ದಂಪತಿಯನ್ನು ಪಾಕಿಸ್ತಾನಕ್ಕೆ ಕಳುಹಿಸಿಕೊಡುವ ವ್ಯವಸ್ಥೆ ಮಾಡಿ: ಹೈಕೋರ್ಟ್ ಮೌಖಿಕ ಅಭಿಪ್ರಾಯ

Update: 2019-04-25 17:10 GMT

ಬೆಂಗಳೂರು, ಎ.25: ವೀಸಾ ಅವಧಿ ಮುಗಿದರೂ ಇಲ್ಲಿಯೆ ಅಕ್ರಮವಾಗಿ ನೆಲೆಸಿದ್ದ ಪಾಕಿಸ್ತಾನದ ದಂಪತಿಯನ್ನು ಅವರ ದೇಶಕ್ಕೆ ಕಳುಹಿಸಿಕೊಡುವ ವ್ಯವಸ್ಥೆ ಮಾಡುವಂತೆ ಹೈಕೋರ್ಟ್ ಮೌಖಿಕವಾಗಿ ಅಭಿಪ್ರಾಯ ವ್ಯಕ್ತಪಡಿಸಿದೆ.

ಅಧೀನ ನ್ಯಾಯಾಲಯ ವಿಧಿಸಿರುವ ಶಿಕ್ಷೆ ಪ್ರಮಾಣ ಕಡಿತಗೊಳಿಸುವಂತೆ ಕೋರಿ ಪಾಕಿಸ್ತಾನದ ಕರಾಚಿ ಜಿಲ್ಲೆಯ ಚಕ್ರಫೋಟ್ ನಿವಾಸಿ ಕಾಸೀಫ್ ಶಂಸುದ್ದೀನ್ ಹಾಗೂ ಕರಾಚಿ ಜಿಲ್ಲೆಯವರೇ ಆದ ಕಿರಣ್‌ಗುಲಾಮ್ ಅಲಿ ಸಲ್ಲಿಸಿದ್ದ ಅರ್ಜಿಯನ್ನು ನ್ಯಾಯಮೂರ್ತಿ ಅರವಿಂದ್‌ಕುಮಾರ್ ಅವರಿದ್ದ ನ್ಯಾಯಪೀಠದಲ್ಲಿ ವಿಚಾರಣೆ ನಡೆಯಿತು. ಸರಕಾರದ ಪರ ವಾದಿಸಿದ ವಕೀಲರು, ದಂಪತಿಯನ್ನು ಪಾಕಿಸ್ತಾನಕ್ಕೆ ಕಳುಹಿಸಲು ಸಂಬಂಧಪಟ್ಟ ಪ್ರಾಧಿಕಾರಗಳಿಂದ ಅನುಮತಿ ಕೋರಲಾಗಿದೆ ಎಂದು ಪೀಠಕ್ಕೆ ತಿಳಿಸಿದರು.

ವಕೀಲರ ವಾದ ಆಲಿಸಿದ ನ್ಯಾಯಪೀಠವು ಅನುಮತಿ ಕೇಳುವ ಅಗತ್ಯವೇನಿದೆ. ಅಕ್ರಮವಾಗಿ ನೆಲೆಸಿರುವ ಇವರನ್ನು ಕಾರಾಗೃಹದಲ್ಲಿ ಇರಿಸಿ ಏಕೆ ಸಾಕಬೇಕು. ಭಾರತೀಯರ ತೆರಿಗೆ ಹಣದಲ್ಲಿ ಇವರು ಅನ್ನ ತಿನ್ನುತ್ತಿದ್ದಾರೆ. ತಕ್ಷಣ ಇವರನ್ನು ಪಾಕಿಸ್ತಾನಕ್ಕೆ ಕಳುಹಿಸಿಕೊಡುವಂತೆ ಸೂಚಿಸಿತು. ಅಲ್ಲದೆ, ಶುಕ್ರವಾರ ನಿರ್ಧಾರ ತಿಳಿಸುವಂತೆ ಸೂಚಿಸಿ ವಿಚಾರಣೆಯನ್ನು ಮುಂದೂಡಿತು.

