ಹೆತ್ತವರ ಬಗ್ಗೆ ಆಲೋಚಿಸಿ: ಬೈಕ್ ವೀಲಿಂಗ್ ಮಾಡುವವರಿಗೆ ಡಿಸಿಪಿ ಅಬ್ದುಲ್ ಅಹದ್ ಸಲಹೆ
ಬೆಂಗಳೂರು, ಎ.26: ವೀಲಿಂಗ್ ಹಾಗೂ ಡ್ರ್ಯಾಗ್ ರೇಸ್ ನಡೆಸುವ ಯುವಕರು, ಒಂದು ಕ್ಷಣ ತಮ್ಮ ಪೋಷಕರ ಬಗ್ಗೆ ಆಲೋಚನೆ ಮಾಡಲಿ. ನಿಮ್ಮನ್ನು 9 ತಿಂಗಳ ಕಾಲ ತನ್ನ ಗರ್ಭದಲ್ಲಿ ಯಾವುದೇ ತೊಂದರೆಯಾಗದಂತೆ ಕಾಪಾಡುವ ತಾಯಿಯನ್ನು ರಸ್ತೆ ಪಕ್ಕದಲ್ಲಿ ಕೂರಿಸಿ ಆಕೆಯ ಮುಂದೆ ಒಂದು ಬಾರಿ ವೀಲಿಂಗ್ ಮಾಡಿ ನೋಡಿ, ಆಕೆಯ ಹೃದಯ ಕಿತ್ತು ಬರುತ್ತದೆ. ನಿಮ್ಮ ಶೋಕಿಗಾಗಿ ತಂದೆ-ತಾಯಿಯನ್ನು ಬೀದಿ ತಂದು ನಿಲ್ಲಿಸುವುದು ಸರಿಯೇ ಎಂದು ವೈಟ್‍ಫೀಲ್ಡ್ ವಿಭಾಗದ ಡಿಸಿಪಿ ಅಬ್ದುಲ್ ಅಹದ್ ಹೇಳಿದರು.
ಶುಕ್ರವಾರ ಕೆ.ಆರ್.ಪುರದಲ್ಲಿರುವ ಸಿಲಿಕಾನ್ ಸಿಟಿ ಕಾಲೇಜಿನಲ್ಲಿ ಕೆ.ಆರ್.ಪುರ ಪೊಲೀಸ್ ಠಾಣೆ ವತಿಯಿಂದ ಆಯೋಜಿಸಲಾಗಿದ್ದ ವೀಲಿಂಗ್ ಮಾಡುವವರ ಮನಪರಿವರ್ತನಾ ಕಾರ್ಯಗಾರ'ದ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಬೆಂಗಳೂರು ನಗರದಲ್ಲಿ ಕಳೆದ ವರ್ಷ 685 ಜನ ದ್ವಿಚಕ್ರ ವಾಹನಗಳ ಅಪಘಾತದಲ್ಲಿ ಮೃತಪಟ್ಟಿದ್ದಾರೆ. ಈ ಪೈಕಿ 150 ಜನ ವೀಲಿಂಗ್‍ನಿಂದ ಸಾವನ್ನಪ್ಪಿದ್ದಾರೆ ಎಂದರು.
ಯುವಕರು ವೀಲಿಂಗ್ ಮಾಡುವ ಮೂಲಕ ಹೀರೊಗಳಾಗಲು ಪ್ರಯತ್ನಿಸುತ್ತಿದ್ದರೆ, ಪೊಲೀಸ್, ಸೇನೆ, ಎನ್‍ಸಿಸಿಗೆ ಸೇರಿ ನಿಜವಾದ ಹೀರೊಗಳಾಗಿ. ಒಂದು ವೇಳೆ ದ್ವಿಚಕ್ರ ವಾಹನ ಚಾಲನೆಯಲ್ಲೇ ಹೆಸರುಗಳಿಸಬೇಕೆಂಬ ಹಂಬಲವಿದ್ದರೆ, ವೃತ್ತಿಪರವಾದ ರೇಸಿಂಗ್ ಅನ್ನು ಆಯ್ಕೆ ಮಾಡಿಕೊಳ್ಳಿ, ಅಲ್ಲಿ ಸುರಕ್ಷತೆ ಇರುತ್ತದೆ ಎಂದು ಅವರು ತಿಳಿಸಿದರು.
