ಸ್ಮಾರ್ಟ್‌ಕಾರ್ಡ್‌ನಲ್ಲಿ ಕನಿಷ್ಠ ಹಣ ಕಡ್ಡಾಯ: ಮೆಟ್ರೋ ಪ್ರಯಾಣಿಕರ ಪರದಾಟ

Update: 2019-04-25 16:00 GMT

ಬೆಂಗಳೂರು, ಎ.25: ನಮ್ಮ ಮೆಟ್ರೋ ಜಾರಿ ಮಾಡಿರುವ ಸ್ಮಾರ್ಟ್ ಕಾರ್ಡ್‌ನಲ್ಲಿ ಕನಿಷ್ಠ 50 ರೂ. ಹಣ ಕಡ್ಡಾಯ ನಿಯಮದಿಂದಾಗಿ ಬಿಎಂಆರ್‌ಸಿಎಲ್‌ಗೆ ಆದಾಯ ತಂದುಕೊಡುತ್ತಿದ್ದರೆ, ಪ್ರಯಾಣಿಕರಿಗೆ ತಲೆನೋವಾಗಿ ಪರಿಣಮಿಸಿದೆ.

ಕಳೆದ ತಿಂಗಳು ಬಿಎಂಆರ್‌ಸಿಎಲ್ ಏಕಾಏಕಿ ಮೆಟ್ರೋ ಬಳಕೆ ಮಾಡುವ ಪ್ರಯಾಣಿಕರು ಉಪಯೋಗಿಸುವ ಸ್ಮಾರ್ಟ್ ಕಾರ್ಡ್‌ಗಳಲ್ಲಿ ಕನಿಷ್ಠ 50 ರೂ.ಹಣ ಇರಬೇಕು ಎಂಬ ನಿಯಮ ಜಾರಿ ಮಾಡಿತು. ಇದನ್ನು ಹಲವರು ಸಾಮಾಜಿಕ ಜಾಲತಾಣದಲ್ಲಿ ಖಂಡಿಸಿದರು. ಇನ್ನು ಕೆಲವರು ನಗರದ ಪುರಭವನದ ಎದುರು ಪ್ರತಿಭಟನೆಯನ್ನು ನಡೆಸಿದರು.

ಬಿಎಂಆರ್‌ಸಿಎಲ್ ಇದ್ಯಾವುದಕ್ಕೂ ಕ್ಯಾರೇ ಎನ್ನದೇ ನಿಯಮ ಸಡಿಲಿಕೆಗೆ ಮುಂದಾಗಿರಲಿಲ್ಲ. ಇದರಿಂದಾಗಿ ಪ್ರಯಾಣಿಕರು ಪರದಾಡುವಂತಾಗಿದೆ. ಪ್ರತಿದಿನ ಮೆಟ್ರೋದಲ್ಲಿ ಲಕ್ಷಾಂತರ ಜನ ಪ್ರಯಾಣಿಸುತ್ತಾರೆ. ಸ್ಮಾರ್ಟ್ ಕಾರ್ಡ್‌ಗಳಲ್ಲಿ 50 ರೂ.ಗಳಿಗಿಂತ ಕಡಿಮೆ ಇದ್ದರೆ, ದ್ವಾರಗಳ ಬಾಗಿಲು ತೆಗೆದುಕೊಳ್ಳುವುದೇ ಇಲ್ಲ. ಹೀಗಾಗಿ ಅನಿವಾರ್ಯವಾಗಿ ಪ್ರಯಾಣಿಕರು ಈ ಮೊತ್ತವನ್ನು ಕಾರ್ಡ್‌ನಲ್ಲಿ ಇಟ್ಟುಕೊಳ್ಳುವಂತಾಗಿದೆ.

ಬಿಎಂಆರ್‌ಸಿಎಲ್ ಉದ್ದವಾದ ಸಾಲುಗಳನ್ನು ತಪ್ಪಿಸುವ ಉದ್ದೇಶದಿಂದ ಸ್ಮಾರ್ಟ್‌ಕಾರ್ಡ್‌ಗಳನ್ನು ಪರಿಚಯ ಮಾಡಿತ್ತು. ಆದರೆ, ಇದೀಗ ಬಿಎಂಆರ್‌ಸಿಎಲ್‌ನ ಅವೈಜ್ಞಾನಿಕ ನಿಯಮಗಳಿಂದಾಗಿ ಮತ್ತೊಮ್ಮೆ ಪ್ರಯಾಣಿಕರು ಸ್ಮಾರ್ಟ್‌ಕಾರ್ಡ್ ಕೈ ಬಿಟ್ಟು ಟೋಕನ್‌ಗಳನ್ನು ಪಡೆಯುವ ಮೂಲಕ ಸಾಲು ನಿಲ್ಲುವವರ ಸಂಖ್ಯೆ ಅಧಿಕವಾಗುತ್ತಿದೆ. ಹೊಸ ನಿಯಮದಿಂದ ಪ್ರತಿದಿನ ಕಾರ್ಪೋರೇಟ್ ಕಂಪನಿಗಳಲ್ಲಿ, ಐಟಿ-ಬಿಟಿ ಕಂಪನಿಗಳಲ್ಲಿ ದುಡಿಯುವವರು 1-2 ಸಾವಿರ ಒಂದೇ ಬಾರಿಗೆ ರೀಚಾರ್ಜ್ ಮಾಡಿಸುವುದರಿಂದ ಅವರಿಗೆ ಯಾವುದೇ ತೊಂದರೆಯಾಗುವುದಿಲ್ಲ. ಆದರೆ, 100-200 ರೀಜಾರ್ಜ್ ಮಾಡಿಸಿಕೊಂಡು ಪ್ರಯಾಣಿಸುವ ಅನೇಕರಿದ್ದು, ಅವರಿಗೆ ತೀವ್ರ ತೊಂದರೆಯಾಗುತ್ತದೆ ಎಂದು ಪ್ರಯಾಣಿಕರೊಬ್ಬರು ಅಭಿಪ್ರಾಯಿಸಿದ್ದಾರೆ.

ಆರ್ಥಿಕ ಹೊರೆ ತಪ್ಪಿಸುವ ಉದ್ದೇಶ: ನಮ್ಮ ಮೆಟ್ರೋ ಆರ್ಥಿಕ ಸಂಕಷ್ಟಕ್ಕೆ ಗುರಿಯಾದ ಹಿನ್ನೆಲೆಯಲ್ಲಿ ಅದರಿಂದ ಹೊರಬರಬೇಕಾದರೆ ಅನಿವಾರ್ಯವಾಗಿ ಈ ಹೊಸ ನಿಯಮ ಮಾಡಬೇಕಾಗಿ ಬಂದಿತು ಎಂದು ಬಿಎಂಆರ್‌ಸಿಎಲ್‌ನ ಹಿರಿಯ ಅಧಿಕಾರಿಯೊಬ್ಬರು ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News