ಶ್ರೀಲಂಕಾದಲ್ಲಿ ಸರಣಿ ಬಾಂಬ್ ಸ್ಫೋಟ ಪ್ರಕರಣ: ಬೆಂಗಳೂರಿನಲ್ಲಿ ಹೈ ಆಲರ್ಟ್

Update: 2019-04-25 15:23 GMT

ಬೆಂಗಳೂರು, ಎ.25: ಶ್ರೀಲಂಕಾದಲ್ಲಿ ಸರಣಿ ಬಾಂಬ್ ಸ್ಫೋಟ ಪ್ರಕರಣದ ನಂತರ ಎಚ್ಚೆತ್ತುಕೊಂಡಿರುವ ನಗರ ಪೊಲೀಸರು, ಭದ್ರತೆ ಬಿಗಿಗೊಳಿಸಿ, ಹಲವು ಕಟ್ಟು ನಿಟ್ಟಿನ ಸೂಚನೆಗಳನ್ನು ನೀಡಿದ್ದಾರೆ.

ಗುರುವಾರ ಸಂಜೆ ನಗರ ಪೊಲೀಸ್ ಆಯುಕ್ತ ಟಿ.ಸುನೀಲ್ ಕುಮಾರ್ ಆಯುಕ್ತರ ಕಚೇರಿಯಲ್ಲಿ ನಗರದಲ್ಲಿರುವ ಪ್ರಮುಖ ಮಂದಿರ, ಮಸೀದಿ, ಚರ್ಚ್, ಮಾಲ್ ಹಾಗೂ ಹೊಟೇಲ್ ಗಳ ಮುಖ್ಯಸ್ಥರೊಂದಿಗೆ ಸಭೆ ನಡೆಸಿದರು. ಈ ವೇಳೆ ಹೆಚ್ಚುವರಿ ಪೊಲೀಸ್ ಆಯುಕ್ತ ಬಿ.ಕೆ.ಸಿಂಗ್ ಹಾಗೂ ಅಲೋಕ್ ಕುಮಾರ್ ಸೇರಿದಂತೆ ನಗರದ ಎಲ್ಲ ವಿಭಾಗದ 8 ಡಿಸಿಪಿಗಳು, ನಾಲ್ವರು ಹೆಚ್ಚುವರಿ ಪೊಲೀಸ್ ಆಯುಕ್ತರು ಹಾಜರಿದ್ದರು. ಪ್ರಮುಖವಾಗಿ ಇಸ್ಕಾನ್, ಮಹಾಲಕ್ಷ್ಮಿ ಲೇಔಟ್ ಆಂಜನೇಯ ಸ್ವಾಮಿ, ಬುಲ್ ಟೆಂಪಲ್ ದೇವಸ್ಥಾನದ ಮುಖ್ಯಸ್ಥರು, ಶಿವಾಜಿನಗರ ಚರ್ಚ್, ಕೋಲ್ಸ್ ಪಾರ್ಕ್ ಚರ್ಚ್, ವಿವೇಕನಗರ ಚರ್ಚ್‌ನ ಪಾದ್ರಿಗಳು ಹಾಗೂ ಸೆಕ್ಯೂರಿಟಿ ಅಧಿಕಾರಿಗಳು ಇದ್ದರು. ಸಿಟಿ ಮಾರ್ಕೆಟ್ ಮಸೀದಿ, ಕಾಟನ್ ಪೇಟೆ ದರ್ಗಾದ ಮೌಲ್ವಿಗಳು ಹಾಗೂ ಉಸ್ತುವಾರಿಗಳು. ಪಂಚತಾರಾ ಹೊಟೇಲ್ ಗಳಾದ ದಿ ಅಶೋಕ, ಶಾಂಗ್ರಿಲಾ, ಐಟಿಸಿ ಗಾರ್ಡೇನಿಯಾ, ಲೀ ಮೆರಿಡಿಯನ್ ಹೊಟೇಲ್ ಮ್ಯಾನೇಜರ್‌ಗಳು ಹಾಗೂ ಸೆಕ್ಯೂರಿಟಿ ಮುಖ್ಯಸ್ಥರು ಇದ್ದರು.