ವೀಲಿಂಗ್ ವಿರುದ್ಧ ನಾವು ನಡೆಸಿದ ಕಾರ್ಯಾಚರಣೆಯಲ್ಲಿ ಬಹುತೇಕ ಮುಸ್ಲಿಮ್ ಯುವಕರೇ ಸಿಗುತ್ತಿದ್ದಾರೆ. ಸಮಾಜದಲ್ಲಿ ಜಾಗೃತಿ ಮೂಡಿಸುವ ಅಗತ್ಯವಿದೆ. ಇದಕ್ಕಾಗಿ, ಸುತ್ತಮುತ್ತಲಿನ ಎಲ್ಲ ಮಸೀದಿಗಳ ಆಡಳಿತ ಮಂಡಳಿಯ ಸದಸ್ಯರು, ಸ್ವಯಂ ಸೇವಕರು ಸಹಕಾರ ನೀಡಬೇಕು. ನಾವು ಈ ಹಿಂದೆ ಡ್ರಗ್ಸ್ ಹಾವಳಿ ವಿರುದ್ಧ ನಡೆಸಿದ್ದ ಚಳವಳಿಯ ಮಾದರಿಯಲ್ಲೇ ಈ ವೀಲಿಂಗ್ ವಿರುದ್ಧವು ಚಳವಳಿ ನಡೆಸಬೇಕಿದೆ ಎಂದು ಆಬ್ದುಲ್ ಅಹದ್ ಹೇಳಿದರು.
ವೀಲಿಂಗ್ ಮಾಡುವವರನ್ನು ನಾವು ಹಿಡಿಯುತ್ತೇವೆ, ದಂಡ ಹಾಕುತ್ತೇವೆ, ಜೈಲಿಗೆ ಕಳುಹಿಸುತ್ತೇವೆ. ಇವತ್ತು ಜೈಲಿನಲ್ಲಿಯೂ ಸ್ಥಳವಿಲ್ಲ. 3 ಸಾವಿರ ಜನ ಕೈದಿಗಳು ಇರುವ ಜಾಗದಲ್ಲಿ 5 ಸಾವಿರ ಜನ ಇದ್ದಾರೆ. ಯುವಕರ ಮನಃ ಪರಿವರ್ತನೆ ಮಾಡಿ, ಅವರಿಗೆ ಸಮಾಜದಲ್ಲಿ ಗೌರವಯುತವಾಗಿ ಬಾಳಲು ಒಂದು ಅವಕಾಶ ಕಲ್ಪಿಸಿಕೊಡಲು ಈ ಕಾರ್ಯಗಾರ ಹಮ್ಮಿಕೊಂಡಿದ್ದೇವೆ ಎಂದು ಅವರು ತಿಳಿಸಿದರು.
ಜಮೀಯತ್ ಉಲಮಾ ಹಿಂದ್ ಬೆಂಗಳೂರು ನಗರ ಅಧ್ಯಕ್ಷ ಮೌಲಾನ ಮುಫ್ತಿ ಮುಹಮ್ಮದ್ ಹುಸೇನ್ ಮಾತನಾಡಿ, ವೀಲಿಂಗ್, ಡ್ರ್ಯಾಗ್ ರೇಸ್ ಹಾಗೂ ನಶೆಯ ಚಟದಿಂದಾಗಿ ನಮ್ಮ ಸಮಾಜದ ಯುವಕರು ಹಾಳಾಗುತ್ತಿದ್ದಾರೆ. ತಮ್ಮ ತಪ್ಪುಗಳಿಂದ ಪ್ರಾಣವನ್ನು ಕಳೆದುಕೊಳ್ಳುತ್ತಿದ್ದಾರೆ. ಯುವಕರಲ್ಲಿ ಜಾಗೃತಿ ಮೂಡಿಸಲು ವೈಟ್‍ಫೀಲ್ಡ್ ವಿಭಾಗದ ಡಿಸಿಪಿ ಅಬ್ದುಲ್ ಅಹದ್ ನೇತೃತ್ವದಲ್ಲಿ ನಡೆಯುತ್ತಿರುವ ಈ ಕಾರ್ಯಕ್ರಮ ಅತ್ಯುತ್ತಮವಾದದ್ದು ಎಂದರು.
