಿತ್ತು. ಹತ್ತು ಹಲವು ಆರ್ಥಿಕ ಅಪರಾಧಗಳನ್ನು ಬಯಲಿಗೆ ಎಳೆದಿತ್ತು. ವಿಕಿಲೀಕ್ಸ್‌ನ ಈ ಎಲ್ಲಾ ಬಯಲುಗೊಳಿಸುವಿಕೆಗಳು ಹಲವು ಗಂಭೀರ ಪರಿಣಾಮಗಳನ್ನು ಹಲವು ಸರಕಾರಗಳಿಗೆ ಮಾಡಿತ್ತು. ಹಲವರು ತನಿಖೆ ಎದುರಿಸಬೇಕಾಗಿ ಬಂದಿತ್ತು. ಹಲವು ರಾಜಕೀಯ ನೇತಾರರು ತಮ್ಮ ಪದವಿಗಳನ್ನು ಕಳೆದುಕೊಂಡಿದ್ದರು. 2006ರಲ್ಲಿ ಸನ್‌ಶೈನ್ ಪ್ರೆಸ್ ಎಂದು ಐಸ್ ಲ್ಯಾಂಡ್‌ನಲ್ಲಿ ಆರಂಭಿಸಿದ ಈ ಮಾಧ್ಯಮ ಸಂಸ್ಥೆ 2016ರ ವೇಳೆಗೆ ಹಲವು ರಾಷ್ಟ್ರಗಳ ಸುಮಾರು 10 ಮಿಲಿಯನ್ ಅಧಿಕೃತ ದಾಖಲೆಗಳನ್ನು ವಿಶ್ವದ ಜನರ ಮುಂದೆ ತೆರೆದು ಇಟ್ಟಿತ್ತು. ಇದೊಂದು ಲಾಭರಹಿತವಾದ ಸರಕಾರೇತರ ಸಂಸ್ಥೆಯೆಂದೂ, ಇದರ ಉದ್ದೇಶ ಜನರನ್ನು ಬಾಧಿಸುವ ಮುಖ್ಯವಾದ ಮಾಹಿತಿಗಳನ್ನು ಜನರೆದುರು ತೆರೆದಿಡುವುದು ಎಂದೂ ಹೇಳಿಕೊಂಡಿದೆ.

 ಜೂಲಿಯನ್ ಅಸ್ಸಾಂಜ್ ಮಾಡಿದ್ದು ವಿಕಿಲೀಕ್ಸ್‌ನ ಮೂಲಕ ಅಮೆರಿಕ ಮತ್ತದರ ಮಿತ್ರ ರಾಷ್ಟ್ರಗಳು ಮುಚ್ಚಿಟ್ಟುಕೊಂಡ ಕ್ರೂರ ಸತ್ಯಗಳನ್ನು ಜಾಗತಿಕ ಜನಸಮುದಾಯದ ಮುಂದೆ ತೆರೆದಿಟ್ಟಿದ್ದು ಮಾತ್ರ. ಅವೆಲ್ಲವೂ ಅಮೆರಿಕ ಕೂಟದ ಅಧಿಕೃತ ದಾಖಲೆಗಳಾಗಿದ್ದವು. ಅದರಲ್ಲಿ ಅಸ್ಸಾಂಜ್ ಸ್ವತಃ ಸೃಷ್ಟಿಸಿದ್ದು ಏನೂ ಇರಲಿಲ್ಲ. ಆದರೆ ಅದು ದೊಡ್ಡ ತಪ್ಪಾಗಿ ಅಮೆರಿಕ ಮತ್ತದರ ಕೂಟ ಭಾವಿಸಿ ಅಸ್ಸಾಂಜ್‌ರನ್ನು ಬೇಟೆಯಾಡಿ ಮುಗಿಸಲು ಪ್ರಯತ್ನಿಸುತ್ತಾ ಬಂದಿತ್ತು. ಹಾಗಾಗಿ ಅಸ್ಸಾಂಜ್ ಈಕ್ವೆಡಾರ್ ನಾಗರಿಕನಾಗಿ ಅದರ ರಾಯಭಾರ ಕಚೇರಿಯಲ್ಲಿ 2012 ರಿಂದ ಆಶ್ರಯ ಪಡೆದಿದ್ದರು. ಆಶ್ರಯ ಪಡೆದಿದ್ದು ಅಂತರ್‌ರಾಷ್ಟ್ರೀಯ ಕಾನೂನಿನ ಅನ್ವಯವಾಗಿತ್ತು. ಈಕ್ವೆಡಾರ್ ರಾಷ್ಟ್ರದ ಕಾನೂನಿನ ಪ್ರಕಾರ ಅದರ ಪ್ರಜೆಯನ್ನು ಬೇರೆ ದೇಶಕ್ಕೆ ಗಡಿಪಾರು ಮಾಡುವಂತೆಯೂ ಇಲ್ಲ.

