ಜೆಟ್ ಏರ್‌ವೇಸ್‌ಗೆ ಬಂಡವಾಳ ಹೂಡಿಕೆಗೆ ನಾವು ಸಿದ್ಧ: ಗೋಲ್ಡ್ ಟವರ್ ಗ್ರೂಪ್ ನ ಮುಹಮ್ಮದ್ ಲತೀಫ್

Update: 2019-04-25 16:26 GMT

ಬೆಂಗಳೂರು, ಎ.25: ಜೆಟ್‌ಏರ್‌ವೇಸ್‌ನಲ್ಲಿ ನಾವು ಮರು ಬಂಡವಾಳ ಹೂಡಿಕೆಗೆ ಸಿದ್ಧವಿದ್ದರೂ ಸಂಸ್ಥೆಯವರು ನಮಗೆ ಸ್ಪಂದಿಸುತ್ತಿಲ್ಲ ಎಂದು ಸೌದಿ ಅರೇಬಿಯಾದ ಗೋಲ್ಡ್ ಟವರ್ ಗ್ರೂಪ್ ಸಂಸ್ಥೆಯ ಸಂಸ್ಥಾಪಕ ಮುಹಮ್ಮದ್ ನಗ್ ಮನ್ ಲತೀಫ್ ಆರೋಪಿಸಿದ್ದಾರೆ.

ನಗರದ ಪ್ರೆಸ್‌ಕ್ಲಬ್‌ನಲ್ಲಿ ಆಯೋಜಿಸಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಜೆಟ್‌ಏರ್‌ವೇಸ್ ಆರ್ಥಿಕ ಸಂಕಷ್ಟದಿಂದ ಎ.17 ರಿಂದ ಹಾರಾಟ ನಿಲ್ಲಿಸಿವೆ. ಇದರಿಂದಾಗಿ ಸುಮಾರು 16 ಸಾವಿರಕ್ಕೂ ಅಧಿಕ ಜನರು ಉದ್ಯೋಗ ಕಳೆದುಕೊಂಡಿದ್ದಾರೆ. ಆದರೆ, ಇದಕ್ಕೆ ಸೂಕ್ತ ಕ್ರಮಕ್ಕೆ ಸಂಸ್ಥೆ ಮುಂದಾಗಿಲ್ಲ ಎಂದರು.

ಅಲ್ಲದೆ, ನಾವು ಎ.14 ರಂದೇ ಜೆಟ್ ಏರ್‌ವೇಸ್ ಸಂಸ್ಥೆಗೆ ತುರ್ತು ಹೂಡಿಕೆ ನೀಡುವುದಾಗಿ ಟ್ವೀಟ್ ಮಾಡಿದ್ದರೂ ಸಂಸ್ಥೆಯ ವತಿಯಿಂದ ಯಾವುದೇ ಪ್ರತಿಕ್ರಿಯೆ ಬಂದಿಲ್ಲ. ಸಂಸ್ಥೆಯ ನಿರ್ಲಕ್ಷ್ಯ ಧೋರಣೆಯಿಂದಾಗಿ ಸಾವಿರಾರು ಕುಟುಂಬಗಳು ಬೀದಿಗೆ ಬಂದಿವೆ ಎಂದು ಬೇಸರ ವ್ಯಕ್ತಪಡಿಸಿದರು.

ಜೆಟ್ ಏರ್‌ವೇಸ್ ಸಾವಿರಾರು ಕಾರ್ಮಿಕರನ್ನು ಗಂಭೀರವಾಗಿ ಪರಿಗಣಿಸಬೇಕು. 25 ವರ್ಷಗಳ ಇತಿಹಾಸವುಳ್ಳ ಸಂಸ್ಥೆ ಮುಚ್ಚುವ ಹಂತಕ್ಕೆ ತಲುಪಿರುವುದು ಶೋಚನೀಯ. ಹೀಗಾಗಿ, ಅದಕ್ಕೆ ಮರು ಜೀವ ನೀಡಲು ನಾವು ಉತ್ಸುಕರಾಗಿದ್ದೇವೆ. ಏರ್‌ವೇಸ್ ಸಂಸ್ಥೆ ನಮಗೆ ಸಹಕಾರ ನೀಡಬೇಕಿದೆ ಅಷ್ಟೇ. ಈಗ ಸಂಸ್ಥೆಗೆ ಆಗಿರುವ ನಷ್ಟವನ್ನು ತಪ್ಪಿಸಿ ಮತ್ತೆ ಸಂಸ್ಥೆಯ ವಿಮಾನಗಳನ್ನು ಹತ್ತೇ ದಿನದಲ್ಲಿ ಹಾರಾಟ ಮಾಡಲು ಎಲ್ಲಾ ರೀತಿಯ ನೆರವು ನೀಡಲಾಗುವುದು ಎಂದು ಭರವಸೆ ನೀಡಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News