ಯುವಕರು ತಮ್ಮ ಪೋಷಕರ ಮೇಲೆ ಒತ್ತಡ ಹೇರಿ 2-3 ಲಕ್ಷ ರೂ. ಮೌಲ್ಯದ ಬೈಕ್‍ಗಳನ್ನು ಖರೀದಿಸುತ್ತಾರೆ. ಅದರಲ್ಲಿ ವೀಲಿಂಗ್ ಮಾಡುತ್ತಾರೆ. ಸಾವು ಯಾವ ಕ್ಷಣದಲ್ಲಿ ಯಾವ ರೂಪದಲ್ಲಿ ಬರುತ್ತದೆ ಎಂಬುದನ್ನು ಯಾರೂ ಊಹಿಸಲು ಸಾಧ್ಯವಿಲ್ಲ. ಮುಸ್ಲಿಂ ಸಮಾಜವು ಎಲ್ಲರಿಗೂ ಮಾದರಿಯಾಗಿತ್ತು. ಆದರೆ, ದುರಾದೃಷ್ಟವಶಾತ್ ಇವತ್ತು ಅಪರಾಧಗಳು, ಕಾನೂನು ಬಾಹಿರ ಚಟುವಟಿಕೆಗಳಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಮುಸ್ಲಿಮರು ಕಂಡು ಬರುತ್ತಿದ್ದಾರೆ. ನಾವು ನಮ್ಮ ಧಾರ್ಮಿಕ ಶಿಕ್ಷಣದಿಂದ ವಿಮುಖರಾಗಿರುವುದೇ ಇದಕ್ಕೆ ಕಾರಣ ಎಂದು ಅವರು ಹೇಳಿದರು.
ಅನ್ಯರಿಗೆ ತೊಂದರೆ ಕೊಡುವುದು ಮುಸ್ಲಿಮರ ನಡವಳಿಕೆಯಲ್ಲ. ಆದರೆ, ಇವತ್ತು ವೀಲಿಂಗ್ ಮಾಡುವ ಮೂಲಕ ಯುವಕರು ತಮ್ಮ ಪ್ರಾಣಕ್ಕೆ ಸಂಚಕಾರ ತಂದುಕೊಳ್ಳುವುದಲ್ಲದೇ, ದಾರಿಯಲ್ಲಿ ಹೋಗುತ್ತಿರುವ ಅನ್ಯ ಸವಾರರಿಗೆ, ಪಾದಚಾರಿಗಳಿಗೂ ತೊಂದರೆ ಉಂಟು ಮಾಡುತ್ತಿದ್ದಾರೆ. ಪ್ರಮುಖವಾಗಿ ಸರ್ವಶಕ್ತನಾದ ಅಲ್ಲಾಹ್‍ನ ಅನುಗ್ರಹ ಪಡೆಯುವ ಪವಿತ್ರ ದಿನಗಳಾದ ಶಬೇ ಬರಾತ್ ಹಾಗೂ ಶಬೇ ಖದರ್ ನಲ್ಲಿ ಪ್ರಾರ್ಥನೆಯಲ್ಲಿ ತಮ್ಮನ್ನು ತೊಡಗಿಸಿಕೊಳ್ಳುವುದನ್ನು ಬಿಟ್ಟು, ವೀಲಿಂಗ್, ಡ್ರ್ಯಾಗ್ ರೇಸ್‍ನಲ್ಲಿ ತೊಡಗಿಕೊಳ್ಳುವುದು ಎಷ್ಟರ ಮಟ್ಟಿಗೆ ಸರಿ ಎಂಬುದನ್ನೆ ನಾವು ಆತ್ಮಾವಲೋಕನ ಮಾಡಿಕೊಳ್ಳಬೇಕಿದೆ ಎಂದು ಮುಹಮ್ಮದ್ ಹುಸೇನ್ ಹೇಳಿದರು.
