ಚಿಂಚೋಳಿ ಕ್ಷೇತ್ರ ಉಪ ಚುನಾವಣೆ: ಟಿಕೆಟ್ ಕೈ ತಪ್ಪಿದ್ದಕ್ಕೆ ಬಿಜೆಪಿಯ ಸುನೀಲ್ ವಲ್ಯಾಪುರೆ ಬಂಡಾಯ

Update: 2019-04-26 14:15 GMT

ಬೆಂಗಳೂರು, ಎ. 26: ಡಾ.ಉಮೇಶ್ ಜಾಧವ್ ಪುತ್ರ ಅವಿನಾಶ್ ಜಾಧವ್‌ಗೆ ಚಿಂಚೋಳಿ ಕ್ಷೇತ್ರದ ಟಿಕೆಟ್ ಅಂತಿಮಗೊಳಿಸಿದ ಹಿನ್ನೆಲೆಯಲ್ಲಿ ಪ್ರಬಲ ಆಕಾಂಕ್ಷಿ, ಮಾಜಿ ಸಚಿವ ಸುನೀಲ್ ವಲ್ಯಾಪುರೆ ಬಂಡಾಯದ ಬಾವುಟ ಹಾರಿಸಿದ್ದು, ಕ್ಷೇತ್ರದಲ್ಲಿ ನಾಳೆ ತನ್ನ ಬೆಂಬಲಿಗರ ಸಭೆ ಕರೆದಿದ್ದಾರೆ.

ಉಮೇಶ್ ಜಾಧವ್ ಮತ್ತು ಸುನೀಲ್ ವಲ್ಯಾಪುರೆ ಪ್ರತ್ಯೇಕವಾಗಿ ಯಡಿಯೂರಪ್ಪ ಅವರನ್ನು ಭೇಟಿ ಮಾಡಿ ಸಮಾಲೋಚನೆ ನಡೆಸಿದ್ದು, ತಮಗೆ ಟಿಕೆಟ್ ನೀಡುವಂತೆ ಮನವಿ ಮಾಡಿದ್ದಾರೆ. ಆದರೆ, ಪಕ್ಷ ಉಪ ಚುನಾವಣೆಯಲ್ಲಿ ಈಗಾಗಲೇ ಪೂರ್ವ ನಿರ್ಧಾರದಂತೆ ಉಮೇಶ್ ಜಾಧವ್ ಸೂಚನೆಯಂತೆ ಟಿಕೆಟ್ ಅಂತಿಮಗೊಳಿಸಿದೆ. ಹೀಗಾಗಿ ಟಿಕೆಟ್ ಕೈತಪ್ಪಿದ ಹಿನ್ನೆಲೆಯಲ್ಲಿ ಅಸಮಾಧಾನಗೊಂಡಿರುವ ವಲ್ಯಾಪುರೆ ನಾಳೆ(ಎ.27) ಚಿಂಚೋಳಿ ಕ್ಷೇತ್ರದ ರಹಸ್ಯ ಸ್ಥಳದಲ್ಲಿ ತನ್ನ ಬೆಂಬಲಗರ ಸಭೆ ಕರೆದಿದ್ದು, ಕಾಂಗ್ರೆಸ್ ಪಕ್ಷ ಸೇರ್ಪಡೆ ಸಂಬಂಧ ಸಮಾಲೋಚನೆ ನಡೆಸುವ ಸಾಧ್ಯತೆಗಳಿವೆ ಎಂದು ಗೊತ್ತಾಗಿದೆ.