ಮಂತ್ರಿ ಮಾಲ್, ಯುಬಿ ಸಿಟಿ, ಓರಾಯಲ್ ಮಾಲ್, ಸಿಟಿ ಮಾಲ್, ಫೀನಿಕ್ಸ್ ಮಾಲ್, ಗೋಪಾಲನ್ ಮಾಲ್, ಒನ್‌ಎಂಜಿ ಮಾಲ್, ಎಸ್ಟೀಂ ಮಾಲ್, ಲಿಡೋ ಮಾಲ್, 4ಎಂ ವ್ಯಾಲಿ ಮಾಲ್, ಮೀನಾಕ್ಷಿ ಮಾಲ್ ಮ್ಯಾನೇಜರ್‌ಗಳು ಹಾಗೂ ಸೆಕ್ಯೂರಿಟಿ ಅಧಿಕಾರಿಗಳು ಸೇರಿದಂತೆ ಸಾವಿರಕ್ಕೂ ಅಧಿಕ ಮಂದಿ ಸಭೆಯಲ್ಲಿ ಭಾಗವಹಿಸಿ, ಪೊಲೀಸರ ಸೂಚನೆ ಪಾಲಿಸುವುದಾಗಿ ಒಪ್ಪಿದರು.

ಈ ಕುರಿತು ಸುದ್ದಿಗಾರರೊಂದಿಗೆ ಮಾತನಾಡಿದ ನಗರ ಪೊಲೀಸ್ ಆಯುಕ್ತ ಟಿ.ಸುನೀಲ್ ಕುಮಾರ್, ನಮಗೆ ಯಾವುದೇ ಬೆದರಿಕೆಯ ಕರೆಗಳು ಬಂದಿಲ್ಲ. ಆದರೂ ನಗರದಲ್ಲಿ ಮುಂಜಾಗ್ರತಾ ಕ್ರಮವಾಗಿ ಜನನಿಬಿಡ ಪ್ರದೇಶ ಸೇರಿದಂತೆ ಇತರೆ ಪ್ರದೇಶಗಳಲ್ಲಿ ಹೆಚ್ಚಿನ ಭದ್ರತೆ ವಹಿಸಲಾಗಿದೆ ಎಂದು ತಿಳಿಸಿದರು.

ಮಂದಿರ, ಮಸೀದಿ, ಚರ್ಚ್, ಮಾಲ್ ಹಾಗೂ ಹೊಟೇಲ್ ಗಳಿಗೆ ಎಲ್ಲದಕ್ಕೂ ಪೊಲೀಸ್ ಭದ್ರತೆ ಒದಗಿಸಲು ಸಾಧ್ಯವಿಲ್ಲ. ಹೀಗಾಗಿ ಅವರು ಖಾಸಗಿ ಭದ್ರತೆಯನ್ನು ಅಳವಡಿಸಿಕೊಂಡು ದಿನದ 24 ಗಂಟೆಗಳ ಕಾಲ ಸಂಶಯಾಸ್ಪದ ವ್ಯಕ್ತಿಗಳ ಹಾಗೂ ಲಗೇಜು, ಬ್ಯಾಗ್‌ಗಳನ್ನು ತಪಾಸಣೆ ಮಾಡಲು ಸೂಚಿಸಲಾಗಿದೆ ಎಂದರು.

ಸೂಚನೆಗಳೇನು?

* ಯಾವುದಾದರೂ ಸಂಶಯಾಸ್ಪದ ವ್ಯಕ್ತಿಗಳು, ವಸ್ತುಗಳು ಕಂಡು ಬಂದಲ್ಲಿ ಕೂಡಲೇ ಪೊಲೀಸರಿಗೆ ಮಾಹಿತಿ ನೀಡುವ ಬಗ್ಗೆ ತಿಳಿಸಲಾಯಿತು.

* ಪ್ರತಿಯೊಂದು ಪ್ರಾರ್ಥನಾ ಸ್ಥಳಗಳಲ್ಲಿ ಬರುವ ಮತ್ತು ಹೋಗುವ ಜನರ ಬಗ್ಗೆ ಹಾಗೂ ಸಂಶಯಾಸ್ಪದ ವ್ಯಕ್ತಿಗಳ ಮೇಲೆ ನಿಗಾ ಇಡಲು ವ್ಯವಸ್ಥೆ ಮಾಡಬೇಕು. ಅದು ಸಿಸಿಟಿವಿ ಆಗಬಹುದು. ಖಾಸಗಿ ಭದ್ರತೆ ಆಗಬಹುದು. ಸಂಶಯಾಸ್ಪದ ವ್ಯಕ್ತಿಗಳ ಹಾಗೂ ಲಗೇಜು, ಬ್ಯಾಗ್‌ಗಳನ್ನು ತಪಾಸಣೆ ಮಾಡುವುದು.

