ಐಎಎಸ್ ಅಧಿಕಾರಿ ಮುಹಮ್ಮದ್ ಮೊಹ್ಸಿನ್ ಅಮಾನತಿಗೆ ತಡೆ
Update: 2019-04-25 21:23 IST
ಬೆಂಗಳೂರು, ಎ. 25: ಒಡಿಶ್ಶಾದ ಸಾಂಬಾಲ್‌ಪುರದಲ್ಲಿ ಕಳೆದ ವಾರ ಪ್ರಧಾನಿ ನರೇಂದ್ರ ಮೋದಿ ಅವರ ಹೆಲಿಕಾಪ್ಟರ್ ಪರಿಶೀಲನೆ ನಡೆಸಿದ ಐಎಎಸ್ ಅಧಿಕಾರಿಯನ್ನು ಅಮಾನತುಗೊಳಿಸಿರುವುದಕ್ಕೆ ಕೇಂದ್ರ ಆಡಳಿತ ಟ್ರಿಬ್ಯೂನಲ್ ತಡೆ ನೀಡಿದೆ.
ವಿಶೇಷ ರಕ್ಷಣಾ ಗುಂಪು (ಎಸ್‌ಪಿಜಿ) ನೀಡಿದ ಸೂಚನೆ ಅನುಸರಿಸಿ ಅವರು ವರ್ತಿಸಿಲ್ಲ ಎಂದು ಹೇಳಿರುವ ಚುನಾವಣಾ ಆಯೋಗ ಐಎಎಸ್ ಅಧಿಕಾರಿ ಮುಹಮ್ಮದ್ ಮೊಹ್ಸಿನ್ ಅವರನ್ನು ಅಮಾನತುಗೊಳಿಸಿತ್ತು. ಆದರೆ, ಪ್ರತಿಪಕ್ಷಗಳು ಈ ಬಗ್ಗೆ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದವು. ಚುನಾವಣೆ ಸಂದರ್ಭ ಇಂತಹ ಪರಿಶೀಲನೆಯಲ್ಲಿ ಕೆಲವರಿಗೆ ವಿನಾಯತಿ ನೀಡಬೇಕು ಎಂಬ ಯಾವುದೇ ನಿಯಮ ಇಲ್ಲ ಎಂದು ಅವುಗಳು ಹೇಳಿದ್ದವು.
ಮುಹಮ್ಮದ್ ಮೊಹ್ಸಿನ್ 1996 ಕರ್ನಾಟಕ ಶ್ರೇಣಿಯ ಐಎಎಸ್ ಅಧಿಕಾರಿ. ಅವರ ವಿರುದ್ಧ ಅವಿಧೇಯತೆ ಹಾಗೂ ಕರ್ತವ್ಯ ಲೋಪದ ಆರೋಪ ಹೊರಿಸಲಾಗಿತ್ತು.