ಸೌಹಾರ್ದಯುತ ಸಮ ಸಮಾಜ ಬೇಕು: ಪ್ರೊ.ರಹಮತ್ ತರಿಕೆರೆ
ಬೆಂಗಳೂರು, ಎ.26: ಇಂದಿನ ಕಾಲಘಟ್ಟಕ್ಕೆ ಗಾಂಧಿ ಸೇರಿ ಹಲವು ಕನಸು ಕಂಡಿದ್ದ ಸೌಹಾರ್ದಯುತ ಸಮ ಸಮಾಜವನ್ನು ನಾವು ಕಟ್ಟಬೇಕಾಗಿದೆ ಎಂದು ಹಿರಿಯ ಸಾಹಿತಿ ಪ್ರೊ.ರಹಮತ್ ತರಿಕೆರೆ ಇಂದಿಲ್ಲಿ ಅಭಿಪ್ರಾಯಪಟ್ಟು.
ಶುಕ್ರವಾರ ನಗರದ ಕರ್ನಾಟಕ ಗಾಂಧಿ ಸ್ಮಾರಕ ನಿಧಿ ಯುವ ಸಬಲೀಕರಣ ಇಲಾಖೆ ಸೇರಿದಂತೆ ವಿವಿಧ ಸಂಸ್ಥೆಗಳ ಸಹಯೋಗದಲ್ಲಿ ‘ಬಾ ಮತ್ತು ಬಾಪು 150’ ವರ್ಷಚಾರಣೆ ನಿಮಿತ್ತ ಆಯೋಜಿಸಿದ್ದ ‘ರಾಜ್ಯಮಟ್ಟದ ಒಂದು ದಿನದ ವಿಚಾರ ಸಂಕಿರಣ ಹಾಗೂ ಕಾರ್ಯಾಗಾರ’ ಉದ್ಘಾಟಿಸಿ ಅವರು ಮಾತನಾಡಿದರು.
ಸಹನೆ ಗಾಂಧೀಜಿ ದೇಶಕ್ಕೆ ನೀಡಿದ ದೊಡ್ಡ ಅಸ್ತ್ರ. ಅದರಲ್ಲೂ ಧಾರ್ಮಿಕ ಸಹನೆ ಅಗತ್ಯವೆಂದು ಕಲಿಸಿದರು. ಇತರರ ಧರ್ಮ, ಸಂಸ್ಕೃತಿ ಗೌರವಿಸುತ್ತಿದ್ದರು. ಗಾಂಧಿ, ಕುವೆಂಪು, ಕಾರಂತರು, ಗೊರೂರು ರಾಮಸ್ವಾಮಿ ಅಯ್ಯಂಗಾರ್, ಪು.ತಿ.ನ ಹೀಗೆ ಪ್ರತಿಯೊಬ್ಬರೂ ಸೌಹಾರ್ದಯುತ ಸಮಸಮಾಜ ಬಯಸಿದ್ದರು. ಆದರೆ, ಇಂದು ಜಾತಿ, ಧರ್ಮ, ಆಹಾರ ಕ್ರಮಕ್ಕಾಗಿ ಬೀದಿ ಬೀದಿಗಳಲ್ಲಿ ಜನರನ್ನು ಕೊಲ್ಲುತ್ತಿದ್ದೇವೆ. ಪ್ರಜಾಪ್ರಭುತ್ವವನ್ನು ರಾಜಕೀಯವಾಗಿ ನೋಡದೆ ಸಾಂಸ್ಕೃತಿಕವಾಗಿ ಧಾರ್ಮಿಕವಾಗಿ ನೋಡಬೇಕು ಎಂದು ನುಡಿದರು.
ಗಾಂಧಿ ಪ್ರಜಾಪ್ರಭುತ್ವವನ್ನು ಅರ್ಥಪೂರ್ಣಗೊಳಿಸಿದರು. ಭಾರತದ ಆತ್ಮ ಇರುವುದೇ ಬಹುತ್ವದಲ್ಲಿ. ದುರ್ಬಲರು, ಅಸಹಾಯಕರ ದನಿಗೆ ದನಿಯಾದಾಗ ಮಾತ್ರ ದೇಶ ಕಟ್ಟಲು ಸಾಧ್ಯ. ಆದರಿಂದು ಬಲಿಷ್ಠರು ಬದುಕಲು ಅನುಕೂಲಕರವಾದ ಆರ್ಥಿಕ ನೀತಿ ಅನುಸರಿಸಲಾಗುತ್ತಿದೆ. ಗಾಂಧಿವಾದಿಗಳೆಲ್ಲ ದೇಶಕ್ಕಾಗಿ ತಮ್ಮನ್ನು ಅರ್ಪಿಸಿಕೊಂಡರೆ, ಇಂದು ಮಾರುಕಟ್ಟೆ ಆರ್ಥಿಕತೆ ನೀತಿ ದೇಶವನ್ನೇ ತ್ಯಾಗ ಮಾಡುತ್ತಿದೆ. ಯುದ್ಧ, ಭಾಷೆ, ಭಿನ್ನಮತದಂತಹ ಸಂದಿಗ್ಥ ಪರಿಸ್ಥಿತಿಯಲ್ಲಿ ಪ್ರಜಾಪ್ರಭುತ್ವವನ್ನು ಜೀವಂತವಾಗಿಡಲು ಗಾಂಧಿ ಸದಾ ಕಾಡುತ್ತಾರೆ ಎಂದು ಹೇಳಿದರು.
ಮೈಸೂರಿನ ನಾಲ್ವಡಿ ಕೃಷ್ಣರಾಜ ಒಡೆಯರ್ ಅವರ ಆಳ್ವಿಕೆಯನ್ನು ರಾಮರಾಜ್ಯ ಎಂದಿದ್ದ ಗಾಂಧೀಜಿ ಬ್ರಿಟಿಷರ ಆಡಳಿತವನ್ನು ರಾಜಕೀಯ ದೃಷ್ಟಿಯಿಂದ ಪರಿಗಣಿಸಲಿಲ್ಲ. ಪಶ್ಚಿಮ ನಾಗರಿಕತೆಯ ವಿರೋಧಿಯಾದ ಅವರು ಯುರೋಪಿಯನ್ ಮನಸ್ಥಿತಿಯುಳ್ಳ ನೆಹರೂ ಅವರನ್ನು ಪ್ರಧಾನಿಯಾಗಿ ಆಯ್ಕೆ ಮಾಡಿದರು. ಗಾಂಧೀಜಿ ಸ್ವಾತಂತ್ರ ನಂತರದ ಭಾರತದ ಪ್ರಜಾಪ್ರಭುತ್ವಕ್ಕೆ ಒಂದು ಹೊಸ ಬುನಾದಿ ಹಾಕಿಕೊಟ್ಟರು. ಆದರೆ, ರಾಜಕೀಯ ವ್ಯವಸ್ಥೆಯನ್ನು ಪರಿಹರಿಸಲು ಪ್ರಯತ್ನಿಸಲಿಲ್ಲ ಎಂದು ವಿಶ್ಲೇಷಿಸಿದರು.