ವಿಕಿಲೀಕ್ಸ್ ಹಲವು ಗಂಭೀರ ದಾಖಲೆಗಳನ್ನು ಬಿಡುಗಡೆ ಮಾಡಿದ ನಂತರ ಅಸ್ಸಾಂಜ್‌ನ ಮೇಲೆ ಆಸ್ಟ್ರೇಲಿಯಾದಲ್ಲಿ ಅತ್ಯಾಚಾರದ ದೂರೊಂದು ದಾಖಲಾಗಿತ್ತು. ಅಮೆರಿಕ ಅಸ್ಸಾಂಜ್ ಮೇಲೆ ತನಿಖೆಗೆ ಆದೇಶಿಸಿತ್ತು. ಆದರೆ ಅಮೆರಿಕದ ಕಾನೂನು ಹಾಗೂ ಸಂವಿಧಾನದಲ್ಲಿ ಮಾಧ್ಯಮಗಳು ಯಾವುದೇ ಮಾಹಿತಿಗಳನ್ನು ಪ್ರಕಟಿಸಿದರೂ ಅದನ್ನು ಅಪರಾಧವೆಂದು ಪರಿಗಣಿಸುವಂತೆ ಇಲ್ಲ. ಅಮೆರಿಕದ ನ್ಯಾಯಾಲಯಗಳು ಸೋರಿಕೆ ಮಾಡಿದ ಮಾಹಿತಿಗಳನ್ನೂ ಕೂಡ ಸಾಕ್ಷಿಯಾಗಿ ಪರಿಗಣಿಸುತ್ತವೆ. ಇತ್ತೀಚೆಗೆ ರಫೇಲ್ ಪ್ರಕರಣದಲ್ಲಿ ಭಾರತದ ಸರ್ವೋಚ್ಚ ನ್ಯಾಯಾಲಯ ‘ದಿ ಹಿಂದು’ ಪತ್ರಿಕೆ ಪ್ರಕಟಿಸಿದ ದಾಖಲೆಗಳನ್ನು ಸಾಕ್ಷಿಯಾಗಿ ಪರಿಗಣಿಸಿ ವಿಚಾರಣೆಗೆ ಕೈಗೆತ್ತಿಕೊಂಡಿರುವುದನ್ನು ಇಲ್ಲಿ ಗಮನಿಸಬಹುದು. ಮಾಹಿತಿ ಸತ್ಯವೋ ಅಲ್ಲವೋ, ಅಧಿಕೃತವೋ ಅಲ್ಲವೋ ಎನ್ನುವುದಷ್ಟೇ ಮುಖ್ಯ. ಅದು ಸೋರಿ ಬಂದಿದ್ದೋ ಅಲ್ಲವೊ ಎನ್ನುವುದು ವಿಷಯವಾಗುವುದಿಲ್ಲ. ಆದರೂ ಅಮೆರಿಕ ಸರಕಾರ ಇದೆಲ್ಲವನ್ನೂ ಬದಿಗಿಟ್ಟು ಬೇರೆ ದೇಶದ ಪ್ರಜೆ ಅಸ್ಸಾಂಜ್‌ರನ್ನು ಸದೆಬಡಿಯ ಹೊರಟಿದೆ. ಇದು ಮಾಧ್ಯಮ ಸ್ವಾತಂತ್ರ್ಯ ಗರಿಷ್ಠವಾಗಿರುವ ಪ್ರಜಾ ಪ್ರಭುತ್ವರಾಷ್ಟ್ರ ಎಂದು ಬಿಂಬಿಸಲ್ಪಟ್ಟಿರುವ ಅಮೆರಿಕ ಪ್ರಜಾತಂತ್ರದ ಮಾದರಿ. ಬಂಡವಾಳಶಾಹಿ ಪ್ರಜಾತಂತ್ರದ ಅಸಲೀಯತ್ತು ಇದೇ ಆಗಿದೆ. ಅಲ್ಲಿ ಪ್ರಜಾತಂತ್ರದ ಹೆಸರಿನಲ್ಲಿ ಕಾರ್ಪೊರೇಟ್ ಸರ್ವಾಧಿಕಾರ ಚಾಲ್ತಿಯಲ್ಲಿರುತ್ತದೆ. ಈಗಿನ ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಸ್ವತಃ ಒಬ್ಬ ಭಾರೀ ಕಾರ್ಪೊರೇಟ್ ಎನ್ನುವುದನ್ನು ಇಲ್ಲಿ ಗಮನಿಸಬೇಕು. ಇಂದು ಜಗತ್ತಿನ ಮುಂದುವರಿದ ರಾಷ್ಟ್ರಗಳು ಎಂದೆಲ್ಲಾ ಬಿಂಬಿಸಿಕೊಂಡು ತಮ್ಮನ್ನು ತಾವೇ ಪ್ರಜಾಪ್ರಭುತ್ವ ರಾಷ್ಟ್ರಗಳು ಎಂದು ಕರೆದುಕೊಳ್ಳುವ ರಾಷ್ಟ್ರಗಳು ವಾಸ್ತವದಲ್ಲಿ ಭಾರೀ ಕಾರ್ಪೊರೇಟ್ ಪ್ರಭುತ್ವಗಳೇ ಆಗಿವೆಯೇ ಹೊರತು ಜನಸಾಮಾನ್ಯರನ್ನು ಒಳಗೊಂಡ ಪ್ರಜಾಪ್ರಭುತ್ವವಲ್ಲ. ಆ ಕಾರಣದಿಂದಾಗಿಯೇ ಮುಂದುವರಿದ ರಾಷ್ಟ್ರಗಳು ಎಂದು ಹೇಳಿಕೊಂಡು ಜಾಗತಿಕವಾಗಿ ಒಳಸಂಚುಗಳಲ್ಲಿ, ಬುಡಮೇಲು ಕೃತ್ಯಗಳಲ್ಲಿ, ವ್ಯಾಪಕ ಭ್ರಷ್ಟಾಚಾರಗಳಲ್ಲಿ ತೊಡಗಿ, ಅಕ್ರಮ ಯುದ್ಧಗಳನ್ನು, ಕಗ್ಗೊಲೆಗಳನ್ನು ನಡೆಸುತ್ತಾ ಬಂದಿರುವುದು. ಇಂದು ಅಂತಹ ಮುಂದುವರಿದ ರಾಷ್ಟ್ರಗಳು ಎನಿಸಿಕೊಂಡವುಗಳು ತೀವ್ರ ಆರ್ಥಿಕ ಹಾಗೂ ಸಾಮಾಜಿಕ ಬಿಕ್ಕಟ್ಟುಗಳಲ್ಲಿ ನರಳಾಡುತ್ತಿವೆ. ತಮ್ಮ ಹಿತಾಸಕ್ತಿಗಳನ್ನು ಹೇಗಾದರೂ ಕಾಪಾಡಿಕೊಳ್ಳಬೇಕೆಂದು ತಾವೇ ರೂಪಿಸಿದ ನಿಯಮಾವಳಿಗಳನ್ನು ಉಲ್ಲಂಘಿಸುವ ಹಂತಕ್ಕೂ ಈ ರಾಷ್ಟ್ರಗಳು ತಲುಪಿವೆ. ಎಲ್ಲಾ ಅಂತರ್‌ರಾಷ್ಟ್ರೀಯ ನಿಯಮಾವಳಿಗಳನ್ನು ಇವುಗಳು ಉಲ್ಲಂಘಿಸುತ್ತಿವೆ. ಅದರಲ್ಲಿ ಜೂಲಿಯನ್ ಅಸ್ಸಾಂಜ್ ಬಂಧನ ಕೂಡ ಒಂದು.