* ಕರ್ನಾಟಕ ಪಬ್ಲಿಕ್ ಸೇಫ್ಟಿ ಕಾಯಿದೆ 2017 ನಿಬಂಧನೆಗಳಿಗೆ ಒಳಪಡುವ ಎಲ್ಲಾ ಸಂಸ್ಥೆಗಳು ಕಡ್ಡಾಯವಾಗಿ ಸಿಸಿಟಿವಿಗಳನ್ನು ಅಳವಡಿಸಲು ಸೂಚಿಸಲಾಯಿತು.

* ಪ್ರಮುಖವಾಗಿ ಹೊಟೇಲ್‌ಗಳು, ಮಾಲ್‌ಗಳು ಇತ್ಯಾದಿ ಸ್ಥಳಗಳಲ್ಲಿ ಹೆಚ್‌ಹೆಚ್‌ಎಂಡಿ, ಡಿಎಫ್‌ಎಂಡಿ, ಬ್ಯಾಗೇಜ್ ಸ್ಕಾನರ್ ಮುಂತಾದವುಗಳನ್ನು ಅಳವಡಿಸಿಕೊಳ್ಳುವಂತೆ ತಿಳಿಸಲಾಯಿತು.

* ಹೊಟೇಲ್‌ಗಳು ಮತ್ತು ಸಾರ್ವಜನಿಕರು ತಂಗುವ ಸ್ಥಳಗಳಲ್ಲಿ ಕಡ್ಡಾಯವಾಗಿ ಗುರುತಿನ ಚೀಟಿ ಅಥವಾ ಗುರುತನ್ನು ಖಾತ್ರಿಪಡಿಸಿಕೊಳ್ಳಲು ಸೂಚಿಸಲಾಯಿತು.

* ಸಂಬಂಧಪಟ್ಟ ಸಂಸ್ಥೆಗಳ ನಿರ್ವಾಹಕರು ತಮ್ಮ ವ್ಯಾಪ್ತಿಯ ಪೊಲೀಸ್ ಠಾಣೆಯೊಂದಿಗೆ ಸತತ ಸಂಪರ್ಕವನ್ನು ಇಟ್ಟುಕೊಂಡು ಎಲ್ಲಾ ಮುಂಜಾಗ್ರತಾ ಕ್ರಮಗಳನ್ನು ತೆಗೆದುಕೊಳ್ಳಲು ಸೂಚಿಸಲಾಯಿತು.

* ಈ ವ್ಯವಸ್ಥೆಗಳನ್ನು ಕೇವಲ ಕೆಲ ದಿನಗಳಿಗೆ ಮಾತ್ರ ಸೀಮಿತಗೊಳಿಸದೇ ಶಾಶ್ವತವಾಗಿ ಅಳವಡಿಸಿಕೊಳ್ಳುವಂತೆ ಸೂಚಿಸಲಾಯಿತು.

ಎಲ್ಲರ ಕಣ್ಣು ಸಿಸಿ ಕ್ಯಾಮೆರಾ ಆಗಲಿ

ಪೊಲೀಸರ ಜೊತೆ ಸಾರ್ವಜನಿಕರು ಸಹಕಾರ ನೀಡಬೇಕು. ನಗರದಲ್ಲಿರುವ ಪ್ರತಿಯೊಬ್ಬರ ಕಣ್ಣುಗಳು ಸಿಸಿ ಕ್ಯಾಮೆರಾ ಆದರೆ 1.25 ಕೋಟಿ ಜನರ ಮೇಲೆ ನಿಗಾವಹಿಸಲು ಸುಲಭ

-ಟಿ.ಸುನೀಲ್‌ ಕುಮಾರ್, ನಗರ ಪೊಲೀಸ್ ಆಯುಕ್ತ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News