ಪರಿಹಾರದ ಹೆಸರಿನಲ್ಲಿ ವಂಚನೆ ಆರೋಪ: ಎಇಇ ಸೇರಿ ಮೂವರ ಮನೆಗಳ ಮೇಲೆ ಎಸಿಬಿ ದಾಳಿ

Update: 2019-04-26 14:21 GMT

ಬೆಂಗಳೂರು, ಎ.26: ರಸ್ತೆ ವಿಸ್ತರಣೆಗೆ ಸ್ವಾಧೀನಪಡಿಸಿಕೊಂಡ ಜಮೀನಿಗೆ ನಿಗದಿತ ಪ್ರಮಾಣಕ್ಕಿಂತ ಹೆಚ್ಚು ಪರಿಹಾರ ನೀಡಿ ಸರಕಾರಕ್ಕೆ ನಷ್ಟ ಮಾಡಿದ ಆರೋಪ ಸಂಬಂಧ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ(ಬಿಡಿಎ)ದಲ್ಲಿ ಕೋಟ್ಯಂತರ ರೂ. ಅವ್ಯವಹಾರ ನಡೆಸಿರುವ ಆರೋಪದ ಮೇರೆಗೆ ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರ್ ಸೇರಿದಂತೆ ಮೂವರ ಮನೆ ಹಾಗೂ ಕಚೇರಿಗಳ ಮೇಲೆ ಭ್ರಷ್ಟಾಚಾರ ನಿಗ್ರಹ ದಳ(ಎಸಿಬಿ)ದ ಅಧಿಕಾರಿಗಳು ದಾಳಿ ನಡೆಸಿದ್ದಾರೆ.

ಶುಕ್ರವಾರ ಬೆಳಗ್ಗೆ ಎಸಿಬಿ ವಿಭಾಗದ ಪೊಲೀಸ್ ವರಿಷ್ಠಾಧಿಕಾರಿ ಸಂಜೀವ್ ಪಾಟೀಲ್ ಮತ್ತು ಸಹಾಯಕ ಪೊಲೀಸ್ ಆಯುಕ್ತ ರವಿಕುಮಾರ್ ನೇತೃತ್ವದ 20ಕ್ಕೂ ಹೆಚ್ಚು ಅಧಿಕಾರಿಗಳ ತಂಡ, ಬಿಡಿಎ ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರ್(ಎಇಇ) ಕೃಷ್ಣಲಾಲ್ ಹಾಗೂ ಆತನಿಗೆ ಸಹಕರಿಸುತ್ತಿದ್ದ ಭುವನೇಶ್ವರಿನಗರ ದೀಪಕ್‌ಕುಮಾರ್ ಮತ್ತು ಗಾಂಧಿನಗರದ ಅಮಿತ್ ರಿಕಬ್‌ಚಂದ್ ಜೈನ್ ಅವರ ನಿವಾಸ ಮತ್ತು ಕಚೇರಿಗಳ ಆರು ಕಡೆ ದಾಳಿ ಮಾಡಿದ್ದಾರೆ ಎಂದು ತಿಳಿದುಬಂದಿದೆ.

ಏನಿದು ಆರೋಪ?: ಕೃಷ್ಣಲಾಲ್ ಬಿಬಿಎಂಪಿಯ ರಸ್ತೆ ಅಗಲೀಕರಣಕ್ಕೆ ಸ್ವಾಧೀನ ಪಡಿಸಿಕೊಂಡ ನಿವೇಶನಗಳು ಹಾಗೂ ಕಟ್ಟಡಗಳ ಹೆಚ್ಚಿನ ವಿಸ್ತೀರ್ಣದ ಜಾಗಕ್ಕೆ ಬೆಲೆ ನಿಗದಿ ಮಾಡಿದ್ದರು. ರಸ್ತೆ ಅಗಲೀಕರಣಕ್ಕೆ ವಶಪಡಿಸಿಕೊಳ್ಳಲಾದ ಸೈಟುಗಳು, ಬಿಲ್ಡಿಂಗ್‌ಗಳಲ್ಲಿ ವಂಚನೆ ಹಾಗೂ ಖಾಸಗಿ ವ್ಯಕ್ತಿಗಳಿಗೆ ಅಕ್ರಮ ಲಾಭ ಮಾಡಿಕೊಟ್ಟಿದ್ದಾರೆ ಎಂದು ಹೇಳಲಾಗುತ್ತಿದೆ.

ಕೆಲವು ಸರಕಾರಿ ಜಾಗವನ್ನು ಖಾಸಗಿ ಜಾಗವೆಂದು ಬಿಂಬಿಸಿ ಪರಿಹಾರ ನೀಡಿದ್ದಾರೆ. ಈ ಅಕ್ರಮ ವ್ಯವಹಾರದಲ್ಲಿ 50ಕ್ಕೂ ಹೆಚ್ಚು ವ್ಯಕ್ತಿಗಳು ಭಾಗಿಯಾಗಿದ್ದಾರೆ ಎನ್ನಲಾಗಿದ್ದು, ಸುಮಾರು 7 ಕಿ.ಮೀ ಉದ್ದದ ಭಟ್ಟರ ಹಳ್ಳಿ, ಟಿ.ಸಿ.ಪಾಳ್ಯ ರಸ್ತೆ ವಿಸ್ತರಣೆಗೆ ಸ್ವಾಧೀನಪಡಿಸಿಕೊಂಡಿರುವ ಜಮೀನಿಗೆ ನೀಡಿರುವ ಪರಿಹಾರದಿಂದ ಸರಕಾರಕ್ಕೆ ಸುಮಾರು 60ಕೋಟಿ ನಷ್ಟ ಮಾಡಲಾಗಿದೆ. ಹೀಗೆ, ಎಷ್ಟೋ ರಸ್ತೆಗಳ ವಿಸ್ತರಣೆ ಪ್ರಕ್ರಿಯೆಯಲ್ಲಿ ವಂಚನೆ ನಡೆದಿದೆ ಎಂದು ತಿಳಿದುಬಂದಿದೆ.

ದೀಪಕ್ ಕುಮಾರ್ ಮನೆಯಲ್ಲಿ ಬಿಬಿಎಂಪಿಗೆ ಸೇರಿದ ಅಧಿಕೃತ ದಾಖಲೆಗಳನ್ನು ಎಸಿಬಿ ಅಧಿಕಾರಿಗಳು ವಶಪಡಿಸಿಕೊಂಡಿದ್ದಾರೆ. ಈ ಅಕ್ರಮ ವ್ಯವಹಾರದಲ್ಲಿ 50ಕ್ಕೂ ಹೆಚ್ಚು ಮಧ್ಯವರ್ತಿಗಳ ಹೆಸರು ಕೇಳಿಬಂದಿದ್ದು, ಶನಿವಾರ ವಿಚಾರಣೆಗೆ ಹಾಜರಾಗುವಂತೆ ನೋಟಿಸ್ ಜಾರಿ ಮಾಡಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News