ಪ್ರಕರಣವೇನು: ಪಾಕಿಸ್ತಾನದ ಕರಾಚಿ ಜಿಲ್ಲೆಯ ಚಕ್ರಫೋಟ್ ನಿವಾಸಿ ಕಾಸೀಫ್ ಶಂಸುದ್ಧೀನ್ ಹಾಗೂ ಕರಾಚಿ ಜಿಲ್ಲೆಯವರೇ ಆದ ಕಿರಣ್ ಗುಲಾಮ್ ಅಲಿ ಬೆಂಗಳೂರಿಗೆ ಬಂದು ಮದುವೆಯಾಗಿದ್ದರು. ದಂಪತಿ ನಗರದಲ್ಲಿ ಬಾಡಿಗೆ ಮನೆ ಮಾಡಿಕೊಂಡು ವಾಸ ಮಾಡುತ್ತಿದ್ದರು. ಏತನ್ಮಧ್ಯೆ ವೀಸಾವಧಿ ಮುಗಿದ ನಂತರವೂ ದಂಪತಿ ಇಲ್ಲಿಯೆ ನೆಲೆಸಿದ್ದಾರೆ ಎಂಬ ಆರೋಪದ ಮೇಲೆ ಬನಶಂಕರಿ ಮತ್ತು ಕುಮಾರಸ್ವಾಮಿ ಲೇಔಟ್ ಠಾಣಾ ಪೊಲೀಸರು ದಂಪತಿಯನ್ನು ಬಂಧಿಸಿದ್ದರು. ಇಬ್ಬರ ವಿರುದ್ಧ ಐಪಿಸಿ ಹಾಗೂ ವಿದೇಶಿಯರ ನೋಂದಣಿ ಕಾಯ್ದೆಯ ವಿವಿಧ ಕಲಂಗಳ ಅಡಿಯಲ್ಲಿ ಎರಡು ಪತ್ಯೇಕ ಪ್ರಕರಣ ದಾಖಲಿಸಿದ್ದರು.

ಪ್ರಕರಣದ ವಿಚಾರಣೆ ನಡೆಸಿದ್ದ ನಗರದ 44ನೆ ಎಸಿಎಂಎಂ ನ್ಯಾಯಾಲಯ, ಎರಡೂ ಪ್ರಕರಣಗಳಲ್ಲಿ ಕ್ರಮವಾಗಿ 21 ಮತ್ತು 12 ತಿಂಗಳ ಜೈಲು ಶಿಕ್ಷೆ ಹಾಗೂ ದಂಡ ವಿಧಿಸಿ, ಎರಡೂ ಪ್ರಕರಣಗಳ ಶಿಕ್ಷೆಯನ್ನು ಪ್ರತ್ಯೇಕವಾಗಿಯೇ ಅನುಭವಿಸಬೇಕೆಂದು ಆದೇಶಿಸಿತ್ತು. ಈ ಆದೇಶವನ್ನು ಪ್ರಶ್ನಿಸಿರುವ ಅರ್ಜಿದಾರರು ನಾವು ಈಗಾಗಲೇ 21 ತಿಂಗಳು ಜೈಲು ಶಿಕ್ಷೆ ಅನುಭವಿಸಿದ್ದೇವೆ. ಊರಿನಲ್ಲಿ ನಮಗೆ ವೃದ್ಧ ಪೋಷಕರು ಹಾಗೂ ತಂಗಿಯರು ಇದ್ದಾರೆ. ಅವರು ನಮ್ಮ ಬಿಡುಗಡೆಯನ್ನೇ ಕಾಯುತ್ತಿದ್ದಾರೆ. ಹೀಗಾಗಿ, ವಿಚಾರಣಾ ನ್ಯಾಯಾಲಯ ವಿಧಿಸಿರುವ ಶಿಕ್ಷೆ ಏಕಕಾಲದಲ್ಲಿ ಜಾರಿಗೆ ಬರುವಂತೆ ನಿರ್ದೇಶಿಸಬೇಕೆಂದು ಕೋರಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News