ಉಪ ಚುನಾವಣೆಗೆ ನಾಮಪತ್ರ ಸಲ್ಲಿಸಲು ಎ.29 ಕೊನೆಯ ದಿನವಾಗಿದ್ದು, ಅಂದೇ ಉಮೇಶ್ ಜಾಧವ್ ಅವರ ಪುತ್ರ ಅವಿನಾಶ್ ಜಾಧವ್ ನಾಮಪತ್ರ ಸಲ್ಲಿಸಲಿದ್ದಾರೆ ಎಂದು ಹೇಳಲಾಗಿದೆ. ಆದರೆ, ಕಳೆದ ಚುನಾವಣೆಯಲ್ಲಿ ಸುನೀಲ್ ವಲ್ಯಾಪುರೆ ಬಿಜೆಪಿ ಅಭ್ಯರ್ಥಿಯಾಗಿ ಜಾಧವ್ ವಿರುದ್ಧ ಸ್ಪರ್ಧಿಸಿ ಸೋಲುಕಂಡಿದ್ದರು.

ಲೋಕಸಭೆ ಚುನಾವಣೆ ಹೊಸ್ತಿಲಿನಲ್ಲಿ ಜಾಧವ್ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿ ಕಾಂಗ್ರೆಸ್ ಹಿರಿಯ ಮುಖಂಡ ಮಲ್ಲಿಕಾರ್ಜುನ ಖರ್ಗೆ ವಿರುದ್ಧ ಸ್ಪರ್ಧಿಸಿದ್ದರು. ಟಿಕೆಟ್ ನಿರೀಕ್ಷೆಯಲ್ಲಿದ್ದ ಸುನೀಲ್ ವಲ್ಯಾಪುರೆ ಬಿಜೆಪಿ ರಾಜ್ಯಾಧ್ಯಕ್ಷ ಯಡಿಯೂರಪ್ಪನವರ ಮೇಲೆ ಅಸಮಾಧಾನಗೊಂಡಿದ್ದು, ಬಂಡಾಯದ ಬಾವುಟ ಹಾರಿಸಲು ಸನ್ನದ್ಧರಾಗಿದ್ದಾರೆಂದು ಹೇಳಲಾಗುತ್ತಿದೆ.

ಈ ಮಧ್ಯೆ ಉಮೇಶ್ ಜಾಧವ್ ಮತ್ತು ಸುನೀಲ್ ವಲ್ಯಾಪುರೆ ಅವರೊಂದಿಗೆ ಪ್ರತ್ಯೇಕವಾಗಿ ಸಮಾಲೋಚನೆ ನಡೆಸಿರುವ ಬಿಎಸ್‌ವೈ, ಉಪ ಚುನಾವಣೆಯಲ್ಲಿ ಪಕ್ಷದ ಗೆಲುವು ಮುಖ್ಯ. ಹೀಗಾಗಿ ಯಾವುದೇ ಕಾರಣಕ್ಕೂ ಅಸಮಾಧಾನ ಸರಿಯಲ್ಲ. ಒಮ್ಮತದಿಂದ ಕೆಲಸ ಮಾಡಬೇಕೆಂದು ಸೂಚಿಸಿದ್ದಾರೆ. ಆದರೆ, ‘ಪಕ್ಷದ ಟಿಕೆಟ್ ಆಕಾಂಕ್ಷಿಯಾಗಿದ್ದ ತನಗೆ ಟಿಕೆಟ್ ನೀಡಿಲ್ಲ. ಹೀಗಾಗಿ ನಾನು ಬೆಂಬಲಿಗರ ಸಭೆ ನಡೆಸಿ ಮುಂದಿನ ತೀರ್ಮಾನ ಕೈಗೊಳ್ಳಲಿದ್ದೇನೆ. ಪಕ್ಷದಲ್ಲಿ ಸೂಕ್ತಸ್ಥಾನ ನೀಡಬೇಕು’ ಎಂದು ಸುನೀಲ್ ವಲ್ಯಾಪುರೆ ಪಟ್ಟು ಹಿಡಿದಿದ್ದಾರೆ. ಅವರಿಗೆ ವಿಧಾನ ಪರಿಷತ್ ಸ್ಥಾನದ ಭರವಸೆ ನೀಡುವ ಮೂಲಕ ಸಮಾಧಾನಪಡಿಸಿದ್ದಾರೆಂದು ತಿಳಿದು ಬಂದಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News