ಈಕ್ವೆಡಾರ್‌ನ ಹಿಂದಿನ ಸರಕಾರ ಜೂಲಿಯನ್ ಅಸ್ಸಾಂಜ್‌ರಿಗೆ ಕಾನೂನು ರೀತ್ಯಾ ಲಂಡನ್ನಿನ ತಮ್ಮ ರಾಯಭಾರ ಕಚೇರಿಯಲ್ಲಿ ಆಶ್ರಯ ನೀಡಿತ್ತು. ಆಗ ಈಕ್ವೆಡಾರ್‌ನ ಅಧ್ಯಕ್ಷ ರಾಫೇಲ್ ಕಾರಿಯಾ ಆಗಿದ್ದರು. 2017ರಲ್ಲಿ ಚುನಾಯಿತವಾಗಿ ಬಂದ ಲೆನಿನ್ ಮೊರೆನೋ ಸರಕಾರ ಅಮೆರಿಕದ ಒತ್ತಡಕ್ಕೆ ತಲೆಬಾಗಿ ಅಸ್ಸಾಂಜ್‌ರನ್ನು ಅಮೆರಿಕಕ್ಕೆ ಒಪ್ಪಿಸುವ ಕಾರ್ಯದಲ್ಲಿ ತೊಡಗಿದೆ. ಲೆನಿನ್ ಮೊರೆನೊ ಮಾಡಿರುವ ಭಾರೀ ಭ್ರಷ್ಟಾಚಾರ ಹಗರಣಗಳ ತನಿಖೆ ಶುರುವಾಗುವ ಹಂತದಲ್ಲಿದೆ. ಹಾಗಾಗಿ ಈಕ್ವೆಡಾರ್‌ನ ಜನರ ಗಮನವನ್ನು ಬೇರೆಡೆಗೆ ಸೆಳೆಯುವ ತಂತ್ರವಾಗಿಯೂ ಅಸ್ಸಾಂಜ್ ಬಂಧನವನ್ನು ರೂಪಿಸಲಾಗಿದೆ ಎನ್ನಲಾಗುತ್ತಿದೆ.

