ಅಸ್ಪಶ್ಯತೆಯ ಮೌಢ್ಯದಿಂದ ದಲಿತರನ್ನು ಮುಕ್ತಿಗೊಳಿಸಿ: ಡಾ.ಸಿದ್ದಲಿಂಗಯ್ಯ ಕರೆ

Update: 2019-04-26 16:05 GMT

ಬೆಂಗಳೂರು, ಎ.26: ಅಸ್ಪಶ್ಯತೆಯ ಮೌಢ್ಯದಿಂದ ದಲಿತರನ್ನು ಮುಕ್ತಿಗೊಳಿಸಿ, ಅವರನ್ನು ಸಬಲೀಕರಣಗೊಳಿಸಬೇಕು ಎಂದು ಸಾಹಿತಿ ಡಾ.ಸಿದ್ದಲಿಂಗಯ್ಯ ಕರೆ ನೀಡಿದರು.

ಶುಕ್ರವಾರ ನಗರದ ಕರ್ನಾಟಕ ರಾಜ್ಯ ಸರಕಾರಿ ನೌಕರರ ಸಭಾಂಗಣದಲ್ಲಿ ಕರ್ನಾಟಕ ರಾಜ್ಯ ಸರಕಾರಿ ಎಸ್ಸಿ- ಎಸ್ಟಿ ನೌಕರರ ಸಮನ್ವಯ ಸಮಿತಿ ಆಯೋಜಿಸಿದ್ದ, ಸಂವಿಧಾನ ಶಿಲ್ಪಿಡಾ.ಬಿ.ಆರ್.ಅಂಬೇಡ್ಕರ್‌ರವರ 128ನೇ ಜಯಂತ್ಯುತ್ಸವದಲ್ಲಿ ಮಾತನಾಡಿದ ಅವರು, ಬಾಬಾ ಸಾಹೇಬ್ ಅಂಬೇಡ್ಕರ್ ಚಿಂತನೆಗಳು ನಮಗೆ ಪ್ರೇರಣೆಯಾಗಿದ್ದು, ಅವರ ತತ್ವಗಳನ್ನು ಅನುಷ್ಠಾನಗೊಳಿಸುವಲ್ಲಿ ಎಲ್ಲರೂ ಸಕ್ರಿಯರಾಗುವ ಮೂಲಕ ಶೋಷಣೆಗೆ ಒಳಗಾಗಿರುವ ಜನರನ್ನು ಜಾಗೃತರಾಗಿಸಬೇಕು ಎಂದು ಸಲಹೆ ನೀಡಿದರು.

ಜವಾಬ್ದಾರಿ ಅರಿತು ನಾವು ಸಾಗಬೇಕಾಗಿದೆ. ನಮಗಿಂತ ಕಷ್ಟದಲ್ಲಿ ಇರುವವರಿಗೆ ಸಹಾಯ ಮಾಡುವ ನಿಲುವನ್ನು ಸರಕಾರಿ ಹುದ್ದೆ ಪಡೆದ ದಲಿತರು ರೂಢಿಸಿಕೊಳ್ಳಬೇಕು. ಗ್ರಾಮೀಣ ಭಾಗದ ಶೇ.95 ಭಾಗದ ಜನರು ಇನ್ನೂ ಆರ್ಥಿಕವಾಗಿ, ಸಾಮಾಜಿಕವಾಗಿ ಹಾಗೂ ರಾಜಕೀಯವಾಗಿ ಹಿಂದುಳಿದಿದ್ದಾರೆ ಎಂದು ಬೇಸರ ವ್ಯಕ್ತಪಡಿಸಿದರು.

ಉನ್ನತ ಶಿಕ್ಷಣ ಇಲಾಖೆಯ ಕಾರ್ಯದರ್ಶಿ ಬಿ.ಎಚ್.ಅನಿಲ್ ಕುಮಾರ್ ಮಾತನಾಡಿ, ಮೀಸಲಾತಿಯನ್ನು ಮುಂದುವರೆಸುವುದಕ್ಕೆ ಕೇಂದ್ರ ಸರಕಾರ ಹಿಂದೇಟು ಹಾಕುತ್ತಿದೆ. ಇನ್ನೊಂದೆಡೆ ಮೀಸಲಾತಿ ಏಕೆ ನೀಡಬೇಕೆಂಬ ಕೂಗು ಎದ್ದಿದೆ. ಆದರೆ ಸಂವಿಧಾನ ನೀಡಿರುವ ಹಕ್ಕುನ್ನು ಕಸಿಯುವುದಕ್ಕೆ ಅವರು ಯಾರು? ಸಂವಿಧಾನಬದ್ಧ ಹಕ್ಕುನ್ನು ನಾವು ಪಡೆಯಲು ಅರ್ಹರಿದ್ದೇವೆ. ಅದನ್ನು ಸಮುದಾಯವರು ಒಗ್ಗಟ್ಟಿನಿಂದ ಪಡೆದುಕೊಳ್ಳಬೇಕು ಎಂದು ಹೇಳಿದರು.

ಸಂವಿಧಾನದಲ್ಲಿ ಇರುವ ಸೌಲಭ್ಯವನ್ನು ಉಪಯೋಗಿಸಿಕೊಂಡಿದ್ದೇವೆ. ಆದರೆ, ಸಂಬಂಧಿಗಳನ್ನು ಮರೆತಿದ್ದೇವೆ. ನೌಕರಿಗೆ ಸೇರಿದ ಮೇಲೆ ದಲಿತರು ಎಂದು ಹೇಳಿಕೊಳ್ಳುವುದಕ್ಕೆ ಮುಜುಗರ ಪಡುತ್ತಾರೆ. ತೊಂದರೆ ಆದಾಗ ಮಾತ್ರ ನಾನೂ ನಿಮ್ಮವನು ಎಂದು ಹೇಳುತ್ತಾರೆ. ದಲಿತರು ಎಂದು ಹೇಳಿಕೊಳ್ಳುವ ಧೈರ್ಯ ಏಕೆ ಮಾಡುತ್ತಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.

70-80ರ ದಶಕದಲ್ಲಿ ದಲಿತ ಸಂಘರ್ಷ ಸಮಿತಿ ಕಂಡರೆ ಹೆದರುತ್ತಿದ್ದರು. ಇಂದು ಇದು ನೂರಾರು ಕವಲಾಗಿದೆ. ಇದು ಮೇಲ್ವರ್ಗದ ಕುತಂತ್ರ.

-ಬಿ.ಎಚ್.ಅನಿಲ್ ಕುಮಾರ್, ಉನ್ನತ ಶಿಕ್ಷಣ ಇಲಾಖೆಯ ಕಾರ್ಯದರ್ಶಿ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News