115 ಅಧಿಕಾರಿಗಳಿಗೆ ಹುದ್ದೆ ತೋರಿಸಿ ಅಧಿಸೂಚನೆ ಹೊರಡಿಸಿ: ಹೈಕೋರ್ಟ್ ನಿರ್ದೇಶನ

Update: 2019-04-25 16:15 GMT

ಬೆಂಗಳೂರು, ಎ.25: 1998ನೆ ಸಾಲಿನ ಕೆಪಿಎಸ್‌ಸಿ ನೇಮಕ ಹಗರಣ ವಿಚಾರಕ್ಕೆ ಸಂಬಂಧಿಸಿದಂತೆ 2019ರ ಜ.25ರಂದು ಗೆಜೆಟ್‌ನಲ್ಲಿ ಪ್ರಕಟಿಸಿರುವ ಪಟ್ಟಿಯ ಅನುಸಾರ ಮುಂಬಡ್ತಿ, ಹಿಂಭಡ್ತಿ ಪಡೆದಿರುವ 115 ಅಧಿಕಾರಿಗಳಿಗೆ ಕೂಡಲೇ ಹುದ್ದೆ ತೋರಿಸಿ ಅಧಿಸೂಚನೆ ಹೊರಡಿಸುವಂತೆ ರಾಜ್ಯ ಸರಕಾರಕ್ಕೆ ಹೈಕೋರ್ಟ್ ನಿರ್ದೇಶಿಸಿದೆ.

ಈ ಕುರಿತಂತೆ ಎಸ್.ಶ್ರೀನಿವಾಸ್ ಸೇರಿ ಒಟ್ಟು ಆರು ಜನರು ಸಲ್ಲಿಸಿರುವ ನ್ಯಾಯಾಂಗ ನಿಂದನೆ ಅರ್ಜಿಯನ್ನು ನ್ಯಾಯಮೂರ್ತಿ ಬಿ.ವಿ.ನಾಗರತ್ನ ಹಾಗೂ ನ್ಯಾಯಮೂರ್ತಿ ಎಚ್.ಟಿ.ನರೇಂದ್ರ ಪ್ರಸಾದ್ ಅವರಿದ್ದ ವಿಭಾಗೀಯ ನ್ಯಾಯಪೀಠ ವಿಚಾರಣೆ ನಡೆಸಿತು.

ಅರ್ಜಿದಾರರ ಪರ ವಾದಿಸಿದ ವಕೀಲರು, ರಾಜ್ಯದಲ್ಲಿ ಲೋಕಸಭಾ ಚುನಾವಣೆ ಎ.23ರಂದು ಮುಗಿದಿದ್ದರೂ ಅಧಿಕಾರಿಗಳಿಗೆ ಯಾವುದೆ ಹುದ್ದೆಯನ್ನೂ ಅಧಿಕೃತವಾಗಿ ತೋರಿಸಿಲ್ಲ ಎಂದು ಪೀಠಕ್ಕೆ ತಿಳಿಸಿದರು. ನ್ಯಾಯಪೀಠವು ಲೋಕಸಭಾ ಚುನಾವಣೆ ಮುಗಿದ ತಕ್ಷಣ ಚುನಾವಣೆಯಲ್ಲಿ ಕರ್ತವ್ಯಕ್ಕೆ ಹಾಜರಾದವರಿಗೆ ಹಾಗೂ ಚುನಾವಣೆ ಕರ್ತವ್ಯಕ್ಕೆ ಹಾಜರಾಗದವರಿಗೆ ಹುದ್ದೆಯನ್ನು ತೋರಿಸಬೇಕೆಂದು ಆದೇಶಿಸಿತ್ತು. ಆದರೆ, ಇನ್ನೂ ಹುದ್ದೆಯನ್ನು ತೋರಿಸಿಲ್ಲ ಎಂದು ಪೀಠಕ್ಕೆ ತಿಳಿಸಿದರು.

ಸರಕಾರದ ಪರ ವಾದಿಸಿದ ಅಡ್ವೊಕೇಟ್ ಜನರಲ್ ಉದಯ ಹೊಳ್ಳ ಅವರು, ಮೇ 23ರವರೆಗೆ ಮುಂಭಡ್ತಿ, ಹಿಂಭಡ್ತಿ ಪಡೆದಿರುವ 115 ಅಧಿಕಾರಿಗಳಿಗೆ ಹುದ್ದೆಗಳನ್ನು ತೋರಿಸಲು ಬರುವುದಿಲ್ಲ. ಹಾಗೊಂದು ಬಾರಿ ಲೋಕಸಭಾ ಚುನಾವಣೆ ಫಲಿತಾಂಶದ ಮೊದಲೆ ಅಧಿಕಾರಿಗಳಿಗೆ ಹುದ್ದೆಗಳನ್ನು ತೋರಿಸಿ ಕರ್ತವ್ಯಕ್ಕೆ ಹಾಜರಾಗಲು ಸೂಚಿಸಿದರೆ ಸಮಸ್ಯೆ ಉದ್ಭವವಾಗುತ್ತದೆ ಎಂದು ಪೀಠಕ್ಕೆ ತಿಳಿಸಿದರು. ಇದಕ್ಕೆ ಪ್ರತಿಕ್ರಿಯಿಸಿದ ನ್ಯಾಯಪೀಠವು 115 ಅಧಿಕಾರಿಗಳ ಪೈಕಿ ಚುನಾವಣಾ ಕರ್ತವ್ಯಕ್ಕೆ ನಿಯೋಜನೆಗೊಂಡವರು ಮೇ 23ರ ನಂತರ ತಮ್ಮ ಕರ್ತವ್ಯಕ್ಕೆ ಹಾಜರಾಗಬೇಕು. ಹಾಗೂ ಚುನಾವಣಾ ಕರ್ತವ್ಯಕ್ಕೆ ಹಾಜರಾಗದವರು ಸರಕಾರದ ಆದೇಶ ದೊರೆತ ಕೂಡಲೇ ಸಂಬಂಧಪಟ್ಟ ಇಲಾಖೆಗಳ ಮುಖ್ಯಸ್ಥರ ಮುಂದೆ ಹಾಜರಾಗಿ ಕಾನೂನಿನ ಪ್ರಕಾರ ಹುದ್ದೆ ಪಡೆದುಕೊಳ್ಳಬೇಕೆಂದು ಸೂಚನೆ ನೀಡಿ, ವಿಚಾರಣೆಯನ್ನು ಮುಂದೂಡಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News