ಈಕ್ವೆಡಾರ್ ಸಂವಿಧಾನವನ್ನು ಉಲ್ಲಂಘಿಸಿ ಮೊರೆನೋ ಈ ಕಾರ್ಯಗಳಲ್ಲಿ ತೊಡಗಿದ್ದಾರೆ ಎಂದು ಹಲವು ಸಾಮಾಜಿಕ ಕಾರ್ಯಕರ್ತರು, ಮಾಧ್ಯಮ ಕಾರ್ಯಕರ್ತರು ಹೇಳುತ್ತಿದ್ದಾರೆ. ಗಮನಾರ್ಹವೆಂದರೆ ಹಿಂದಿನ ಅಧ್ಯಕ್ಷ ಕಾರಿಯಾ ಈಗಿನ ಅಧ್ಯಕ್ಷ ಮೊರೆನೋರ ಭ್ರಷ್ಟಾಚಾರದ ಕುರಿತಾದ ಫೇಸ್‌ಬುಕ್ ಪೋಸ್ಟ್ ಅಸ್ಸಾಂಜ್ ಬಂಧನದ ದಿನದಂದೇ ಫೇಸ್‌ಬುಕ್ ತೆಗೆದು ಹಾಕಿದೆ. ಟ್ವ್ವಿಟರ್ ಅಸ್ಸಾಂಜ್‌ರ ತಾಯಿಯನ್ನು ಟ್ವೀಟ್ ಮಾಡದಂತೆ ನಿರ್ಬಂಧಿಸಿದೆ. ಅಂದರೆ ಫೇಸ್ ಬುಕ್, ಟ್ವಿಟರ್‌ಗಳು ಭಾರೀ ಕಾರ್ಪೊರೇಟುಗಳೇ ಆಗಿರುವುದರಿಂದ ಅವರ ಹಿತಾಸಕ್ತಿಗಳನ್ನು ಕಾಪಾಡಿಕೊಳ್ಳಲು ಎಲ್ಲಾ ಅಪ್ರಜಾತಾಂತ್ರಿಕ ಹಾಗೂ ಮಾಧ್ಯಮ ವಿರೋಧಿ ಕ್ರಮಗಳಿಗೂ ಇಳಿಯುತ್ತವೆ ಎನ್ನುವುದನ್ನು ಈ ನಡೆಗಳು ಸಾಬೀತು ಮಾಡುತ್ತವೆ.

