×
Ad

ದಲ್ಲಾಳಿಗಳ ವಿರುದ್ಧ ಕ್ರಮಕ್ಕೆ ಬದ್ಧ: ಕೃಷಿ ಸಚಿವ ಶಿವಶಂಕರ ರೆಡ್ಡಿ

Update: 2019-04-26 21:41 IST

ಬೆಂಗಳೂರು, ಎ.26: ಎಪಿಎಂಸಿ ಮಾರುಕಟ್ಟೆಗಳಲ್ಲಿ ದಲ್ಲಾಳಿಗಳಿಂದ ರೈತರು ವಂಚನೆಗೆ ಒಳಗಾಗುತ್ತಿರುವ ಪ್ರಕರಣಗಳು ದಿನ ನಿತ್ಯ ಕೇಳಿಬರುತ್ತಿದ್ದು, ಈ ಸಂಬಂಧ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ಕೃಷಿ ಸಚಿವ ಶಿವಶಂಕರ ರೆಡ್ಡಿ ತಿಳಿಸಿದ್ದಾರೆ.

ಶುಕ್ರವಾರ ನಗರದ ಜಿಕೆವಿಕೆಯ ಕೃಷಿ ವಿಶ್ವವಿದ್ಯಾಲಯದಲ್ಲಿ ಆಯೋಜಿಸಿದ್ದ, ಬೀಜ ದಿನಾಚಾರಣೆ ಹಾಗೂ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದ ಅವರು, ಕೃಷಿ ಮಾರುಕಟ್ಟೆ ವ್ಯವಸ್ಥೆಯಲ್ಲಿ ಹಲವಾರು ಸುಧಾರಣೆಗಳಾಗಬೇಕಾದ ಅಗತ್ಯವಿದೆ. ಆದರೆ, ಎಪಿಎಂಸಿಗಳು ಕೇವಲ ದಲ್ಲಾಳಿಗಳ ಮಾರುಕಟ್ಟೆಯಾಗಿ ಮಾರ್ಪಟ್ಟಿವೆ. ಈ ಹಿನ್ನೆಲೆಯಲ್ಲಿ ದಲ್ಲಾಳಿಗಳಿಂದ ರೈತ ವಂಚನೆಗೆ ಒಳಗಾಗುತ್ತಿರುವುದನ್ನು ತಪ್ಪಿಸಲು ಕ್ರಮ ಕೈಗೊಳ್ಳಲಾಗುವುದು ಎಂದರು. ಕೃಷಿಯಲ್ಲಿ ಉತ್ತಮ ಬೀಜಗಳ ಬಳಕೆಯಿಂದ ಉತ್ತಮ ಬೆಳೆ ಪಡೆಯಲು ಸಾಧ್ಯ. ಹೀಗಾಗಿ ಬೀಜ ಸಂಶೋಧನಾ ಕೇಂದ್ರಗಳು ವಿಸ್ತರಣೆ ಪಡೆದುಕೊಳ್ಳಬೇಕು. ವಿವಿಗಳು ಅಭಿವೃದ್ಧಿಪಡಿಸಿದ ವಿಶೇಷ ಬೀಜ ತಳಿಗಳು ರೈತರಿಗೆ ತಲುಪಬೇಕು ಹಾಗೂ ಬೀಜ ಸಂಸ್ಕರಣೆ ಕಾರ್ಯವೂ ನಡೆಯಬೇಕು ಎಂದು ತಿಳಿಸಿದರು.

ಪಂಚಾಯತ್ ಮಟ್ಟದಲ್ಲಿ ಬೀಜ ವಿತರಣೆ ಮತ್ತು ಮಾರಾಟ ಸೌಲಭ್ಯ ಹಾಗೂ ಬೀಜ ಆಯೋಗ ರಚನೆ ಮಾಡುವ ಕುರಿತು ಸರಕಾರದೊಂದಿಗೆ ಚಿಂತನೆ ಮಾಡಲಾಗುವುದು. ರೈತರ ಸಮಸ್ಯೆಗಳನ್ನು ಸರಕಾರ ಸಕಾರಾತ್ಮಕವಾಗಿ ಸ್ವೀಕಾರ ಮಾಡಿ ಸ್ಪಂದಿಸಲಿದೆ ಎಂದು ಹೇಳಿದರು.

ಕೃಷಿ ವಿವಿ ಕುಲಪತಿ ಡಾ.ಎಸ್.ರಾಜೇಂದ್ರ ಪ್ರಸಾದ್ ಮಾತನಾಡಿ, ಸುಸ್ಥಿರ ಕೃಷಿ ಉತ್ಪಾದನೆಗೆ ಪೂರಕವಾಗಿ ‘ಬೀಜ ಆಧಾರ್’ ಆ್ಯಪ್ ಬಿಡುಗಡೆ ಮಾಡಲಾಗಿದೆ. ಇದನ್ನು ಬೀಜೋತ್ಪಾದಕರು, ರೈತರು ಬಳಸಿಕೊಳ್ಳಬಹುದು. ತಳಿ ಸಂಕರಣ, ದೇಶಿ ಬೀಜಗಳು, ಉತ್ಪಾದನಾ ತಾಂತ್ರಿಕತೆಗಳು, ಬೀಜಗಳ ಲಭ್ಯತೆ, ಬೀಜ ವಿತರಕರ ಮಾಹಿತಿ ಆ್ಯಪ್ ಒಳಗೊಂಡಿದೆ ಎಂದು ಮಾಹಿತಿ ನೀಡಿದರು.

ಈ ಸಂದರ್ಭದಲ್ಲಿ ಕೃಷಿ ವಿವಿ ವಿಶ್ರಾಂತ ಕುಲಪತಿ ಡಾ.ಕೆ.ನಾರಾಯಣ ಗೌಡ, ಕೆಎಸ್‌ಎಸ್‌ಒಸಿಎ ವ್ಯವಸ್ಥಾಪಕ ನಿರ್ದೇಶಕ ಟಿ. ರಾಮಚಂದ್ರಯ್ಯ, ಎನ್‌ಎಸ್‌ಸಿ ಪ್ರಾದೇಶಿಕ ವ್ಯವಸ್ಥಾಪಕ ಎ.ಬ್ರಿಟ್ಟೊ, ರೈತ ಮುಖಂಡ ಕೋಡಿಹಳ್ಳಿ ಚಂದ್ರಶೇಖರ್ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News