ಜೂನ್ ವೇಳೆಗೆ ಸಂಪೂರ್ಣ ಸಾಲಮನ್ನಾ: ಸಚಿವ ಬಂಡೆಪ್ಪ ಕಾಶೆಂಪೂರ್

Update: 2019-04-26 14:11 GMT

ಬೆಂಗಳೂರು, ಎ. 26: ರಾಜ್ಯದ ಸಹಕಾರಿ ಬ್ಯಾಂಕ್‌ಗಳಲ್ಲಿ ರೈತರು ಮಾಡಿರುವ ಬೆಳೆ ಸಾಲ ಜೂನ್ ವೇಳೆಗೆ ಸಂಪೂರ್ಣವಾಗಿ ಮನ್ನಾ ಆಗಲಿದೆ ಎಂದು ಸಹಕಾರ ಸಚಿವ ಬಂಡೆಪ್ಪ ಕಾಶಂಪೂರ್ ಹೇಳಿದ್ದಾರೆ.

ಶುಕ್ರವಾರ ನಗರದಲ್ಲಿ ಮಾಧ್ಯಮ ಪ್ರತಿನಿಧಿಗಳ ಜತೆ ಮಾತನಾಡಿದ ಅವರು, ಲೋಕಸಭಾ ಚುನಾವಣಾ ನೀತಿ ಸಂಹಿತೆ ಜಾರಿಗೆ ಮೊದಲೇ ಸಹಕಾರಿ ಬ್ಯಾಂಕುಗಳಿಗೆ 2,600 ಕೋಟಿ ರೂ.ಗಳನ್ನು ಬಿಡುಗಡೆ ಮಾಡಿದ್ದು, ಆ ಪೈಕಿ 2 ಸಾವಿರ ಕೋಟಿ ರೂ. ರೈತರ ಖಾತೆಗಳಿಗೆ ಜಮಾ ಮಾಡಲಾಗಿದೆ ಎಂದರು.

ಅದೇ ರೀತಿಯಲ್ಲಿ ವಾಣಿಜ್ಯ ಬ್ಯಾಂಕುಗಳಲ್ಲಿನ ರೈತರ ಸಾಲಕ್ಕೆ ಸಂಬಂಧಿಸಿದಂತೆ 2,800 ಕೋಟಿ ರೂ.ರೈತರ ಖಾತೆಗಳಿಗೆ ವರ್ಗಾವಣೆ ಮಾಡಲಾಗಿದೆ. ಹೀಗಾಗಿ ರೈತರ ಸಾಲ ಮನ್ನಾ ವಿಚಾರದಲ್ಲಿ ಯಾರೂ ಹಗುರವಾಗಿ ಮಾತನಾಡಬಾರದು. ಸರಿಯಾದ ಅಂಕಿ-ಅಂಶಗಳ ಮಾಹಿತಿ ಪಡೆದು ಮಾತನಾಡಬೇಕೆಂದು ತಿರುಗೇಟು ನೀಡಿದರು.

ನಾವು ಸರಕಾರ ನಡೆಸುತ್ತಿದ್ದು, ರೈತರ ಬೆಳೆ ಸಾಲಮನ್ನಾ ವಿಚಾರದ ಬಗ್ಗೆ ನಮಗೆ ಮಾಹಿತಿ ಇಲ್ಲ ಎಂದು ಆರೋಪಿಸುವುದು ಸರಿಯಲ್ಲ. ಅಲ್ಲದೆ, ಹೊರಗೆ ನಿಂತು ಆಧಾರ ರಹಿತ ಆರೋಪ ಮಾಡುವುದು ಒಳ್ಳೆಯದಲ್ಲ. ಮಾಹಿತಿ ಇಲ್ಲದೆ ಇದ್ದರೆ ಅವರಿಗೆ ಮಾಹಿತಿ ಕೊಡಲಾಗುವುದು ಎಂದು ಹೇಳಿದರು.

ಬಿಜೆಪಿಯವರ ಹೇಳಿಕೆಗಳಿಗೆ ಮಹತ್ವವಿಲ್ಲ: ಮೈತ್ರಿ ಸರಕಾರ ಉರುಳಲಿದೆ ಎಂಬ ಬಿಜೆಪಿ ಮುಖಂಡರ ಹೇಳಿಕೆಗಳಿಗೆ ಮಹತ್ವ ನೀಡುವ ಅಗತ್ಯವಿಲ್ಲ. ಅಲ್ಲದೆ, ಅವರು ನೀಡುವ ಡೆಡ್‌ಲೈನ್‌ಗಳಿಂದ ಮೈತ್ರಿ ಸರಕಾರ ಬೀಳಲು ಸಾಧ್ಯವಿಲ್ಲ ಎಂದು ಬಂಡೆಪ್ಪ ಕಾಶೆಂಪೂರ್ ತಿಳಿಸಿದರು.

ಕಾಂಗ್ರೆಸ್ ಶಾಸಕ ರಮೇಶ್ ಜಾರಕಿಹೊಳಿ ಯಾವುದೇ ಕಾರಣಕ್ಕೂ ರಾಜೀನಾಮೆ ನೀಡುವುದಿಲ್ಲ. ಅವರಿಂದ ಸರಕಾರಕ್ಕೂ ಯಾವುದೇ ತೊಂದರೆಯೂ ಇಲ್ಲ. ಅವರೊಂದಿಗೆ ಕಾಂಗ್ರೆಸ್ ಪಕ್ಷದ ನಾಯಕರು ಸಮಾಲೋಚನೆ ನಡೆಸಲಿದ್ದಾರೆ ಎಂದು ಬಂಡೆಪ್ಪ ಕಾಶೆಂಪೂರ್ ಹೇಳಿದರು.

ಬಿಎಸ್‌ವೈ ಪಂಕ್ಚರ್

ಲೋಕಸಭೆ ಚುನಾವಣೆ ಫಲಿತಾಂಶ ಮೇ 23ಕ್ಕೆ ಬರಲಿದ್ದು ಅದೇ ದಿನ ಮೈತ್ರಿ ಸರಕಾರ ಬೀಳಲಿದೆ ಎಂಬುದು ಬಿಜೆಪಿಯವರ ಹಗಲುಗನಸು ಅಷ್ಟೇ. ಅದು ಯಾವುದೇ ಕಾರಣಕ್ಕೂ ನನಸಾಗಲು ಸಾಧ್ಯವಿಲ್ಲ. ಮೈತ್ರಿ ಸರಕಾರಕ್ಕೆ ಗಡುವು ನೀಡುವ ಬಿಎಸ್‌ವೈ ಅವರೇ ಪಂಕ್ಚರ್ ಆಗಿದ್ದಾರೆ.

-ಬಂಡೆಪ್ಪ ಕಾಶೆಂಪೂರ್, ಸಹಕಾರ ಸಚಿವ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News