ಇವೆಲ್ಲದರ ಮಧ್ಯೆಯೂ ಜಾಗತಿಕವಾಗಿ ಹಲವು ಮಾಧ್ಯಮ ಕಾರ್ಯಕರ್ತರು, ಮಾನವ ಹಕ್ಕು ಸಂಘಟನೆಗಳು ಅಸ್ಸಾಂಜ್‌ರ ಅಕ್ರಮ ಬಂಧನವನ್ನು ಖಂಡಿಸಿವೆ. ಅಮೆರಿಕದ ನಾಗರಿಕ ಹಕ್ಕುಗಳ ಸಂಘಟನೆ ಜೂಲಿಯನ್‌ರ ಬಂಧನವನ್ನು ಖಂಡಿಸಿದ್ದಲ್ಲದೆ, ‘‘ಅಮೆರಿಕದ ಚರಿತ್ರೆಯಲ್ಲೇ ಸತ್ಯಮಾಹಿತಿಗಳನ್ನು ಪ್ರಕಟಿಸಿದ್ದಕ್ಕಾಗಿ ಪ್ರಕಾಶಕರೊಬ್ಬರನ್ನು ಸಂವಿಧಾನ ಬಾಹಿರವಾಗಿ ಅಪರಾಧಿಯೆಂದು ಪರಿಗಣಿಸಿ ಶಿಕ್ಷೆ ನೀಡಲು ಹೊರಟಿರುವುದು ಇದೇ ಮೊದಲು, ಅದು ಇತರ ಯಾವುದೇ ಮಾಧ್ಯಮ ಸಂಸ್ಥೆಗಳನ್ನೂ ಇದೇ ರೀತಿಯಲ್ಲಿ ಪರಿಗಣಿಸಲು ದಾರಿ ಮಾಡಿಕೊಡುತ್ತದೆ. ಅಷ್ಟೇ ಅಲ್ಲದೇ ವಿದೇಶಿ ಪ್ರಕಾಶಕರೊಬ್ಬರನ್ನು ಅಮೆರಿಕದ ರಹಸ್ಯ ಕಾಪಾಡುವ ಕಾಯ್ದೆಯಡಿ ಶಿಕ್ಷಿಸುವುದು ಅಮೆರಿಕದ ಪತ್ರಕರ್ತರಿಗೆ ಬಹಳ ಅಪಾಯಕಾರಿಯಾಗುತ್ತದೆ’’ ಎಂದಿದೆ. ಬ್ರಿಟಿಷ್ ರಾಯಭಾರ ಕಚೆೇರಿ ಮುಂದೆ ಅಸ್ಸಾಂಜ್ ಬಂಧನ ಖಂಡಿಸಿ ಪ್ರತಿಭಟನೆ ನಡೆದಿದೆ. ಅಮೆರಿಕದ ‘ದಿ ಗಾರ್ಡಿಯನ್’ ಮತ್ತು ‘ನ್ಯೂಯಾರ್ಕ್ ಟೈಮ್ಸ್’ ಪತ್ರಿಕೆಗಳು ವಿಕಿಲೀಕ್ಸ್ ಹೊರಹಾಕಿದ ಮಾಹಿತಿಗಳನ್ನು ಆಧರಿಸಿ ಸರಣಿ ಲೇಖನಗಳನ್ನು ಪ್ರಕಟಿಸಿದ್ದವು. ಆದರೆ ಈಗ ಈ ಮಾಧ್ಯಮ ಸಂಸ್ಥೆಗಳು ಅಸ್ಸಾಂಜ್‌ರ ಮೇಲೆ ಅಮೆರಿಕದ ಅಕ್ರಮವನ್ನು ಬೆಂಬಲಿಸಿ ವರದಿಗಳನ್ನು ಪ್ರಕಟಿಸುತ್ತಿದೆ. ಕನಿಷ್ಠ ಮಾಧ್ಯಮ ಹಕ್ಕುಗಳ ಬಗ್ಗೆ ಕೂಡ ಗಮನಿಸಲಾಗದ ಮಟ್ಟಕ್ಕೆ ಅಮೆರಿಕ ಸರಕಾರದೊಂದಿಗೆ ಇವುಗಳು ಶಾಮೀಲಾಗಿವೆ.

