ವಿದ್ಯಾರ್ಥಿ, ಮಹಿಳಾ ಪರ ಸಂಘಟನೆಗಳಿಂದ ಧರಣಿ: ಮಧು ಪತ್ತಾರ್ ನಿಗೂಢ ಸಾವು ಪ್ರಕರಣ ಸಿಬಿಐಗೆ ವಹಿಸಲು ಪಟ್ಟು

Update: 2019-04-25 15:33 GMT

ರಾಯಚೂರು.ಎ.25: ಕಳೆದೊಂದು ವಾರದ ಹಿಂದೆ ನಡೆದಿದ್ದ ಇಲ್ಲಿನ ಎಂಜಿನಿಯರಿಂಗ್ ವಿದ್ಯಾರ್ಥಿನಿ ಮಧು ಪತ್ತಾರ್‌ರ ನಿಗೂಢ ಸಾವಿನ ಪ್ರಕರಣ ಸಿಬಿಐ ತನಿಖೆಗೆ ಒಪ್ಪಿಸಬೇಕು ಎಂದು ಆಗ್ರಹಿಸಿ ವಿವಿಧ ವಿದ್ಯಾರ್ಥಿ, ಮಹಿಳಾ ಪರ ಸಂಘಟನೆಗಳು ರಾಯಚೂರಿನಲ್ಲಿಂದು ಬೃಹತ್ ಪ್ರತಿಭಟನೆ ನಡೆಸಲಾಯಿತು.

ಎಸ್‌ಎಫ್‌ಐ, ಜೆಎಂಎಸ್, ಕೆವಿಎಸ್, ಕರ್ನಾಟಕ ಜನಶಕ್ತಿ, ಮಹಿಳಾ ಮುನ್ನಡೆ ಸೇರಿದಂತೆ ಹಲವು ಪ್ರಗತಿಪರ ಸಂಘಟನೆಗಳ ನೇತೃತ್ವದಲ್ಲಿ ಸಾವಿರಾರು ಸಂಖ್ಯೆಯಲ್ಲಿ ವಿದ್ಯಾರ್ಥಿಗಳು, ಮಹಿಳೆಯರು ಬೀದಿಗಿಳಿದು ಕೊಲೆಗಡುಕರನ್ನು ಶಿಕ್ಷಿಸಬೇಕು ಎಂದು ಒತ್ತಾಯಿಸಿ ಧರಣಿ ನಡೆಸಿದರು. ಇದಕ್ಕೆ ಚಿತ್ರರಂಗದ ನಟ, ನಟಿಯರು ಸಾಥ್ ನೀಡುವ ಮೂಲಕ ಪ್ರತಿಭಟನೆಗೆ ಬೆಂಬಲ ಸೂಚಿಸಿದರು.

ಮಾಣಿಕಪ್ರಭು ದೇವಸ್ಥಾನದಿಂದ ಆರಂಭಗೊಂಡ ಪ್ರತಿಭಟನೆ ಎಲ್‌ಡಿ ಕಾಲೇಜು ವೃತ್ತ, ವಿವೇಕಾನಂದ ವೃತ್ತ, ನೇತಾಜಿ ನಗರ, ಸರಾಫ್ ಬಜಾರ, ಕಿರಾಣಿ ಬಜಾರ್ ಮೂಲಕ ಜಿಲ್ಲಾಧಿಕಾರಿಗಳ ಕಚೇರಿಗೆ ಆಗಮಿಸಿ, ಜಿಲ್ಲಾಧಿಕಾರಿಗಳ ಮೂಲಕ ರಾಜ್ಯ ಸರಕಾರಕ್ಕೆ ಮನವಿ ಸಲ್ಲಿಸುವ ಮೂಲಕ ಸಾವಿರಾರು ವಿದ್ಯಾರ್ಥಿಗಳು ಮಧು ಪತ್ತಾರ್ ಪ್ರಕರಣ ಸಿಬಿಐಗೆ ವಹಿಸುವಂತೆ ಆಗ್ರಹಿಸಿದರು.

ಮೆರವಣಿಗೆ ಸಂದರ್ಭದಲ್ಲಿ ಮಾತನಾಡಿದ ಚಲನಚಿತ್ರ ನಟ ಭುವನ್, ಈ ಪ್ರಕರಣವನ್ನು ಸಿಬಿಐ ತನಿಖೆಗೆ ವಹಿಸಬೇಕು. ಕೃತ್ಯ ಎಸಗಿದವರಿಗೆ ಕಠಿಣ ಶಿಕ್ಷೆ ವಿಧಿಸಬೇಕು ಹಾಗೂ ಇಂತಹ ಘಟನೆ ನಡೆಯದಂತೆ ಪೊಲೀಸರು ಎಚ್ಚರ ವಹಿಸಬೇಕು ಎಂದು ಸರಕಾರವನ್ನು ಒತ್ತಾಯಿಸಿದರು.