ನಮ್ಮ ಸಮಾಜವನ್ನು ಸುಧಾರಿಸಲು ಪೊಲೀಸರು ಬರುವಂತಹ ಪರಿಸ್ಥಿತಿಯಿದೆ. ಇವತ್ತು ನಾವು ಹಾಗೂ ಪೊಲೀಸರು ಸೇರಿ ಯುವಕರಲ್ಲಿ ಈ ಅಪಾಯಕಾರಿ ವೀಲಿಂಗ್ ಹಾಗೂ ಡ್ರ್ಯಾಗ್ ರೇಸ್‍ನಿಂದ ಆಗುತ್ತಿರುವ ಅನಾಹುತಗಳ ಬಗ್ಗೆ ಜಾಗೃತಿ ಮೂಡಿಸುವುದಲ್ಲದೇ, ಯುವಕರನ್ನು ಈ ಅಪಾಯದಿಂದ ಪಾರುಮಾಡಲು ಶ್ರಮಿಸಬೇಕು ಎಂದು ಅವರು ತಿಳಿಸಿದರು.
ಯೋಗರತ್ನ ಪ್ರಶಸ್ತಿ ಪುರಸ್ಕೃತ ಗಂಗಾಧರಪ್ಪ ಮಾತನಾಡಿ, ನನ್ನ ಆತ್ಮೀಯ ಸ್ನೇಹಿತನ ಮಗ ವೀಲಿಂಗ್ ಮಾಡಲು ಹೋಗಿ ಅಪಘಾತದಲ್ಲಿ ಗಂಭೀರವಾಗಿ ಗಾಯಗೊಂಡಿದ್ದಾನೆ. ಕಳೆದ ಒಂದು ವರ್ಷದಿಂದ ಆತ ಕೋಮಾದಲ್ಲಿದ್ದಾನೆ. ನನ್ನ ಸ್ನೇಹಿತ ಹಾಗೂ ಆತನ ಕುಟುಂಬ ಇವತ್ತು ಸುಮಾರು 45 ಲಕ್ಷ ರೂ.ಗಳನ್ನು ಖರ್ಚು ಮಾಡಿದರೂ, ತನ್ನ ಮಗನನ್ನು ಉಳಿಸಿಕೊಳ್ಳಲು ಪರದಾಡುತ್ತಿದ್ದಾನೆ ಎಂದರು.
ವೀಲಿಂಗ್ ಮಾಡುವ ಯುವಕರು ಕ್ಷಣಮಾತ್ರದ ಸಾಹಸಕ್ಕಾಗಿ ಜೀವನಪರ್ಯಂತ ತಮ್ಮ ಕುಟುಂಬವನ್ನು ಕಣ್ಣೀರಲ್ಲಿ ಕೈ ತೊಳೆಯಲು ಬಿಡುವುದು ಸರಿಯೇ ? ಪೋಷಕರು ತಮ್ಮ ಮಕ್ಕಳ ಆಸೆಗಳನ್ನು ಪೂರೈಸುವುದರ ಜೊತೆಗೆ, ಅವರು ಸಮಾಜದಲ್ಲಿ ಯಾವ ರೀತಿ ಬಾಳುತ್ತಿದ್ದಾರೆ. ಮನೆಯ ಹೊರಗಡೆ ಅವರು ಚಟುವಟಿಕೆಗಳು ಹೇಗಿವೆ ಎಂಬುದರ ಕುರಿತು ನಿಗಾವಹಿಸಬೇಕು ಎಂದು ಅವರು ಹೇಳಿದರು.
ಮಕ್ಕಳ ಸಹಾಯವಾಣಿಯ ಹಿರಿಯ ಸಮಾಲೋಚಕಿ ಪ್ರೀತಿ ಬಾಳಿಗಾ ಇದೇ ವೇಳೆ ಯುವಕರೊಂದಿಗೆ ಸಂವಾದ ನಡೆಸಿದರು. ಕಾರ್ಯಕ್ರಮದಲ್ಲಿ ಕೆ.ಆರ್.ಪುರ ಪೊಲೀಸ್ ಠಾಣೆಯ ಇನ್ಸ್ ಪೆಕ್ಟರ್ ಜಯರಾಜ್ ಎಚ್.ಸ್ವಾಗತಿಸಿದರು, ವೈಟ್‍ಫೀಲ್ಡ್ ಉಪ ವಿಭಾಗದ ಎಸಿಪಿ ರವಿಶಂಕರ್, ಸಿಲಿಕಾನ್ ಸಿಟಿ ಕಾಲೇಜಿನ ಪ್ರಾಂಶುಪಾಲ ಜ್ಞಾನೇಶ್ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.