ವಿಕಿಲೀಕ್ಸ್ ಬಯಲಿಗೆ ತಂದ ಮಾಹಿತಿಗಳು ಜಗತ್ತಿನ ಹಲವಾರು ರಾಷ್ಟ್ರಗಳ ಜನಸಾಮಾನ್ಯರಿಗೆ ಅಮೂಲ್ಯವೆನಿಸಿ ತಮ್ಮ ತಮ್ಮ ರಾಷ್ಟ್ರಗಳ ಸರಕಾರಗಳು ಮತ್ತು ಭಾರೀ ಕಾರ್ಪೊರೇಟು ಗಳ ಮೋಸದಾಟಗಳ ವಿರುದ್ಧ ಜಾಗೃತರಾಗಿರುವುದನ್ನು ಅಲ್ಲಗಳೆಯಲು ಸಾಧ್ಯವಿಲ್ಲ. ಆ ಜಾಗೃತಿ ಹಲವಾರು ರಾಷ್ಟ್ರಗಳಲ್ಲಿ ಹಲವು ಬದಲಾವಣೆಗಳಿಗೆ ಕಾರಣವಾಗಿದೆ. ಅಮೆರಿಕ ಜೂಲಿಯಾನ್ ಅಸ್ಸಾಂಜ್‌ರಿಗೆ ಕಾನೂನು ರೀತ್ಯಾ ತನ್ನನ್ನು ತಾನು ಸಮರ್ಥಿಸಿಕೊಳ್ಳುವ ಅವಕಾಶವನ್ನು ಕೂಡ ನೀಡಲಾರದು ಎಂದೇ ಹೇಳಲಾಗುತ್ತಿದೆ. ಯಾಕೆಂದರೆ ಕಾನೂನು ರೀತ್ಯಾ ಅಮೆರಿಕ ಸರಕಾರ ಅಸ್ಸಾಂಜ್‌ರನ್ನು ಶಿಕ್ಷಿಸಲು ಹತ್ತು ಹಲವು ತಡೆಗಳಿವೆ. ಇಲ್ಲಿ ಅಮೆರಿಕದ ಜೊತೆಗೆ ಈಕ್ವೆಡಾರ್, ಬ್ರಿಟಿಷ್ ಸರಕಾರಗಳು ಜೊತೆಗೂಡಿ ಅಸ್ಸಾಂಜ್‌ರನ್ನು ಮುಗಿಸ ಹೊರಟಿವೆ. ತಮ್ಮದು ನಾಗರಿಕ ಹಾಗೂ ಪ್ರಜಾಪ್ರಭುತ್ವ ವ್ಯವಸ್ಥೆ ಎಂದೆಲ್ಲಾ ಹೇಳಿಕೊಳ್ಳುತ್ತಾ ಇರುವ ಸರಕಾರಗಳು ಇದನ್ನು ಕಂಡೂ ಕಾಣದಂತೆ ಬಾಯಿ ಮುಚ್ಚಿ ಕುಳಿತಿವೆ. ಸ್ವತಃ ಆಸ್ಟ್ರೇಲಿಯಾ ಸರಕಾರ ಕೂಡ ತನ್ನ ರಾಷ್ಟ್ರದ ಒಬ್ಬ ಪತ್ರಕರ್ತನನ್ನು ಅಮೆರಿಕ ಶಿಕ್ಷಿಸಲು ಹೊರಟಿರುವುದನ್ನು ಸುಮ್ಮನೆ ನೋಡುತ್ತಾ ಕುಳಿತಿದೆ.