ವಿದ್ಯಾರ್ಥಿನಿಯರು ಮಾನಸಿಕ ಒತ್ತಡಕ್ಕೆ ಒಳಗಾದ ಸಂದರ್ಭದಲ್ಲಿ ಅಥವಾ ಲೈಂಗಿಕ ದೌರ್ಜನ್ಯಗಳಿಗೆ ಒಳಪಟ್ಟಾಗ ಅದನ್ನು ದೂರು ದಾಖಲಿಸಲು ಎಲ್ಲ ಶಾಲಾ-ಕಾಲೇಜುಗಳಲ್ಲಿ ಲೈಂಗಿಕ ಹಿಂಸೆ ತಡೆ ಸಮಿತಿ ರಚಿಸಬೇಕು ಎಂಬ ಸುಪ್ರೀಂಕೋರ್ಟ್ ಆದೇಶವಿದೆ. ಅದನ್ನು ಜಾರಿ ಮಾಡಿಲ್ಲ. ಅಲ್ಲದೆ, ಇದೇ ವಿದ್ಯಾಸಂಸ್ಥೆಯ ನರ್ಸಿಂಗ್ ಕಾಲೇಜಿಗೆ ಸೇರಿದ್ದ ವಿದ್ಯಾರ್ಥಿನಿಯೊಬ್ಬರನ್ನೂ ಇದೇ ಸ್ಥಳದ ಆಸುಪಾಸಿನಲ್ಲಿ ಭೀಕರವಾಗಿ ಕೊಲೆ ಮಾಡಲಾಗಿತ್ತು. ಇಂತಹ ಇನ್ನೂ ಕೆಲವು ಪ್ರಕರಣಗಳು ನಿರ್ಜನವಾಗಿರುವ ಆ ಪ್ರದೇಶದಲ್ಲಿ ನಡೆದಿದ್ದರೂ ಕೂಡಾ, ಅಗತ್ಯವಿರುವಷ್ಟು ಪ್ರಮಾಣದ ಸುರಕ್ಷತಾ ಕ್ರಮಗಳನ್ನು ಕೈಗೊಂಡಿಲ್ಲ. ಈ ಪ್ರಕರಣ ನಡೆದ ಸಂದರ್ಭದಲ್ಲೂ, ವಿದ್ಯಾರ್ಥಿನಿ ಕಾಣೆಯಾದ ಮೂರನೇ ದಿನ ಆ ಸ್ಥಳದಲ್ಲಿ ಮೃತದೇಹವನ್ನು ಪತ್ತೆ ಮಾಡಲಾಗಿದೆ ಎಂದರೆ ಎಷ್ಟರಮಟ್ಟಿಗೆ ಪೊಲೀಸ್ ಭದ್ರತೆಯಿದೆ ಎಂಬುದು ಗೊತ್ತಾಗುತ್ತದೆ ಎಂದು ವಿದ್ಯಾರ್ಥಿ ಸಂಘಟನೆಗಳ ಮುಖಂಡರು ಆಕ್ರೋಶ ವ್ಯಕ್ತಪಡಿಸಿದರು.

ಪೊಲೀಸ್ ಇಲಾಖೆಯು ಯಾರ ಒತ್ತಡಕ್ಕೂ ಒಳಗಾಗದೇ ತನಿಖೆ ನಡೆಸಬೇಕು. ಈ ತನಿಖೆಯನ್ನು ಕೂಡಲೇ ಸಿಬಿಐಗೆ ವಹಿಸುವ ಮೂಲಕ ಮಧು ಪತ್ತಾರ್‌ರಿಗೆ ನ್ಯಾಯ ಸಿಗುವಂತೆ ಮಾಡಬೇಕು. ಅಲ್ಲದೆ, ಮುಂದಿನ ದಿನಗಳಲ್ಲಿ ಇಂತಹ ಘಟನೆಗಳು ಮರುಕಳಿಸದಂತೆ ಸೂಕ್ತ ಕಾನೂನು ಕ್ರಮಗಳನ್ನು ಕೈಗೊಳ್ಳಬೇಕು. ಎಲ್ಲ ಕಡೆಗಳಲ್ಲಿಯೂ ಬಿಗಿಭದ್ರತೆ ಕಲ್ಪಿಸಬೇಕು. ವಿದ್ಯಾರ್ಥಿನಿಯರಿಗೆ ಸೂಕ್ತ ರಕ್ಷಣೆ ನೀಡಬೇಕು ಎಂದು ವಿದ್ಯಾರ್ಥಿಗಳು ಆಗ್ರಹಪಡಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News