ಮೆಟ್ರೋ ಪಿಲ್ಲರ್‌ನಲ್ಲಿ ಬಿರುಕು: ಶೀಘ್ರ ಕ್ರಮಕ್ಕೆ ಮೇಯರ್ ಆಗ್ರಹ

Update: 2019-04-25 15:38 GMT
ಸಾಂದರ್ಭಿಕ ಚಿತ್ರ

ಬೆಂಗಳೂರು, ಎ.25: ಬಿಬಿಎಂಪಿ ವ್ಯಾಪ್ತಿಯಲ್ಲಿನ ಮೆಟ್ರೋ ಪಿಲ್ಲರ್‌ಗಳಲ್ಲಿ ಬಿರುಕು ಬಿಟ್ಟಿರುವುದರ ಸಂಬಂಧ ಪಾಲಿಕೆ ಮೇಯರ್ ಗಂಗಾಂಬಿಕೆ ಮಲ್ಲಿಕಾರ್ಜುನ್ ಅಸಮಾಧಾನ ವ್ಯಕ್ತಪಡಿಸಿದ್ದು, ಶೀಘ್ರ ಕ್ರಮ ಕೈಗೊಳ್ಳುವಂತೆ ಪತ್ರ ಬರೆದಿದ್ದಾರೆ.

ಪ್ರತಿದಿನ ಎರಡು ಹಂತಗಳಲ್ಲಿರುವ ನಮ್ಮ ಮೆಟ್ರೋದಲ್ಲಿ ಲಕ್ಷಾಂತರ ಸಂಖ್ಯೆಯಲ್ಲಿ ಪ್ರಯಾಣ ಮಾಡುತ್ತಿರುತ್ತಾರೆ. ಇಂತಹ ಸಂದರ್ಭದಲ್ಲಿ ಪಿಲ್ಲರ್‌ಗಳ ನಡುವೆ ಪದೇ ಪದೇ ಬಿರುಕು ಕಾಣಿಸಿಕೊಳ್ಳುತ್ತಿರುವುದು ಅಪಾಯದ ಮುನ್ಸೂಚನೆಯಾಗಿದೆ. ಇದರಿಂದ ಪ್ರಯಾಣಿಕರು ಭಯ ಪಡುವ ಸ್ಥಿತಿ ನಿರ್ಮಾಣವಾಗಿದ್ದು, ಮೆಟ್ರೋ ಸೇವೆಯನ್ನು ಬಳಕೆ ಮಾಡಲು ಹಿಂದೇಟು ಹಾಕುವ ಸ್ಥಿತಿ ನಿರ್ಮಾಣವಾಗುತ್ತಿದೆ ಎಂದು ಹೇಳಿದ್ದಾರೆ.

ನಗರದಲ್ಲಿರುವ ಮೆಟ್ರೋ ನಿಲ್ದಾಣಗಳನ್ನು ಹಾಗೂ ಪಿಲ್ಲರ್‌ಗಳನ್ನು ಕೂಡಲೇ ಪುನರ್‌ಪರಿಶೀಲನೆ ಮಾಡಬೇಕು. ಆ ಮೂಲಕ ಸಾರ್ವಜನಿಕರಲ್ಲಿ ಉಂಟಾಗಿರುವ ಆತಂಕವನ್ನು ನಿವಾರಣೆ ಮಾಡಲು ಮುಂದಾಗಬೇಕು ಎಂದು ಮೇಯರ್ ಬಿಎಂಆರ್‌ಸಿಎಲ್ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.

ಕಳೆದ ಸಲ ಟ್ರಿನಿಟಿ ವೃತ್ತದಲ್ಲಿ ಮೆಟ್ರೋ ಪಿಲ್ಲರ್ ಬಿರುಕು ಬಿಟ್ಟಿದ್ದ ಸಂದರ್ಭದಲ್ಲಿ ಉಪ ಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್ ಜತೆಗೆ ನಾನೂ ಭೇಟಿ ನೀಡಿ ಪರಿಶೀಲನೆ ನಡೆಸಿದ ಬಳಿಕ ಬಿಎಂಆರ್‌ಸಿಎಲ್‌ಗೆ ಪತ್ರ ಬರೆದು ಬಿರುಕು ಬಿಟ್ಟಿರುವ ಪಿಲ್ಲರ್‌ಗಳ ಸದೃಢಗೊಳಿಸಲು ಸೂಚನೆ ನೀಡಲಾಗಿತ್ತು. ಆದರೆ, ಅಧಿಕಾರಿಗಳು ಅದನ್ನು ಗಂಭೀರವಾಗಿ ಪರಿಗಣಿಸಿಲ್ಲ ಎಂದು ಮೇಯರ್ ಆಕ್ರೋಶ ವ್ಯಕ್ತಪಡಿಸಿದರು.

ಇದೀಗ ಮತ್ತೊಂದು ಬಾರಿ ಪಿಲ್ಲರ್ ಬಿರುಕು ಬಿಟ್ಟಿದೆ. ಈ ಬಾರಿಯಾದರೂ ಅಧಿಕಾರಿಗಳು ಇದನ್ನು ಗಂಭೀರವಾಗಿ ಪರಿಗಣಿಸಬೇಕು. ಕೂಡಲೇ ಎಲ್ಲ ಮಾರ್ಗದ ಪಿಲ್ಲರ್‌ಗಳನ್ನು ತಪಾಸಣೆ ಮಾಡಬೇಕು. ಸಮಗ್ರವಾಗಿ ಪರಿಶೀಲಿಸಿ, ಬಳಿಕ ಅಗತ್ಯವಿರುವ ಕಡೆ ಸೂಕ್ತ ಕ್ರಮ ಕೈಗೊಂಡು ಜಾಗೃತಿಯಾಗಿ ರೂಪಿಸಬೇಕು. ಪ್ರಯಾಣಿಕರಿಗೆ ಯಾವುದೇ ತೊಂದರೆಯಾಗದಂತೆ ನೋಡಿಕೊಳ್ಳಬೇಕು ಎಂದು ಮೇಯರ್ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News