ಜಾಗತಿಕವಾಗಿ ಮಾಧ್ಯಮ ಹಾಗೂ ನಾಗರಿಕ ಸಂಘಟನೆಗಳು ಅಮೆರಿಕದ ಇಂತಹ ಅಪಾಯಕಾರಿ ನಡೆಗಳ ವಿರುದ್ಧ ಜನಾಭಿಪ್ರಾಯ ರೂಪಿಸಿ ತಮ್ಮ ತಮ್ಮ ಸರಕಾರಗಳ ಮೇಲೆ ಒತ್ತಡ ಹೇರಿ ಪ್ರಶ್ನಿಸುವಂತೆ ಮಾಡಬೇಕಾದುದು ಅತ್ಯಗತ್ಯವಾಗಿದೆ. ಇಲ್ಲದಿದ್ದಲ್ಲಿ ಅಮೆರಿಕ ಜಗತ್ತಿನ ಯಾವುದೇ ರಾಷ್ಟ್ರಗಳ ಯಾವುದೇ ನಾಗರಿಕನನ್ನೂ ಅಕ್ರಮವಾಗಿ ತನಗೆ ಬೇಕೆನಿಸಿದಾಗ ಬಂಧಿಸಿ ಶಿಕ್ಷೆ ನೀಡುವುದನ್ನು ಒಪ್ಪಿಕೊಳ್ಳಬೇಕಾದ ಪರಿಸ್ಥಿತಿ ಬರುತ್ತದೆ. ಸಾರ್ವಜನಿಕ ಮಾಹಿತಿಗಳು ಜನಸಾಮಾನ್ಯರಿಗೆ ಮುಕ್ತವಾಗಿರಬೇಕಾದುದು ಪ್ರಜಾತಾಂತ್ರಿಕತೆಯ ಅಗತ್ಯ. ಆ ಹಕ್ಕನ್ನು ಕಳೆದುಕೊಳ್ಳಬಾರದು.

ಮಿಂಚಂಚೆ: (nandakumarnandana67@gmail.com)

Writer - ನಂದಕುಮಾರ್ ಕೆ. ಎನ್.

contributor

Editor - ನಂದಕುಮಾರ್ ಕೆ. ಎನ್.

contributor

Similar News