ಬರ, ಕುಡಿಯುವ ನೀರಿನ ಸಮಸ್ಯೆ ಬಗ್ಗೆ ಮುಖ್ಯಮಂತ್ರಿ ಕುಮಾರಸ್ವಾಮಿ ಚರ್ಚೆ

Update: 2019-04-25 15:29 GMT

ಬೆಂಗಳೂರು, ಎ. 25: ರಾಜ್ಯದ ಜಲಾಶಯಗಳಲ್ಲಿನ ನೀರಿನ ಲಭ್ಯತೆ, ಕುಡಿಯುವ ನೀರಿನ ಸಮಸ್ಯೆ ಹಾಗೂ ಬೆಂಗಳೂರು ನಗರದಲ್ಲಿ ಮಳೆ ಪರಿಸ್ಥಿತಿ ಎದುರಿಸುವುದು ಸೇರಿದಂತೆ ವಿವಿಧ ವಿಚಾರಗಳಿಗೆ ಸಂಬಂಧಿಸಿದಂತೆ ಮುಖ್ಯಮಂತ್ರಿ ಕುಮಾರಸ್ವಾಮಿ, ಡಿಸಿಎಂ ಡಾ.ಜಿ.ಪರಮೇಶ್ವರ್ ಹಾಗೂ ಸಚಿವ ಡಿ.ಕೆ.ಶಿವಕುಮಾರ್ ಚರ್ಚಿಸಿದರು.

ಗುರುವಾರ ಮುಖ್ಯಮಂತ್ರಿ ಕುಮಾರಸ್ವಾಮಿ ನಿವಾಸದಲ್ಲಿ ಮೂವರು ಮುಖಂಡರು ಇದೇ ಸಂದರ್ಭದಲ್ಲಿ ಲೋಕಸಭಾ ಚುನಾವಣೆ ಫಲಿತಾಂಶ ಕುರಿತು ಚರ್ಚಿಸಿದರು. ಅನಂತರ ಸಿಎಂ ಕುಮಾರಸ್ವಾಮಿ, ತಮ್ಮ ಅಪರ ಮುಖ್ಯ ಕಾರ್ಯದರ್ಶಿ ಡಾ.ಇ.ವಿ. ರಮಣರೆಡ್ಡಿ ಅವರೊಂದಿಗೆ ರಾಜ್ಯದಲ್ಲಿನ ಬರ ಪರಿಸ್ಥಿತಿ, ಪರಿಹಾರ ಕ್ರಮಗಳ ಕುರಿತು ವಿವರ ಪಡೆದರು.

ಇದೇ ವೇಳೆ ಶ್ರೀಲಂಕಾ ಸರಣಿ ಬಾಂಬ್‌ಸ್ಫೋಟ ಪ್ರಕರಣಕ್ಕೆ ಸಂಬಂಧ ಸರಕಾರ ಕೈಗೊಂಡ ಕ್ರಮಗಳ ಕುರಿತು ಚರ್ಚಿಸಿದರು. ಅಲ್ಲದೆ, ಆಯವ್ಯಯದಲ್ಲಿ ಘೋಷಿಸಿದ ಕಾರ್ಯಕ್ರಮಗಳ ಅನುಷ್ಠಾನ, ಸಾಲಮನ್ನಾ ಯೋಜನೆ ಪ್ರಗತಿ ಕುರಿತು ಮಾಹಿತಿ ಪಡೆದರು.

ಲೋಕಸಭೆ ಚುನಾವಣಾ ಪ್ರಚಾರ ಸಂದರ್ಭದಲ್ಲಿ ಹಲವು ಗ್ರಾಮಗಳಲ್ಲಿ ರೈತರು ವಿದ್ಯುತ್ ಸಮಸ್ಯೆ ಕುರಿತು ತಮ್ಮ ಗಮನ ಸೆಳೆದ ಬಗ್ಗೆ ಪ್ರಸ್ತಾಪಿಸಿದ ಮುಖ್ಯಮಂತ್ರಿ ಕುಮಾರಸ್ವಾಮಿ ವಿದ್ಯುತ್ ಸಮಸ್ಯೆ ನಿವಾರಣೆಗೆ ಕ್ರಮ ಕೈಗೊಳ್ಳುವಂತೆ ಇದೇ ವೇಳೆ ನಿರ್ದೇಶನ ನೀಡಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News