ಖರ್ಗೆ, ಮುನಿಯಪ್ಪ, ದೇವೇಗೌಡರ ಸೋಲು ನಿಶ್ಚಿತ: ಬಿಜೆಪಿ ರಾಜ್ಯಾಧ್ಯಕ್ಷ ಯಡಿಯೂರಪ್ಪ

Update: 2019-04-26 13:30 GMT

ಬೆಂಗಳೂರು, ಎ. 26: ಕಲಬುರಗಿಯಲ್ಲಿ ಮಲ್ಲಿಕಾರ್ಜುನ ಖರ್ಗೆ, ಕೋಲಾರದಲ್ಲಿ ಕೆ.ಎಚ್.ಮುನಿಯಪ್ಪ, ತುಮಕೂರು ಕ್ಷೇತ್ರದಲ್ಲಿ ಜೆಡಿಎಸ್ ವರಿಷ್ಟ ದೇವೇಗೌಡ ಸೋಲು ನಿಶ್ಚಿತ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಭವಿಷ್ಯ ನುಡಿದಿದ್ದಾರೆ.

ಶುಕ್ರವಾರ ನಗರದಲ್ಲಿ ಲೋಕಸಭೆ ಚುನಾವಣೆಯಲ್ಲಿ ಸ್ಪರ್ಧಿಸಿದ್ದ ಬಿಜೆಪಿ ಅಭ್ಯರ್ಥಿಗಳೊಂದಿಗೆ ಮಾತನಾಡಿದ ಅವರು, ಮಲ್ಲಿಕಾರ್ಜುನ ಖರ್ಗೆ ಮತ್ತು ಮುನಿಯಪ್ಪ ಸೋಲು ಖಂಡಿತ. ದೇವೇಗೌಡರು ಸೋತರೆ ಅಚ್ಚರಿಪಡಬೇಕಿಲ್ಲ ಎಂದು ಹೇಳಿದರು.

ಬಿಜೆಪಿ ನಿಶ್ಚಿತವಾಗಿಯೂ ರಾಜ್ಯದಲ್ಲಿ 22 ಲೋಕಸಭೆ ಕ್ಷೇತ್ರಗಳನ್ನು ಗೆಲ್ಲಲ್ಲಿದ್ದು, ಕಾಂಗ್ರೆಸ್-ಜೆಡಿಎಸ್ ಘಟಾನುಘಟಿಗಳು ಭಾರೀ ಹಿನ್ನೆಡೆ ಅನುಭವಿಸಲಿದ್ದಾರೆ. ನಾನು ನಿಮ್ಮನ್ನು ಮೆಚ್ಚಿಸಲು ಈ ಮಾತುಗಳನ್ನು ಹೇಳುತ್ತಿಲ್ಲ. ಸರಿಯಾದ ಮಾಹಿತಿ ತೆಗೆದುಕೊಂಡು ಈ ಮಾತನ್ನು ಹೇಳುತ್ತಿದ್ದೇನೆ ಎಂದು ಸ್ಪಷ್ಟನೆ ನೀಡಿದರು

ಕಾಂಗ್ರೆಸ್-ಜೆಡಿಎಸ್ ಮೈತ್ರಿ ಸರಕಾರದಲ್ಲಿ ರಾಜಕೀಯದಲ್ಲಿ ಗೊಂದಲ ಆರಂಭವಾಗಿದ್ದು, ಮೇ 23ರ ಲೋಕಸಭೆ ಚುನಾವಣಾ ಫಲಿತಾಂಶದ ಬಳಿಕ ಇದು ಮತ್ತಷ್ಟು ಉಲ್ಬಣವಾಗಲಿದೆ ಎಂದ ಯಡಿಯೂರಪ್ಪ, ಕುಂದಗೋಳ ಮತ್ತು ಚಿಂಚೋಳಿ ಕ್ಷೇತ್ರಗಳ ಉಪ ಚುನಾವಣೆ ಗೆಲ್ಲುವ ನಿಟ್ಟಿನಲ್ಲಿ ನಾವೆಲ್ಲರೂ ಪ್ರಯತ್ನ ಮಾಡಬೇಕು ಎಂದು ಕರೆ ನೀಡಿದರು.

ಎಲ್ಲಿಗೂ ಹೋಗಬೇಡಿ: ಮೇ 23ರ ಲೋಕಸಭೆ ಚುನಾವಣೆ ಫಲಿತಾಂಶ ಹೊರ ಬೀಳುವವರೆಗೂ ಯಾತ್ರೆ, ಪ್ರವಾಸದ ನೆಪದಲ್ಲಿ ಎಲ್ಲಿಗೂ ಹೋಗಬೇಡಿ. ಉಪ ಚುನಾವಣೆ ಗೆಲ್ಲುವ ಸವಾಲು ನಮ್ಮ ಮುಂದಿದೆ. ಚುನಾವಣೆಯಲ್ಲಿ ಗೆಲ್ಲುವ ಮೂಲಕ ಮೈತ್ರಿ ಸರಕಾರಕ್ಕೆ ಪೆಟ್ಟು ನೀಡಬೇಕು ಎಂದು ಯಡಿಯೂರಪ್ಪ ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News